ಕಥೆ

ದಾರ್ಮಿಕತೆ ಬಳಸಿಕೊಂಡ ನರಿ – ಕೊನೆಗೆ ಎಚ್ಚೆತ್ತುಕೊಂಡ ಇಲಿರಾಯ

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.!

ದಿನಕ್ಕೊಂದು ಕಥೆ

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.!

ಸ್ನೇಹಿತರೆ ದಾಸಶ್ರೇಷ್ಟರಾದ ಪುರಂದರದಾಸರು ತಮ್ಮ ಒಂದು ಕೀರ್ತನೆಯಲ್ಲಿ “ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಎಂದು ಜಗದ ಜಂಜಾಟಗಳನ್ನು ಉಲ್ಲೇಖಿಸಿದ್ದಾರೆ. ಅವರು ಅಂದು ರಚಿಸಿದ ಈ ಕೀರ್ತನೆ ಇಂದಿನ ಜನತೆಗೆ ಅಕ್ಷರಶಃ ಒಪ್ಪುವಂತಿದೆ. ತೋರಿಕೆಗಷ್ಟೇ ಧರ್ಮ ರಕ್ಷಕರೆನಿಸಿದ ಆಷಾಡಭೂತಿಗಳು ಹೊಟ್ಟೆಪಾಡಿಗಾಗಿ ಏನೆಲ್ಲಾ ಬವಣೆಪಡುತ್ತಾರೆ ಅವರ ನಿಜವಾದ ಬಣ್ಣ ಹೇಗೆ ಬಯಲಾಗುತ್ತದೆ ಎಂಬುದನ್ನು ಬುದ್ಧನ ಈ ಕಥೆಯಿಂದ ತಿಳಿಯೋಣ

ಇದು ಬುದ್ಧನ ಜಾತಕ ಕಥೆಗಳಲ್ಲಿ ಒಂದು. ಒಂದು ಜನ್ಮದಲ್ಲಿ ಬೋಧಿಸತ್ವ ಇಲಿ­ಗಳ ರಾಜನಾಗಿ ಕಾಡಿನಲ್ಲಿದ್ದ. ಅವನ ದೇಹ ಬಹಳ ದೊಡ್ಡದಾಗಿ ಹಂದಿ­ಯಂತೆ ಕಾಣುತ್ತಿತ್ತು. ಉಳಿದ ಇಲಿಗಳು ಅದಕ್ಕೆ ತುಂಬ ವಿಧೇಯವಾಗಿದ್ದವು. ರಾಜ ಇಲಿ ತನ್ನ ಪರಿವಾರದೊಂದಿಗೆ ದೊಡ್ಡ ಬಿಲವನ್ನು ಮಾಡಿಕೊಂಡು ಸುಖವಾಗಿತ್ತು.

ಆ ಸಮಯದಲ್ಲಿ ಕಾಡಿನಲ್ಲಿ ಒಂದು ನರಿಯಿತ್ತು. ಒಂದು ದಿನ ಕಾಡಿನಲ್ಲಿ ಬೆಂಕಿ ಹತ್ತಿಕೊಂಡಾಗ ಓಡಲಾರದೆ ಮರದ ಕೆಳಗೆ ಸಿಕ್ಕಿಹಾಕಿಕೊಂಡಿತ್ತು. ಆಗ ಅದರ ದೇಹದ ಕೂದಲುಗಳೆಲ್ಲ ಸುಟ್ಟು ಹೋದವು. ಆದರೆ ತಲೆಯ ಮೇಲೆ ಮಾತ್ರ ಒಂದು ಮುಷ್ಟಿಯಷ್ಟು ಕೂದಲು ಚಂಡಿಕೆಯಂತೆ ಉಳಿದುಕೊಂಡಿತು. ಅದು ಒಂದು ವಿಚಿತ್ರ ಪ್ರಾಣಿಯಂತೆ ಕಾಣುತ್ತಿತ್ತು. ನೀರು ಕುಡಿಯಲು ಸರೋ­ವರಕ್ಕೆ ಹೋದಾಗ ತನ್ನ ಮುಖವನ್ನೂ, ಚಂಡಿಕೆಯನ್ನು ನೋಡಿಕೊಂಡಿತು. ಅದರ ನರಿ ಬುದ್ಧಿ ಎಲ್ಲಿ ಹೋದೀತು? ಈ ಹೊಸರೂಪವನ್ನು ಸರಿಯಾಗಿ ಬಳಸಿಕೊ­ಳ್ಳ­ಬೇಕೆಂದು ಯೋಜನೆ ಹಾಕಿತು. ಒಂದು ದಿನ ಈ ಇಲಿಗಳು ಬಿಲದಲ್ಲಿ ಹೋಗುವು­ದನ್ನು ಕಂಡು ಹತ್ತಿರದಲ್ಲಿಯೇ ಸೂರ್ಯನಿಗೆ ಮುಖಮಾಡಿ, ಬಾಯಿತೆರೆ­ದುಕೊಂಡು ಒಂದೇ ಕಾಲಿನ ಮೇಲೆ ನಿಂತುಕೊಂಡಿತು.

