ಕಥೆ

ಸಲಹೆ + ಸಹಕಾರ + ಧೈರ್ಯ + ಶ್ರದ್ಧೆ = ಸಫಲತೆ

ದಿನಕ್ಕೊಂದು ಕಥೆ

ಧೈರ್ಯದಿಂದ ಮುನ್ನಡೆದರೆ ಗೆಲುವು.

ಈ ಜಗತ್ತಿನಲ್ಲಿ ಸಣ್ಣ ಮನುಷ್ಯರೂ ಕೂಡ ಇತರರ ಸಹಕಾರ, ಸಲಹೆ ಪಡೆದು ಶ್ರದ್ಧೆಯಿಂದ ಮುಂದುವರಿದು ಸಾಧನೆ ಮಾಡಿದರೆ ಸಾಫಲ್ಯ ಗಳಿಸಲು ಸಾಧ್ಯ. ಆರಂಭದಲ್ಲಿ ತುಸು ಹಿನ್ನಡೆ ಉಂಟಾದರೂ ಗಾಬರಿಯಾಗಬೇಕಾಗಿಲ್ಲ.

ಧೈರ್ಯದಿಂದ ಮುನ್ನುಗ್ಗಿ ನಡೆದರೆ, ಭಗವಂತನ ಕೃಪೆಯಿಂದ ಗೆಲುವು ಸಾಧ್ಯವಾಗುತ್ತದೆ ಎಂಬುದನ್ನು ನಿರೂಪಿಸುವ ಒಂದು ಹೃದಯ ಸ್ಪರ್ಶಿಯಾದ ನಿದರ್ಶನ ಹೀಗಿದೆ.

ಅಮೆರಿಕದಲ್ಲಿ ಜಾನ್ಸನ್‌ ಎಂಬ ಒಬ್ಬ ಉತ್ಸಾಹಿ ತರುಣನಿದ್ದ. ತೀರಾ ಬಡವ. ಕಾರ್ಖಾನೆಯ ಕೂಲಿಕಾರನ ಪುತ್ರ. ತಾಯಿಯಾದರೋ ಬಟ್ಟೆ ಹೊಲಿಗೆ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಳು. ಜಾನ್ಸನ್‌ಗೆ ತಾನೊಬ್ಬ ಪತ್ರಕರ್ತನಾಗಬೇಕು, ಬಡ ಜನರಿಗಾಗಿ ಒಂದು ಪತ್ರಿಕೆ ಹೊರಡಿಸಬೇಕು ಎಂಬ ಬಯಕೆ. ತನ್ನ ಪರಿಚಿತ ಗೆಳೆಯರೊಡನೆ ನೆರವು ಯಾಚಿಸಿದರೆ ಯಾರೂ ನೆರವಾಗಲು ಸಿದ್ಧರಾಗಲಿಲ್ಲ. ನಿರಾಶನಾಗಬೇಕಾಯಿತು.

ಆಗ ಆತನ ತಾಯಿ ನೆರವಿಗೆ ಬಂದಳು. ಒಂದು ಸಲಹೆ ಮುಂದಿಟ್ಟಳು- ”ಮಗನೇ, ನಾನು ಬಟ್ಟೆ ಹೊಲಿಗೆಯಿಂದ ಸಂಪಾದಿಸಿದ ಹಣದಿಂದ ಖರೀದಿಸಿದ ಫರ್ನೀಚರನ್ನು ಅಡವಿಟ್ಟರೆ ಬಂದ ಹಣದಿಂದ ನಿನ್ನ ಪತ್ರಿಕೆ ಆರಂಭಿಸಬಹುದು,” ತಾಯಿಯ ಸಲಹೆಯಂತೆ ಫರ್ನೀಚರ್‌ ಅಡವಿಟ್ಟಾಗ 500 ಡಾಲರ್‌ ಮೊತ್ತ ಸಂಗ್ರಹವಾಯಿತು.

