ದಿನಕ್ಕೊಂದು ಕಥೆ
ಕುಪುತ್ರೋ ಜಾಯತೇ ಕ್ವಚಿದಪಿ ಕುಮಾತಾ ನ ಭವತಿ
ವಿಮಾನತ್ತರದಲ್ಲಿ ಹಾರುತ್ತಿತ್ತು. ಪ್ರಯಾಣಿಕರು ತಮ್ಮದೇ ಆದ ಹರಟೆ, ಮೋಜು, ಖುಷಿಯಲ್ಲಿ ನಲಿಯುತ್ತಿದ್ದರು. ಇದ್ದಕ್ಕಿದ್ದಂತೆ ತಾಂತ್ರಿಕ ತೊಂದರೆ ಕಾಣಿಸಿಕೊಂಡು ವಿಮಾನ ಧರೆಗೆ ಅಪ್ಪಳಿಸಬಹುದೆಂದು ಆತಂಕಗೊಂಡ ಪೈಲಟ್, ಎಲ್ಲರಿಗೂ ತುರ್ತನಿರ್ಗಮನದ ಸೂಚನೆ ನೀಡುವಂತೆ ಹಾಗೂ ಪ್ಯಾರಾಚೂಟ್ ವಿತರಿಸುವಂತೆ ಗಗನಸಖಿಗೆ ಸೂಚಿಸಿದ. ಹಾಗೇ ಮಾಡಿದ ಗಗನಸಖಿ, ಪ್ಯಾರಾಚೂಟ್ ಹಿಡಿದು ತುರ್ತದ್ವಾರದ ಮೂಲಕ ಕೆಳಕ್ಕೆ ಜಿಗಿದು ಪ್ರಾಣರಕ್ಷಣೆ ಮಾಡಿಕೊಳ್ಳುವಂತೆ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡುತ್ತ ಬಂದಳು. ವಿಮಾನದ ಕೊನೆಯ ಆಸನದಲ್ಲಿ ತಾಯಿ ಮತ್ತು ಮಗ ತಲ್ಲಣಗೊಂಡು ಕುಳಿತಿದ್ದರು. ಆದರೆ ಗಗನಸಖಿಯ ಬಳಿಯಿದ್ದುದು ಒಂದೇ ಪ್ಯಾರಾಚೂಟ್! “ನಿಮ್ಮಿಬ್ಬರಲ್ಲಿ ಯಾರಾದರೊಬ್ಬರು ಇದನ್ನು ಬಳಸಿಕೊಂಡು ಪ್ರಾಣ ಉಳಿಸಿಕೊಳ್ಳಬಹುದು” ಎಂದು ಹೇಳುತ್ತ ಆಕೆ ತನ್ನ ರಕ್ಷಣೆಗೆ ಧಾವಿಸಿದಳು.
ಇಂಥ ಪರಿಸ್ಥಿತಿಯಲ್ಲೂ ಧೃತಿಗೆಡದ ತಾಯಿ, “ಮಗನೇ ನಿನ್ನ ಒಂದು ಕೈನಿಂದ ಪ್ಯಾರಾಚೂಟ್ ಅನ್ನೂ, ಮತ್ತೊಂದು ಕೈಯಿಂದ ನನ್ನನ್ನೂ ಭದ್ರವಾಗಿ ಹಿಡಿದುಕೋ, ಹೀಗೆ ಮಾಡುವುದರಿಂದ ಮಾತ್ರವೇ ನಾವಿಬ್ಬರೂ ಬದುಕುಳಿಯಲು ಸಾಧ್ಯ” ಎಂದಳು. ಅದಕ್ಕೆ ಮಗ ಹಠ ಮಾಡುವವನಂತೆ, “ಬೇಕಿದ್ದರೆ ನೀನೇ ಒಂದು ಕೈನಲ್ಲಿ ಪ್ಯಾರಾಚೂಟ್, ಮತ್ತೊಂದರಲ್ಲಿ ನನ್ನನ್ನು ಭದ್ರವಾಗಿ ಹಿಡಿದುಕೋ…” ಎಂದು ವಾಗ್ವಾದಕ್ಕಿಳಿದ. ಚರ್ಚೆಗೆ ಅದು ಸಮಯವಾಗಿರಲಿಲ್ಲವಾದ್ದರಿಂದ ಅಮ್ಮ ಹಾಗೇ ಮಾಡಿದಳು. ಅಂತೆಯೇ ಇಬ್ಬರೂ ಸುರಕ್ಷಿತವಾಗಿ ಧರೆಗಿಳಿದರು. ಕೊಂಚ ಸುಧಾರಿಸಿಕೊಂಡ ನಂತರ ಅಮ್ಮ. “ಮನೆಯಲ್ಲಿ ಹಠ ಮಾಡುವಂತೆ, ಅಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಮೊಂಡು ಹಿಡಿಯುವ ಅಗತ್ಯವೇನಿತ್ತು? ಇಳಿಯುವುದಕ್ಕೆ ಸಿಕ್ಕಿದ ಕೊನೆಯ ಅವಕಾಶವನ್ನೂ ತಪ್ಪಿಸಿಕೊಂಡಿದ್ದರೆ ಪ್ರಾಣ ಹೋಗುತ್ತಿತ್ತಲ್ಲವೇ…?” ಎಂದು ಮಗನನ್ನು ಆಕ್ಷೇಪಿಸಿದಳು. ಅದಕ್ಕೆ ಮಗ, “ಅಮ್ಮಾ, ಒಂದು ವೇಳೆ ನಾನೇ ನಿನ್ನ ಕೈಹಿಡಿದುಕೊಂಡಿದ್ದಿದ್ದರೆ, ಭಯಭೀತಿಯಿಂದಲೋ ನಿನ್ನ ಭಾರವನ್ನು ತಡೆಯಲಾರದೆಯೋ, ನನ್ನ ಪ್ರಾಣರಕ್ಷಣೆಗಾಗಿ ನಿನ್ನ ಕೈ ಬಿಟ್ಟುಬಿಡುತ್ತಿದ್ದೆನೋ ಏನೋ… ಆದರೆ ನೀನು ಮಾತ್ರ ಎಂಥ ಸಂಕಷ್ಟದಲ್ಲೂ ನನ್ನ ಕೈಬಿಡುವವಳಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಹಾಗೆ ಮಾಡಿದೆ. ನನ್ನನ್ನು ಕ್ಷಮಿಸಮ್ಮಾ….” ಎಂದು ಬಿಕ್ಕುತ್ತ ಅಮ್ಮನನ್ನು ಅಪ್ಪಿಕೊಂಡ. “ನೀನಿಲ್ಲದಿದ್ದರೆ ನಾನಿದ್ದರೆಷ್ಟು ಬಿಟ್ಟರೆಷ್ಟು…” ಎನ್ನುತ್ತ ಮಗನ ತಲೆನೇವರಿಸಿದಳು ಅಮ್ಮ. ಈ ಸತ್ಯವನ್ನರಿತೇ ಆದಿ ಶಂಕರಾಚಾರ್ಯರು “ಕುಪುತ್ರೋ ಜಾಯತೇ ಕ್ವಚಿದಪಿ ಕುಮಾತಾ ನ ಭವತಿ” ಎಂದಿರಬೇಕು. ಅಂದರೆ, ಈ ಜಗತ್ತಿನಲ್ಲಿ ಕೆಟ್ಟಮಕ್ಕಳಿರಬಹುದು, ಆದರೆ ಕೆಟ್ಟ ತಾಯಂದಿರು ಇರಲು ಸಾಧ್ಯವೇ ಇಲ್ಲ ಎಂದರ್ಥ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.