ಕಥೆ

ಕ್ರೂರಿ ಮಾಯಮೃಗವನ್ನೆ ನುಂಗಿದ ನರಿ

ದಿನಕ್ಕೊಂದು ಕಥೆ

ಮಾಯಾಮೃಗ

ಬಹಳ ವರ್ಷಗಳ ಹಿಂದೆ ಭಯಂಕರವಾದ ದಟ್ಟಾರಣ್ಯದಲ್ಲಿ ಭೀಕರವಾದ ಮಾಯಾಮೃಗವೊಂದಿತ್ತು. ಅದು ತನ್ನ ಮಾಯಾಶಕ್ತಿಯಿಂದ ಕ್ಷಣಕ್ಷಣಕ್ಕೂ ಒಂದೊಂದು ಬಗೆಯ ಮೃಗವಾಗಿ ಬದಲಾಗುತ್ತಿತ್ತು. ಒಮ್ಮೆ ಸಿಂಹವಾದರೆ ಇನ್ನೊಮ್ಮೆ ಹುಲಿಯಾಗುತ್ತಿತ್ತು. ಮತ್ತೊಮ್ಮೆ ಆನೆಯಾದರೆ ಮಗದೊಮ್ಮೆ ಚಿರತೆಯಾಗುತ್ತಿತ್ತು.

ಹೀಗೆ ಗಳಿಗೆಗೊಂದು ಮೃಗವಾಗಿ ಬದಲಾಗಿ ದಟ್ಟಾರಣ್ಯದಲ್ಲಿದ್ದ ಇತರೇ ಪ್ರಾಣಿಗಳನ್ನು ತನಗೆ ಬೇಕಾದಂತೆ ಬೇಟೆಯಾಡಿ ತಿಂದು ಮುಗಿಸುತ್ತಿತ್ತು. ಬಹಳ ಕ್ರೂರ ಬುದ್ಧಿಯಿದ್ದ ಇದರ ಹಾವಳಿಗೆ ದಟ್ಟಾರಣ್ಯದಲ್ಲಿದ್ದ ಎಲ್ಲಾ ಪ್ರಾಣಿಗಳೂ ಹೆದರಿ ಹೋಗಿದ್ದವು. ಸ್ವಲ್ಪ ಸದ್ದಾದರೂ ಸಾಕು ಥರ ಥರನೆ ನಡುಗುತ್ತಾ ಅಡವಿಯಲ್ಲಿ ಅಡಗಿಕೊಳ್ಳುತ್ತಿದ್ದವು.

ಯಾವ ಕ್ಷಣದಲ್ಲಿ ಯಾವ ಪ್ರಾಣಿಯ ರೂಪದಲ್ಲಿ ಬಂದು ತಮ್ಮನ್ನು ಆ ಮಾಯಾಮೃಗ ತಿಂದು ಬಿಡುವುದೋ ಎಂಬ ಆತಂಕದಲ್ಲೇ ಅವು ಜೀವ ಭಯದಲ್ಲಿ ಬದುಕುತ್ತಿದ್ದವು. ‘ಎಷ್ಟು ದಿನಾ ಅಂತ ಹೀಗೆ ಆ ಮಾಯಾಮೃಗಕ್ಕೆ ಹೆದರಿ ಬದುಕುವುದು?’ ಎಂದು ಚಿಂತಿಸುತ್ತಾ ಅನೇಕ ಸಭೆಗಳನ್ನು ನಡೆಸಿ ಕಾಡಿನ ಪ್ರಾಣಿಗಳೆಲ್ಲಾ ಚರ್ಚಿಸಿದವಾದರೂ ಸಮಸ್ಯೆಗೆ ಪರಿಹಾರ ಮಾತ್ರ ದೊರೆಯಲಿಲ್ಲ.

