ದಿನಕ್ಕೊಂದು ಕಥೆ
ಕಟ್ಟಿಗೆ ಮಾರುವವನ ಜಾಣತನ
ಭೂಲೋಕದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದಾಗಿ ಶಿವ ಮತ್ತು ಪಾರ್ವತಿಯರಿಬ್ಬರು ಕೈಲಾಸದಲ್ಲಿ ಲೋಕರೂಢಿಯಂತೆ ಮಾತನಾಡಿಕೊಳ್ಳುತ್ತಿದ್ದರು.
ಪಾರ್ವತಿ “ದೇವ, ಏಕೆ ಮಾತು ನಿಲ್ಲಿಸಿಬಿಟ್ಟಿರಿ?” ಎಂದಳು. ಶಿವ “ಇಲ್ಲ ದೇವಿ” ಎಂದಾಗ ಪಾರ್ವತಿ “ನಾನು ಒಪ್ಪುವುದಿಲ್ಲ. ಯಾರೋ ಭಕ್ತರೊಬ್ಬರು ನಿಮ್ಮ ನಾಮ ಸ್ಮರಣೆ ಮಾಡುತ್ತಿರಬೇಕು. ಅಲ್ಲವೇ. ನಿಮ್ಮ ಲಕ್ಷ್ಯ ಆಕಡೆಗೆ ಹೋಗಿರಬೇಕು” ಎಂದಳು. ಹೌದು ದೇವಿ, ಒಬ್ಬ ಬಡವ ಕಟ್ಟಿಗೆ ಕಡಿದು ಮಾರಿ ಬಂದ ಹಣದಿಂದ ತನ್ನ ಕಣ್ಣು ಕಾಣದ ವೃದ್ಧ ತಾಯಿ, ಹಾಗೂ ಆತನ ಹೆಂಡತಿ ಇವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾನೆ. ಪ್ರತಿ ಹಂತದಲ್ಲೂ ನನ್ನ ನಾಮಸ್ಮರಣೆ ಇಲ್ಲದೆ ಕೆಲಸ ಮಾಡುವುದಿಲ್ಲ. ಊಟವನ್ನೂ ಮಾಡುವುದಿಲ್ಲ.
ಅದಕ್ಕೇಕೆ ನಿಮಗೆ ಚಿಂತೆ? ಪಾರ್ವತಿ ಎಂದಾಗ, ಶಿವ “ಅಲ್ಲ ದೇವಿ, ಆ ನನ್ನ ಭಕ್ತನನ್ನು ಕಾಪಾಡುವುದು ನನ್ನ ಧರ್ಮವಲ್ಲವೇ?” ಎಂದ. ಪಾರ್ವತಿ ದೇವ ನೀನು ಭಕ್ತ ಪರಾಧೀನನಲ್ಲವೇ. ಅಷ್ಟು ಮಾಡದಿದ್ದರೆ ಹೇಗೆ? ಹೋಗಿ ಆತನ ಅಪೇಕ್ಷೆಯನ್ನು ಪೂರೈಸಿ ಬನ್ನಿ ಎಂದಳು. ಈಶ್ವರ ಹಾಗೆಯೇ ಆಗಲಿ ದೇವಿ, ನಿನ್ನ ಕೋರಿಕೆಯನ್ನು ಈಡೇರಿಸುತ್ತೇನೆ. ಹಾಗಾದರೆ ಬರಲೇ ಎಂದು ಕೇಳಿ ಹೊರಡಲು, “ಆಯ್ತು, ಬೇಗ ಬನ್ನಿ. ಭಕ್ತನ ಹತ್ತಿರವೇ ಇದ್ದು ಬಿಡಬೇಡಿ. ಬೇಗ ಬನ್ನಿ. ನಿಮಗಾಗಿ ಕಾಯುತ್ತಿರುತ್ತೇನೆ” ಎಂದಳು ದೇವಿ.