ಆಹಾರಕ್ಕಾಗಿ ಅಲೆದಾಡುತ್ತಿದ್ದ ಬೋಧಿಸತ್ವ ಈ ವಿಚಿತ್ರ ಪ್ರಾಣಿಯನ್ನು ನೋಡಿ, ‘) “ಸ್ವಾಮಿ, ನೀವಾರು?” ಎಂದು ಕೇಳಿತು. ಆಗ ಆ ನರಿ, “ನನ್ನ ಹೆಸರು ಅಗ್ನಿ ಭಾರ­ದ್ವಾಜ” ಎಂದು ಗಂಭೀರವಾಗಿ ಹೇಳಿತು. “ನೀವುಒಂದೇ ಕಾಲಿನ ಮೇಲೆ ಏಕೆ ನಿಂತು­­­­ಕೊಂಡಿದ್ದೀರಿ?” ಎಂದು ಬೋಧಿಸತ್ವ ಕೇಳಿದರೆ, “ನಾಲ್ಕೂ ಕಾಲುಗಳನ್ನು ಊರಿ­ದರೆ ಭೂದೇವಿಗೆ ಭಾರವಾಗುತ್ತದೆಂದು ಒಂದೇ ಕಾಲ ಮೇಲೆ ನಿಂತಿದ್ದೇನೆ” ಎಂದಿತು.

“ಬಾಯಿಯನ್ನು ಏಕೆ ತೆರೆದುಕೊಂಡಿದ್ದೀರಿ?” ಎಂದು ಕೇಳಿದರೆ, “ನಾನು ಗಾಳಿಯನ್ನಲ್ಲದೇ ಬೇರೇನನ್ನೂ ಸೇವಿಸುವುದಿಲ್ಲ” ಎಂದಿತು. “ಹೀಗೇಕೆ ಪೂರ್ವಕ್ಕೆ ಮುಖ ಮಾಡಿ ನಿಂತಿದ್ದೀರಿ?’” ಎಂದರೆ, “ನಾನು ಸದಾ ಸೂರ್ಯದೇವನ ಚಿಂತನೆ­ಯಲ್ಲೇ ಇರುತ್ತೇನೆ, ಅವನಿಗೇ ನಮಸ್ಕಾರ ಮಾಡುತ್ತಿರುತ್ತೇನೆ” ಎಂದಿತು ವಿನಯದಿಂದ.

ಆಗ ರಾಜ ಇಲಿಗೆ ಈ ಪ್ರಾಣಿ ಅತ್ಯಂತ ಧಾರ್ಮಿಕವಾದದ್ದು ಎಂಬ ನಂಬಿಕೆ ಬಂದಿತು. ಈ ಮಾತನ್ನು ತನ್ನ ಪರಿವಾರಕ್ಕೆಲ್ಲ ಹೇಳಿದಾಗ ಅವೆಲ್ಲ ಇಲಿಗಳೂ ತಾ ಮುಂದು, ನಾ ಮುಂದು ಎಂದು ಅಗ್ನಿ ಭಾರದ್ವಾಜನೆಂಬ ಈ ಪ್ರಾಣಿಯ ಸೇವೆಗೆ ನಿಂತವು. ಇವು ಸೇವೆಯನ್ನು ಮುಗಿಸಿಕೊಂಡು ಹೊರಡುವಾಗ ನರಿ ಕೊನೆಯ ಇಲಿಯನ್ನು ಗಪ್ಪೆಂದು ಹಿಡಿದು ಬಾಯಿಯಲ್ಲಿ ಹಾಕಿಕೊಂಡು ನುಂಗಿ ಬಾಯಿ ಒರೆಸಿಕೊಂಡು ನಿಲ್ಲುತ್ತಿತ್ತು. ಕೆಲವು ದಿನಗಳು ಕಳೆದ ಮೇಲೆ ರಾಜನಿಗೆ ಸಂಶಯ ಬಂದಿತು.

