ಕಥೆ

ಅರಿವಿದ್ದು ಮಾಡಿದ್ದ ತಪ್ಪನ್ನ ಬೇರೆಯವರಿಂದಾಗಿ ಎಂದು ದೂರಬೇಡಿ

ವಿವೇಕಿಗಳಾಗೋಣ..

ಕೈದಿಯೊಬ್ಬನಿಗೆ ಮರಣದಂಡನೆ ಶಿಕ್ಷೆಯ ಘೋಷಣೆಯಾಯಿತು. ಗಲ್ಲಿಗೇರುವ ಸಮಯ ಬಂದಾಗ, ನಿನ್ನ ಕೊನೆಯಾಸೆಯೇನು? ನೀನು ಯಾರನ್ನಾದರೂ ಭೇಟಿಯಾಗುವುದಿದೆಯೇ? ಹಾಗೇನಾದರೂ ಇದ್ದಲ್ಲಿ ಅವಕಾಶ ನೀಡಲಾಗುವುದು ಎಂದರು ಸಂಬಂಧಿತ ಅಧಿಕಾರಿಗಳು.

ಅದಕ್ಕೆ ಆತ ನನ್ನ ತಾಯಿಯನ್ನು ನೋಡಬೇಕು ಎಂದು ಕೇಳಿದ. ಅಂತೆಯೇ ಅವನ ತಾಯಿಯನ್ನು ಕರೆಸಲಾಯಿತು. ಸನಿಹಕ್ಕೆ ಬರುತ್ತಿದ್ದಂತೆಯೇ ಮಗ ಅವಳನ್ನು ನಿಂದಿಸಲಾರಂಭಿಸಿದ.

ಅಲ್ಲಿದ್ದವರು ಅಚ್ಚರಿಗೊಂಡು, ನಿನಗಿನ್ನೂ ಬುದ್ಧಿ ಬರಲಿಲ್ಲವೇ? ಹೆತ್ತತಾಯಿಯನ್ನು ಹೀಗೆ ಅವಮಾನಿಸುವುದೇ? ಎಂದಾಗ ಆ ಅಪರಾಧಿ ನನಗೆ ಈ ಹೊತ್ತು ಇಂಥದೊಂದು ಪರಿಸ್ಥಿತಿ ಬರುವುದಕ್ಕೆ ತಾಯಿಯೇ ಕಾರಣ.

ನಾನು ಚಿಕ್ಕವನಿದ್ದಾಗ ಬೇರೆಯವರ ಮನೆಯಲ್ಲಿ ಸಿಕ್ಕಸಿಕ್ಕ ವಸ್ತುಗಳನ್ನು ಕದಿಯುತ್ತಿದ್ದೆ. ಅಂಥ ವೇಳೆಯಲ್ಲಿ ನನ್ನ ತಪ್ಪು ತಿದ್ದುವ ಬದಲಿಗೆ ಈಕೆ ನನ್ನನ್ನು ಮತ್ತಷ್ಟು ಹುರಿದುಂಬಿಸುತ್ತಿದ್ದಳು.

ಒಂದೊಮ್ಮೆ ನಾನು ಸಹಪಾಠಿಗಳನ್ನು ಪೀಡಿಸಿದರೆ, ಬಲಪ್ರಯೋಗ ಮಾಡಿದರೆ ನನ್ನ ಮಗನೆಷ್ಟು ಶೂರ ನೋಡಿರಿ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದಳು. ಒಂದೊಮ್ಮೆ ಆಗಲೇ ನನ್ನ ಸಣ್ಣ ತಪ್ಪುಗಳನ್ನು ತಿದ್ದಿ ಸರಿದಾರಿಗೆ ತಂದಿದ್ದಿದ್ದರೆ, ಮುಂದೆ ನನ್ನಿಂದ ದೊಡ್ಡ ಅಪರಾಧಗಳು ಘಟಿಸುತ್ತಲೇ ಇರಲಿಲ್ಲ ಎಂದ.

ಆಗ ಅಲ್ಲಿದ್ದವರೊಬ್ಬರು, ನಿನ್ನ ಮಾತನ್ನು ಒಂದು ಹಂತಕ್ಕೆ ಒಪ್ಪಬಹುದಾದರೂ , ನೀನು ಬೆಳೆದು ದೊಡ್ಡವನಾಗಿ ತಿಳಿವಳಿಕೆ, ಸ್ವಂತಿಕೆ ಬಂದ ಮೇಲಾದರೂ ತಪ್ಪುದಾರಿ ಬಿಟ್ಟು ಸರಿದಾರಿ ಹಿಡಿಯಬಹುದಿತ್ತು, ಹೀಗಾಗಿ ನೀನು ಮಾಡಿದ ಕುಕೃತ್ಯಗಳಲ್ಲಿ ನಿನ್ನ ಅರಿವುಗೇಡಿತನದ್ದೇ ಹೆಚ್ಚು ಪಾಲಿದೆಯಲ್ಲವೇ? ಎಂದರು. ಆಗ ಅಪರಾಧಿ ನಿರುತ್ತರನಾದ.

ನೀತಿ :– ಸ್ವಾರ್ಥಕ್ಕಾಗಿ ಪದೆಪದೆ ತಪ್ಪುಮಾಡಿ, ಅದೇ ಹಾದಿಯಲ್ಲಿ ಮುಂದುವರಿದು, ತನ್ನ ದುಸ್ಥಿತಿಗೆ ಬೇರೆಯವರನ್ನು ದೂಷಿಸುವವರು ಶಿಕ್ಷೆಯಿಂದ ಪಾರಾಗಲು ಹೇಗೆ ಸಾಧ್ಯ ?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button