ದೇವರ ದಾಸಿಮಯ್ಯನವರ ದೃಷ್ಟಿಯಲ್ಲಿ ಗುರು
ಇಂದು ಗುರು ಪೂರ್ಣಿಮೆಯು ಇರುವುದುರಿಂದ ನಾಡಿನ ಸಮಸ್ತ ಜನತೆಗೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು. ಸರ್ವರಿಗೂ ಗುರು ದೇವರ ಆಶೀರ್ವಾದ ಇರಲೆಂದು ಬಯಸುತ್ತ ಈ ಕಿರು ಲೇಖನ ಗುರು ಚರಣಕ್ಕೆ ಆರ್ಪಿಸುವೆ.
“ಗು” ಎಂದರೆ ಅಂಧಕಾರ, “ರು” ಎಂದರೆ ದೂರಿಕರಿಸುವವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಗೆ ನಡೆಸುವನೇ “ಗುರು” ಎಂಬ ಅರ್ಥವಾಗುತ್ತದೆ. ಸಂಸ್ಕೃತದಲ್ಲಿ “ಗುರು” ಪದಕ್ಕೆ “ಭಾರ” ಎನ್ನುವ ಅರ್ಥವೂ ಇದೆ, ಅಂದರೆ ಯಾರು ಜ್ಞಾನದಿಂದ ಭಾರವಾಗಿರುವರೋ ಅವನೇ ಗುರು ಎಂದು ಅರ್ಥೈಸಿಕೊಳ್ಳಬಹುದು.
ಇಂತಹ ಜ್ಞಾನದ ಗಣಿಯಾಗಿರುವ ಗುರುವಿನ ಮಹಿಮೆಯನ್ನು ಅರಿಯಲು ಹಾಗೂ ಹೇಳಲು ಸಾಧ್ಯವಿಲ್ಲ. ಎನ್ನುವರು ಅನೇಕ ಮಹಾತ್ಮರು, ಶಿವಶರಣರು, ಅನುಭಾವಿಗಳು. ಗುರುವಿನ ಮಹಿಮೆಯನ್ನು ಹೇಳಲು ಅಥವಾ ಬರೆಯಲು ಪ್ರಾರಂಭಿಸಿದರೆ ಅದು ಮುಗಿಯುದಿಲ್ಲ. ಎಂಬುವುದನ್ನು ಸಂತ ಕಬೀರ ದಾಸರು ತಮ್ಮ ದೋಹ ಒಂದರಲ್ಲಿ ಹೀಗೆ ವ್ಯಕ್ತಪಡಿಸಿದ್ದಾರೆ.
ಸಬ ಧರತೀ ಕಾಗದ ಕರು, ಲೇಖನೀ ಸಬ ಬನರಾಯ | ಸಾತ ಸಮುಂದರ ಕೀ ಮಸಿ ಕರು, ಗುರು ಗುಣ ಲಿಖಾ ನ ಜಾಯ||
ಗುರು ಮಹಿಮೆ ಅಪಾರ, ಅವನ ಮಹಿಮ ಅಥವಾ ಅವನ ಶಕ್ತಿಯನ್ನು ಕುರಿತು ಬರೆಯಲು ಪ್ರಾರಂಭಿಸಿದರೆ, ವಾಕ್ಯ ಪದಗಳು ಸಾಕಾಗುವುದಿಲ್ಲ. ಎನ್ನುವುದನ್ನು ಈ ಭೂಮಿಯನ್ನೆಲ್ಲ ಕಾಗದವನ್ನಾಗಿ ಇಲ್ಲಿರುವ ಮರಗಿಡಗಳನ್ನು ಲೇಖನಿಯನ್ನಾಗಿಸಿ, ಇಲ್ಲಿರುವ ಸಪ್ತ ಸಾಗರದ ಜಲವನ್ನು ಮಸಿಯನ್ನಾಗಿ ಉಪಯೋಗಿಸಿದರೂ ಇನ್ನೂ ಗುರು ಮಹಿಮೆ ಉಳಿಯುವುದು ಎಂದಿದ್ದಾರೆ.