ಹೀಗೆಯೇ ನಾವು ಹೆದರಿ ಸುಮ್ಮನಿದ್ದು ಬಿಟ್ಟರೆ ಆ ಮಾಯಾಮೃಗ ಅಡವಿಯಲ್ಲಿ ಒಂದು ಪ್ರಾಣಿಯನ್ನೂ ಬಿಡದಂತೆ ಕೆಲವೇ ದಿನಗಳಲ್ಲಿ ನಮ್ಮೆಲ್ಲರನ್ನೂ ತಿಂದು ತೇಗಿ ಬೀಡುತ್ತದೆ. ಏನಾದರೂ ಮಾಡಿ ಆದಷ್ಟು ಬೇಗ ಅದನ್ನು ಸದೆಬಡಿಯಲೇ ಬೇಕು’ ಎಂದು ಬಹಳ ಬುದ್ಧಿವಂತಿಕೆಯಿಂದ ಗಂಭೀರವಾಗಿ ಯೋಚಿಸಿದ ನರಿಯೊಂದು, ‘ನಮಗೆಲ್ಲಾ ಕಂಟಕವಾಗಿರುವ ಆ ಮಾಯಾಮೃಗವನ್ನು ನಾನು ಸದೆ ಬಡಿಯುತ್ತೇನೆ’ ಎಂದು ಎಲ್ಲಾ ಪ್ರಾಣಿಗಳ ಮುಂದೆ ಎದೆಯುಬ್ಬಿಸಿ ಹೇಳಿತು.

ನರಿಯ ಮಾತಿಗೆ ಒಂದು ಕ್ಷಣ ಬೆಚ್ಚಿದ ಎಲ್ಲಾ ಪ್ರಾಣಿಗಳೂ, ‘ಇದು ನೀನು ಬಡಾಯಿ ಕೊಚ್ಚಿಕೊಂಡಷ್ಟು ಸುಲಭದ ಕೆಲಸವಲ್ಲ. ನಮ್ಮ ಕಾಡಿನ ರಾಜ ಸಿಂಹವೇ ತನ್ನಿಂದೇನೂ ಆಗದೆಂದು ಬಾಯಿ ಮುಚ್ಚಿಕೊಂಡಿರುವಾಗ ನೀನು ಬಾಯಿಗೆ ಬಂದಂತೆ ಮಾತನಾಡಬೇಡ’ ಎಂದು ನರಿಗೆ ಎಲ್ಲಾ ಪ್ರಾಣಿಗಳೂ ಒಟ್ಟಾಗಿ ದಬಾಯಿಸಿದವು.

ಆದರೆ ನರಿ ಮಾತ್ರ ಇದಕ್ಕೆ ಸುಮ್ಮನಿರದೆ ‘ನೋಡುತ್ತಾ ಇರಿ. ಆ ಮಾಯಾಮೃಗಕ್ಕೊಂದು ಗತಿ ಕಾಣಿಸುತ್ತೇನೆ. ಒಂದು ಪಕ್ಷ ನನ್ನಿಂದ ಈ ಕೆಲಸ ಆಗದಿದ್ದರೆ ಅಡವಿಯನ್ನೇ ಬಿಟ್ಟು ಹೋಗುತ್ತೇನೆ’ ಎಂದು ಗೊಣಗಿಕೊಂಡು ಮಾಯಾಮೃಗವನ್ನು ಹುಡುಕಿಕೊಂಡು ಹೊರಟಿತು.

ಮಾಯಾಮೃಗಕ್ಕಾಗಿ ದಟ್ಟಾರಣ್ಯವನ್ನೆಲ್ಲಾ ಸುತ್ತಾಡಿದ ನರಿ ‘ಏಯ್‌ ದುಷ್ಟ ಮಾಯಾಮೃಗವೇ, ಎಲ್ಲಿ ಅಡಗಿ ಕುಳಿತಿರುವೆ? ಬಾ… ನನ್ನ ಮುಂದೆ ಬಂದು ತೋರಿಸು ನಿನ್ನ ಪೌರುಷವ…’ ಎನ್ನುತ್ತಾ ದಟ್ಟಡವಿ ಪ್ರತಿಧ್ವನಿಸುವಂತೆ ನರಿ ಕೂಗಿತು. ಎಲ್ಲೋ ಮಲಗಿ ನಿದ್ರಿಸುತ್ತಿದ್ದ ಮಾಯಾಮೃಗ, ನರಿಯ ಕೂಗಿಗೆ ಎಚ್ಚರಗೊಂಡಿತು. ತಕ್ಷ ಣವೇ ಹೂಂಕರಿಸುತ್ತಾ ಕಾಡುಕೋಣದ ರೂಪದಲ್ಲಿ ನರಿಯ ಮುಂದೆ ಬಂದು ನಿಂತಿತು.

