ದಿನಕ್ಕೊಂದು ಕಥೆ
ದುಃಖಕ್ಕೆ ಕಾರಣವೇನು?
ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಒಂದು ವಿಶಿಷ್ಟ ವಸ್ತುವಿದೆ ಎಂದರೆ ನಾವು ಅದನ್ನು ವಿಶೇಷ ಪ್ರೀತಿ-ಸ್ನೇಹದಿಂದ ಕಾಣುತ್ತೇವೆ. ಅಕಸ್ಮಾತ್ತಾಗಿ ಅದು ಕಳೆದು ಹೋದರೆ, ಕಳ್ಳರ ಪಾಲಾದರೆ ನಮಗೆ ವಿಶೇಷ ದುಃಖವುಂಟಾಗುತ್ತದೆ.
ತಕ್ಷ ಣವೇ ಪೊಲೀಸರಿಗೆ ದೂರು ನೀಡಲು ಹೊರಡುತ್ತೇವೆ. ವಸ್ತು ಕಳೆದು ಹೋದಾಗ ಇಷ್ಟೊಂದು ದುಃಖ-ವೇದನೆಯುಂಟಾಗಲು ಕಾರಣವೇನು? ಎಂಬುದನ್ನು ಹೃದಯಸ್ಪರ್ಶಿ ವಿಧಾನದಿಂದ ವಿಶ್ಲೇಷಿಸುವ ಪ್ರಸಂಗವೊಂದು ಇಲ್ಲಿದೆ.
ನಾಗ್ಪುರದಲ್ಲಿ ನರೇಂದ್ರ ಸೇಠ್ ಎಂಬ ಧನಿಕರ ಮನೆಯಲ್ಲಿ ಪ್ಯಾರೇಲಾಲ್ ಎಂಬ ಒಬ್ಬ ಪ್ರಾಮಾಣಿಕ ಸೇವಕನಿದ್ದು, ಸುದೀರ್ಘ ಸೇವೆಗೆ ಪಾತ್ರನಾಗಿದ್ದ. ಒಮ್ಮೆ ಸಂಜೆ ವೇಳೆಗೆ ಸೇಠ್‌ಜೀ ನೋಡುತ್ತಾರೆ- ಅವರ ಹಜಾರದಲ್ಲಿದ್ದ ಸುಂದರವಾದ ಗೋಡೆ ಗಡಿಯಾರ ನೆಲಕ್ಕೆ ಬಿದ್ದು ಪುಡಿಪುಡಿಯಾಗಿದೆ.
ತಕ್ಷಣವೇ ನೌಕರನನ್ನು ಕರೆದು “ಇದೇಕೆ ಹೀಗಾಯ್ತು?” ಎಂದು ಪ್ರಶ್ನಿಸಿದಾಗ, ಆತ ನುಡಿದ- “ಧಣಿಗಳೇ, ಗಡಿಯಾರವನ್ನು ಸ್ವಚ್ಛ ಮಾಡುತ್ತಿರುವಾಗ ಜಾರಿ ಕೆಳಗೆ ಬಿತ್ತು. ನನ್ನನ್ನು ಮನ್ನಿಸಿರಿ”. ಕ್ರುದ್ಧರಾದ ಸೇಠ್‌ಜೀ ಹೇಳಿದರು- “ನನಗೆ ಅತ್ಯಂತ ಪ್ರಿಯವಾದ ಗಡಿಯಾರವಾಗಿತ್ತು. ನೀನು ಅದನ್ನು ಬೀಳಿಸಿ ತಪ್ಪು ಮಾಡಿದ್ದೀಯಾ” ಅಂದು ರಾತ್ರಿ ಬೇಸರದಿಂದ ಸೇಠ್‌ಜೀಗೆ ನಿದ್ದೆಯೇ ಬರಲಿಲ್ಲ. ಹಾಸಿಗೆಯ ಮೇಲೆ ಹೊರಳಾಡುತ್ತಿದ್ದರು.
ಅಕಸ್ಮಾತ್ತಾಗಿ ಅವರ ದೃಷ್ಟಿ ನೌಕರ ಪ್ಯಾರೇಲಾಲನ ಕಡೆ ಹೋಯಿತು. ಆತ ನಿಶ್ಚಿಂತೆಯಿಂದ ಗಾಢ ನಿದ್ರಾ ಮಗ್ನನಾಗಿದ್ದ. ಇಡೀ ರಾತ್ರಿ ನಿದ್ರಿಸದ ಸೇಠ್‌ಜೀ ಮರುದಿನ ನೌಕರನನ್ನು ಕರೆದು ಹೇಳಿದರು-
“ನಿನ್ನೆ ನನಗೆ ಗಡಿಯಾರ ಪುಡಿಯಾದ್ದರಿಂದ ಬೇಸರವಾಗಿತ್ತು. ಇಂದು ಬಹಳ ಪ್ರಸನ್ನನಾಗಿದ್ದೇನೆ. ನಿನ್ನ ಸೇವೆಗೆ ಪ್ರತಿಫಲವಾಗಿ ಆ ಗೋಡೆ ಗಡಿಯಾರವನ್ನು ಕೊಡಬೇಕೆಂದಿದ್ದೆ. ಆದರೆ ನಿನ್ನ ಕೈಯಿಂದಲೇ ಬಿದ್ದು ಪುಡಿಯಾಯ್ತಲ್ಲ. ಏನು ಮಾಡೋಣ? ತುಂಬಾ ಬೇಸರವಾಗುತ್ತಿದೆ”. ಇದನ್ನು ಹೇಳಿದ ಸೇಠ್‌ಜೀ ಆನಂದದಿಂದ ಮಲಗಿ ನಿದ್ರಿಸಿದರು. ಆದರೆ ಪ್ಯಾರೇಲಾಲನ ಬಳಿ ನಿದ್ರೆಯೇ ಸುಳಿಯಲಿಲ್ಲ.
“ಎಂಥ ಸದವಕಾಶ! ಎಷ್ಟೊಂದು ಸುಂದರ ಗಡಿಯಾರ! ನನ್ನ ತಪ್ಪಿಂದಾಗಿಯೇ ಸದವಕಾಶ ತಪ್ಪಿಹೋಯ್ತು”. ಒಂದು ವಸ್ತುವಿನ ಬಗ್ಗೆ ಸ್ನೇಹ-ಪ್ರೇಮವಿದ್ದಾಗ, ಅದು ಕಳೆದು ಹೋದರೆ ನಮಗೆ ಅಪಾರ ದುಃಖವುಂಟಾಗುತ್ತದೆ. ಈ ರೀತಿಯ ದುಃಖಕ್ಕೆ ಮೂಲ ಕಾರಣ ಆ ವಸ್ತುವಿನ ಬಗೆಗಿರುವ ಅಪರಿಮಿತ ಮೋಹ. ಇಂತಹ ಮೋಹವನ್ನು ಮರೆತಾಗ ನಮ್ಮಿಂದ ದುಃಖವೂ ದೂರವಾಗಲು ಸಾಧ್ಯ. ಮೋಹ ನಿವಾರಣೆಗೆ ಸುಲಭೋಪಾಯವೆಂದರೆ ಆ ಮೋಹದ ತ್ಯಾಗವೇ ಸರಿ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.