ಕಥೆ

“ತ್ಯಾಗದ ಆನಂದ” ಈ ಕಥೆ ಓದಿ ಮಕ್ಕಳಿಗೂ ತಿಳಿಸಿ

ದಿನಕ್ಕೊಂದು ಕಥೆ

ತ್ಯಾಗದ ಆನಂದ

ಏಳು ವರ್ಷದ ಚಿಂಟಿ ಎಂಬ ಅಕ್ಕ ಮತ್ತು ಐದು ವರ್ಷದ ಗುಂಡು ಎಂಬ ತಮ್ಮ ಬಲು ಚೂಟಿಯಾಗಿದ್ದರು. ಆಟ ಮತ್ತು ಪಾಠಗಳಲ್ಲಿ ಅಕ್ಕ ತಮ್ಮ ಇಬ್ಬರೂ ಮುಂದಿದ್ದರು. ಅರಳು ಹುರಿದ ಹಾಗೆ ಇವರಿಬ್ಬರ ಮಾತುಗಳಿದ್ದವು.

ಕೆಲ ವಿಷಯಗಳಲ್ಲಿ ಇವರಿಬ್ಬರು ಎಷ್ಟು ಬಡಿದಾಡುತ್ತಿದ್ದರೋ, ಅಷ್ಟೇ ಅವರಲ್ಲಿ ಅನ್ಯೋನ್ಯತೆಯೂ ಇತ್ತು. ಒಂದು ಕ್ಷಣ ಕೂಡ ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ.

ಒಂದು ದಿನ ಇವರ ತಾಯಿ ಪೇಟೆಯಿಂದ ಎರಡು ಪೆನ್ಸಿಲ್‌ಗಳನ್ನು ತಂದಿದ್ದರು. ಒಂದು ಹಸಿರು ಇನ್ನೊಂದು ನೀಲಿ ಬಣ್ಣದ್ದಾಗಿತ್ತು. ಎರಡೂ ಪೆನ್ಸಿಲ್ಗಳನ್ನು ಇಬ್ಬರ ಮುಂದೆ ತೋರಿಸಿದಾಗ ದೊಡ್ಡವಳಾದ ಚಿಂಟಿ ಥಟ್ಟನೆ ಹಸಿರು ಬಣ್ಣದ ಪೆನ್ಸಿಲ್‌ ಆಯ್ಕೆ ಮಾಡಿ ಗುಂಡುನಿಗೆ ನೀಲಿ ಬಣ್ಣದ ಪೆನ್ಸಿಲನ್ನು ಕೊಟ್ಟಳು.

ಆದರೆ ಗುಂಡುನಿಗೂ ಹಸಿರು ಬಣ್ಣದ ಪೆನ್ಸಿಲ್‌ ಬೇಕಾಗಿತ್ತು. ತಾಯಿಯು ಎರಡೂ ಒಂದೇ ಕಂಪನಿಯವು. ಬರೀ ಕಲರ್‌ ಬೇರೆ ಅಂದು ಎಷ್ಟೇ ಪ್ರಯತ್ನ ಮಾಡಿ ಸಮಜಾಯಿಸಿ ಹೇಳಿದರೂ ಗುಂಡು ಕೇಳಲಿಲ್ಲ. ಚಿಂಟಿಯೂ ಹಸಿರು ಪೆನ್ಸಿಲನ್ನು ಗುಂಡುನಿಗೆ ಕೊಡಲು ತಯಾರಾಗಲಿಲ್ಲ.

ಹೀಗೆಯೇ ತುಸು ಹೊತ್ತಾದ ನಂತರ ತಾಯಿ ತನ್ನ ಕೆಲಸದಲ್ಲಿ ಬಿಝಿಯಾದಾಗ ಇಬ್ಬರೂ ಪೆನ್ಸಿಲ್‌ಗಾಗಿ ವಾದ ಮಾಡುತ್ತಿದ್ದರು. ಗುಂಡು ಒತ್ತಾಯವಾಗಿ ಹಸಿರು ಪೆನ್ಸಿಲನ್ನು ತೆಗೆದುಕೊಳ್ಳಲು ಮುಂದಾದಾಗ ಚಿಂಟಿ ತನ್ನ ಕೈಯಲ್ಲಿ ಪೆನ್ಸಿಲ್‌ ಹಿಡಿದು ಮನೆ ತುಂಬಾ ಓಡಾಡತೊಡಗಿದಳು.

