ದಿನಕ್ಕೊಂದು ಕಥೆ
ಒನಕೆ ಪೂಜೆಯಿಂದ ಉಪವಾಸ ಮಾಡುವುದು ತಪ್ಪಿಸಿಕೊಂಡ ಹೆಣ್ಣಿನ ಜಾಣ್ಮೆ
ಒಂದು ಹಳ್ಳಿಯಲ್ಲಿ ಒಂದು ದೇವರ ಗುಡಿ. ಅಲ್ಲಿ ವಿಷ್ಣು ಭಟ್ಟ ಎಂಬ ಪೂಜಾರಿ ಪೂಜೆ ಮಾಡುತ್ತಿದ್ದ. ಅವನ ಮನೆ ಚಿಕ್ಕದು. ಆದರೆ ಮನಸ್ಸು ಮಾತ್ರ ದೊಡ್ಡದು. ಅವನಿಗೆ ಹೆಚ್ಚಿನ ಆದಾಯವಿರಲಿಲ್ಲ. ಅತಿಥಿ ದೇವೋಭವ ಎಂದು ನಂಬಿದ್ದ. ಆದುದರಿಂದ ದಿನಾಲೂ ಮಧ್ಯಾಹ್ನ ಊಟಕ್ಕೆ ಯಾರನ್ನಾದರೂ ಕರೆದುಕೊಂಡು ಬರುತ್ತಿದ್ದ.
ಆದರೆ ವಿಷ್ಣು ಭಟ್ಟನ ಹೆಂಡತಿ ಲಕ್ಷೀಗೆ ಇದು ಇಷ್ಟವಿರಲಿಲ್ಲ. ಗಂಡನ ಮೇಲಿನ ಪ್ರೀತಿಯಿಂದ ಅವನ ಮಾತಿಗೆ ಎದುರಾಡುತ್ತಿರಲಿಲ್ಲ. ಇದ್ದುದರಲ್ಲೇ ರುಚಿ ರುಚಿಯಾದ ಅಡುಗೆಮಾಡಿ ಬಡಿಸುತ್ತಿದ್ದಳು. ಕೆಲವೊಮ್ಮೆ ಗಂಡ ಮತ್ತು ಅತಿಥಿಗಳ ಊಟದ ನಂತರ ಅವಳಿಗೆ ಊಟ ಮಾಡಲು ಏನೂ ಉಳಿಯುತ್ತಿರಲಿಲ್ಲ. ಎಷ್ಟೋ ದಿನ ಹೀಗೆ ಅವಳು ಖಾಲಿ ಹೊಟ್ಟೆಯಲ್ಲಿರಬೇಕಾಗಿತ್ತು.
ಲಕ್ಷ್ಮೀ ಆಗಾಗ ನೆರೆಹೊರೆಯವರೊಂದಿಗೆ ಸಾಲ ಮಾಡುತ್ತಿದ್ದಳು. ಒಂದೆರಡು ಸಲ ಹಣ, ಅಕ್ಕಿ, ಬೇಳೆ ಇತ್ಯಾದಿ ಸಾಲ ಕೊಟ್ಟ ಮೇಲೆ ಅವಳು ಸಾಲ ಹಿಂದಿರುಗಿಸದ ಕಾರಣ ಸಾಲ ಕೊಡುವುದನ್ನು ನಿಲ್ಲಿಸಿದರು. ಹಣವಿಲ್ಲದೆ ಅತಿಥಿಗಳಿಗೆ ಪ್ರತಿದಿನ ಊಟ ಬಡಿಸಲು ಸಾಧ್ಯವೆ? ಸುಮ್ಮನೇ ಸಾಲ ಮಾಡುತ್ತಾಳೆ ಎಂದು ಮಾತನಾಡತೊಡಗಿದರು. ಅವಳ ಕಷ್ಟ ಅವರಿಗೇನು ಗೊತ್ತು? ಲಕ್ಷ್ಮೀ ಅನೇಕ ದಿನ ಉಪವಾಸವಿರಬೇಕಾಯಿತು.
