ದಿನಕ್ಕೊಂದು ಕಥೆ
ಮರೆವು ಅಜ್ಞಾನಕ್ಕೆ ಕಾರಣ
ಒಬ್ಬ ಗೃಹಸ್ಥ ಸನ್ಯಾಸಿಯಾದ. ಮನೆ, ಹೊಲ, ಸತಿ, ಸುತರನ್ನು ಬಿಟ್ಟು ಹೊರಟ. ಸತಿಯು ಒಂದು ಸುಂದರ ಹೂವನ್ನು ಆತನ ಕೈಗೆ ಕೊಡುತ್ತ ಹೇಳಿದಳು “ನೀವಿನ್ನು ಆತ್ಮಸಾಕ್ಷಾತ್ಕಾರ ಮಾಡಿಕೊಂಡು ಮುಕ್ತಿ ಪಡೆಯುವಿರಿ, ಕಾಣಿಕೆಯಾಗಿ ಈ ಹೂವನ್ನು ಸ್ವೀಕರಿಸಿರಿ” ತರುಣ ಸನ್ಯಾಸಿ ಆ ಹೂವನ್ನು ಸ್ವೀಕರಿಸಿ ದೂರ ದೂರ ಹೋದ.
ಸನ್ಯಾಸಿಗಳ ಸಂಘದಲ್ಲಿ ಇಪ್ಪತ್ತು ವರುಷಗಳೇ ಕಳೆದವು. ಒಂದು ದಿನ ಒಬ್ಬ ಭಕ್ತನು ಅಂಥದೇ ಹೂವನ್ನು ತಂದು ಸನ್ಯಾಸಿಗೆ ಅರ್ಪಿಸಿದ. ತಕ್ಷಣ ಸನ್ಯಾಸಿಗೆ ಅಂದು ಮನೆ ಬಿಡುವಾಗ ಹೂವನ್ನು ಕೊಟ್ಟ ಆ ಕೈ, ಮುಖ, ಭಾವ ಎಲ್ಲ ಕಾಣಿಸತೊಡಗಿದವು. ಆತನ ಬುದ್ಧಿ ಮಂದವಾಯಿತು. ಒಂದು ಕ್ಷಣ ಮನಸ್ಸು ಮುಕ್ತಿಮಾರ್ಗದಿಂದ ಚಂಚಲಿಸಿತು. ಮರುಕ್ಷಣವೇ ಗುರುಗಳ ಮೂರ್ತಿ ಕಣ್ಣ ಮುಂದೆ ಮೂಡಿತು.
“ನೀನು ಇಂದಿನ ಹೂವನ್ನು, ವ್ಯಕ್ತಿಯನ್ನು ನೋಡಬೇಕೆ ವಿನಾ ಅಂದಿನ ಹೂವನ್ನು, ವ್ಯಕ್ತಿಯನ್ನು ಅಲ್ಲ!” ಎಂದು ಗುರು ಮೂರ್ತಿ ನುಡಿದಂತಾಯಿತು. ಸನ್ಯಾಸಿಯು ಮತ್ತೆ ಜಾಗೃತನಾಗಿ ಸತ್ಯಾಸಕ್ತಿಯನ್ನು ತಾಳಿ ಮುಕ್ತಿ ಪಥದಲ್ಲಿ ಮುಂದುವರೆದ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.