ಕಥೆ

ಯಾರು ಇಲ್ಲದ ಜಾಗದಲ್ಲಿ ಬಾಳೆಹಣ್ಣು ತಿನ್ನಲಾದೀತೆ.? ಕನಕದಾಸರು ಹೇಳಿದ್ದೇನು.?

ವಿಶ್ವವೇ ಒಂದು ಕುಟುಂಬ

ಗುರುವಿನ ಆಜ್ಞೆ ಪಾಲಿಸದೆ ವಾಪಾಸ್ ಆದ “ಕನಕದಾಸ”

ವ್ಯಾಸರಾಯರ ಶಿಷ್ಯವೃಂದದಲ್ಲಿ ಕನಕದಾಸರು ಹಾಗೂ ಪುರಂದರದಾಸರು ಹೆಸರುವಾಸಿ. ಇವರಿಬ್ಬರ ಬಗ್ಗೆ ವ್ಯಾಸರಾಯರು ತುಸು ಹೆಚ್ಚೇ ಪ್ರೀತಿ, ವಾತ್ಸಲ್ಯ ತೋರುತ್ತಿದ್ದರು. ಆದರೆ ಕನಕದಾಸರ ಬಗ್ಗೆ ಇತರೆ ಶಿಷ್ಯಂದಿರು ಕೊಂಚವೂ ಗೌರವ ತೋರುತ್ತಿರಲಿಲ್ಲ. ಇದನ್ನು ವ್ಯಾಸರಾಯರು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದರು.

ಒಂದು ದಿನ ವ್ಯಾಸರಾಯರು ಶಿಷ್ಯ ಬಳಗವನ್ನು ಉದ್ದೇಶಿಸಿ, ‘ನಾನು ನಿಮ್ಮೆಲ್ಲರಿಗೂ ಒಂದೊಂದು ಬಾಳೆಹಣ್ಣನ್ನು ನೀಡುವೆ. ಇದನ್ನು ಯಾರೂ ಇಲ್ಲದ ಸ್ಥಳದಲ್ಲಿ ಹೋಗಿ ತಿಂದು ಬನ್ನಿ’ ಎಂದು ಆಜ್ಞಾಪಿಸಿದರು.

ಪ್ರತಿಯೊಬ್ಬರೂ ಬಾಳೆಹಣ್ಣನ್ನು ಸ್ವೀಕರಿಸಿ ಹೊರಟರು. ಒಬ್ಬ ಪಾಕಶಾಲೆ, ಇನ್ನೊಬ್ಬ ಉಗ್ರಾಣ, ಮತ್ತೊಬ್ಬ ಶೌಚಗೃಹ, ಹೀಗೆ ತಮಗೆ ತೋಚಿದ, ಯಾರೂ ಇರದಿದ್ದ ಸ್ಥಳಕ್ಕೆ ಹೋಗಿ ಬಾಳೆಹಣ್ಣನ್ನು ತಿಂದು ಗುರುಗಳ ಬಳಿ ಬಂದರು.

ಪ್ರತಿಯೊಬ್ಬರೂ ಬಾಳೆಹಣ್ಣನ್ನು ಯಶಸ್ವಿಯಾಗಿ ತಿಂದು ಬಂದಿರುವುದಾಗಿ ಜಂಭ ಕೊಚ್ಚಿಕೊಳ್ಳುತ್ತಿರಲು, ಕನಕದಾಸರು ಗುರುಗಳು ನೀಡಿದ್ದ ಬಾಳೆಹಣ್ಣಿನ ಸಮೇತ ಹಾಗೆಯೇ ಹಿಂದಿರುಗಿದರು. ಗುರುಗಳು ಕಾರಣವೇನೆಂದು ಕೇಳಲು ಕನಕದಾಸರು ‘ಗುರುಗಳೇ, ನಾನು ಎಲ್ಲಿ ಹೋದರೂ ಅಲ್ಲಿ ಶ್ರೀಕೃಷ್ಣನೇ ನನಗೆ ಕಾಣುತ್ತಿದ್ದ.

