ಕಥೆ

ಗಂಡ-ಹೆಂಡತಿಯಲ್ಲೂ ಇರಲಿ ಕೃತಂಸ್ಮರ, ಕೃತೋಸ್ಮರ

ಕೃತಜ್ಞತೆ ವಿಶೇಷ ಗುಣ

ಕೃತಜ್ಞತೆ ಒಂದು ವಿಶೇಷವಾದ, ಅಪರೂಪದ ಗುಣ. ಅದು ಮನು­ಷ್ಯರಲ್ಲಿ ಮಾತ್ರ ಅಪರೂಪದ್ದು ಎಂದು ತೋರುತ್ತದೆ. ಸಾಕಿದ ಪ್ರಾಣಿಗಳಿಗೆ ಅದೇನೂ ಅಪರೂಪವಲ್ಲ. ಸಾಕಿದ ಹಸುಗಳು ಇಡೀ ದಿನ ಹೊರಗಡೆ ತಿರುಗಾಡಿ ಅಲ್ಲಲ್ಲಿ ತಿಂದು, ರಸ್ತೆ ಪಕ್ಕದ ಹುಲ್ಲನ್ನು ಮೇದು, ಯಜಮಾನನ ಮನೆಗೆ ಸಂಜೆಗೆ ಬಂದು ಹಾಲು ನೀಡಿ ಹೋಗುತ್ತವೆ.

ಒಂದು ಚೂರು ರೊಟ್ಟಿ ನೀಡಿದವನ ಮನೆಯ ಮುಂದೆ ನಾಯಿ ಇಡೀ ದಿನ ಕುಳಿತು ಕಾಯುತ್ತದೆ. ಈ ಕೃತಜ್ಞತೆ ಸಾಕಿದ ಬೆಕ್ಕು, ಕುರಿ, ಕೋಳಿಗಳಿಗೆ ಅತ್ಯಂತ ನೈಸರ್ಗಿಕವಾಗಿ ಬರುವ ಗುಣ. ಆದರೆ, ಇದು ಮನು­ಷ್ಯರಲ್ಲಿ ಮಾತ್ರ ಈಗ ಅತ್ಯಂತ ವಿರಳ­ವಾಗಿ ಕಾಣುವ ಗುಣವಾಗಿ­ರುವುದು ತೋರುತ್ತದೆ.

ತಮಗೆ ಬದುಕು ಕೊಟ್ಟು, ಕೆಲಸದಲ್ಲಿ ಹಲವಾರು ವರ್ಷ ಜೊತೆಗಿದ್ದು ಸಹಕಾರ ನೀಡಿದ, ತಮ್ಮೊಡನೆ ಜೀವನ ಹಂಚಿಕೊಂಡ ಪರಿವಾರದ ಜನರ ಬಗ್ಗೆ ಕೂಡ ಕೃತಜ್ಞತೆ ಕಾಣದಿದ್ದಾಗ ಮರುಕ ಹುಟ್ಟುತ್ತದೆ. ಗುಂಡಣ್ಣ, ಕಪಿಲಾ ಮದುವೆಯಾಗಿ ಐವತ್ತು ವರ್ಷಗಳು ಕಳೆದವು. ಅವರ ಮಕ್ಕಳು ದೊಡ್ಡವರಾಗಿ ಮನೆಯ, ವ್ಯವಹಾರದ ಯಜಮಾನಿಕೆ ವಹಿಸಿ­ಕೊಂಡಿದ್ದಾರೆ.

ಒಂದು ದಿನ ಗುಂಡಣ್ಣ, ಕಪಿಲಾ ಇಬ್ಬರೇ ಆಸ್ಪತ್ರೆಯಲ್ಲಿದ್ದಾಗ ಗುಂಡಣ್ಣನ ತಲೆಯಲ್ಲಿ ಯಾವುದೋ ವಿಚಾರ ಬಂದು ಕಪಿಲಾಳನ್ನು ಹತ್ತಿರಕ್ಕೆ ಕರೆದ. ಕಪಿಲಾ ಬಂದು ಕುಳಿತಳು. ಗುಂಡಣ್ಣ ಮಾತು ತೆಗೆದ.

