3 ನೇ ನಂಬರ್ ಕುರಿಯ ಹಿಂದೆ ಅಲೆಯುವುದು ಬಿಡಿ ಅದ್ಭುತ ಸಂದೇಶ ಓದಿ
ದಿನಕ್ಕೊಂದು ಕಥೆ ನೀತಿ ಬೋಧನೆ ಓದಿ vinayavani.com ನಲ್ಲಿ
ದಿನಕ್ಕೊಂದು ಕಥೆ
3ನೇ ನಂಬರ್ ಕುರಿಯ ಹಿಂದೆ ಅಲೆಯುವುದು ಬಿಡಿ
ಅವರಿಬ್ಬರು ತುಂಟ ಹುಡುಗರು. ಪ್ರಾಣ ಸ್ನೇಹಿತರು ಬೇರೆ. ಹಾಗಿದ್ದ ಮೇಲೆ ತುಂಟತನಕ್ಕೆ ಕೊನೆಯಿದೆಯೇ? ಅವರಿಬ್ಬರಿಗೂ ಶಾಲೆಗೆ ಹೋಗುವುದೆಂದರೆ ಅಲರ್ಜಿ. ಒಂದು ದಿನ ಇಬ್ಬರೂ ಸೇರಿ ಒಂದು ಉಪಾಯ ಮಾಡಿದರು.
ಪಕ್ಕದ ಮನೆಯ ಕೊಟ್ಟಿಗೆಯಿಂದ ಮೂರು ಕುರಿ ಮರಿಗಳನ್ನು ಕದ್ದು ತಂದು ಅವುಗಳ ಬೆನ್ನ ಮೇಲೆ 1, 2, 4 ಎಂದು ಬರೆದರು. ನಂತರ ಕುರಿಗಳನ್ನು ರಾತ್ರಿ ನಿಧಾನವಾಗಿ ತಂದು ಶಾಲೆಯ ಕಟ್ಟಡದೊಳಗೆ ಬಿಟ್ಟು ಹೋದರು. ಬೆಳಗ್ಗೆ ಶಾಲೆಗೆ ಬಂದ ಶಿಕ್ಷಕ ಮೂಗಿಗೆ ಏನೋ ವಾಸನೆ ಬಡಿಯಿತು.
ಕಾರಿಡಾರ್‌ನ ಅಲ್ಲಲ್ಲಿ, ಮೆಟ್ಟಿಲುಗಳ ಮೇಲೆ ಕುರಿಯ ಹಿಕ್ಕೆ ಬಿದ್ದಿತ್ತು. ಮೂತ್ರ ವಾಸನೆ ಮೂಗಿಗೆ ರಾಚುತ್ತಿತ್ತು. ತಕ್ಷಣ ಕುರಿಗಳಿಗಾಗಿ ಹುಡುಕಾಟ ನಡೆಯಿತು. ಸ್ವಲ್ಪ ಹೊತ್ತಿನಲ್ಲೇ ಮೂರು ಕುರಿಗಳು ಸಿಕ್ಕಿ ಬಿದ್ದವು. ಶಾಲೆಯವರಿಗೆ ಆಶ್ಚರ್ಯ! 1,2 ಹಾಗೂ 4ನೇ ನಂಬರ್‌ನ ಕುರಿಗಳು ಸಿಕ್ಕಿವೆ. ಹಾಗಾದರೆ ಆ 3ನೇ ಕುರಿ ಎಲ್ಲಿ ತಪ್ಪಿಸಿಕೊಂಡಿದೆ ಎಂದು ತಲೆಬಿಸಿಯಾಯಿತು.
ತರಗತಿಗಳಿಗೆ ರಜಾ ಘೋಷಿಸಿದ ಶಿಕ್ಷಕರು ಆ 3ನೇ ನಂಬರ್ ಕುರಿಯ ಜಾಡು ಹಿಡಿದು ಹೊರಟರು. ಶಿಕ್ಷಕರು, ಆಯಾಗಳು ಎಲ್ಲ ಸೇರಿ ಹುಡುಕಿದರೂ 3ನೇ ಕುರಿ ಸಿಗಲೇ ಇಲ್ಲ! ಯಾಕೆ ಹೇಳಿ? ಆ ಕುರಿ ಇದ್ದರೆ ತಾನೆ ಸಿಗುವುದು? ಇಲ್ಲದಿದ್ದನ್ನು ಹುಡುಕಿದರೆ ಹೇಗೆ ಸಿಗುತ್ತದೆ? ಆ ಇಬ್ಬರು ಮಾಡಿದ ತುಂಟಾಟಿಕೆಯಿಂದ ಶಾಲೆಯವರಿಗೆ ಸುಸ್ತಾಯಿತಷ್ಟೇ ವಿನಾ ಬೇರೇನೂ ಸಿಗಲಿಲ್ಲ.
ಹಾಗಾದರೆ ನಮ್ಮಲ್ಲಿಯೂ ಎಷ್ಟೋ ಜನ ‘ಆ 3ನೇ ನಂಬರ್ ‘ಕುರಿ’ಗಾಗಿ ಹುಡುಕಾಡುತ್ತಿರುವವರಿದ್ದಾರೆ ಅಲ್ಲವೇ? ಬದುಕಿನಲ್ಲಿ ಎಲ್ಲ ಇದ್ದರೂ, ಏನೋ ಇಲ್ಲವೆಂದು ಕೊರಗುತ್ತಾ ಸುಮ್ಮನೆ ಹುಚ್ಚರಂತೆ ಹುಡುಕಾಡುತ್ತಿರುತ್ತಾರೆ. ತಾವೇನನ್ನು ಹುಡುಕುತ್ತಿದ್ದೇವೆ ಎಂದೂ ಕೆಲವರಿಗೆ ತಿಳಿದಿರುವುದಿಲ್ಲ.
ಹಾಗಾದರೆ ಇನ್ನು ಮುಂದೆ ನಾವು ‘3ನೆ ನಂಬರ್ ಕುರಿ’ಯ ಹಿಂದೆ ಅಲೆಯುವುದನ್ನು ಬಿಟ್ಟು ಜೀವನವನ್ನು ಹಿಡಿ ಹಿಡಿಯಾಗಿ ಅನುಭವಿಸೋಣವಲ್ಲವೆ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.