ಗುರು ನಮಗೆ ಜೀವನದಲ್ಲಿ ಸರಿಯಾದ ದಾರಿ ತೋರಿಸುವವನಾಗಿದ್ದಾನೆ. ನಮ್ಮನ್ನು ಕೈಹಿಡಿದು ನಡೆಸುತ್ತ… ಜೀವನದ ಅರಿವು ಹಾಗೂ ನಮ್ಮಲ್ಲಿ ಆಡಗಿರುವ ಆತ್ಮ ಶಕ್ತಿಯನ್ನು ಜಾಗೃತಗೊಳಿಸುವನು.
ಬೆಳಕಿನ ದಾರಿಯಲ್ಲಿ ನಮ್ಮನ್ನು ಕರೆದುಕೊಂಡು ಹೋಗಿ ನಮ್ಮ ಗುರಿ ಮುಟ್ಟಲು ಸಹಾಯ ಮಾಡುವನು, ಗುರು ಹುಡುಕಿದರೆ ಸಿಗುವವನಲ್ಲ. ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗಿ ನಮ್ಮ ಬಳಿಗೆ ಬರುವನು, ನಾವು ಗುರುವಿನ ಮೂಲಕ ಜೀವನದ ಅರಿವನ್ನು ಮಾಡಿಕೊಳ್ಳಬೇಕಾದರೆ ಅನುದಿನ, ಅನುಕ್ಷಣ ಗುರುವನ್ನು ಅಂತರಂಗದಲ್ಲಿ ಧ್ಯಾನಿಸುತ್ತ, ಪೂಜಿಸುತ್ತ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು.
ಈ ಜಗದಲ್ಲಿ ನನ್ನದೇನೂ ಇಲ್ಲ ಎಂಬ ಭಾವವನ್ನು ಮನದಲ್ಲಿ ಜಾಗೃತವಾಗಿಸಿಕೊಂಡು ಗುರುವಿನಲ್ಲಿ ಶರಣಾದಾಗ ಮಾತ್ರ ನಾವು ನಮ್ಮ ಗುರಿ ಮುಟ್ಟುವ ಪ್ರಯತ್ನ ಸಫಲವಾಗುವುದು.
ಗುರು ಮತ್ತು ಗುರಿ ಇವು ಮಾನವ ಜೀವನದ ಮಹತ್ವದ ಅಂಶಗಳಾಗಿವೆ. ಮಾನವನು ತನ್ನ ಗುರಿಯನ್ನು ಸಾಧಿಸಲು ಗುರುವಿನ ಆಶೀರ್ವಾದ ಹಾಗೂ ಅನುಗ್ರಹ ಇಂದು ಮತ್ತು ನಾಳೆಯೂ ಸಹ ಈ ಇವುಗಳಿಲ್ಲದೆ ಮಾನವನು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಭಾರತೀಯ ಸಂಪ್ರದಾಯ, ಸಂಸ್ಕೃತಿಗಳು ಗುರುವಿನ ಶಕ್ತಿ, ಮಹಿಮೆ, ಮಾರ್ಗದರ್ಶನದ ಬಗ್ಗೆ ತಿಳಿಸಿವೆ.
ಆದುದರಿಂದ ಗುರುವಿಗೆ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯವು ಉನ್ನತವಾದ ಸ್ಥಾನವನ್ನು ಕೊಟ್ಟು ಗೌರವಿಸಿದೆ. ಗುರುವಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವುದನ್ನು ಎಲ್ಲರಿಗೂ ತಿಳಿದ ಬಗ್ಗೆ ಸ್ಮರಿಸಿರುವುದನ್ನು ಕಾಣಬಹುದು.