ಕೂಡಲೇ ತೋಳವಾಯಿತು, ಕರಡಿಯಾಯಿತು, ಹುಲಿಯಾಯಿತು, ಸಿಂಹವಾಯಿತು, ಆನೆಯಾಯಿತು, ಚಿರತೆಯಾಯಿತು, ಘೇಂಡಾಮೃಗವಾಯಿತು. ಹೀಗೆ ಒಂದು ಕ್ಷ ಣದಲ್ಲಿ ಹಲವಾರು ಪ್ರಾಣಿಗಳಾಗಿ ಅದು ಬದಲಾಗಿ ನರಿಯನ್ನು ಹೆದರಿಸಿತು. ಆದರೆ ಮಾಯಾಮೃಗವನ್ನು ಸಾಯಿಸಲೆಂದೇ ನಿರ್ಧರಿಸಿಕೊಂಡು ಬಂದಿದ್ದ ನರಿ ಇದಕ್ಕೆಲ್ಲಾ ಒಂದು ಚೂರೂ ಹೆದರಲಿಲ್ಲ.

ಬದಲಿಗೆ ಮತ್ತಷ್ಟು ಧೈರ್ಯ ತಂದುಕೊಂಡು, ‘ಏಯ್‌ ಮಾಯಾವಿ ಮೃಗವೆ, ನಿನ್ನ ಮಾಯಾಜಾಲ ಇನ್ನು ನಡೆಯುವುದಿಲ್ಲ. ನಿನ್ನ ಅಟ್ಟಹಾಸ ಇಂದಿಗೆ ಮುಗಿಯಿತೆಂದು ತಿಳಿದಿಕೊ. ಈ ದಟ್ಟಾರಣ್ಯದ ಪ್ರಾಣಿ ಸಂಕುಲಕ್ಕೆಲ್ಲಾ ತಲೆನೋವಾಗಿರುವ ನಿನ್ನನ್ನು ಕೊಲ್ಲಲೆಂದೇ ನಾನು ಬಂದಿದ್ದೇನೆ… ‘ ಎಂದು ನರಿ ಆರ್ಭಟಿಸಿತು.

‘ಹಾಂ, ನನ್ನನ್ನು ಕೊಲ್ಲಲು ಬಂದಿರುವೆಯಾ? ಎಲೈ ಗುಳ್ಳೆ ನರಿಯೆ, ನಿನಗೆ ಅಷ್ಟೊಂದು ಧೈರ್ಯವಿದೆಯೇ? ಶಕ್ತಿ ಇದೆಯೇ? ನೀನೊಂದು ಅಮಾಯಕ ಜೀವಿ. ನಿನ್ನಿಂದ ಏನಾದೀತು? ಹುಚ್ಚು ಹುಚ್ಚಾಗಿ ಏನೇನೋ ಮಾತನಾಡಿ ನನ್ನನ್ನು ಕೆರಳಿಸಬೇಡ. ‘ನರಿಕೂಗು ಗಿರಿ ಮುಟ್ಟೀತೆ?’ ಎಂಬ ಮಾತನ್ನು ನೀನು ಕೇಳಿರುವೆ ತಾನೆ? ನನ್ನನ್ನು ನೀನು ಕೊಲ್ಲುವುದಿರಲಿ ಮೊದಲು ನೀನು ಬದುಕುಳಿಯುವುದರ ಬಗ್ಗೆ ಯೋಚಿಸು.

