ಮಣ್ಣಿನ ಪಾಲಿನ ಅನ್ನ ಯಾವುದು.? & ನನ್ನ ಪಾಲಿನ ಅನ್ನ ಯಾವುದು.?

ದಿನಕ್ಕೊಂದು ಕಥೆ
ಒಂದೂರಿನಲ್ಲಿ ಒಬ್ಬ ಕಳ್ಳ ಇದ್ದ. ಒಂದು ರಾತ್ರಿ ಒಂದು ಮನೆಗೆ ಕನ್ನ ಹಾಕೋಕೆ ಅಂತ ಮೆಲ್ಲನೆ ಗೋಡೆಗೆ ತಾಗಿಕೊಂಡು ಒಳ ಪ್ರವೇಶ ಮಾಡೋಕೆ ಪ್ರಯತ್ನ ಮಾಡುತ್ತಿರುವಾಗ ಒಳಗಿಂದ ತಾಯಿ ಮಗನ ಮಾತುಗಳು ಕೇಳಿಸಿತು ಮಗ ತಾಯಿಯ ಬಳಿ, ” ಅಮ್ಮ ನಾಳೆ ದೂರಪ್ರಯಾಣ ಮಾಡೋಕಿದೆ ಬೆಳಗ್ಗೆ ಬೇಗನೇ ಹೋಗಬೇಕಾಗಿದೆ.. ಹಾಗಾಗಿ ನನ್ನ ಮತ್ತು ಮಣ್ಣಿನ ಪಾಲಿನ ಆಹಾರವನ್ನ ಬುತ್ತಿಗೆ ಹಾಕಿ ಕೊಡು..” ಎಂದನು.
ಇದನ್ನ ಕೇಳಿಸಿಕೊಂಡ ಕಳ್ಳನಿಗೆ ತಡೆಯಲಾರದ ಕುತೂಹಲ.. ಇದೇನಿದು.. ನನ್ನ ಪಾಲಿನದು ಮತ್ತು ಮಣ್ಣಿನ ಪಾಲಿನದು..? ಈ ರಹಸ್ಯ ತಿಳಿದುಕೊಳ್ಳಲೇಬೇಕು ಅಂತ ಅಲ್ಲೇ ಮನೆಯ ಹೊರಗೆ ಕಾದುಕೊಂಡಿದ್ದು ಬೆಳಗ್ಗೆ ಮಗ ಪ್ರಯಾಣ ಹೊರಟಾಗ ಮೆಲ್ಲನೆ ಅವನಿಗೆ ಗೊತ್ತಾಗದ ಹಾಗೆ ಅವನನ್ನ ಹಿಂಬಾಲಿಸತೊಡಗುತ್ತಾನೆ.
ನಡೆಯುತ್ತಾ ನಡೆಯುತ್ತಾ ಬಲು ದೂರ ಸಾಗಿದ ಮಗನಿಗೆ ಹಸಿವಾಗ ತೊಡಗಿದಾಗ ಒಂದು ಮರದ ನೆರಳಿನಲ್ಲಿ ಕುಳಿತು ಒಂದು ಬುತ್ತಿಯಿಂದ ಅನ್ನ ತೆಗೆದು ತಿನ್ನ ತೊಡಗಿದ. ಕಳ್ಳನಿಗೆ ಕುತೂಹಲ ತಾಳಲಾಗದೆ ಆತನ ಬಳಿ ಬರುತ್ತಾನೆ. ಒಡನೆಯೇ ಮಗ ಒಂದು ಬುತ್ತಿಯನ್ನ ಕಳ್ಳನಿಗೆ ಕೊಟ್ಟು ತೆಗೆದುಕೋ ಅನ್ನುತ್ತಾನೆ.
ಅದರ ಅನ್ನ ತಿನ್ನತೊಡಗಿದ ಕಳ್ಳ. ಮೆಲ್ಲನೆ, “ಅಯ್ಯಾ ನಿನ್ನೆ ರಾತ್ರಿ ನನ್ನ ಪಾಲಿನ ಅನ್ನ ಮತ್ತು ಮಣ್ಣಿನ ಪಾಲಿನ ಅನ್ನ ಅಂತಂದು ಎರಡು ಬುತ್ತಿ ತಂದೆಯಲ್ಲಾ ಇದರಲ್ಲಿ ನಿನ್ನ ಪಾಲಿನ ಅನ್ನ ಯಾವುದು ? ಮಣ್ಣಿನ ಪಾಲಿನ ಅನ್ನ ಯಾವುದು ? ಅಂತ ಕೇಳುತ್ತಾನೆ. ಆಗ ಮಗ, “ನಾನು ತಿನ್ನುವುದು ಮಣ್ಣಿನ ಪಾಲಿನ ಅನ್ನ ನೀವು ತಿನ್ನುವುದು ನನ್ನ ಪಾಲಿನ ಅನ್ನ” ಎಂದು ಉತ್ತರಿಸುತ್ತಾನೆ.
ಕಳ್ಳನಿಗೋ ಮತ್ತಷ್ಟು ಗೊಂದಲ. ಅದು ಹೇಗೆ ? ಅಂದಾಗ ಮಗ ಹೇಳುತ್ತಾನೆ. ಇಗೋ ನಾನು ಈಗ ತಿನ್ನುತ್ತಿರುವ ಅನ್ನ ಹೊಟ್ಟೆಯೊಳಗೆ ಹೋಗಿ ಜೀರ್ಣವಾಗಿ ನಾಳೆ ಮಲವಾಗಿ ಮಣ್ಣಿಗೆ ಸೇರುತ್ತದೆ.
ಹಾಗಾಗಿ ಇದು ಮಣ್ಣಿನ ಪಾಲಿನ ಅನ್ನ. ಅದೇ ನಿನಗೆ ಕೊಟ್ಟ ಅನ್ನ ಪುಣ್ಯವಾಗಿ ನನ್ನ ಪಾಲಿಗೆ ಬಂದು ಸೇರುತ್ತದೆ. ಹಾಗಾಗಿ ನೀನು ಉಣ್ಣುತ್ತಿರುವ ಅನ್ನ ನನ್ನ ಪಾಲಿನ ಅನ್ನ. ಎಂದಾಗ, ಕಳ್ಳ ಮೂಕನಾಗಿ ಬಿಡುತ್ತಾನೆ.
ನಮ್ಮ ಹಿರಿಯವರು ಕತೆಗಳಲ್ಲಿ ಅದೆಂತಹಾ ಮೌಲ್ಯಯುತವಾದ ನೀತಿಯನ್ನ ಹೇಳುತ್ತಿದ್ದರಲ್ಲವಾ. ನಾವು ಉಂಡಿದ್ದು ಮಣ್ಣಿಗೆ. ನಾವು ಹಂಚಿದ್ದು ನಮ್ಮದೇ ಪಾಲಿಗೆ. ಎಂತಹಾ ಅದ್ಭುತವಾದ ಪಾಠಲ್ವಾ ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.