“ಹಿಂದೆ ಗುರು ಇರಬೇಕು ಮುಂದೆ ಜೀವನದ ಗುರಿಯಿರಬೇಕು” ಎನ್ನುವುದನ್ನು ಅರಿತ ಸಂಪ್ರದಾಯವು. ಇಂತಹ ಗುರು-ಶಿಷ್ಯರನ್ನು ಇತಿಹಾಸದ ಪುಟಗಳಲ್ಲಿ ಚರಿತ್ರ ನಾಯಕರಾಗಿ ಉಳಿದಿದ್ದಾರೆ. ಇದಕ್ಕೆ ಗುರುಗಳು ಮೂಲಕ ಕಾರಣವಾಗಿದೆ. ಅಂತಃಕರಣದ ಶಿಷ್ಯನಿಗೆ ಮಾಡಿದ ಆಶೀರ್ವಾದವೇ ಕಾರಣವಾಗಿದೆ.
ನಮ್ಮ ವೇದ, ಉಪನಿಷತ್ತು, ಪುರಾಣಗಳು, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಧರ್ಮ, ಆಚಾರ-ವಿಚಾರ, ನೀತಿತತ್ತ್ವ ಮೊದಲಾದವುಗಳನ್ನು ಗುರುಗಳು ಉಪದೇಶಿಸುವರು.
ಆದುದರಿಂದ ಅವರಿಗೆ ಪ್ರಥಮ ಸ್ಥಾನವಿದೆ. ಏಕೆಂದರೆ ಉತ್ತಮ ಕಾರ್ಯವನ್ನು ಪ್ರಾರಂಭಿಸಲು ಮಂಗಲಾಚರಣೆಗೆ ಗುರುವಿನ ಸ್ಮರಣೆ, ಧ್ಯಾನ, ಸ್ತುತಿಯನ್ನು ಮಾಡುವುದು ನಮ್ಮ ಧಾರ್ಮಿಕ ಪರಂಪರೆಯಾಗಿದೆ. ಹೀಗೆ ಅನೇಕ ಸಂತರು, ಮಹಾತ್ತರು, ಶರಣರು ಗುರುವಿನ ಬಗ್ಗೆ, ಅವನ ಮಹಿಮೆ, ಶಕ್ತಿಯ ಬಗ್ಗೆ ಸ್ಮರಿಸಿರುವುದನ್ನು ಕಾಣಬಹುದು.
ಭಾರತೀಯ ಋಷಿ ಪರಂಪರೆಯನ್ನು ಗಮನಿಸಿದಾಗ ಗುರು-ಶಿಷ್ಯರ ಸಂಪ್ರದಾಯದ ಶ್ರೇಷ್ಟತೆಯನ್ನು ಕಾಣುತ್ತೇವೆ. ವ್ಯಕ್ತಿ ಯಾವುದೇ ವಿದ್ಯೆಯನ್ನು ಸಂಪಾದಿಸಬೇಕಾದಲ್ಲಿ ಗುರುವಿನ ಸ್ಥಾನ ಪ್ರಮುಖವಾಗಿದೆ. ಶಿಷ್ಯತ್ವಸ್ಥಾನ ಸ್ವೀಕರಿಸಿ ಗುರುವಿನ ಮಾರ್ಗದರ್ಶನದಲ್ಲಿ ಸರ್ವ ವಿದ್ಯೆಗಳನ್ನು ಪಡೆದು ಸ್ನಾತಕನಾಗಿ ಗೃಹ ಸ್ಥಾದಿ ಕಾಲದಲ್ಲಿಯೂ ಕಾಣುತ್ತೇವೆ. ಹಾಗಾಗಿ ನಮ್ಮಲ್ಲಿ ಗುರುಗಳನ್ನು ಈಶ್ವರನ ಸ್ವರೂಪವೆಂದು ತಿಳಿದು ಗೌರವ ಭಾವದಿಂದ ಪೂಜಿಸುತ್ತ ಬಂದಿದ್ದಾರೆ.
