ದಿನಕ್ಕೊಂದು ಕಥೆ
ನಿರ್ವಾಣ-ನಿರ್ಮಾಣ
ಅದು ಬುದ್ಧ ಬದುಕಿದ ಕಾಲ. ಆತನ ಶಿಷ್ಯನೊಬ್ಬನು ಹಲವಾರು ವರುಷ ಅಪ್ಪಣೆ ಪಡೆದು ಧರ್ಮ ಪ್ರಚಾರಕ್ಕೆಂದು ದೂರ ದೂರ ಹೋದ. ಆತ ತರುಣ, ಶ್ರೇಷ್ಠವಾದ ಗುರಿಯನ್ನು ಇಟ್ಟುಕೊಂಡಿದ್ದ. ಒಂದು ಭವ್ಯ ಬುದ್ಧ ಮಂದಿರವನ್ನು ಕಟ್ಟುವ ಯೋಜನೆ ಹಾಕಿದ. ಅದಕ್ಕಾಗಿ ದೇಶವನ್ನೆಲ್ಲ ಸುತ್ತಿ ಸಾಕಷ್ಟು ಹಣ ಸಂಗ್ರಹಿಸಿದ. ಅತೀ ಭವ್ಯ ಮಂದಿರ ನಿರ್ಮಿಸಿದ. ಮಂದಿರದೊಳಗೆ ಬುದ್ಧನ ಸುಂದರ ಮೂರ್ತಿಯನ್ನು ಕೂಡ್ರಿಸಿದ. ಆ ಭಾಗದಲ್ಲಿ ಎಲ್ಲಿಯೂ ಇಂಥ ಸುಂದರ ಮಂದಿರ ಇರಲಿಲ್ಲ. ಜನರು ಆ ತರುಣ ಭಿಕ್ಕುವಿನ ಸಾಹಸ ಮನಸಾರೆ ಕೊಂಡಾಡಿದರು.
ಸಂತುಷ್ಟನಾದ ತರುಣ ಮತ್ತೊಂದು ಸುಂದರ ಯೋಜನೆ ಹಾಕಿದ ಬುದ್ಧನ ಶಿಲಾಮೂರ್ತಿಗೆ ಬದಲು ಚಿನ್ನದ ಮೂರ್ತಿಯನ್ನು ಕೂಡಿಸುವುದು. ಅದಕ್ಕಾಗಿ ಆ ಭಿಕ್ಷುವು ಜೋಳಿಗೆ ಹಿಡಿದು ಬುದ್ಧನ ಚಿನ್ನದ ಮೂರ್ತಿಯ ಕನಸು ಕಾಣುತ್ತ ಮತ್ತೆ ಭಿಕ್ಷೆಗೆ ಹೊರಟ.
ಒಮ್ಮೆ ಕೆಲವರು ಬುದ್ಧನ ದರ್ಶನಕ್ಕೆ ಹೋದರು. ಆ ತರುಣ ಭಿಕ್ಕುವಿನ ಸಾಹಸವನ್ನು ಬುದ್ದನಿಗೆ ಹೇಳಿದರೆ ಅವನಿಗೂ ಸಂತಸವಾಗುತ್ತದೆಂದು ಅವರ ಭಾವನೆ. ಆ ಭಿಕ್ಕುವಿನ ಸಾಧನೆಯನ್ನೆಲ್ಲ ಸವಿಸ್ತಾರವಾಗಿ ವರ್ಣಿಸಿದರು. ತಕ್ಷಣ ಬುದ್ಧನು ಕೈಯಲ್ಲಿ ಭಿಕ್ಷಾಪಾತ್ರೆ, ಕೋಲನ್ನು ಹಿಡಿದು ಆ ತರುಣ ಭಿಕ್ಕುವಿದ್ದಲ್ಲಿಗೆ ಬಂದ. ಶಿಷ್ಯನನ್ನು ಕಂಡು ಏನು ಮಾಡುತ್ತಿರುವೆ? ಎಂದು ಕೇಳಿದ.
ನಾನು ನಿಮ್ಮ ಭವ್ಯ ಮಂದಿರ ನಿರ್ಮಿಸುತ್ತಿರುವೆ ಎಂದ ಶಿಷ್ಯ, ಬುದ್ಧನು ನಸು ನಗುತ್ತ ಹೇಳಿದ ‘ನೀನು ಸ್ವಲ್ಪ ದಾರಿ ತಪ್ಪಿರುವೆ.
ಗಾಬರಿಯಾದ ಶಿಷ್ಯ ಅದು ಹೇಗೆ, ಗುರುಗಳೇ ? ಎಂದು ಕೇಳಿದ. ಅಷ್ಟೇ ಸಾವಧಾನದಿಂದ ಬುದ್ಧ ಹೇಳಿದ ‘ನಾನು ನಿನಗೆ ಬೋಧಿಸಿದ್ದು ನಿರ್ವಾಣದ ಪಥವೇ ವಿನಾ ನಿರ್ಮಾಣದ ಪಥವಲ್ಲ. ತಕ್ಷಣ ಶಿಷ್ಯನಿಗೆ ತನ್ನ ತಪ್ಪಿನ ಅರಿವಾಗಿ ಬುದ್ಧನ ಪಾದಕ್ಕೆ ಎರಗಿದ. “ಬುದ್ಧಂ ಶರಣಂ ಗಚ್ಛಾಮಿ…..” ಎಂದು ಮತ್ತೆ ನಿಜ ನಿರ್ವಾಣ ಪಥದಲ್ಲಿ ನಡೆದು ಧನ್ಯನಾದ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.