ಬುದ್ಧಿವಂತನಿಗೆ ಗೆಲುವು
ಪ್ರಾಚೀನ ಕಾಲದ ದಾಯ್ ಜನಾಂಗದಲ್ಲಿ ನಮ್ಮ ತೆನಾಲಿ ರಾಮಕೃಷ್ಣ, ಬೀರಬಲ್ಲನಂತೆ ಐಸು ಮತ್ತು ಐಶಿ ಎಂಬ ಸಹೋದರರು ತಮ್ಮ ಚುರುಕು ಬುದ್ಧಿವಂತಿಕೆಗೆ ಬಹಳ ಹೆಸರಾಗಿದ್ದರು. ಈ ಸಹೋದರರನ್ನು ಕಂಡರೆ ಆ ಊರಿನ ಶ್ರೀಮಂತನೊಬ್ಬನಿಗೆ ಸದಾಕಾಲ ಹೊಟ್ಟೆ ಉರಿಯುತ್ತಿತ್ತು. ಏನಾದರೂ ಮಾಡಿ ಇವರನ್ನು ಮೂರ್ಖರನ್ನಾಗಿ ಮಾಡಿ ಸೋಲಿಸಬೇಕೆಂದು ಅವನ ಮಹದಾಸೆಯಾಗಿತ್ತು.
ಒಂದು ದಿನ ಅವನು ಸುತ್ತಲೂ ಸೇರಿದ್ದ ಜನರಿಗೆ “ಇಂದು ನಾನು ಏನಾದರೂ ಮಾಡಿ ಐಶಿಯನ್ನು ಮೂರ್ಖನನ್ನಾಗಿ ಮಾಡಿಯೇ ತೀರುತ್ತೇನೆ” ಎಂದು ಹೇಳಿ ತನ್ನ ಸೇವಕರಿಗೆ ಐಶಿಯನ್ನು ಕರೆದುಕೊಂಡು ಬರುವಂತೆ ಆಜ್ಞಾಪಿಸಿದ.
ಸ್ವಲ್ಪ ಹೊತ್ತಿನಲ್ಲೇ ಐಶಿ ಅಲ್ಲಿಗೆ ಬಂದ. ಶ್ರೀಮಂತ ಕಾಲಿನ ಮೇಲೆ ಕಾಲು ಹಾಕಿ ಕುರ್ಚಿಯ ಮೇಲೆ ಕುಳಿತಿದ್ದ. ಐಶಿ ಬಂದವನೇ ಸ್ವಲ್ಪ ದೂರದಲ್ಲೇ ನಿಂತು ಶ್ರೀಮಂತನಿಗೆ ಕೈಮುಗಿದ. ಆಗ ಶ್ರೀಮಂತ “ನೀನು ಈ ಊರಿನಲ್ಲಿ ಎಲ್ಲರಿಗಿಂತ ತುಂಬಾ ಬುದ್ದಿವಂತನೆಂದು ಹೇಳುತ್ತಾರೆ. ನಾನು ಈಗ ನಿನ್ನನ್ನು ಪರೀಕ್ಷಿಸುತ್ತೇನೆ. ಎಲ್ಲಿ ನನ್ನನ್ನು ಈ ಕುರ್ಚಿ ಬಿಟ್ಟು ಏಳುವಂತೆ ಮಾಡು ನೋಡೋಣ” ಎಂದು ಸವಾಲು ಹಾಕಿದ.
