ಯಾವ ತೋಳ ಗೆಲ್ಲುತ್ತೆ ?
ಪ್ರತಿಯೊಬ್ಬ ವ್ಯಕ್ತಿಯಲ್ಲಿ ಎರಡೆರಡು ಗುಣಗಳು ಕಾಣುತ್ತೇವೆ. ಒಂದು ಒಳ್ಳೆಯ ಗುಣವಾದರೆ ಇನ್ನೊಂದು ಕೆಟ್ಟ ಗುಣ. ಒಂದು ತಾಮಸಿಕ ಗುಣವಾದರೆ ಇನ್ನೊಂದು ರಾಜಸಿಕ. ಸುಖ ದುಃಖಗಳ ಸಮ್ಮಿಶ್ರಣದ ಜೀವನ ಸಾಮಾನ್ಯವಾಗಿ ಕಾಣುತ್ತೇವೆ. ಇವುಗಳಲ್ಲಿ ಯಾವುದನ್ನು ಹೊಂದಿದ್ದಾರೆ ಜೀವನ ಸಾರ್ಥಕವಾಗಿ, ಬದುಕಿನಲ್ಲಿ ವಿಜೇತರಾಗುತ್ತೇವೆ ಎಂಬುದನ್ನು ಅರಿಯಬೇಕಾದರೆ ಒಂದು ಚಿಕ್ಕ ಉದಾಹರಣೆ ನೋಡಬಹುದು.
ಸಾಮಾನ್ಯವಾಗಿ ಅಜ್ಜಿ ಅಜ್ಜಂದಿರು ತನ್ನ ಮೊಮ್ಮಕ್ಕಳಿಗೆ ಕಥೆಗಳು ಹೇಳೋದು ವಾಡಿಕೆ. ಹಿಗಿರುವಾಗ ಒಮ್ಮೆ ಅಜ್ಜ ತನ್ನ ಮೊಮ್ಮಗನಿಗೆ ಮನುಷ್ಯ ಜೀವನದ ಸಾರ್ಥಕತೆಯ ಬಗ್ಗೆ ಅವನಲ್ಲಿರುವ ಗುಣಗಳನ್ನು ವಿವರಿಸುತ್ತಾ ಪ್ರಶ್ನೆ ಮಾಡುತ್ತಾನೆ. ಎಲ್ಲರೊಳಗೂ ಎರಡು ರೀತಿಯ ಗುಣಗಳೆಂಬ ತೋಳಗಳು ಯುದ್ಧ ನಡೆಸುತ್ತಿರುತ್ತವೆ. ಒಂದು ತೋಳ ಪೂರ್ತಿ ಹೇಡಿ, ಹಠ ಸ್ವಭಾವ, ಕೋಪ, ತನ್ನ ಮೇಲೆ ನಂಬಿಕೆಯಿಲ್ಲದ್ದು, ಅಹಂಕಾರ ಜಾಸ್ತಿ, ದುಃಖವೂ ಹೆಚ್ಚು. ಅದಕ್ಕೆ ಸದಾ ತನ್ನ ಬಗ್ಗೆಯೇ ಮರುಕ. ಇನ್ನೊಂದು ತೋಳ ಸಾತ್ವಿಕ ಸ್ವಭಾವದ್ದು. ಧೈರ್ಯವಂತ, ಶಾಂತ, ನಂಬಿಕೆಯುಳ್ಳದ್ದು, ಆತ್ಮವಿಶ್ವಾಸಿ, ಸಂತೋಷಿ, ಎಲ್ಲರನ್ನೂ ಪ್ರೀತಿಸುವಂಥದ್ದು.
ಮೊಮ್ಮಗ ತೋಳಗಳ ಬಗ್ಗೆ ಯೋಚಿಸಿ ನಂತರ “ಯಾವ ತೋಳ ಗೆಲ್ಲುತ್ತದೆ ?” ಎಂದು ಪ್ರಶ್ನಿಸಿದ.
ಆಗ ಅಜ್ಜ “ನೀನು ಯಾವುದಕ್ಕೆ ಆಹಾರ ಹಾಕುತ್ತೀಯೋ ಅದು” ಎಂದು ಉತ್ತರಿಸಿದ.
ನೀತಿ :– ಸಮಾಜದಲ್ಲೂ ಸಹ ಕೆಟ್ಟ ಗುಣವುಳ್ಳವರನ್ನ ಹೆಚ್ಚು ಪೋಷಿಸಿ ಪಾಲಿಸಿದರೆ ಅವರ ಸಂಖ್ಯೆ ಹೆಚ್ಚಾಗಿ ಎಲ್ಲೆಲ್ಲಿಯೂ ಅವರೇ ಕಾಣುತ್ತಾರೆ. ಒಳ್ಳೆಯವರು ಬೆರಳೆಣಿಕೆಯಷ್ಟು ಆದರೆ ಕಾಣಲು ಹೇಗೆ ಸಾಧ್ಯ. ಆದ್ದರಿಂದ ಉತ್ತಮರನ್ನು ಅವರಲ್ಲಿ ಇರುವ ಉತ್ತಮ ಗುಣಗಳಿಗೆ ಪ್ರೋತ್ಸಾಹಿಸಿ ಬೆಳೆಸಿ.
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.