‘ಕಪಿಲಾ, ನಿನಗೆ ನೆನಪು ಬಹಳ ಅಲ್ಲವೇ? ನಿನಗೆ ನೆನಪಿರಬೇಕು, ನಾವು ಮದುವೆಯಾದ ಎರಡು ವರ್ಷದ ನಂತರ ಹೊಲದಲ್ಲಿ ಬೆಳೆ ಎದೆಮಟ್ಟಕ್ಕೆ ಬೆಳೆದು ಕಟಾವಿಗೆ ಬಂದಿದ್ದಾಗ ಭಾರಿ ಆಲಿಕಲ್ಲು ಮಳೆ ಸುರಿಯಿತು. ಬೆಳೆ ಸರ್ವನಾಶವಾಯಿತು. ಒಂದು ಕಾಳೂ ಮನೆಗೆ ಬರಲಿಲ್ಲ. ನಿನಗೆ ನೆನಪಿರಬೇಕಲ್ಲ, ಅಂಥ ಕೆಟ್ಟ ಕಾಲದಲ್ಲೂ ನೀನು ನನ್ನ ಜೊತೆಗೇ ಇದ್ದೆ’. ‘ಹೌದು, ನಾನು ನಿಮ್ಮ ಜೊತೆಗೇ ಇದ್ದೆನಲ್ಲ, ಅದೆಷ್ಟು ಸಂಕಟ ಆವಾಗ’ ಎಂದಳು ಕಪಿಲಾ.

‘ಆಮೇಲೆ ಮತ್ತೆ ಐದು ವರ್ಷಗಳ ನಂತರ ನಾನು ವ್ಯವಹಾರ ಮಾಡುತ್ತಿದ್ದಾಗ ಮಾರಾಟ ಮಾಡುವ ವಸ್ತುಗಳನ್ನು ಸಂಗ್ರಹಿಸಲು ಬಂದು ದೊಡ್ಡ ಗೋಡೌನ್ ಕಟ್ಟಿಸಿದ್ದೆ, ಅದರ ತುಂಬ ವಸ್ತುಗಳನ್ನು ಶೇಖರಿಸಿದ್ದೆ. ನಿನಗೆ ನೆನಪಿರಬೇಕು, ಒಂದು ಸಿಡಿಲು ಹೊಡೆದು ಗೋಡೌನಿಗೆ ಬೆಂಕಿ ಬಿದ್ದು ಎಲ್ಲ ವಸ್ತುಗಳು ಭಸ್ಮವಾಗಿ ಹೋದವು.

ನಾನು ಕಂಗಾಲಾಗಿ ಹೋಗಿದ್ದೆ. ಅಂದೂ ನೀನು ನನ್ನ ಜೊತೆಗೇ ಇದ್ದೆ ಅಲ್ಲವೇ ಕಪಿಲಾ?’ ‘ಹೌದಲ್ಲವೇ? ನಾನು ನಿಮ್ಮೊಂದಿಗೇ ಇದ್ದೆ. ನಿಮ್ಮನ್ನು ಬಿಟ್ಟು ಎಲ್ಲಿ ಹೋಗಲಿ? ಇಬ್ಬರೂ ಸೇರಿಯೇ ಆ ಪರಿಸ್ಥಿತಿ ನಿಭಾಯಿಸಿದೆವಲ್ಲವೇ?’ ಪ್ರೀತಿ­ಯಿಂದ ಹೇಳಿದಳು ಕಪಿಲಾ.

‘ನಂತರ ನಾನು ಮಾರಾಟದ ಕೆಲಸವೇ ಬೇಡ­ವೆಂದು ಹೈನುಗಾರಿಕೆ ಪ್ರಾರಂಭಿಸಿದೆ. ನೂರು ಹಸುಗಳನ್ನು ಕೊಂಡು ಹಾಲು ಹಾಗೂ ಹಾಲಿನ ಪದಾರ್ಥಗಳನ್ನು ಮಾರತೊಡಗಿದೆ.

ಸಾಕಷ್ಟು ಹಣ ಬಂದು ಮೇಲಕ್ಕೆ ಬಂದೆ. ಆದರೆ ಹತ್ತು ವರ್ಷದ ನಂತರ ಅದಾವುದೋ ಪರದೇಶಿ ವೈರಸ್ ಬಂದು ಜಾನುವಾರು­ಗಳಿಗೆ ತಗುಲಿ ಎರಡು ವಾರದಲ್ಲಿ ಎಲ್ಲ ಹಸುಗಳು ಸತ್ತುಹೋದುವಲ್ಲ? ಆಗ ನನ್ನ ಪರಿಸ್ಥಿತಿ ಎಷ್ಟು ದಯನೀಯವಾಗಿತ್ತು? ನೀನು ಆಗಲೂ ನನ್ನೊಂದಿಗೇ ಇದ್ದೆಯಲ್ಲ ಕಪಿಲಾ?’ ಕೇಳಿದ ಗುಂಡಣ್ಣ.