ಶರಣರು ಗುರುವಿಗೆ ಉನ್ನತ ಸ್ಥಾನವನ್ನು ನೀಡಿರುವುದು ಪೂಜ್ಯನೀಯವಾಗಿದೆ. ಶರಣರು ಮಾನವ ಜೀವನದ ಅಂತಿಮ ಗುರಿಯನ್ನು ಮೋಕ್ಷವೆಂದು ತಿಳಿಸಿ ಅದನ್ನು ಪಡೆಯಲು ಗುರು ಕೃಪೆಯನ್ನು ಪಡೆಯಬೇಕೆಂದಿದ್ದಾರೆ. ಋಷಿಗಳು, ಶರಣರು, ಸಂತರು, ದಾಸರು, ಕವಿಗಳು ಗುರುವಿನ ಮಹಿಮೆಯನ್ನು ಸ್ತುತಿಸುತ್ತ ತಮ್ಮ ಸರ್ವಸ್ವವನ್ನು ಗುರುವಿಗೆ ಸಮರ್ಪಿಸಿದ್ದಾರೆ.
“ಜಗದಗಲ ಮುಗಿಲಗಲ ಮಿಗೆಯಗಲ ನಿಮಗಲ” ಇರುವ ಈಶ್ವರನ ಸ್ವರೂಪವನ್ನು ತಿಳಿಸಿ ಕೊಡುವ ಶಕ್ತಿ ಗುರುವಿನ ಹೊರತು ಇನ್ನಾರಿಂದಲೂ ಆಗದು, ಗುರು ನರತ್ವ (ಮಾನವ ಜನ್ಮ) ವನ್ನು ಕಳೆದು ಹರನನ್ನಾಗಿ, ಜೀವ ಭಾವ ಕಳೆದು ಶಿವಭಾವ ಮಂತ್ರಮಯವನ್ನಾಗಿ ಮಾಡಿ, ಭವ ದುಃಖವೆಂಬ ಬಂಧನ ಬಿಡಿಸಿ ಮೋಕ್ಷದತ್ತ ಕರೆದುಕೊಂಡು ಹೋಗುತ್ತಾನೆ.
ಘಟದೊಳಗೆ ತೋರುವ ಸೂರ್ಯನಂತೆ
ಸರ್ವರಲ್ಲಿ ಶಿವನ ಚೈತನ್ಯ ವಿಪ್ಪುದು ಇದ್ದರೇನು? ಅದ ಕೂಡುವರೆ
ಗುರುವಿನಿಂದಲ್ಲದಾಗದು
ನೆಟ್ಟಗೆ ಗುರುಪಾದವ ಮುಟ್ಟಿ ಭವಗೆಟ್ಟೆನು ಕಾಣಾ ರಾಮನಾಥ.
ನೀರನ್ನು ತುಂಬಿದ ಅನೇಕ ಘಟಗಳು ಸೂರ್ಯನ ಎದುರಿನಲ್ಲಿಟ್ಟರೆ ಅವುಗಳಲ್ಲಿ ಸೂರ್ಯನ ಪ್ರತಿಬಿಂಬಗಳು ಕಾಣುತ್ತೇವೆ. ಹಾಗೆಯೇ ದೇಹವೆನ್ನುವ ಘಟಗಳಲ್ಲಿ ಈಶ್ವರನ ಪ್ರತಿಬಿಂಬವಾದ ಚೈತನ್ಯ (ಆತ್ಮ) ವಿದೆ. ಪ್ರತಿಬಿಂಬವನ್ನು ಗುರ್ತಿಸಿ ಬಿಂಬನ್ನು ಹೊಂದುವುದೇ ಮಾನವನ (ಜೀವಿಯ) ಗುರಿಯಾಗಿದೆ. ಬಿಂಬ ಪ್ರತಿಬಿಂಬವನ್ನು ತೋರಿಸಲು ಜ್ಞಾನಿ ಪುರುಷನಾದ ಗುರುವಿನಿಂದಲೇ ಸಾಧ್ಯವನ್ನುವರು ದಾಸಿಮಯ್ಯನವರು.
