ಆಸು ಪಾಸಿನವರ ಭಾವಕ್ಕೂ ಬೆಲೆ ಕೊಡಿ ಇಲ್ದಿದ್ರೆ ಈ ಸನ್ಯಾಸಿಯಂತೆ ಬದುಕಾದೀತು ಜೋಕೆ
ನಮ್ಮ ಆಸುಪಾಸು ಬದುಕುತ್ತಿರುವ ಜನರನ್ನು ಗೌರವಿಸುವುದು ಅತ್ಯವಶ್ಯಕ
ಒಂದು ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎಂದಮೇಲೆ, ಆಸುಪಾಸು ಬದುಕುತ್ತಿರುವ ಜನರನ್ನು ಗೌರವಿಸುವುದು ಅತ್ಯವಶ್ಯಕವಾಗಿರುತ್ತದೆ. ಚಿಕ್ಕವರು-ದೊಡ್ಡವರು, ಬಡವ-ಶ್ರೀಮಂತ, ವಿದ್ಯಾವಂತ ಅವಿದ್ಯಾವಂತನೆಂಬ ಬೇಧ ತೋರದೆ ಎಲ್ಲರನ್ನೂ ಸಮಾನ ಮನಸ್ಥಿತಿಯಯಿಂದ ಕಂಡಾಗ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಆಗ ನಾವು ಬಯಸುತ್ತಿರುವ ಮನಶಾಂತಿ, ತನ್ನಿಂತಾನೆ ನಮ್ಮೊಡಲಿಗೆ ಬಂದು ಬೀಳುತ್ತದೆ.
ಇಲ್ಲವಾದಲ್ಲಿ ಎಲ್ಲರ ನಿರ್ಲಕ್ಷ್ಯಕ್ಕೊಳಗಾಗಿ ತಾವೂ ಒಳಗೊಳಗೆ ನೋವುಣ್ಣುತ್ತಾ ಇನ್ನೊಬ್ಬರನ್ನೂ ನೋಯಿಸುತ್ತಾ, ಪೀಡನ ಸುಖಿಯಾಗಿಯೇ ಬದುಕಿ, ಕೊನೆಗಾಲದಲ್ಲಿ ಬಾಯಿಗೆ ನೀಡುವವರೂ ಇಲ್ಲದೇ ಸಾಯಬೇಕಾಗಿ ಬರಬಹುದು.
ಇದೇ ರೀತಿ ಬದುಕಿ, ಯಾರೂ ಇಲ್ಲದೆ, ಒಬ್ಬಂಟಿಯಾಗಿ ಸತ್ತ ಸನ್ಯಾಸಿಯೋರ್ವನ ಕಥೆಯಿದು. ಬಹಳ ವರ್ಷಗಳ ಹಿಂದಿನ ಮಾತು. ಬಾವಿಕಟ್ಟೆ ಎಂಬ ಊರಲ್ಲಿ ಒಬ್ಬರು ಸನ್ಯಾಸಿ ವಾಸವಾಗಿದ್ದರು. ಊರಿನಿಂದ ಹೊರಗೆ ಕಾಡೊಂದರಲ್ಲಿ ಆಶ್ರಮ ಕಟ್ಟಿಕೊಂಡು ವಾಸಿಸುತ್ತಿದ್ದರು.
ಈ ರೀತಿ ಸನ್ಯಾಸ ಸ್ವೀಕಾರಕ್ಕೂ ಮುನ್ನ ಅವರೋರ್ವ ಅತ್ಯುನ್ನತ ಜ್ಞಾನ ಹೊಂದಿರುವ ವಿದ್ವಾಂಸರಾಗಿದ್ದರು. ಮೊದಲಿಗೆ ಬಾವಿಕಟ್ಟೆ ಎಂಬ ಊರಿನ ಪಕ್ಕದ ಪ್ರದೇಶವಾದ ಮಾಗಡಿಯ, ಕಶ್ಯಪ ಎಂಬ ರಾಜನ ಮಹಾಕವಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಸಾಹಿತ್ಯ ಜ್ಞಾನ ಎಷ್ಟಿತ್ತೆಂದರೆ, ಸ್ವತಃ ಮಹಾರಾಜರೇ ಅವರ ಪ್ರತಿಭೆಗೆ ತಲೆ ಬಾಗಿದ್ದರು.
