ವಾಹನ ಸವಾರರೇ ಗಮನಿಸ – ಜೂನ್ 1ರಿಂದ ಚಾಲನಾ ಪರವಾನಿಗೆ ನಿಯಮ ಬದಲಾವಣೆ
ನವದೆಹಲಿ : ವಾಹನ ಸವಾರರೇ ಗಮನಿಸಿ ಇನ್ಮುಂದೆ ಚಾಲನಾ ಪರವಾನಿಗೆ ಪಡೆಯಲು ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಹೋಗಿ ಪರೀಕ್ಷೆಗೆ ಹಾಜರಾಗುವ ಅಗತ್ಯವಿಲ್ಲ. ಬದಲಿಗೆ ಖಾಸಗಿ ಸಂಸ್ಥೆಗಳಿಗೆ ಡ್ರೈವಿಂಗ್ ಪರೀಕ್ಷೆಗಳನ್ನು ನಡೆಸಲು ಮತ್ತು ಪ್ರಮಾಣಪತ್ರಗಳನ್ನು ನೀಡಲು ಅಧಿಕಾರ ನೀಡಲಾಗಿದೆ. ಈ ಹೊಸ ನಿಯಮವು ಜೂನ್ 1ರಿಂದ ಜಾರಿಗೆ ಬರಲಿದೆ. ಖಾಸಗಿ ಚಾಲನಾ ತರಬೇತಿ ಕೇಂದ್ರಗಳಿಗೆ ಸರ್ಕಾರ ಹೊಸ ನಿಯಮಗಳನ್ನು ತಂದಿದೆ. ಇದರ ಪ್ರಕಾರ ಖಾಸಗಿ ಚಾಲನಾ ತರಬೇತಿ ಕೇಂದ್ರ ನಡೆಸಲು ಕನಿಷ್ಠ 1 ಎಕರೆ ಜಮೀನು ಇರಬೇಕು. 4 ಚಕ್ರದ ಮೋಟರ್ ವಾಹನಗಳಿಗೆ ಡ್ರೈವಿಂಗ್ ಸೆಂಟರ್‌ನಲ್ಲಿ ಹೆಚ್ಚುವರಿ 2 ಎಕರೆ ಜಮೀನು ಬೇಕಾಗುತ್ತದೆ. ಖಾಸಗಿ ಚಾಲನಾ ತರಬೇತಿ ಕೇಂದ್ರ ಸೂಕ್ತವಾದ ಪರೀಕ್ಷಾ ಸೌಲಭ್ಯಗಳನ್ನು ಹೊಂದಿರಬೇಕಾಗುತ್ತದೆ. ತರಬೇತುದಾರರು ಕನಿಷ್ಠ ಪ್ರೌಢಶಾಲಾ ಶಿಕ್ಷಣ ಪಡೆದಿರಬೇಕು. ಇದಲ್ಲದೆ ಕನಿಷ್ಠ 5 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು. ಬಯೋಮೆಟ್ರಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳ ಮೂಲಭೂತ ಅಂಶಗಳನ್ನು ತರಬೇತುದಾರರು ತಿಳಿದಿರಬೇಕಾಗುತ್ತದೆ. ಲಘು ವಾಹನ ತರಬೇತಿಯನ್ನು 4 ವಾರಗಳಲ್ಲಿ ಎಂದರೆ ಕನಿಷ್ಠ 29 ಗಂಟೆಗಳಲ್ಲಿ ಪೂರ್ಣಗೊಳಿಸಬೇಕು. ತರಬೇತಿಯನ್ನು ಥಿಯರಿ ಹಾಗೂ ಪ್ರಾಯೋಗಿಕ ಎಂಬ ಕನಿಷ್ಠ ಎರಡು ವಿಭಾಗಗಳಾಗಿ ವಿಂಗಡಿಸಬೇಕು. ಇದರಲ್ಲಿ, ಥಿಯರಿ ವಿಭಾಗ 8 ಗಂಟೆಗಳಿದ್ದರೆ ಪ್ರಾಯೋಗಿಕ 21 ಗಂಟೆಗಳಿರಬೇಕು. ಭಾರೀ ಮೋಟಾರು ವಾಹನಗಳಿಗೆ 38 ಗಂಟೆಗಳ ತರಬೇತಿ ಇರುತ್ತದೆ. ಇದರಲ್ಲಿ 8 ಗಂಟೆ ಥಿಯರಿ ಮತ್ತು 31 ಗಂಟೆಗಳ ಪ್ರಾಯೋಗಿಕ ತಯಾರಿ ಇರುತ್ತದೆ. ಈ ತರಬೇತಿಯನ್ನು 6 ವಾರಗಳಲ್ಲಿ ಪೂರ್ಣಗೊಳಿಸಲಾಗುತ್ತದೆ. ಖಾಸಗಿ ಚಾಲನಾ ತರಬೇತಿ ಕೇಂದ್ರಗಳು ಲಘು ಮತ್ತು ಭಾರೀ ವಾಹನಗಳ ಚಾಲಕರಿಗೆ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ಈ ನಿಯಮಗಳ ಉದ್ದೇಶವಾಗಿದೆ. ವಿವಿಧ ರೀತಿಯ ಡ್ರೈವಿಂಗ್ ಲೈಸೆನ್ಸ್‌ಗಳಿಗೆ ವಿವಿಧ ಶುಲ್ಕಗಳನ್ನು ವಿಧಿಸಲಾಗಿದೆ. ಕಲಿಕಾ ಪರವಾನಗಿ 200 ರೂ., ಕಲಿಕಾ ಪರವಾನಗಿ ನವೀಕರಣಕ್ಕೆ 200 ರೂ., ಅಂತಾರಾಷ್ಟ್ರೀಯ ಪರವಾನಗಿ 1000 ರೂ. ಹಾಗೂ ಶಾಶ್ವತ ಪರವಾನಗಿ 200 ರೂ. ಇದೆ.