ಒಂದು ದಿನ ರಾತ್ರಿ ಊಟದ ನಂತರ ಲರ್ಕ್ಷಿ ವಿಷ್ಣು ಭಟ್ಟನ ಬಳಿ ಹೋಗಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. “ದಿನವೂ ಊಟಕ್ಕೆ ಜನರನ್ನು ಕರೆತರುವಿರಿ, ನಾವು ಇತರರಿಗೆ ಬಡಿಸುವುದು ಸತ್ಕಾರ್ಯ, ಆದರೆ ನಮಗೆ ಸಾಕಷ್ಟು ಸಂಪತ್ತು ಇದೆಯೇ ಎಂದು ಆಲೋಚಿಸಿದ್ದೀರಾ? ಅತಿಥಿಗಳಿಗೆ, ನಿಮಗೆ ಬಡಿಸಿ ನನಗೆ ಊಟವಿಲ್ಲದೆ ಎಷ್ಟೋ ದಿನ ಉಪವಾಸವಿರಬೇಕಾಗಿತ್ತು. ಇನ್ನು ಮುಂದೆಯಾದರೂ ಯಾರನ್ನೂ ಊಟಕ್ಕೆ ಕರೆಯಬೇಡಿ” ಎಂದಳು.
ಅವಳ ಮಾತು ವಿಷ್ಣು ಭಟ್ಟನಿಗೆ ಇಷ್ಟವಾಗಲಿಲ್ಲ. “ನಮಗೆ ಇಲ್ಲದಿದ್ದರೂ ಪರರಿಗೆ ಕೊಡುವುದು ಧರ್ಮ. ಇದರಿಂದ ಪುಣ್ಯ ಸಿಗುತ್ತೆ, ಹುಟ್ಟಿಸಿದ ದೇವರು ಹುಲ್ಲು ಮೇಯಿಸುವನೆ” ಎಂದು ಹೇಳಿ ನಿದ್ದೆ ಹೋದ.
ಲಕ್ಷ್ಮೀಗೆ ಊಟ ಇಲ್ಲದೆ ಹಸಿವೆಯಿಂದ ಸಂಕಟ ಪಡಬೇಕಾಯಿತು. ತನ್ನ ಕಷ್ಟ ಗಂಡನಿಗೆ ಅರ್ಥವಾಗಿಲ್ಲ ಎಂಬ ಬೇಸರದಿಂದ ರಾತ್ರಿಯೆಲ್ಲ ಅಳುತ್ತಿದ್ದಳು. ಕಡೆಗೆ ಒಂದು ನಿರ್ಧಾರಕ್ಕೆ ಬಂದು ನಿದ್ರೆ ಹೋದಳು.
ಮಾರನೆ ದಿನ ವಿಷ್ಣು ಭಟ್ಟ ಗುಡಿಗೆ ಹೋಗಿ ಮಧ್ಯಾಹ್ನ ಮನೆಗೆ ಬರುವಾಗ ಬೇರೆ ಊರಿನ ಇಬ್ಬರೂ ಅತಿಥಿಗಳನ್ನು ಕರೆದುಕೊಂಡು ಬರುತ್ತಿರುವುದು ದೂರದಿಂದಲೇ ಗಮನಿಸಿದ ಇವಳು ಮೊದಲೇ ನಿರ್ಧರಿಸಿರುವಂತೆ ತನ್ನ ಜಾಣ್ಮೆ ಪ್ರದರ್ಶನಕ್ಕೆ ಸಿದ್ಧವಾದಳು.
ವಿಷ್ಣು ಭಟ್ಟ ಅತಿಥಿಗಳನ್ನು ಒಳಗೆ ಕುಳ್ಳಿರಿಸಿ ಕೈಕಾಲು ತೊಳೆಯಲು ಒಳಗೆ ಹೋದಾಗ, ಲಕ್ಷ್ಮೀ ಒಂದು ಒನಕೆಯನ್ನು ತಂದು ಗೋಡೆಗೆ ಒರಗಿಸಿ ನಿಲ್ಲಿಸಿ ಅದಕ್ಕೆ ಹೂ ಇಟ್ಟು ದೀಪ ಹಚ್ಚಿ ಪೂಜೆ ಮಾಡುವಂತೆ ಕಣ್ಮುಚ್ಚಿ ಕುಳಿತಳು.
ಅತಿಥಿಗಳು ಇದನ್ನು ನೋಡಿ ಆಶ್ಚರ್ಯದಿಂದ ಅವಳ ಪೂಜೆಗೆ ಕಾರಣ ಕೇಳಿದರು, ಆಗ ಲಕ್ಷ್ಮೀ ಕಣ್ಣೀರಿಡುತ್ತಾ ಹೇಳಿದಳು, “ಇದು ನಿಮಗೆ ಸಂಬಂಧಿಸಿದ ವಿಷಯ. ನಾನು ನಿಮಗೆ ಹೇಳುವಂತಿಲ್ಲ, ಹೇಳಿದರೆ ನನ್ನ ಯಜಮಾನರಿಗೆ ಸಿಟ್ಟು ಬರುವುದು” ಎಂದಳು.