ಗುರುವಿಲ್ಲದೆ ನೇರವಾಗಿ ಈಶ್ವರನ ಜ್ಞಾನ ಅಸಾಧ್ಯ. ಮೊದಲು ಯಾವುದನ್ನು ಕಾಣಬೇಕೋ ಅದನ್ನು ಕಂಡಾಗ ಸರ್ವ ವಸ್ತುಗಳ ಜ್ಞಾನ ಸಹಜವಾಗಿ ಆಗುತ್ತವೆ. ಮಾನವನು ಈಶ್ವರನ ಚಿಂತನೆ ಮಾಡಲು, ಈಶ್ವರನ ಅನುಗ್ರಹ ಹೊಂದಲು, ವಿಡಂಬನಾತ್ಮಕವಾಗಿ ವಿಮರ್ಶಿಸಿದ್ದಾರೆ.
ಈಶ್ವರನ ಜ್ಞಾನ ಹೊಂದಲು ಗುರುವಿನ ಮಾರ್ಗದರ್ಶನ ಅವಶ್ಯಕ. ಗುರು ಜ್ಞಾನಿ ಎನಿಸಿಕೊಂಡು ಶ್ರೋತ್ರಿಯ ಮತ್ತು ಬ್ರಹ್ಮನಿಷ್ಠನಾಗಿರಬೇಕು. ಹೀಗಿರದಿದ್ದರೆ “ಅಂಧಕನ ಕೈಯು ಅಂದಕ ಹಿಡಿದಂತಾಗುವುದು; ನೀರಿಲ್ಲದ್ದು ಹೋಹನ ಈಜುಬಾರದವ ತಗೆದಂತಾಗುವದೆಂದು” ದಾಸಿಮಯ್ಯನವರ ಅಭಿಪ್ರಾಯವಾಗಿದೆ.
ಹೊಲಬನರಿಯದ ಗುರು, ಸುಲಭನಲ್ಲದ ಶಿಷ್ಯ ಕೆಲಬಲನ ನೋಡದುಪದೇಶ ಅಂಧಕನ ಲಾಭ ಹೊಕ್ಕಂತೆ ಕಾಣಾ ರಾಮನಾಥ.
ಮಾನವ ಮೊದಲು ಮೋಕ್ಷಾಪೇಕ್ಷವುಳ್ಳ ಅಧಿಕಾರಿಯಾಗಬೇಕು. ತನ್ನ ಶರೀರವನ್ನು ತೃಣವೆಂದು ತಿಳಿದು ಗುರುಚರಣವೆಂಬ ಅಗ್ನಿಗೆ ಅರ್ಪಿಸಬೇಕು. ಆಗ ಮಾನವ ಇಹ ಲೋಕದ ದುಃಖವನ್ನು ಕಳೆದುಕೊಂಡು ಪರಲೋಕದ ಸುಖವನ್ನು ಪಡೆಯುತ್ತಾನೆಂದು ದಾಸಿಮಯ್ಯನವರು ಈ ಮುಂದಿನ ವಚನದಲ್ಲಿ ತಿಳಿಸಿದ್ದಾರೆ.
ಉರಿವ ಕೆಂಡದ ಮೇಲೆ ತೃಣವ ತಂದಿರಿಸಿದರೆ ಆ ತೃಣವ ಕೆಂಡ ನುಂಗಿದಂತೆ,
ಗುರುಚರಣ ಮೇಲೆ ತನು ತೃಣವನಿರಿಸಿದರೆ
ಆ ತನುವೆಲ್ಲ ಲಿಂಗಮಯ ಕಾಣಾ ರಾಮನಾಥ.