ಆದರೆ ಅವರಲ್ಲಿ ಒಂದು ಕೆಟ್ಟ ಅಭ್ಯಾಸವಿತ್ತು. ತನ್ನಷ್ಟು ಜ್ಞಾನಿ ಬೇರೆ ಯಾರಿಲ್ಲವೆಂಬ ಅಹಂಕಾರದಲ್ಲಿ ಎಲ್ಲರನ್ನೂ ಕೀಳಾಗಿ ಕಾಣುತ್ತಿದ್ದರು. ಯಾರೊಂದಿಗೂ ಬೆರೆಯದೇ ಏಕಾಂತವಾಗಿರುತ್ತಿದ್ದರು.
ಮಾತನಾಡಿಸಲು ಬಂದ ಮಂತ್ರಿಗಳನ್ನೆಲ್ಲಾ ಅವಮಾನಿಸಿ ಕಳುಹಿಸುವುದು ಅವರಿಗೆ ಅಭ್ಯಾಸವಾಗಿತ್ತು. ಇವರ ವರ್ತನೆಯಿಂದ ಇಡೀ ಮಂತ್ರಿಮಂಡಲವೇ ನೊಂದುಕೊಂಡಿತ್ತು. ಅವರ ವರ್ತನೆ ಸಹಿಸಲಾರದ ಮಟ್ಟಕ್ಕಿಳಿದಾಗ, ಒಂದು ದಿನ ಇಡೀ ಮಂತ್ರಿ ಮಂಡಲವೇ ರಾಜನ ಬಳಿ, ‘ನಿಯತೇಯರ ವರ್ತನೆ ನಮಗೆ ತುಂಬಾ ತೊಂದರೆ ಕೊಡುತ್ತಿದೆ.
ನಮ್ಮನ್ನೆಲ್ಲಾ ಅವಮಾನಿಸುವುದು, ಮಾನಸಿಕವಾಗಿ ಹಿಂಸಿಸುವುದು ರೂಢಿಯಾಗಿದೆ. ಇವರಿಂದಾಗಿ ನಮ್ಮ ಕೆಲಸದ ಪರ ಶ್ರದ್ಧೆಯೂ ಹಾಳಾಗುತ್ತದೆ. ದಯವಿಟ್ಟು ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಪ್ರಾರ್ಥಿಸಿಕೊಂಡರು.
ಸ್ವಲ್ಪಹೊತ್ತು ಯೋಚಿಸಿದ ರಾಜ, ‘ಒಂದು ಗೌಪ್ಯ ವಿಚಾರ ನಿಮ್ಮ ಬಳಿ ಹಂಚಿಕೊಳ್ಳುತ್ತೇನೆ. ಇದನ್ನು ತಿಳಿದ ಮೇಲೆ ಅನ್ಯತಾ ಭಾವಿಸಬೇಡಿ. ನನ್ನ ತಂದೆಯವರ ಕಾಲದಿಂದಲೂ ಅವರು ನಮ್ಮ ಅಸ್ತಾನದ ಮಹಾಕವಿಯಾಗಿದ್ದರು. ಅವರ ಕುರಿತು ಎಲ್ಲರೂ ಕಂಡರೂ ಆಸ್ಥಾನದ ಹಿತ ದೃಷ್ಟಿಯಿಂದ ಇಲ್ಲಿಯೇ ಉಳಿಸಿಕೊಳ್ಳಬೇಕಾಗಿದೆ. ಬೇರೆ ರಾಜ್ಯಗಳಲ್ಲೂ ಧಿಕ್ಕರಿಸಿಕೊಂಡು ಕೊನೆಯದಾಗಿ ಇಲ್ಲಿ ಬಂದಿದ್ದಾರೆ.
ಅವರಿಗೆ ಜೀವನ ನೀಡುವ ಸಲುವಾಗಿ ನಾವು ಹೀಗೆ ಮಾಡಿದ್ದೇವೆ. ಅವರನ್ನು ನಿವೃತ್ತಿಗೊಳಿಸುವುದು ಅಸಾಧ್ಯವಾದ ಮಾತು. ಆದ್ದರಿಂದ ದಯವಿಟ್ಟು ನೀವೇ ಹೊಂದಿಕೊಳ್ಳಿ’ ಎಂದರು.