ಮೊದಲು ಬಿಲದಲ್ಲಿ ನಿಲ್ಲಲೂ ಸ್ಥಳವಿರುತ್ತಿರಲಿಲ್ಲ. ಈಗ ಸಾಕಷ್ಟು ವಿರಳವಾಗಿದೆ. ಹಾಗಾದರೆ ಇಲಿಗಳು ಹೇಗೆ ಕಡಿಮೆಯಾದವು ಎಂದು ಚಿಂತಿಸಿತು. ಒಂದು ಕ್ಷಣ ಅಗ್ನಿ ಭಾರದ್ವಾಜನ ಮೇಲೂ ಸಂಶಯ ಬಂದಿತು. ಅದಕ್ಕಾಗಿ ಒಂದು ದಿನ ತಾನು ಆ ಅಗ್ನಿ ಭಾರದ್ವಾಜ ಮುನಿಯ ಸೇವೆಗೆ ಹೋಗದೇ ಮರ ಏರಿ ಕುಳಿತಿತು. ಉಳಿದ ಇಲಿಗಳು ಸೇವೆಯನ್ನು ಮುಗಿಸಿ ಬರುವಾಗ ಕೊನೆಯ ಇಲಿಯನ್ನು ನುಂಗಿದ್ದನ್ನು ಕಂಡಿತು. ಮೊದಲೇ ಬಲಿಷ್ಠವಾದ ರಾಜ ಇಲಿ ಮರದಿಂದಲೇ ನರಿಯ ಮೇಲೆ ಧುಮುಕಿ ಅದರ ಕತ್ತನ್ನು ಕಚ್ಚಿ ಕೊಂದುಹಾಕಿತು. ನಂತರ ಬರೀ ಚಿಹ್ನೆಗಳಿಗೆ ಮಾರುಹೋಗಿ ಯಾರನ್ನೂ ನಂಬದಿರಲು ತೀರ್ಮಾನಿಸಿತು.

ಇದು ಎರಡು ಸಾವಿರ ವರ್ಷಗಳಿಗೂ ಹಿಂದಿನ ಕಥೆ. ಅಷ್ಟು ಹಳೆಯದಾದರೂ ನಿನ್ನೆ ಮೊನ್ನೆ ನಡೆದ ಘಟನೆಯಂತೆ ಕಾಣುತ್ತದಲ್ಲವೇ? ಇಂದೂ ಅಲ್ಲಲ್ಲಿ ಕಾಣುವ, ಕೇಳುವ, ಓದುವ ವಿಷಯಗಳಲ್ಲಿ ಈ ತರಹದ ಭ್ರಾಂತಿಗಳನ್ನು ಉಂಟುಮಾಡಿ ಜನರನ್ನು ಮೋಸಮಾಡುವ ತೋರಿಕೆಯ ಧರ್ಮರಕ್ಷಕರಿದ್ದಾರೆಂಬುದು ಸರ್ವವಿದಿತ. ನಾವು ಜಾಗ್ರತರಾಗಿದ್ದಷ್ಟೂ ನಮಗೇ ಕ್ಷೇಮ.

ನೋಡಿದ್ರಲ್ಲ ಸ್ನೇಹಿತರೇ ನಮ್ಮ ಸುತ್ತಮುತ್ತ ಇಂತಹ ಬೂಟಾಟಿಕೆಯ ಜನರೇ ಇದ್ದಾರೆ.ತೋರಿಕೆಗಷ್ಟೇ ಒಳ್ಳೆಯವರಂತೆ ಸೋಗು ಹಾಕಿಕೊಂಡು ನೋಡನೋಡುತ್ತಿದ್ದಂತಯೇ ನಮ್ಮನ್ನು, ಸಮಾಜವನ್ನು, ದೇಶವನ್ನು ಯಾಮಾರಿಸುತ್ತ ಇಲ್ಲ ಸಲ್ಲದ ಭ್ರಾಂತಿಗಳನ್ನು ಉಂಟುಮಾಡಿ ನಮ್ಮನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಇಂತಹ ಜನರನ್ನು ಮೆಟ್ಟಿ ಆದಷ್ಷೂ ಜಾಗೃತರಾಗೋಣ ಏನಂತೀರಿ ?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button