ಕಥೆ

ಸದಾ ಜಗಳವಾಡುವ ಸಹೋದರರಿಗೆ ಒಗ್ಗಟ್ಟಿನ ಮಹತ್ವ ತೋರಿಸಿಕೊಟ್ಟ ತಂದೆ

ಒಗ್ಗಟ್ಟಿನ ಮಹತ್ವ

ಒಗ್ಗಟ್ಟಿನ ಮಹತ್ವ ಇದು ಬಹಳ ಹಿಂದಿನ ಮಾತು. ಒಂದು ಊರಿನಲ್ಲಿ ಗೋಪಾಲ ಎಂಬ ಓರ್ವ ವಯಸ್ಸಾದ ವ್ಯಕ್ತಿಯಿದ್ದನು. ವೃದ್ಧಾಪ್ಯದಿಂದ ಅವನು ಬಹಳ ದಣಿದಿದ್ದನು ಹಾಗೂ ಅವನಿಗೆ ಕೆಲಸ ಮಾಡಲು ಆಗುತ್ತಿರಲಿಲ್ಲ. ಆದರೆ ಅವನು ತನ್ನ ಜೀವನದಲ್ಲಿ ಬೇಕಾದಷ್ಟು ಹಣ ಗಳಿಸಿದ್ದನು.

ಗೋಪಾಲನಿಗೆ 5 ಮಕ್ಕಳಿದ್ದರು. ಆದರೆ ಅವರು ಯಾವಾಗಲೂ ತಮ್ಮಲ್ಲಿಯೇ ಬಹಳ ಜಗಳವಾಡುತ್ತಿದ್ದರು. ತನ್ನ ಮಕ್ಕಳನ್ನು ಪ್ರತಿದಿನ ಜಗಳವಾಡುತ್ತಿರುವುದನ್ನು ನೋಡಿ ಗೋಪಾಲನಿಗೆ ಬಹಳ ದುಃಖವಾಗುತ್ತಿತ್ತು.

ಅವನು ತನ್ನ ಮಕ್ಕಳಿಗೆ ಬಹಳ ಬುದ್ಧಿ ಹೇಳಿದನು. ಆದರೆ ಅವರಿಗೆ ಏನು ಹೇಳಿದರೂ ವ್ಯರ್ಥವೇ ಆಗಿತ್ತು. ಗೋಪಾಲನಿಗೆ ತಾನು ಏನು ಮಾಡಲಿ ಎಂಬುದೇ ತಿಳಿಯುತ್ತಿರಲಿಲ್ಲ. ಒಂದು ದಿನ ಅವನಿಗೆ ಒಂದು ಉಪಾಯ ಹೊಳೆಯಿತು.

ಗೋಪಾಲನು ತನ್ನ ಐದೂ ಮಕ್ಕಳನ್ನು ಕರೆದು ಪ್ರತಿಯೊಬ್ಬರ ಕೈಯಲ್ಲಿ ಒಂದೊಂದು ಕಟ್ಟಿಗೆಯನ್ನು ಕೊಟ್ಟು ಇವುಗಳನ್ನು ಮುರಿದು ತೋರಿಸಿ ಎಂದು ಹೇಳಿದನು.

ಐದೂ ಸಹೋದರರು ತಕ್ಷಣ ತಮ್ಮ ಕೈಯಲ್ಲಿದ್ದ ಕಟ್ಟಿಗೆಯನ್ನು ಯಾವುದೇ ಶ್ರಮವಿಲ್ಲದೇ ಮುರಿದರು ಹಾಗೂ ಇದು ಸುಲಭವಿತ್ತು ಎಂದು ಹೇಳಿದರು. ಈಗ ಗೋಪಾಲನು ಐದು ಕಟ್ಟಿಗೆಯನ್ನು ಒಟ್ಟಿಗೆ ಕಟ್ಟಿ ಅದನ್ನು ಪ್ರತಿಯೊಬ್ಬರಿಗೂ ಮುರಿಯಲು ಕೊಟ್ಟನು.

ಆದರೆ ಎಷ್ಟೇ ಶ್ರಮಪಟ್ಟರೂ ಮಕ್ಕಳಿಗೆ ಆ ಕಟ್ಟನ್ನು ಮುರಿಯಲು ಸಾಧ್ಯವಾಗಲಿಲ್ಲ. ಇದನ್ನು ನೋಡಿ ಗೋಪಾಲನು “ನೋಡಿದಿರಲ್ಲವೇ, ಒಗ್ಗಟ್ಟಿನಲ್ಲಿ ಎಷ್ಟು ಬಲವಿರುತ್ತದೆ ಎಂದು ?. ನಾನು ಒಂದು ಕಟ್ಟಿಗೆಯನ್ನು ಕೊಟ್ಟಾಗ ಪ್ರತಿಯೊಬ್ಬರೂ ಸುಲಭವಾಗಿ ಅದನ್ನು ಮುರಿದು ಹಾಕಿದಿರಿ. ಆದರೆ ಕಟ್ಟಿಗೆಗಳನ್ನು ಒಟ್ಟಿಗೆ ಕಟ್ಟಿದಾಗ ನಿಮ್ಮಿಂದ ಆ ಕಟ್ಟು ಮುರಿಯಲು ಸಾಧ್ಯವಾಗಲಿಲ್ಲ.

ಆದುದರಿಂದ ನೀವು ಹೀಗೆಯೇ ಪರಸ್ಪರ ಜಗಳ ಆಡುತ್ತಿದ್ದರೆ ಹೊರಗಿನಿಂದ ಯಾರಾದರೂ ಬಂದು ನಿಮಗೆ ಹಾನಿ ಮಾಡಬಹುದು. ಆದರೆ ನೀವು ಈ ಕಟ್ಟಿಗೆಗಳಂತೆ ಒಟ್ಟಿಗೆ ಇದ್ದರೆ ಯಾರೂ ನಿಮಗೆ ಹಾನಿ ಮಾಡಲಾರರು”.

ತಂದೆಯ ಮಾತುಗಳು ಮಕ್ಕಳಿಗೆ ಅರ್ಥವಾದವು ಹಾಗೂ ಎಲ್ಲರೂ ಪರಸ್ಪರ ಜಗಳವಾಡಬಾರದು ಎಂದು ನಿಶ್ಚಯಿಸಿ ಪ್ರೀತಿಯಿಂದ ಇರತೊಡಗಿದರು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button