
ದಿನಕ್ಕೊಂದು ಕಥೆ
ಸನ್ಯಾಸವೆಂದರೆ ನನ್ನದು ಎಂಬುದನ್ನ ಬಿಟ್ಟುಬಿಟ್ಟರೆ ಸಾಕು.
ಪರಮಶಾಂತಿ ಪರಮಾತ್ಮನ ಮತ್ತೊಂದು ಲಕ್ಷಣವೆಂದರೆ ಸನ್ಯಾಸಯೋಗ. ಯೋಗವೆಂದರೆ ಕೂಡುವುದು, ಪಡೆಯುವುದು ಅಥವಾ ಅನುಭವಿಸುವುದು. ಸನ್ಯಾಸವೆಂದರೆ ಬಿಡುವುದು. ಸನ್ಯಾಸ ಮತ್ತು ಯೋಗ ಮೇಲ್ನೋಟಕ್ಕೆ ಪರಸ್ಪರ ವಿರೋಧ ಎನಿಸಿದರೂ ಒಂದಕ್ಕೊಂದು ಪೂರಕವಾಗಿವೆ. ಈ ಅರ್ಥದಲ್ಲಿ ಸನ್ಯಾಸಯೋಗವೆಂದರೆ ಕೂಡಿಯೂ ಕೂಡದಂತೆ, ನೋಡಿಯೂ ನೋಡದಂತೆ ನಿರ್ಲಿಪ್ತವಾಗಿರುವುದು.
ಜಪಾನ ದೇಶದಲ್ಲಿ ಝೆನ್ ಗುರುಗಳೊಬ್ಬರು ಫ್ಯೂಜಿಯಾಮ್ ಬೆಟ್ಟದಲ್ಲಿ ಸೃಷ್ಟಿ ಸೌಂದರ್ಯವನ್ನು ಸವಿಯುತ್ತ ತನ್ಮಯರಾಗಿ ಕುಳಿತಿದ್ದರು. ಒಬ್ಬ ಮನುಷ್ಯ ಬಂದು ”ತಾವು ಇಲ್ಲಿ ಏನನ್ನು ನೋಡುತ್ತಿದ್ದೀರಿ?” ಎಂದು ಕೇಳಿದ. ಆಗ ಝೆನ್ ಗುರುಗಳು “ಏನನ್ನು ನೋಡಿದರೆ, ನಾನು ನೋಡಿದೆ, ನಾನು ಮಾಡಿದೆ ಎಂಬುದು ಉಳಿಯುವುದಿಲ್ಲವೋ ಅದನ್ನು ನೋಡುತ್ತಿದ್ದೇನೆ” ಎಂದು ನುಡಿದರು.
ನಿಜವಾಗಿಯೂ ನಾನಳಿದು ನೋಡುವುದು, ಮಾಡುವುದೇ ಸನ್ಯಾಸ. ಪ್ರಪಂಚದ ಎಲ್ಲ ಯೋಗಗಳಲ್ಲಿ ಇದೊಂದು ಸುಂದರವಾದ ಯೋಗ.
ನಾನು, ನನ್ನದು ಎಂಬುದನ್ನಷ್ಟು ಬಿಟ್ಟುಬಿಟ್ಟರೆ ಸಾಕು. ಅದೇ ಸನ್ಯಾಸಯೋಗ.
ಅಂದರೆ ಈ ಹೊಲ-ಮನೆ ಎಲ್ಲವು ನನ್ನದಲ್ಲ ಎಂದು ಯಾರಿಗೂ ಬರೆದು ಕೊಡಬೇಕಾಗಿಲ್ಲ. ಆದರೆ ನಮ್ಮೊಳಗೆ ನಾವು ತಿಳಿದಿದ್ದರೆ ಸಾಕು. ಆಗ ಈ ಪ್ರಪಂಚದಲ್ಲಿ ಏನೆಲ್ಲ ಗಳಿಸಿದರೂ, ಬಳಸಿದರೂ, ಬೆಳೆಸಿದರೂ ಅದು ನಮ್ಮನ್ನೆಂದೂ ಬಂಧಿಸುವುದಿಲ್ಲ, ಬಾಧಿಸುವುದಿಲ್ಲ. ಇದುವೇ ಸನ್ಯಾಸಯೋಗ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.