ಕಥೆ

ಪತ್ರಕರ್ತರ ಕುರಿತು ಡಿ.ವಿ.ಜಿ.ಹೇಳಿದ್ದೇನು.?

ದಿನಕ್ಕೊಂದು ಕಥೆ

ಅವರ ಧರ್ಮ ಅವರದು, ನನ್ನ ಧರ್ಮ ನನ್ನದು

ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ದಸರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿತ್ತು. ಹೀಗೆಯೇ ಮಹಾರಾಜರ ವರ್ಧಂತಿಯೂ ನಡೆಯುತ್ತಿತ್ತು. ಪ್ರತಿವರ್ಷವೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪತ್ರಕರ್ತರಿಗೆ ಔತಣ ಮಾಡಿಸಿ, ಒಂದು ನಗದು ಸಂಭಾವನೆಯನ್ನೂ ಕೊಡುತ್ತಿದ್ದು. ವಿಶ್ವೇಶ್ವರಯ್ಯನವರ ಕಾಲದವರೆಗೂ ಈ ಕ್ರಮ ಜಾರಿಯಲ್ಲಿ ಇತ್ತು.

೧೯೧೩-೧೪ರಲ್ಲಿ ಡಿವಿಜಿಯವರು ಪ್ರಜಾಪ್ರತಿನಿಧಿ ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಮೈಸೂರಿಗೆ ಹೋಗಿ ಬಂದರು. ಕೆಲವು ದಿನಗಳ ಬಳಿಕ ದಿವಾನರ ಕಚೇರಿಯಿಂದ ಡಿವಿಜಿಯವರಿಗೆ ಒಂದು ಮೊಬಲಗು ಬಂದಿತಂತೆ. ಸುಮಾರು ೨೫೦ ರೂಪಾಯಿಗಳಿರಬಹುದು. ಈ ಹಣ ಬಂದಿದ್ದಕ್ಕೆ ಕಾರಣ ಏನೆಂದು ತಿಳಿದುಕೊಳ್ಳಲು ಡಿವಿಜಿಯವರು ದಿವಾನರ ಕಚೇರಿಗೆ ಹೋದರು. ಹೀಗೆ ಪತ್ರಕರ್ತರಿಗೆ ಹಣ ಕೊಡುವುದು ಬಹು ವರ್ಷದಿಂದ ಬಂದ ವಾಡಿಕೆ ಎಂದರು ವಿಶ್ವೇಶ್ವರಯ್ಯನವರು.

ಅದಕ್ಕೆ ಡಿವಿಜಿಯವರು “ಹಿಂದಿನ ಕಾಲದಲ್ಲಿ ಪತ್ರಿಕೆಗಳವರನ್ನು ಸುಪ್ರಸನ್ನರಾಗಿ ಮಾಡಿಕೊಳ್ಳಲು ಈ ಏರ್ಪಾಟು ಅವಶ್ಯವಿದ್ದಿರಬಹುದು. ನನಗದು ಬೇಡ” ಎಂದರು. “ನೀವು ಮೈಸೂರಿಗೆ ಅಧಿವೇಶನಕ್ಕೆ ಹೋಗಿಬರಲು ಖರ್ಚಾಗುತ್ತದೆ, ಪ್ರಯಾಣ, ವಸತಿ ಮೊದಲಾದ ಖರ್ಚಿಗಾಗಿ ಈ ಮೊಬಲಗನ್ನು ಸ್ವೀಕರಿಸ ಬಹುದಲ್ಲ?” ಎಂದರು ವಿಶ್ವೇಶ್ವರಯ್ಯ,

ಡಿವಿಜಿಯವರು ಆಗ ಹೇಳಿದ ಮಾತುಗಳು ಪತ್ರಕರ್ತರಿಗೆಲ್ಲ ಮಾರ್ಗದರ್ಶಕವಾಗಬಲ್ಲದು. “ಪತ್ರಿಕೋದ್ಯೋಗಿಯ ಅನ್ನವಸ್ತ್ರಗಳ ವೆಚ್ಚದಂತೆ, ಅವನು ಪತ್ರಿಕಾ ಕಾರ್ಯಕ್ಕಾಗಿ ಮಾಡುವ ವೆಚ್ಚವೂ ಅವನ ದಿನದ ಖರ್ಚಿನ ಒಂದು ಭಾಗವಾಗಿರತಕ್ಕದ್ದು. ಅದಕ್ಕಾಗಿ ಅವನು ಸರ್ಕಾರದ ಸಹಾಯವನ್ನು ನಿರೀಕ್ಷಿಸಬಾರದು” ಎಂದರು ಡಿವಿಜಿಯವರು.

“ನಿಮಗೆ ಕೊಟ್ಟಿರುವುದು ಜುಜುಬಿ ಮೊಬಲಗು. ಆಂಗ್ಲೆಯ ಸಂಪಾದಿತ ಪತ್ರಿಕೆಗಳವರು ಸಾವಿರ ಎರಡು ಸಾವಿರಗಳಷ್ಟನ್ನು ತಕರಾರಿಲ್ಲದೇ ತೆಗೆದುಕೊಂಡಿದ್ದಾರಲ್ಲ?” ಎಂದು ವಿಶ್ವೇಶ್ವರಯ್ಯನವರು ಹೇಳಿದಾಗ, ಡಿವಿಜಿ ತಣ್ಣಗೆ ಹೇಳಿದರು. “ಅವರ ಧರ್ಮ ಅವರದು, ನನ್ನ ಧರ್ಮ ನನ್ನದು. ದಯವಿಟ್ಟು ಕ್ಷಮಿಸಬೇಕು.” ಡಿವಿಜಿಯವರ ನಿಸ್ಪೃಹತೆಗೆ ಸಾಕ್ಷಿಯಾಗಿರುವ ಇಂಥ ಎಷ್ಟೋ ಘಟನೆಗಳನ್ನು ಉಲ್ಲೇಖಿಸಬಹುದು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button