ನನ್ನ ಮಾಯಾಶಕ್ತಿ ಏನೆಂದು ಈಗ ತಾನೆ ನೀನು ನೊಡಿದೆಯಲ್ಲವೆ? ಹಾಂ, ಮತ್ತಷ್ಟು ನೋಡು… ‘ ಎಂದು ಗಹಗಹಿಸಿ ಘರ್ಜಿಸುತ್ತಾ ಇನ್ನಷ್ಟು ಮೃಗಗಳ ರೂಪದಲ್ಲಿ ಆ ಮಾಯಾಮೃಗ ನರಿಯನ್ನು ಭಯಪಡಿಸಿತು.

ಅದಕ್ಕೆ ಕಿಂಚಿತ್ತೂ ಭಯಪಡದೆ ಪ್ರತಿಯಾಗಿ ನರಿ ಕೂಡ ಧೈರ್ಯವಾಗಿ ಕೇಕೆ ಹಾಕುತ್ತಾ, ‘ನೀನು ಹುಲಿ, ಸಿಂಹ, ಚಿರತೆಯಾದರೆ ಸಾಲದು. ನಿನಗೆ ತಾಕತ್ತಿದ್ದರೆ ಒಂದು ಇಲಿಮರಿಯಾಗಿ ನನ್ನ ಮುಂದೆ ಬಾ… ‘ ಎಂದು ಸವಾಲು ಹಾಕಿ ಬೇಕೆಂದೇ ಮಾಯಾಮೃಗವನ್ನು ನರಿ ಕೆರಳಿಸಿತು.

ನರಿಯ ಬುದ್ಧಿವಂತಿಕೆಯ ಮರ್ಮವನ್ನು ಅರಿಯದ ಮಾಯಾಮೃಗ ಥಟ್ಟನೆ ಇಲಿ ಮರಿಯಾಗಿ ನರಿಯ ಮುಂದೆ ಬಂತು. ಈ ಸಂದರ್ಭಕ್ಕಾಗಿ ಕಾಯುತ್ತಿದ್ದ ನರಿ ತಕ್ಷ ಣವೇ ಇಲಿಮರಿಯನ್ನು ಹಿಡಿದು ನುಂಗಿಬಿಟ್ಟಿತು.

ಅಲ್ಲಿಗೆ ನರಿಯ ಹೊಟ್ಟೆ ಸೇರಿದ ಮಾಯಾಮೃಗದ ಕಥೆ ಮುಗಿಯಿತು. ಇದನ್ನು ಕಂಡ ದಟ್ಟಾರಣ್ಯದ ಪ್ರಾಣಿಗಳೆಲ್ಲಾ ಸಂತಸದಿಂದ ಕುಣಿದಾಡಿದವು. ನರಿಯ ಧೈರ್ಯ ಹಾಗೂ ಜಾಣ್ಮೆಯನ್ನು ಮೆಚ್ಚಿ ಅಭಿಮಾನದಿಂದ ಅದನ್ನು ಆಲಂಗಿಸಿಕೊಂಡು ಆನಂದಪಟ್ಟವು.

ಕಾಡಿನ ರಾಜ ಸಿಂಹ ಕೂಡ ನರಿಯನ್ನು ಸನ್ಮಾನಿಸಿ ಅಭಿನಂದಿಸಿತು. ಅಂದಿನಿಂದ ನರಿಯನ್ನು ಸಿಂಹವು ತನ್ನ ಪ್ರಧಾನ ಮಂತ್ರಿಯಾಗಿ ನೇಮಿಸಿಕೊಂಡಿತು. ನರಿಯಿಂದಾಗಿ ಮಾಯಾಮೃಗದ ಕಾಟ ತಪ್ಪಿ ಎಲ್ಲಾ ಪ್ರಾಣಿಗಳೂ ನೆಮ್ಮದಿಯಿಂದ ದಟ್ಟಾರಣ್ಯದಲ್ಲಿ ಜೀವಿಸತೊಡಗಿದವು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button