ಐಶಿಗೆ ಗಲಿಬಿಲಿಯಾಯಿತು. ಅವನು ಅದನ್ನು ತೋರಗೊಡದೆ ಒಂದು ಕ್ಷಣ ಯೋಚಿಸಿ ಬಹಳ ಭಯ ಭಕ್ತಿಯಿಂದ “ಮಹಾಸ್ವಾಮಿ! ನೀವು ಈ ಊರಿಗೆ ಹಿರಿಯರು, ಮೇಲಾಗಿ ಭಾರೀ ಶ್ರೀಮಂತರಲ್ಲದೆ ಮುಖಂಡರೂ ಹೌದು, ಈಗ ತಾವು ಕುಳಿತಿರುವ ಆಸನ ಸಾಮಾನ್ಯವಾದುದಲ್ಲ. ಅದು ಪವಿತ್ರವಾದ ಸ್ಥಾನವಾಗಿದೆ. ಇಂತಹ ಪವಿತ್ರವಾದ ಆಸನದ ಮೇಲೆ ಕುಳಿತಿರುವವರ ಜೊತೆ ಯಾರೂ ತಮಾಷೆ ಮಾಡುವುದು ಸಭ್ಯತೆಯಲ್ಲ, ನೀವು ನಿಜವಾಗಿಯೂ ನನ್ನೊಡನೆ ಪಂದ್ಯ ಹೂಡುವುದೇ ಆದರೆ ಇಗೋ ಈ ಕಡೆ ಇರುವ ಕೊನೆಯ ಕುರ್ಚಿಯ ಮೇಲೆ ಕುಳಿತುಕೊಳ್ಳಿ. ಆಗ ನಿಮ್ಮನ್ನು ನಾನು ಸೋಲಿಸುತ್ತೇನೆಯೋ ಇಲ್ಲವೋ ನೀವೇ ನೋಡಿ” ಎಂದ.
ಶ್ರೀಮಂತನಿಗೆ ಈ ಮಾತು ನಿಜವನಿಸಿತು. ಅವನು ತಾನು ಕುಳಿತಿರುವ ಈ ಆಸನ ದೊಡ್ಡ ಸ್ಥಾನವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಅದರ ಮೇಲೆ ಕುಳಿತು ಸವಾಲು ಹಾಕುವುದು ಸರಿಯಲ್ಲ ಎಂದು ಯೋಚಿಸಿದವನೇ ಕೂಡಲೇ ತಾನು ಕುಳಿತಿದ್ದ ಕುರ್ಚಿಯಿಂದ ಎದ್ದು ಐಶಿ ತೋರಿಸಿದ ಕುರ್ಚಿಯ ಮೇಲೆ ಕುಳಿತುಕೊಂಡ ನಂತರ ಐಶಿಯನ್ನು ಕುರಿತು “ಈಗ ನನ್ನ ಸವಾಲಿಗೆ ಏನು ಹೇಳುತ್ತೀಯಾ? ಸೋಲೊಪ್ಪಿಕೊಳ್ಳುವೆಯಾ?” ಎಂದು ಪ್ರಶ್ನಿಸಿದ.
ಅದಕ್ಕೆ ಐಶಿ “ಮಹಾಸ್ವಾಮಿ! ನಿಮ್ಮ ಸವಾಲನ್ನು ನಾನು ಸ್ವೀಕರಿಸಿಯೂ ಆಯಿತು. ಅದರಲ್ಲಿ ಜಯಶಾಲಿಯೂ ಆಗಿದ್ದೇನೆ. ನೀವು ಕುಳಿತಿದ್ದ ಕುರ್ಚಿಯಿಂದ ನಿಮ್ಮನ್ನು ನಾನು ಈಗಾಗಲೇ ಎಬ್ಬಿಸಿ ಬಿಟ್ಟಿದ್ದೇನೆ. ಅದನ್ನು ನೀವು ಗಮನಿಸಿಲ್ಲವೆಂದು ತೋರುತ್ತದೆ” ಎಂದವನೇ “ಮಹಾಸ್ವಾಮಿ ನಾನಿನ್ನು ಬರುತ್ತೇನೆ” ಎನ್ನುತ್ತ ತನ್ನ ಮನೆಗೆ ನಡೆದ. ಶ್ರೀಮಂತ ಗರ್ವಭಂಗದಿಂದ ಅವಮಾನಿತನಾದ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.