ದಾಸಿಮಯ್ಯನವರು ಜೀವಿಯ ಪರಮ ಧೈಯವನ್ನು ಈ ವಚನದಲ್ಲಿ ವ್ಯಕ್ತಪಡಿಸುವುದರ ಜೊತೆಗೆ ಆತ್ಮ ಸಾಕ್ಷಾತ್ಕಾರದ ಮಾರ್ಗ ತೋರಿದ್ದಾರೆ. ಅದಕ್ಕಾಗಿ ಜೀವಿಯು ಎಲ್ಲೆಲ್ಲಿಯೂ ಸುತ್ತಾಡದೆ ಗುರುವಿಗೆ ಶರಣಾಗಿ, ಗುರುಪಿನಿಂದ ಎಲ್ಲವೂ ಸಾಧ್ಯವೆಂದಿದ್ದಾರೆ. ಹಾಗೆಯೇ ದಾಸಿಮಯ್ಯನವರು ಮುಂದಿನ ವಚನದಲ್ಲಿ ಗುರು ಕರುಣೆಯಿಂದ ಬಿಡುಗಡೆಯಾಗುತ್ತದೆ ಎಂದಿದ್ದಾರೆ. ಭವಬಂಧನದಿಂದ ಗುರು ಕರುಣಿಸಲು ಸಂಸಾರ ವಿಷಯ ಕೆಟ್ಟಿತ್ತು ಮಾಯಾ ಪ್ರಪಂಚ ಬಿಟ್ಟಿತ್ತು.
ಆದ್ದರಿಂದ ಗುರುವೆಂದರೆ ದೊಡ್ಡದು ಅಜ್ಞಾನ ಅಂಧಕಾರದಿಂದ ಜ್ಞಾನ ಪ್ರಕಾಶದತ್ತ ಕರೆದುಕೊಂಡು ಹೋಗುತ್ತಾನೆ. ಮಾನವ (ಜೀವಿ) ತಾನು ಎಲ್ಲದರಕ್ಕಿಂತಲೂ ಚಿಕ್ಕವನೆಂದು ತಿಳಿದು, ಕಿಂಕರದಿಂದ ಶಂಕರನಾಗಲು ಪ್ರಯತ್ನಿಸಬೇಕು.
ಕಿಂಕರನಾಗಿ ಹಸುವಿನ ಕಾಲಲ್ಲಿ ಕುಳಿತಾಗ ಮಾತ್ರ ಅಮೃತ ಸದೃಶವಾದ ಹಾಲು ದೊರೆಯುತ್ತದೆ. ಹಾಗೆಯೇ ಗುರುವಿನ ಶ್ರೀ ಚರಣದ ಹತ್ತಿರ ಕುಳಿತರೆ ಮೋಕ್ಷರೂಪದ ಜ್ಞಾನಾಮೃತವು ಗುರುವು ಧಾರೆ ಎರೆಯುತ್ತಾನೆ. ಆಗ ಆನಂದ ಲೋಕವನ್ನು ಜೀವಿಯು (ಶಿಷ್ಯ) ಹೊಂದುವನು.
ಹಸ್ತಾಬ್ಬ ಮಥನದಿಂದೊತ್ತಿ ಭಸ್ಮವ ಮಾಡಿ ಮತ್ತೆ ಪಂಚಾಕ್ಷರಿ ಮುರುಜೀವಣಿಯ
ಚಿತ್ತ ಸ್ತೋತ್ರದೊಳು ಧಾರೆಯನೆರೆಯಲು
ಆತ ನಿನ್ನಂತೆ ಕಾಣಾ ರಾಮನಾಥ.
ಗುರುಲಿಂಗ ಜಂಗಮಕ್ಕೆ ವರದಾಸನಾದಾತನೆ ಧರೆ ಮೂರಕ್ಕೆ ಗುರುವಾಗಿಪ್ಪ.
ದೇವರ ದಾಸಿಮಯ್ಯನವರು ಸಮಾಜದ ಎಲ್ಲ ರಂಗಗಳಲ್ಲಿಯೂ ಕೈಯಾಡಿಸಿದ್ದಾರೆ. ಅಲ್ಲಲ್ಲಿ ನಡೆಯುತ್ತಿರುವ ಅಪಚಾರ, ಅನಾಚಾರದ ಬಗ್ಗೆ ವಿಡಂಬನಾತ್ಮಕವಾಗಿ ವಿಮರ್ಶಿಸಿದ್ದಾರೆ.
