ಪ್ರಮುಖ ಸುದ್ದಿ

ವೈದ್ಯರ ಮೇಲೆ ಹಲ್ಲೆ ಖಂಡಿಸಿ ಐಎಂಎ ಪ್ರತಿಭಟನೆ

ಕೋವಿಡ್ ಸೋಂಕಿನ ವಿರುದ್ದ ಐಎಂಎ ಮುಂಚೂಣಿಯಲ್ಲಿದೆ : ಡಾ. ವೀರೇಶ್ ಜಾಕಾ

ಯಾದಗಿರಿಃ ಕೋವಿಡ್ ಸಂಕಟದ ಸಂದರ್ಭದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಅಲ್ಲಲ್ಲಿ ಹಲ್ಲೆ ನಡೆಯುತ್ತಿರುವುದನ್ನು ಖಂಡಿಸಿ ಯಾದಗಿರಿಯ ಭಾರತೀಯ ವೈದ್ಯಕೀಯ ಸಂಘ ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಈ ವೇಳೆ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ವೀರೇಶ್ ಜಾಕಾ ಮಾತನಾಡಿ, ಐಎಂಎ ಭಾರತದಲ್ಲಿ ಆಧುನಿಕ ವೈದ್ಯಕೀಯ ವೃತ್ತಿಪರರ ಸಂಘವಾಗಿದೆ. ಸಾರ್ವಜನಿಕ ಆರೋಗ್ಯ, ವೈದ್ಯಕೀಯ ಕ್ಷೇತ್ರದ ಸುಧಾರಣೆ, ವೈದ್ಯಕೀಯ ವೃತ್ತಿ ಗೌರವ ಮತ್ತು ಘನತೆ ನಿರ್ವಹಣೆಗಾಗಿ ತನ್ನ ಉದ್ದೇಶಗಳನ್ನು ಪೂರೈಸಲು ನಿರಂತವಾಗಿ ಶ್ರಮಿಸುತ್ತಿದೆ.

ಕೊರೋನಾ ವೈರಸ್ ವಿರುದ್ಧದ ಯುದ್ಧದಲ್ಲಿ ಐಎಂಎ ಮುಂಚೂಣಿಯಲ್ಲಿ ಹೋರಾಡುತ್ತಿದೆ. ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ವೈದ್ಯರ ಮೇಲೆಯೇ ನಿರಂತರವಾಗಿ ಹಲ್ಲೆಗಳು ನಡೆಯುತ್ತಿರುವುದು ಖಂಡನೀಯವಾಗಿದೆ ಎಂದರು.

ಕೋವಿಡ್ 19 ಸೋಂಕಿನ ಹಿಡಿತದಿಂದ ಲಕ್ಷಾಂತರ ಜನರನ್ನು ರಕ್ಷಿಸುವಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಪಾತ್ರ ಹಿರಿದಾಗಿದೆ. ಈ ದೇಶದಲ್ಲಿ ಸೋಂಕಿನ ದಾಳಿಗೆ 1400 ಕ್ಕೂ ಹೆಚ್ಚು ವೈದ್ಯರು ಹುತಾತ್ಮರಾಗಿದ್ದಾರೆ. ಇದಾವುದನ್ನು ಲೆಕ್ಕಿಸದೇ ಜನರ ಪ್ರಾಣ ರಕ್ಷಣೆಯೇ ತಮ್ಮ ಮೊದಲ ಆದ್ಯತೆಯನ್ನಾಗಿ ಮಾಡಿಕೊಂಡು ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ವೈದ್ಯ ಸಮೂಹಕ್ಕೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ಐಎಂಎ ಅಧ್ಯಕ್ಷ ಸಿಎಂ ಪಾಟೀಲ್ ಮಾತನಾಡಿ, ಇಂದು ಐಎಂಎ ಆಧುನಿಕ ಆರೋಗ್ಯ ರಕ್ಷಣಾ ವೃತ್ತಿಗೆ ಸೂಕ್ತವಾದ ವಾತಾವರಣವನ್ನು ಒದಗಿಸಲು, ಅನುಕೂಲಕರ ಕ್ರಮವನ್ನು ಪಡೆಯಲು ಐಎಂಎ ರಾಷ್ಟ್ರೀಯ ಪ್ರತಿಭಟನಾ ದಿನವಾಗಿ ಆಚರಿಸುತ್ತಿದ್ದೇವೆ. ಇದು ಹೆಚ್ಚು ಸಹಾನುಭೂತಿ ಮತ್ತು ಸಮರ್ಪಣೆಯೊಂದಿಗೆ ಮತ್ತು ಮಾನಸಿಕ ಮತ್ತು ದೈಹಿಕ ಕಿರುಕುಳದ ಯಾವುದೇ ಭಯವಿಲ್ಲದೆ ಕೆಲಸ ಮಾಡುವ ವಿಶ್ವಾಸವನ್ನು ನಮ್ಮಲ್ಲಿ ತುಂಬಬೇಕು ಎಂದು ಪ್ರಧಾನಿಗಳಲ್ಲಿ ದೇಶದಾದ್ಯಂತ ಮನವಿ ಮಾಡಲಾಗುತ್ತಿದೆ ಎಂದರು.

ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂಧಿ ಮೇಲೆ ವಿನಾಕಾರಣ ಹಲ್ಲೆ ಮಾಡುವವರಿಗೆ ಕಾನೂನು ಪ್ರಕಾರ ಘೋರ ಶಿಕ್ಷೆ ವಿಧಿಸಬೇಕು. ಕೋವಿಡ್19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಮಡಿದ ವೈದ್ಯರನ್ನು ಕೋವಿಡ್ ಹುತಾತ್ಮರೆಂದು ಪರಿಗಣಿಸುವ ಮೂಲಕ ಅವರ ಕುಟುಂಬಕ್ಕೆ ಮತ್ತಷ್ಟು ಸಹಾನುಭೂತಿ ಬೆಂಬಲ ನೀಡಬೇಕು.

ಸಾಂಕ್ರಾಮಿಕ ರೋಗದಿಂದ ಹೊರಬರಲು ಲಸಿಕೆ ಒಂದೇ ಏಕೈಕ ಆಯುಧವಾಗಿದ್ದು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆಯನ್ನು ನೀಡುವ ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ತೇಜನವನ್ನು ನೀಡಬೇಕು. ಕೋವಿಡ್ ನಂತರದ ತೊಂದರೆಗಳು ಇತ್ತೀಚಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಆ ತೊಂದರೆಗಳು ನೀಗಲು ಬಹುಮುಖಿ ಚಿಕಿತ್ಸಾ ಮಾರ್ಗಸೂಚಿಗಳನ್ನು ಹೊರತರಲು ಪ್ರತ್ಯೇಕ ಸಂಶೋಧನಾ ಕೋಶ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹಿರಿಯ ವೈದ್ಯ ಡಾ.ವೀರಬಸವಂತರೆಡ್ಡಿ ಮುದ್ನಾಳ್, ಡಾ.ಸುಭಾಷ್ ಕರಣಿಗಿ, ಡಾ.ಸುರೇಶ್‍ರೆಡ್ಡಿ, ಡಾ.ವಿಜಯಕುಮಾರ್, ಡಾ.ಪ್ರಶಾಂತ್ ಬಾಸುತ್ಕರ್, ಡಾ.ಅಪೂರ್ವ, ಡಾ. ಸುನೀಲ್, ಡಾ.ಜಿ.ಡಿ.ಹುನಗುಂಟಿ, ಡಾ.ರಾಹುಲ್ ನಾಯ್ಕೋಡಿ, ಡಾ.ಪ್ರದೀಪ್, ಡಾ.ಪೂಜಾರಿ ಮತ್ತಿತರರಿದ್ದರು.
—-

Related Articles

Leave a Reply

Your email address will not be published. Required fields are marked *

Back to top button