ಇಷ್ಟನ್ನೂ ತಾಳ್ಮೆಯಿಂದ ಕೇಳಿದ ಮಂತ್ರಿಮಂಡಲ, ‘ಅಪ್ಪಣೆ ದೊರೆ!’ ಎಂದು ಅಲ್ಲಿಂದ ಹೊರಟು ಹೋದರು. ಆವತ್ತಿಂತ ಅವನ ಕುರಿತು ಯಾರೂ ತಲೆಕೆಡಿಸಿಕೊಳ್ಳಲು ಹೋಗಲೇ ಇಲ್ಲ. ಆ ಸನ್ಯಾಸಿ, ‘ಕಾಗೆ ಬಿಳಿ’ ‘ಹೌದು ಗುರುಗಳೇ, ಕಾಗೆ ಬಿಳಿಯೇ’ ಎನ್ನುವುದನ್ನು ರೂಢಿಸಿಕೊಂಡರು.
ಹೀಗೆ ದಿನಗಳು ಸಾಗುತ್ತಿದ್ದವು. ಬರು ಬರುತ್ತಾ ಈ ಸನ್ಯಾಸಿಗೆ, ಎಲ್ಲರೂ ತನ್ನ ಹಿಂದಿಂದ ತನ್ನನ್ನು ಆಡಿಕೊಳ್ಳುತ್ತಿದ್ದಾರೆ ಎಂಬ ಭ್ರಮೆ ಆರಂವಾಯಿತು. ಇದರಿಂದ ಮಾನಸಿಕ ಸಂತೋಲನ ಕಳೆದುಕೊಂಡು ಎಲ್ಲರೊಡನೆ ಕೆಟ್ಟದಾಗಿ ವರ್ತಿಸತೊಡಗಿದ. ಇದರಿಂದ ಬೇಸತ್ತ ಜನ ಅವನನ್ನು ದೂರವೇ ಇಡ ತೊಡಗಿದರು.
ಬಹಳ ದಿನಗಳ ನಂತರ, ಯಾರೂ ನನ್ನ ಬಳಿಗೆ ಬರಬಾರದು ಎಂದು ಆದೇಶಿಸಿದವನೇ ಪಕ್ಕದ ರಾಜ್ಯಕ್ಕೆ ತೆರಳಿ ಅಲ್ಲಿನ ಕಾಡೊಂದರಲ್ಲಿ ವಾಸಿಸತೊಡಗಿದರು.
ಸಹವಾಸವೇ ಸಾಕೆಂದುಕೊಂಡಿದ್ದ ರಾಜ್ಯದ ಜನರೆಲ್ಲಾ, ‘ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಹೇಳಿದ್ದೂ ಹಾಲು-ಅನ್ನ’ ಎಂಬಂತಿದ್ದರು. ಅವರ ವಿಚಾರ ಬಾವಿಕಟ್ಟೆಯ ಜನರನ್ನೂ ತಲುಪಿತ್ತು.
ಹೀಗಾಗಿ ಯಾರೂ ಅವರನ್ನು ಮಾತನಾಡಿಸುತ್ತಿರಲಿಲ್ಲ. ದಿನಾ ಕಾಡೆಲ್ಲಾ ಸುತ್ತಿ, ಹಣ್ಣು ಹಂಪಲು ತರುವುದು, ಕಟ್ಟಿಗೆ ತಂದಿಡುವುದು, ಸ್ನಾನ ಮಾಡಿ, ತಿಂದು ಮಲಗುವುದು ಅಭ್ಯಾಸವಾಗಿತ್ತು.
ಹೀಗೆ ವರ್ಷಗಳು ಕಳೆದವು. ದಿನೇ ದಿನೆ ಅವನಲ್ಲಿ ಒಂಟಿತನ ಕಾಡತೊಡಗಿತ್ತು. ಜನರು ತನ್ನನ್ನು ಬಂದು ಮಾತನಾಡಿಸಲಿ, ತನ್ನ ಕುರಿತು ಕಾಳಜಿ ವಹಿಸಲಿ ಎಂದು ಬಯಸುತ್ತಿದ್ದರು.
