ಉಪವಾಸ ಮಾಡಿ ಮಂಗನ ಉಪವಾಸ ಬೇಡ ಈ ನೀತಿ ಕಥೆ ಓದಿ
ದಿನಕ್ಕೊಂದು ಕಥೆ
ಮಂಗಗಳ ಉಪವಾಸ
ಒಂದು ದೇಗುಲದ ಸಮೀಪ ನಾಲ್ಕಾರು ಮಂಗಗಳು ವಾಸವಾಗಿದ್ದವು. ದೇವಸ್ಥಾನದ ಪೂಜಾರಿಯು ದಿನಾಲೂ ಬಾಳೆಹಣ್ಣುಗಳನ್ನು ಮಂಗಗಳಿಗೆ ನೀಡುತ್ತಿದ್ದನು. ಮಂಗಗಳೂ ತುಂಬಾ ಲವಲವಿಕೆಯಿಂದಲೇ ಬದುಕಿದ್ದವು.
ಅಂದು ಶಿವರಾತ್ರಿ ಆ ದಿನ ಪೂಜಾರಿಯು ಒಂದೇ ಒಂದು ಬಾಳೆ ಹಣ್ಣನ್ನು ಕೊಡಲಿಲ್ಲ. ಮನುಷ್ಯರು ಉಪವಾಸ ವ್ರತ ಮಾಡಿದಂತೆ ಆ ದಿನ ಒಂದಿನಿತೂ ಬೇಸರಿಸದೆ ನಾವೆಲ್ಲರೂ ಉಪವಾಸವ್ರತವನ್ನೇ ಆಚರಿಸೋಣ ಎಂದು ಎಲ್ಲ ಮಂಗಗಳೂ ದೃಢಸಂಕಲ್ಪ ಮಾಡಿದವು. ಬೆಳಗ್ಗೆ ಕಳೆದು ಮಧ್ಯಾಹ್ನವಾಗುತ್ತ ಬಂತು. ಮಂಗಗಳಿಗೆ ವಿಪರೀತ ಹಸಿವಾಯಿತು.
ಒಂದು ಮಂಗವಂತೂ “ನಾವೆಲ್ಲರ ಪಕ್ಕದ ಬಾಳೆತೋಟದಿಂದ ಬಾಳೆಹಣ್ಣುಗಳನ್ನು ತಂದಿಡೋಣ. ನಾಳೆ ತಿನ್ನಲು ಈಗಿಂದೀಗಲೇ ತಯಾರಿ ಮಾಡಿ ರೆಡಿಯಾಗೋಣ ಅಲ್ಲವೇ?” ಎಂಬುದಾಗಿ ಹೇಳಿಯೇ ಬಿಟ್ಟಿತು. ಉಳಿದ ಮಂಗಗಳು “ಹೌದು, ಹೌದು’ ಎಂದೆನ್ನುತ್ತಲೇ ಎಲ್ಲವೂ ಪಕ್ಕದ ಬಾಳೆ ತೋಟಕ್ಕೆ ನುಗ್ಗಿ ಹತ್ತಾರು ಬಾಳೆಹಣ್ಣುಗಳನ್ನು ಕಿತ್ತು ತಂದವು. ಸಂಜೆಯಾಗುತ್ತ ಬಂದಿತು.
ಒಂದು ಮಂಗ “ನಾವು ಬಾಳೆಹಣ್ಣು ತಂದಾಗಿದೆ. ಸುಮ್ಮನೆ ಕುಳಿತುಕೊಳ್ಳುವುದೇಕೆ ? ಸಿಪ್ಪೆ ಸುಲಿದಿಡೋಣ ಆಗದೇ?” ನುಡಿಯಿತು. ಎಲ್ಲ ಮಂಗಗಳೂ ಸಿಪ್ಪೆ ಸುಲಿಯತೊಡಗಿದವು.
ಸ್ವಲ್ಪ ಹೊತ್ತಾದ ಮೇಲೆ ಉಪವಾಸವಿದ್ದು ಕೈಯಿಂದ ಎತ್ತಿಕೊಂಡು ಬಾಯಲ್ಲಿ ಹಾಕಿಕೊಳ್ಳಲು ಆಗದಿದ್ದರೆ ಏನು ಮಾಡೋದು, ಸಿಪ್ಪೆ ಅಂತು ಸುಲಿದಾಗಿದೆ. ಅದನ್ನು ಕೈಯಲ್ಲಿಟ್ಟು ಕೊಂಡರೆ ಚೆನ್ನ ಎಂದು ಮುದಿ ಮಂಗ ಹೇಳಿತು. ಹಾಗೆ ಮಾಡಿದವು.
ಇನ್ನೊಂದು ಮುದಿ ಮಂಗ ಎಷ್ಟತ್ತೂ ಕೈಯಲ್ಲಿ ಹಿಡಿಯೊದು ? ಕೈನೋವು ಬರುತಿದೆ. ಅದನ್ನು ಬಾಯೊಳಗೆ ಇಟ್ಟರೆ ಆಗಲ್ವೇ? ಎಂದಾಗ ಎಲ್ಲವೂ ಬಾಯೊಳಗೆ ಹಾಕಿ ಕೊಂಡವು. “ಅಯ್ಯೋ, ಎಷ್ಟು ಹೊತ್ತೆಂದು ಬಾಯೊಳಗೆ ಇಟ್ಟುಕೊಳ್ಳುವುದು. ನುಂಗಿಯೇ ಬಿಡೋಣ ಅಲ್ಲವೇ?” ಎನ್ನುತ್ತಲೇ ಎಲ್ಲವೂ ಬಗಬಗನೆ ಗುಳುಂ ಮಾಡಿಬಿಟ್ಟವು.
ಹೀಗೆ ಮಂಗಗಳು, ಉಪವಾಸ ಎಂಬುದು ನಿಜಕ್ಕೂ ಮನುಷ್ಯರಿಗೆ ಬಿಟ್ಟದ್ದು ನಮಗೆಲ್ಲ ಯಾಕದರ ಗೊಡವೆ? ಎಂದು ಎಲ್ಲ ಮಂಗಗಳೂ ಉಪವಾಸ ವ್ರತವನ್ನು ಅಂತ್ಯಗೊಳಿಸಿಯೇ ಬಿಟ್ಟವು.
ನೀತಿ :– ಬದುಕಿನಲ್ಲಿ ಉಪವಾಸ ಬೇಕು. ನಾಳಿನ ಸಂಗ್ರಹ ಬೇಡ. ಅದರಿಂದ ಮನೋನಿಗ್ರಹ ಸಾಧ್ಯ. ಅದು ಮನುಷ್ಯನಿಂದ ಆಗದಿದ್ದರೆ ಮಂಗನ ಉಪವಾಸವಾಗುತ್ತದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.