ಪರವಧುವ ನೆರೆಯದೆ, ಪರಧನವ ತುಡುಕದೆ,
ಪರದೈವದಿಚ್ಚೆವಡೆಯದೆ
ಗುರು ಲಿಂಗ ಜಂಗಮಕ್ಕೆ ವರದಾಸನಾದತನೆ ಧರೆ ಮೂರಕ್ಕೆ ಗುರುವಾಗಿಪ್ಪನ್, ರಾಮನಾಥ,
ಎಂದು ಹೇಳುತ್ತಾ
ಮಂಡೆಯ ಬೋಳಿಸಿಕೊಂಡು
ಮಡಿಯ ಗೋಸಿಯ ಕಟ್ಟಿದಡೇನು?
ಕಂಡ ಕಂಡವರಿಗೆ ಕಯೊಡ್ಡಿ ಬೇಡುವ
ಭಂಡರನೊಲ್ಲನಮ್ಮ ರಾಮನಾಥ,
ಪ್ರಸ್ತುತ ವಚನದಲ್ಲಿ ಸಮಾಜ ಸುಧಾರಣೆಯ ಬಗ್ಗೆ ಚಿಂತಿಸುವ ಮನೋಭಾವ ಮೈದಾಳಿ ಬ೦ದಿದೆ. ಸಮಾಜದಲ್ಲಿರುವ ವಿರಕ್ತರ ಮಾರ್ಗವನ್ನು ಕಂಡು ಅವರನ್ನು ಟೀಕಿಸಿದ್ದಾರೆ. ತಲೆ ಬೋಳಿಸಿಕೊಂಡು ಶುಭ್ರವಾದ ವಸ್ತ್ರಧಾರಣೆ ಮಾಡಿದ ವಿರಕ್ತನಾದವನು ಧನದಾಸೆಯಿಂದಾಗಲಿ, ಭಂಡತನದಿಂದ ಕಂಡಕಂಡವರಿಗೆ ಕೈಯೊಡ್ಡಿ ಬೇಡುವ ಕ್ರಿಯೆಯನ್ನು ಖಂಡಿಸಿದ್ದಾರೆ.
ಇಂತಹ ವಿರಕ್ತರನ್ನು ಈಶ್ವರನು ಮೆಚ್ಚುವುದಿಲ್ಲ. ಎಂದು ಕಾಯಕ ಮಾಡದ ಹೊಟ್ಟೆಪಾಡಿಗಾಗಿ ದರಿದ್ರರಾದ ವೇಷಧಾರಿಗಳನ್ನು ಛೇಡಿಸುತ್ತಾರೆ. ಗುರುವಿನ ಬಗ್ಗೆ ಸ್ಪಷ್ಟವಾದ ವ್ಯಾಖೆಯನ್ನು ಮಾಡುತ್ತಾರೆ. ಏಕೆಂದರೆ ಭಾರತೀಯ ಅಧ್ಯಾತ್ಮ, ಧಾರ್ಮಿಕ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ.
ಈಶನ ಶರಣರು ವೇಶಿಯ ಹೋದಡೆ
ಮೀಸಲೋಗರವ ಹೊರಗಿಸಿದಡೆ ಹಂದಿ ಮೂಸಿ ನೋಡಿದಂತೆ, ರಾಮನಾಥ.
ಹೀಗೆ ಗುರುವಿನ ಮಹಿಮೆಯ ಬಗ್ಗೆ ಹೇಳುತ್ತ ಗುರು ಹೇಗಿರಬೇಕೆಂದು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ವೇಷವ ಹೊತ್ತು ಈಶ್ವರ ಧ್ಯಾನದಲ್ಲಿರುವುದನ್ನು ಮರೆತು ದೋಷದಲ್ಲಿ ನಡೆದು ವೇಶಿಯ ಎಂಜಲ ಹೇಸದೇ ತಿನ್ನುತ್ತ ಸಮಾಜ ಕಂಟಕರಾದ ಸ್ವಾಮಿ, ಜಂಗಮ, ಸಾಧು ಸಂತರೆನಿಸಿಕೊಂಡವರ ಬಗ್ಗೆ ಕಟುವಾಗಿ ಖಂಡಿಸಿದ್ದಾರೆ.
ಡಾ.ಈಶ್ವರಾನಂದ ಸ್ವಾಮೀಜಿ.
ಮೊ – 9341137882