ಅವನಿಲ್ಲದ ಸ್ಥಳ ನನಗೆ ಸಿಗಲೇ ಇಲ್ಲ. ಹಾಗಾಗಿ ಈ ಬಾಳೆಹಣ್ಣನ್ನು ತಿನ್ನಲು ಸೂಕ್ತ ಸ್ಥಳ ಸಿಗದೆ ಹಾಗೆಯೇ ಹಿಂದಿರುಗಿದೆ’ ಎಂದರು. ಇದನ್ನು ಕೇಳಿದ ಗುರುಗಳು ಆನಂದ ಪರವಶರಾಗಿ, ಇತರೆ ಶಿಷ್ಯರತ್ತ ತಿರುಗಿ-‘ನಮ್ಮ ನಡುವೆ ಶ್ರೀಕೃಷ್ಣನ ಪರಮ ಶ್ರೇಷ್ಠ ಭಕ್ತನಿದ್ದಾನೆ. ಅಂತಹ ವ್ಯಕ್ತಿಯ ಬಗ್ಗೆ ನೀವುಗಳು ತೋರುತ್ತಿರುವ ಅಗೌರವ ಕೃಷ್ಣನಿಗೇ ಅಪ್ರಿಯವೆನಿಸುತ್ತಿದೆ.

ಇನ್ನು ಮುಂದಾದರೂ ನೀವುಗಳು ಕನಕನೊಂದಿಗೆ ಗೌರವಯುತವಾಗಿ ವರ್ತಿಸಿ’ ಎಂದರು. ಶಿಷ್ಯರಿಗೆ ತಾವು ಮಾಡಿದ ತಪ್ಪಿನ ಅರಿವಾಗಿ ಕನಕರಲ್ಲಿ ಕ್ಷಮೆಯಾಚಿಸಿದರು. ಕನಕದಾಸರ ಭಕ್ತಿ ಮನೆ ಮಾತಾಗತೊಡಗಿತು. ಮುಂದೊಂದು ದಿನ ಉಡುಪಿಯ ಕೃಷ್ಣನು ಕನಕದಾಸರ ಭಕ್ತಿಗೆ ಮೆಚ್ಚಿ ತನ್ನ ಇರುವಿನ ದಿಕ್ಕನ್ನೇ ಬದಲಿಸಿ ಕನಕರಿಗೆ ದರ್ಶನ ನೀಡಿ ಇತಿಹಾಸವನ್ನೇ ಸೃಷ್ಟಿಸಿದ.

ಒಬ್ಬ ವ್ಯಕ್ತಿಯನ್ನು ಕೇವಲ ಅವನ ಹುಟ್ಟು, ಜಾತಿ ಅಥವಾ ಹಣದಿಂದ ಅಳೆಯುವುದು ತಪ್ಪು. ಮನುಷ್ಯ ಮನುಷ್ಯನನ್ನು ಗುಣ, ಭಕ್ತಿ, ನೀತಿ-ನಡುವಳಿಕೆಯಿಂದ ಅಳಿಯಬೇಕು. ಭಕ್ತಿಗೆ ಯಾವ ಜಾತಿಯೂ ಅಡ್ಡಪಡಿಸಲಾರದು.

ಭಗವಂತನಲ್ಲಿ ನಿರ್ಮಲವಾದ ಭಕ್ತಿಯನ್ನು ಹೊಂದಿದ್ದಲ್ಲಿ, ಆ ಭಗವಂತ ನಮಗೆ ಸಕಲವನ್ನೂ ಕರುಣಿಸುತ್ತಾನೆ. ಜಾತಿ ಮತವೆಂಬ ವಿಷದ ಬೀಜ ಬಿತ್ತನೆ ಮಾಡದೆ ಮನುಷ್ಯ ಮತವೊಂದೇ ಎಂಬುದನ್ನು ಪಾಲಿಸೋಣ. ಪ್ರತಿಯೊಬ್ಬ ಮನುಷ್ಯನೂ ಜಾತಿ-ಮತವೆಂಬ ಅಂಧಕಾರದಿಂದ ಹೊರಬಂದು ವಿಶ್ವಮಾನವನಾಗುವ ಪಣತೊಡಬೇಕು.

ಮೇಲು ಕೀಳೆಂಬ ವಿಚಾರಗಳನ್ನು ನಮ್ಮ ಮನಸ್ಸಿನಿಂದ ಕಿತ್ತೊಗೆದು ಎಲ್ಲರೊಂದಿಗೆ ಬೆರೆತು ಬಾಳುವುದರಲ್ಲಿ ಸುಖವಿದೆ. ವಿಶ್ವವೇ ಒಂದು ಕುಟುಂಬ ಎಂದು ತಿಳಿದು ಬಾಳಿದರೆ ಜಾತಿ ವೈಮನಸ್ಯದಿಂದ ನಮ್ಮ ಸಮಾಜ ಮುಕ್ತವಾಗುವುದು ಹಾಗೂ ಮುಂದಿನ ಪೀಳಿಗೆಗೆ ಆದರ್ಶಪ್ರಾಯವಾದ ವಾತಾವರಣ ನಿರ್ವಣವಾಗುವುದು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button