ಭೂಲೋಕದಲ್ಲಿ, ಬಡವ ದಿನವೂ ಬೆಳಿಗ್ಗೆ ಎದ್ದ ತಕ್ಷಣವೇ ‘ಓಂ ನಮಃ ಶಿವಾಯ, ಓಂ ನಮಃ ಶಿವಾಯ’ ಎಂದು ಹೇಳುತ್ತಾ ತಾಯಿಗೆ ನಮಸ್ಕರಿಸಿ ತನ್ನ ದಿನಚರಿ ಆರಂಭಿಸುತ್ತಿದ್ದ. ತನ್ನ ಕೊಡಲಿಯನ್ನು ಕಲ್ಲಿಗೆ ಮೊನಚು ಮಾಡಿಕೊಳ್ಳುತ್ತಿದ್ದ. ಕಾಡಿಗೆ ಹೋಗಿ ಕಟ್ಟಿಗೆ ಕಡಿಯುವುದು. ಆ ಕಟ್ಟಿಗೆ ಹೊರೆ ಮಾಡಿಕೊಂಡು ಪಟ್ಟಣದಲ್ಲಿ ಮಾರುವುದು ಅವನ ಕಾಯಕ. ಬಂದ ಹಣದಲ್ಲಿ ಸಂಸಾರ ನಡೆಸುವುದು. ಹೀಗೆ ದಿನವೂ ನಡೆಯುತ್ತಿತ್ತು ಅವನ ದಿನಚರಿ. ಆತನಿಗೂ ಈಗ ವಯಸ್ಸಾಗಿತ್ತು. ದಿನವೂ ಕೆಲಸ ಮಾಡಿ ದಣಿಯುತ್ತಿದ್ದ. ಎಂತಹ ಸಂದರ್ಭದಲ್ಲೂ ಶಿವನನ್ನು ಮರೆಯದೇ ನೆನಪಿಸಿಕೊಳ್ಳುತ್ತಿದ್ದ.
ಒಂದು ದಿನ ಕಟ್ಟಿಗೆ ಕಡಿದ. ಒಂದು ಹೊರೆಯನ್ನಾಗಿ ಮಾಡಿದ. ಬಾಯಿಯಲ್ಲಿ ಶಿವನಾಮ ಬಿಡದೇ ಹೇಳುತ್ತಿದ್ದ. ಅಂದು ಕಟ್ಟಿಗೆ ಹೊರೆ ದೊಡ್ಡದಾಗಿತ್ತು. ಅದನ್ನು ಪ್ರಯಾಸ ಪಟ್ಟು ಹೊರಲು ಪ್ರಯತ್ನಿಸಿ ತಲೆಯ ಮೇಲೆ ಹೊತ್ತು ಪಟ್ಟಣದ ಕಡೆ ಮಾರಲು ಹೊರಟ. ಹೊರೆಯು ಒಳ್ಳೆಯ ಬೆಲೆಗೆ ಮಾರಾಟವಾಯಿತು. ಸಂತೋಷದಿಂದ ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸಿಕೊಂಡು ಬಂದ. ತಾಯಿಗೆ, ಹೆಂಡತಿಗೆ ಸಂತೋಷವಾಯಿತು.
ಶಿವನು ಆತನ ಶ್ರಮದ ಭಕ್ತಿಗೆ ಮೆಚ್ಚಿ ಏನಾದರೂ ಸಹಾಯ ಮಾಡಬೇಕೆಂದು ಯೋಚಿಸಿ ಬಂದನು. ಆ ಬಡವ ಕಾಡಿನಲ್ಲಿ ಕಟ್ಟಿಗೆ ಕಡಿಯುವ ಸಂದರ್ಭದಲ್ಲಿ ಆ ಬಡವನ ಮುಂದೆ ಶಿವ ಪ್ರತ್ಯಕ್ಷನಾದ. ಆದರೆ ಶಿವನ ಕಡೆಗೆ ಲಕ್ಷ್ಯವಿರದೆ ಶಿವನಾಮ ಸ್ಮರಣೆಯಲ್ಲಿ ಮುಳುಗಿ ಕಾಯಕ ಮಾಡುತ್ತಿದ್ದ. ಶಿವನೇ ‘ಭಕ್ತ’ ಎಂದಾಗ ತಲೆ ಎತ್ತಿ ನೋಡುತ್ತಾನೆ. ಶಿವ ತನ್ನೆದುರು ನಿಂತಿದ್ದಾನೆ. ಇದೇನು ಕನಸೋ ನನಸೋ ಎಂದು ಕಕ್ಕಾಬಿಕ್ಕಿಯಾಗಿ ನಿಂತಿದ್ದ. ಮತ್ತೊಮ್ಮೆ ‘ಭಕ್ತ’ ಎಂದಾಕ್ಷಣ ಎಚ್ಚೆತ್ತು ಸಂತೋಷದಿಂದ ಆತನ ಕಾಲಿಗೆರಗಿ, ‘ಧನ್ಯನಾದೆ ಪ್ರಭು, ದೇವಾ ನನ್ನ ಜೀವನ ಪಾವನವಾಯಿತು’ ಎಂದು ಹೇಳುತ್ತ ಶಿವನ ಪಾದಗಳನ್ನು ಮುತ್ತಿಡತೊಡಗಿದ.