ಆಕೆಯ ಹಿಂದೆಯೇ ಗುಂಡು ಓಡಾಡತೊಡಗಿದ. ಈ ಬಿರುಸಿನ ಓಡಾಟದಲ್ಲಿ ಗುಂಡು ಅಕಸ್ಮಾತ್‌ ಕೆಳಗೆ ಬಿದ್ದು ಕಾಲಿಗೆ ಪೆಟ್ಟಾಗಿ ರಕ್ತ ಸೋರಲು ಆರಂಭವಾಯಿತು. ಗುಂಡುನ ಅಳು ಕೇಳಿ ಓಡಿ ಬಂದ ತಾಯಿ ಗುಂಡುನ ಅವಸ್ಥೆ ನೋಡಿ ಮರುಗಿದಳು. ರಕ್ತ ನೋಡಿ ತಾಯಿ ಕಣ್ಣೀರಾದಳು. ಗುಂಡು ನೋವಿನಿಂದ ಅಳ್ತಾನೇ ಇದ್ದ.

ಇನ್ನೇನು ತಾಯಿ ಚಿಂಟಿಗೆ ಒಂದು ಪೆಟ್ಟು ಹಾಕ ಬೇಕೆಂದಿದ್ದಳು. ಆದರೆ ಪೆಟ್ಟಿನಿಂದ ಇಬ್ಬರಿಗೂ ಬುದ್ಧಿ ಬರಲ್ಲ ಎಂದು ಸುಮ್ಮನಾದಳು. ಗುಂಡುನನ್ನು ತಕ್ಷ ಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಲಾಯಿತು. ಆ ದಿನ ರಾತ್ರಿಯೂ ತನ್ನ ಪಕ್ಕದಲ್ಲೇ ಮಲಗಿದ್ದ ಗುಂಡು ನೋವಿನಿಂದ ನರಳುವುದನ್ನು ಹಾಗೂ ನಿದ್ದೆಯಲ್ಲಿ ಪದೇ ಪದೇ ಅಳುವುದನ್ನು ಚಿಂಟಿ ಗಮನಿಸಿದ್ದಳು.

ಇದಾದ ಕೆಲ ದಿನಗಳ ನಂತರ ಗುಂಡುವಿನ ನೋವು ಮಾಯವಾಗಿ ಗಾಯ ವಾಸಿಯಾಯಿತು. ಶಾಲೆಯಲ್ಲಿ ಪ್ರಾಜೆಕ್ಟ್ ಮಾಡಲು ಎಸ್‌ಯುಪಿಡಬ್ಲ್ಯು ಕ್ಲಾಸ್‌ನಲ್ಲಿ ಇಬ್ಬರಿಗೂ ಬಣ್ಣದ ಹಾಳೆ ತರಲು ಹೇಳಿದ್ದರು. ಅದರಂತೆ ತಾಯಿ ಬಣ್ಣದ ಹಾಳೆಗಳನ್ನು ತಂದು ಇಬ್ಬರನ್ನು ಕರೆದು ತೋರಿಸಿದಳು.

ಬಣ್ಣದ ಹಾಳೆಗಳನ್ನು ನೋಡಿದ ಚಿಂಟಿ, ಈ ಮೊದಲು ಆದ ಘಟನೆಯನ್ನು ನೆನೆದು, ಮಮ್ಮಿ ಗುಂಡು ಮೊದಲು ತನಗೆ ಬೇಕಾದ ಬಣ್ಣದ ಹಾಳೆ ತೆಗೆದುಕೊಳ್ಳಲಿ. ಆಮೇಲೆ ನಾನು ತೆಗೆದುಕೊಳ್ಳುವೆ. ಇಲ್ಲವಾದರೆ ಅವನು ಮತ್ತೆ ನನ್ನ ಹಿಂದೆ ಓಡಾಡಿ ಬಂದು ಬಿದ್ದು ಏಟು ಮಾಡಿಕೊಳ್ಳುವನು.

ಅವನು ಬಿಟ್ಟಿದ್ದನ್ನು ನಾನು ತೆಗೆದುಕೊಳ್ಳುವೆ ಎಂದಳು. ಇದನ್ನು ಕೇಳಿ ತಾಯಿ, ನನ್ನ ಮಗಳು ತ್ಯಾಗದ ಪರಿಭಾಷೆಯನ್ನು ತಾನಾಗಿಯೇ ಕಲಿತಳು ಎಂದು ಬಿಗಿಯಾಗಿ ಆಕೆಯನ್ನು ತಬ್ಬಿಕೊಂಡಳು. ಆನಂದಭಾಷ್ಪ ಹಾಗೆಯೇ ತಾಯಿಯ ಕಣ್ಣಿಂದ ಸುರಿತಾನೇ ಇತ್ತು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button