ಅದೇ ಪ್ರೀತಿಯಿಂದ ಗಂಡನ ಕೈ ಹಿಡಿದು ಹೇಳಿದಳು ಕಪಿಲಾ, ‘ಹೌದು, ಹೌದು, ನನಗೆ ಚೆನ್ನಾಗಿ ನೆನಪಿದೆ. ಅದೊಂದು ಕಷ್ಟದ ಕಾಲವಾಗಿತ್ತು’. ‘ಈಗ ನೋಡು ನನಗೆ ಎಪ್ಪತ್ತೈದು ವರ್ಷ. ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ­ಕೊಂಡು ಆಸ್ಪತ್ರೆಯಲ್ಲಿದ್ದೇನೆ. ಈಗಲೂ ನೀನು ನನ್ನ ಬದಿಯಲ್ಲೇ ಇದ್ದೀಯಲ್ಲ?’ ಎಂದ ಗುಂಡಣ್ಣ.

ಹೆಂಡತಿ ಕಪಿಲಾಳಿಗೆ ಭಾವನೆಯ ಪೂರ ಉಕ್ಕಿ ಬಂತು. ತನ್ನ ಗಂಡ ಪ್ರತಿ ಬಾರಿ ತೊಂದರೆಯಲ್ಲಿದ್ದಾಗ ತಾನು ಪಕ್ಕದಲ್ಲೇ ಸಹಕಾರಿಯಾ­ಗಿದ್ದುದನ್ನು ಕೃತಜ್ಞತೆ­ಯಿಂದ ಸ್ಮರಿಸಿಕೊ­ಳ್ಳುತ್ತಿದ್ದಾನೆ ಎಂದು­ಕೊಂಡು ಪ್ರೀತಿ­ಯಿಂದ ಅವನತ್ತ ನೋಡಿ ಕೈ ಹಿಡಿದಳು.

ಆದರೆ ಗುಂಡಣ್ಣ ಕೈಬಿಡಿಸಿಕೊಂಡು ಗುಡುಗಿದ, ‘ಹಾಗಾ­ದರೆ ನಿನ್ನದು ಅದೆಷ್ಟು ಕೆಟ್ಟ ಕಾಲ­ಗುಣವೇ? ಮದುವೆ­ಯಾಗಿ ಬಂದಂದಿ­ನಿಂದ ಇದು­ವರೆಗೂ ನೀನು ಜೊತೆ­ಯಾಗಿ ಇದ್ದಾಗಲೆಲ್ಲ ಆಪತ್ತು ಕಾಡಿದೆ’. ಕಪಿಲಾ ಕುಸಿದು ಹೋದಳು.

ಗುಂಡಣ್ಣನಿಗೆ ತೊಂದರೆ ಬಂದಾಗಲೆಲ್ಲ ತಪ್ಪಿಸಿಕೊಂಡು ಹೋಗದೇ ತಾನೂ ಜೊತೆಯಾಗಿ ನಿಂತು ಕಷ್ಟದಲ್ಲಿ ಭಾಗಿ­ಯಾಗಿ, ಸಹಕಾರಿಯಾದ ಹೆಂಡ­ತಿಗೆ ಕೃತಜ್ಞತೆ ಸೂಸಿಸದೇ ನೀನೇನು ಮಾಡಿದೆ, ನಿನ್ನಿಂದಲೇ ಕಷ್ಟ ಬಂದದ್ದು ಎನ್ನುವ ಗುಂಡಣ್ಣನ ಮನೋಭಾವ ಈಗ ಸಾರ್ವತ್ರಿಕವಾಗುತ್ತಿರುವುದು ದುಃಖದ ವಿಷಯ.

ಕೃತಂಸ್ಮರ, ಕೃತೋಸ್ಮರ ಎನ್ನುತ್ತದೆ ಒಂದು ಶುಭನುಡಿ. ಮಾಡಿ­ದ್ದನ್ನು ಸ್ಮರಿಸು, ಮಾಡಿದವರನ್ನು ಸ್ಮರಿಸು ಎನ್ನುವ ಈ ಮಾತು ಎಲ್ಲರ ಬದುಕಿನಲ್ಲಿ ಬಂದರೆ ನಾವು ಎಲ್ಲ ಪ್ರಾಣಿಗಳಿಗಿಂತ ಶ್ರೇಷ್ಠವಾದ ಮನುಷ್ಯ ಜನ್ಮಕ್ಕೆ ಬಂದದ್ದು ಸಾರ್ಥಕ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button