”ಹೊಸಪತ್ರಿಕೆ ‘ನ್ಯೂ ಡೈಜೆಸ್ಟ್‌’ ಬರಲಿದೆ. ನೀವು ಚಂದಾದಾರರಾಗಿರಿ,” ಎಂದು ಇಪ್ಪತ್ತು ಸಾವಿರ ಜನರಿಗೆ ಮುದ್ರಿತ ಪತ್ರಗಳನ್ನು ಅಂಚೆಯ ಮೂಲಕ ಕಳಿಸಲಾಯಿತು. ಮೂರು ಸಾವಿರ ಜನರು ಚಂದಾದಾರರಾದರು. ಅಮೆರಿಕದ ಜನರ ಅಭಿರುಚಿಗೆ ಹಿಡಿಸುವಂತಹ ಲೇಖನಗಳುಳ್ಳ ಪತ್ರಿಕೆ ಸಿದ್ಧವಾಯಿತು.

ತನ್ನ ಗೆಳೆಯರೊಡನೆ ”ಇದರ ಮಾರಾಟ ಹೇಗೆ ಮಾಡೋಣ?,”ಎಂದು ಪ್ರಶ್ನಿಸಿದಾಗ ಅವರೊಂದು ಉಪಾಯ ಹೇಳಿಕೊಟ್ಟರು. ”ನಗರಗಳಲ್ಲಿರುವ ಪತ್ರಿಕಾ ಮಾರಾಟಗಾರರ ಅಂಗಡಿಗೆ ಹೋಗಿ ‘ನ್ಯೂ ಡೈಜೆಸ್ಟ್‌ ಇದೆಯೇ?,”’ ಎಂದು ಖರೀದಿಸುವ ಪ್ರಯತ್ನ ನಡೆಸುತ್ತಾ ಹೋಗು. ಆಗ ಅವರು ಪತ್ರಿಕಾ ವಿತರಕರಾಗಿಯೇ ಬೇಕಾಗುತ್ತದೆ’.

ಮಿತ್ರರ ಸಲಹೆಯಂತೆ ನಡೆದಾಗ ಅನೇಕ ಮಂದಿ ಪತ್ರಿಕಾ ವಿತರಕರು ಮುಂದೆ ಬಂದರು. ಬಹು ಬೇಗನೆ ‘ನ್ಯೂ ಡೈಜೆಸ್ಟ್‌’ ಬಹು ಜನರ ಬೇಡಿಕೆಯ ಪತ್ರಿಕೆಯಾಗಿ ರೂಪುಗೊಂಡಿತು. ಜಾನ್ಸನ್‌ ಒಬ್ಬ ಖ್ಯಾತ ಸಫಲ ಪತ್ರಕರ್ತನಾಗಿ ಗೆಲುವು ಸಾಧಿಸಿದ್ದ.

ಇಲ್ಲಿ ಗೆಲುವಿನ ಮೂಲ ರಹಸ್ಯ ಅಡಗಿದೆ. ಬದುಕಿನಲ್ಲಿ ಏನಾದರೂ ಸಾಧನೆ ಮಾಡ ಬಯಸುವವರು ತೊಂದರೆ, ಅಡ್ಡಿಗಳ ಬಗ್ಗೆ ಚಿಂತಿಸುತ್ತಾ ಗಾಬರಿಯಾಗಬೇಕಾಗಿಲ್ಲ.

ಧೈರ್ಯದಿಂದ ಮುನ್ನುಗ್ಗಬೇಕೆಂದರೆ ಬಂಧು-ಬಾಂಧವರು, ಗೆಳೆಯರ ನೆರವು, ಸಲಹೆ ಪಡೆದು ಕಾರ್ಯಾರಂಭ ಮಾಡಿದರೆ ದೇವರ ಅನುಗ್ರಹದಿಂದ ಯಶಸ್ಸು ಲಭಿಸುವುದರಲ್ಲಿ ಸಂದೇಹವಿಲ್ಲ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button