ದಿನಕ್ಕೊಂದು ಕಥೆ
ನಿಜವಾದ ತ್ಯಾಗ
ಒಂದು ದೇವಾಲಯದಲ್ಲಿ ನಿತ್ಯವೂ ಶ್ರದ್ಧೆ ಭಕ್ತಿ ಭಾವದಿಂದ ಪೂಜೆ ಆರಾಧನೆ, ಹರಿಕಥೆ ಭಜನೆ ಎಲ್ಲವೂ ನಡೆಯುತ್ತಿದ್ದವು. ದೇವಾಲಯದ ಗರ್ಭಗುಡಿಯಲ್ಲಿ ಗಾಜಿನ ತೂಗು ದೀಪವೊಂದಿತ್ತು, ಈ ತೂಗುದೀಪ ವಿಶಿಷ್ಟ ಬಗೆಯದಾಗಿತ್ತು. ಅದರಲ್ಲಿ ಗಾಜಿನ ಬೊಗುಣಿಯೊಂದರಲ್ಲಿ ನೀರನ್ನು ತುಂಬಿಸಿ ನೀರಿನ ಮೇಲೆ ಒಂದು ತಟ್ಟೆ ಇರಿಸಿದ್ದರು. ತಟ್ಟೆಯಲ್ಲಿ ತೆಂಗಿನ ಎಣ್ಣೆ ತುಂಬಿಸಿದ್ದರು. ಎಣ್ಣೆಯಲ್ಲಿ ಬತ್ತಿಯೊಂದನ್ನು ಇರಿಸಿ ಅದನ್ನು ಹಚ್ಚಿದ್ದರು. ಈ ವಿಶಿಷ್ಟ ಎಣ್ಣೆಯ ದೀಪ ಗರ್ಭಗುಡಿಯನ್ನು ತೇಜೋಮಯವಾಗಿ ಬೆಳಗುತ್ತಿತ್ತು
ಒಂದು ಮಧ್ಯರಾತ್ರಿಯ ವೇಳೆಗೆ ಬೊಗುಣಿಯಲ್ಲಿದ್ದ ನೀರು ಎಣ್ಣೆಯನ್ನು ಉದ್ದೇಶಿಸಿ ಮಾತನಾಡಿತು. “ಪ್ರೀತಿಯ ಗೆಳೆಯಾ ನಾನು ಹಿಂದೆ ದೂರ ದಿಗಂತದಾಚೆಗೆ ಮೋಡವಾಗಿದ್ದೆ. ಕೆಳಗಿರುವ ಎಲ್ಲ ಜೀವರಾಶಿಗಳ ಮೇಲೆ ಕರುಣೆಯಿಂದ ನಾನು ಮಳೆ ಸುರಿಸಿದೆ. ಮಳೆ ನೀರಾಗಿ ಧರೆಗೆ ಬಿದ್ದು ನಾನು ಇಲ್ಲಿ ಮಣ್ಣು ಧೂಳು, ಕಲ್ಲು ಬಂಡೆಗಳಲ್ಲಿ ಬೆರೆತು ಹೋದೆ. ಇಷ್ಟೆಲ್ಲ ದಯೆ ತೋರಿದರೂ ನಾನು ಯಾವ ಪಾಪ ಮಾಡದಿದ್ದರೂ ನೀನು ನನ್ನ ತಲೆಯ ಮೇಲೆ ಕುಳಿತಿರುವೆ. ನೀನು ನನಗಿಂತ ಮಿಗಿಲಾಗಿರುವೆ” ಆಗ ತಟ್ಟೆಯಲ್ಲಿದ್ದ ತೆಂಗಿನೆಣ್ಣೆ ನೀರಿನ ಮೇಲೆ ಕರುಣೆ ತೋರಿ ಹೀಗೆ ಹೇಳಿತು. ಹಾಗಾದರೆ ನನ್ನ ಕತೆಯನ್ನು ಸ್ವಲ್ಪ ಕೇಳು ಗೆಳೆಯಾ.
ನಿನ್ನ ಹಾಗೆ ನಾನು ಕೂಡಾ ಈ ಧರೆಯ ಮೇಲೆ ಅತಿ ಎತ್ತರದಲ್ಲಿ ತೆಂಗಿನಮರದ ತುದಿಯಲ್ಲಿ ತೆಂಗಿನಕಾಯಿಯಾಗಿ ಇದ್ದೆ. ನನ್ನನ್ನು ಅಲ್ಲಿಂದ ಕಿತ್ತು ತಂದರು. ನೆಲಕ್ಕೆ ಬಡಿದು ಒಡೆದು ಹಾಕಿದರು. ನನ್ನ ದೇಹದ ಅಂಗಾಂಗಗಳನ್ನು ಗಾಣಕ್ಕೆ ನೀಡಿದರು. ಗಾಣದಲ್ಲಿ ಯಮಯಾತನೆ ಅನುಭವಿಸಿ ನನ್ನ ದೇಹ ನೀರಾಯಿತು. ಈಗಲೂ ನನ್ನ ಯಾತನೆಗಳು ಕೊನೆಯಾಗಲಿಲ್ಲ.
ನೀನು ಹೇಳುತ್ತಿಯಾ ನಿನ್ನ ತಲೆಯ ಮೇಲೆ ನಾನು ಆರಾಮವಾಗಿದ್ದೇನೆಂದು. ಇಲ್ಲ ಗೆಳೆಯ ನನಗೆಲ್ಲಿಯ ವಿಶ್ರಾಂತಿ? ನನಗೆಲ್ಲಿಯ ನೆಮ್ಮದಿ? ನೋಡು ನಾನು ನಿರಂತರ ಉರಿಯುತ್ತಿದ್ದೇನೆ. ನಿನ್ನ ಯಾತನೆಗಳು ಕೊನೆಗೊಂಡಿವೆ. ತ್ಯಾಗ ಬದಲಿದಾನವಿಲ್ಲದೆ ಪರಿಶುದ್ಧ ಪ್ರೀತಿಯೂ ಇಲ್ಲ. ನಾನು ಉರಿಯದಿದ್ದರೆ ಕತ್ತಲಾವರಿಸಿದರೆ ಈ ದೇವಾಲಯದಲ್ಲಿ ಪೂಜೆ, ಭಜನೆ, ಹರಿಕಥೆ ಎಲ್ಲವೂ ನಿಂತು ಬಿಡುತ್ತದೆ. ಆದುದರಿಂದಲೇ ಭಕ್ತವತ್ಸಲ ಭಗವಂತ ನನ್ನನ್ನು ನಿನ್ನ ತಲೆಯ ಮೇಲಿರಿಸಿದ್ದಾನೆ” ಎಂದಿತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.