ಭಕ್ತಾ, ನಿನ್ನ ಕಾಯಕದ ಭಕ್ತಿಗೆ ಮೆಚ್ಚಿದ್ದೇನೆ. ಏನು ವರ ಬೇಕು ಕೇಳಿಕೋ’ ಎಂದ ಶಿವ. ಅದಕ್ಕೆ ಬಡವ, ‘ಬಡತನ ನಿವಾರಣೆ, ತಾಯಿಗೆ ಕಣ್ಣು ಬರಬೇಕು, ಹೆಂಡತಿಗೊಂದು ಮಗು ಬೇಕು ಎಂದು ಮೂರು ವರ ಕೇಳಿದ. “ಆದರೆ, ಮೂರು ವರಗಳನ್ನು ಕೊಡುವುದಿಲ್ಲ. ಒಂದೇ ಒಂದು ವರ ಮಾತ್ರ ಕೊಡುತ್ತೇನೆ ಕೇಳಿಕೋ’ ಎಂದು ಶಿವನು ಹೇಳಿದ. ಅದಕ್ಕೆ ಭಕ್ತ ಸಮಯ ಪಡೆದು ಅಂದು ಹೆಂಡತಿ ಶಿವನಾಮ ಸ್ಮರಣೆಯೊಂದಿಗೆ ಅಡುಗೆ ಮಾಡಿದಳು. ಸಂತೋಷದಿಂದ ಊಟ ಮಾಡಿದರು. ಎಲ್ಲರೂ ಮರೆಯದೇ ಶಿವನನ್ನು ನೆನೆದು ಮಲಗಿಕೊಂಡರು.
ಹೀಗೆ ನಿತ್ಯ ಕಟ್ಟಿಗೆ ಮಾರಿ ಜೀವನ ನಡೆಸುತ್ತಿದ್ದ. ಶಿವನ ಮೇಲೆ ಅಪಾರ ಭಕ್ತಿ, ಪ್ರೀತಿ ಇತ್ತು. ಅದಕ್ಕೆ ಆತ ಬಹಳ ಯೋಚಿಸಿದ. ಕೊನೆಯಲ್ಲಿ ಜಾಣತನದಿಂದ, “ಬಂಗಾರದ ಬಟ್ಟಲಿನಲ್ಲಿ ನನ್ನ ಮಗ ಹಾಲು ಕುಡಿಯುವುದನ್ನು ನನ್ನ ತಾಯಿ ನೋಡಬೇಕು. ಅಷ್ಟೇ ಸಾಕು” ಎಂದು ಕೇಳಿದಾಗ, ಶಿವನು ಈತನ ಬುದ್ದಿಗೆ ತಲೆದೂಗಿ ‘ತಥಾಸ್ತು’ ಎಂದ.
ಮೂರು ಬೇಡಿಕೆಗಳನ್ನು ಒಂದೇ ವರದಿಂದ ಈಡೇರಿಸಿಕೊಂಡ ಭಕ್ತನ ನೋಡುತ್ತಿದ್ದ ಪಾರ್ವತಿ, ಆತ ಕೇಳಿದ ವರಕ್ಕೆ ಮೆಚ್ಚಿ ‘ಭಲೆ’ ಎಂದು ನಕ್ಕಳು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.