ಈ ಮಾತು ಕೇಳಿ ಅತಿಥಿಗಳ ಕುತೂಹಲ ಕೆರಳಿತು. ತಮಗೆ ಆ ವಿಷಯ ಹೇಳಲೇಬೇಕೆಂದು ಒತ್ತಾಯಿಸಿದರು. ಆಗ ಲಕ್ಷ್ಮೀ, ನನ್ನ ಯಜಮಾನರಿಗೆ ಈ ವಿಷಯ ತಿಳಿಸುವುದಿಲ್ಲವೆಂದು ಮಾತು ಕೊಡಿ ಎಂದಳು, ಅತಿಥಿಗಳು ಮಾತು ಕೊಟ್ಟರು.
ಆಗ ಲಕ್ಷ್ಮೀ, “ನನ್ನ ಯಜಮಾನ ಅತಿಥಿಗಳನ್ನು ಊಟಕ್ಕೆ ಕರೆದು ತರುತ್ತಾನೆ. ಊಟದ ನಂತರ ಈ ಒನಕೆಯಿಂದ ಅವರನ್ನು ಬಡಿಯುತ್ತಾನೆ. ಹಾಗೆ ಮಾಡಿದರೆ ಪುಣ್ಯ ಸಿಗುತ್ತೆ ಎಂದು ಯಾರೋ ಹೇಳಿದ್ದಾರೆ. ಒನಕೆಯಿಂದ ಬಡಿದು ಪಾಪ ತಟ್ಟಿದೆ ಇರಲಿ ಎಂದು ದಿನವೂ ಒನಕೆಗೆ ಪೂಜೆ ಮಾಡುತ್ತೇನೆ’ ಎಂದಳು.
ಅತಿಥಿಗಳು ಒಬ್ಬರ ಮುಖ ಒಬ್ಬರು ನೋಡಿ ಹೊರಗೆ ಓಡತೊಡಗಿದರು. ಅಷ್ಟರಲ್ಲಿ ವಿಷ್ಣು ಭಟ್ಟ ಬಂದ ಅತಿಥಿಗಳು ಎಲ್ಲಿ ಎಂದು ಕೇಳಿದ. ಲಕ್ಷ್ಮೀ “ಅವರು ಈ ಒನಕೆ ಬೇಕೆಂದು ಕೇಳಿದರು. ಮನೆಯಲ್ಲಿ ಒಂದೇ ಒನಕೆ ಇರುವುದರಿಂದ ಕೊಡಲಾರೆ ಎಂದೆ. ಅವರು ಕೋಪಿಸಿಕೊಂಡು ಹೋದರು” ಎಂದಳು.
ಇದನ್ನು ಕೇಳಿದ ವಿಷ್ಣು ಭಟ್ಟನಿಗೆ ಕೋಪ ಬಂದು ಲಕ್ಷ್ಮೀಗೆ ಗದರಿಸಿ ಒನಕೆಯನ್ನು ತೆಗೆದುಕೊಂಡು ಅತಿಥಿಗಳಿಗೆ ಕೊಡಲೆಂದು ಮನೆಯಿಂದ ಓಡಿದ. ವಿಷ್ಣು ಭಟ್ಟನ ಕೈಯಲ್ಲಿ ಒನಕೆ ಹಿಡಿದು ಓಡಿಬರುವುದನ್ನು ಕಂಡು ಅತಿಥಿಗಳು ವೇಗವಾಗಿ ಓಡಿ ನದಿಯಲ್ಲಿ ಈಜಿ ಇನ್ನೊಂದು ದಡ ಸೇರಿದರು.
ಇದೆಲ್ಲವನ್ನೂ ಹಳ್ಳಿಯವರು ಕಂಡು ಬೆರಗಾದರು. ವಿಷ್ಣು ಭಟ್ಟ ಆತಿಥಿಗಳಿಗೆ ಊಟ ಕೊಟ್ಟು ಒನಕೆಯಿಂದ ಬಡಿಯುತ್ತಾನೆಂದೇ ತಿಳಿದರು. ಎಲ್ಲಾ ಕಡೆ ಈ ಸುದ್ದಿ ಹರಡಿತು, ಆ ಮೇಲಿನಿಂದ ವಿಷ್ಣು ಭಟ್ಟ ಊಟಕ್ಕೆ ಕರೆದರೆ ಯಾರೂ ಹೋಗುವ ಧೈರ್ಯ ಮಾಡಲಿಲ್ಲ. ಹೀಗೆ ಲಕ್ಷ್ಮೀ ತನ್ನ ಜಾಣೆಯಿಂದ ಉಪವಾಸ ಮಾಡುವುದು ತಪ್ಪಿತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.