ಹೀಗಾಗಿ ಜನ ಜಂಗುಳಿ ಇದ್ದ ಪ್ರದೇಶದಲ್ಲೇ ಹೆಚ್ಚಾಗಿ ತಿರುಗುತ್ತಿದ್ದರು. ಆದರೂ ಜನ ಅವರನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದರು. ಹೀಗಿರುವಾಗ ಒಂದು ದಿನ ಅವರು ಬಹಳ ಕಾಯಿಲೆ ಬಿದ್ದಿದ್ದರು. ದಾರಿ ಹೋಕರು ಅವರ ಮೇಲೆ ಕರುಣೆ ತೋರಿ, ಅವನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ, ಚಿಕಿತ್ಸೆ ನೀಡಿದರು.
ಹುಟ್ಟು ಗುಣ ಸುಟ್ಟರೂ ಹೋಗದು ಎಂಬಂತೆ ಅವನು ಮತ್ತೆ ಜನರಲ್ಲಿ, ‘ನೀವು ಮಾಡಿದ್ದು ನಿಮ್ಮ ಕರ್ತವ್ಯ. ನಾನು ಹಿರಿಯ. ಚಿಕಿತ್ಸೆ ಏನು ಮಹಾ? ನನಗೆ ನೀವು ತಲೆ ಬಾಗಿ ನಡೆಯಬೇಕು’ ಎಂದ. ಆವತ್ತೆ ಜನ, ಯಾವುದೇ ಸಂದರ್ಭದಲ್ಲಿ ಅವನಿಗೆ ಸಹಾಯ ಮಾಡಬಾರದು ಎಂದು ನಿರ್ಧರಿಸಿ, ಅವನನ್ನು ತನ್ನ ಆಶ್ರಮದಲ್ಲಿ ಬಿಟ್ಟು ಹೊರಟು ಹೋದರು.
ಮಾರನೇ ದಿನ ಅವನ ಜ್ವರ ಏರಿತ್ತು. ಸಾಯುವ ಪರಿಸ್ಥಿತಿ ಬಂದಿತ್ತು. ಸನ್ಯಾಸಿ ಕೂಗಿಕೊಂಡರು, ‘ಕಾಪಾಡಿ, ಕಾಪಾಡಿ’ ಎಂದು ಬೇಡಿದರು. ಆದರೆ ಯಾರೂ ಅತ್ತ ತಲೆಯೂ ಹಾಕಲಿಲ್ಲ. ಕೊನೆಗೆ ಒಂಟಿಯಾಗಿರಬಯಸಿದ, ಅಹಂಕಾರಿ ಸನ್ಯಾಸಿ, ತನ್ನ ಕೊನೆಯ ಕಾಲಕ್ಕೆ ಹನಿ ನೀರಿಗೂ ಗತಿ ಇಲ್ಲದೆ ಮರಣ ಹೊಂದಿದರು.
ಈಗ ಕೇಳಿ. ನಮ್ಮೆಲ್ಲರ ಮನಸ್ಸಿನಲ್ಲೂ ‘ನಾನು, ನಾನೇ ದೊಡ್ಡವನು, ಎಲ್ಲರೂ ನನ್ನ ಮಾತನ್ನೇ ಕೇಳಬೇಕು’ ಎಂಬ ಭಾವನೆ ಸಹಜವಾಗಿಯೇ ಇರುತ್ತದೆ. ಇದು ಮಿತಿ ಮೀರಿದಾಗ ಮಾತ್ರ, ಪರಿಸ್ಥಿತಿ ರುದ್ರ ತಾಂಡವವಾಡುತ್ತದೆ. ಜನರೆಲ್ಲಾ ನಮ್ಮನ್ನು ಬಿಟ್ಟು ಬಿಡುತ್ತಾರೆ. ನಾವು ಒಂಟಿಯಾಗುತ್ತೇವೆ.
ಕೊನೆಗೆ ನಾವು ಸತ್ತರೆ, ಎರಡು ಹನಿ ಕಣ್ಣೀರು ಹಾಕುವವರೂ ಉಳಿಯುವುದಿಲ್ಲ. ಹೀಗಾಗಿ, ನಮ್ಮ ಆಸುಪಾಸಿನವರನ್ನು ಗೌರವಿಸುತ್ತಾ, ಅವರ ಭಾವನೆಗಳಿಗೆ ಬೆಲೆ ಅವರನ್ನು
ತನ್ನಂತೆಯೇ ಕಂಡಾಗ, ಎಲ್ಲವೂ ಚೆನ್ನಾಗಿರುತ್ತದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882