ಕಥೆ

ಈ ಕಥೆ ಓದಿ ನೀವೂ..ತಿಮಿಂಗಲವೋ? ಮತ್ಸ್ಯಕನ್ಯಾವೋ.?

ಹೊಸ ವರ್ಷದಂದು ಜಿಮ್ ಮುಂದೆ ಬರೆದಿಟ್ಟ ಬೋರ್ಡ್

ಅದೊಂದು ಸುಸಜ್ಜಿತ ಜಿಮ್. ಅದರ ಎದುರು ಒಂದು ತೆಳ್ಳನೆಯ, ಬೆಳ್ಳನೆಯ ಹುಡುಗಿಯ ಕಟೌಟ್ ಇಟ್ಟಿದ್ದರು. ಪಕ್ಕದ ಬೋರ್ಡ್‌ನಲ್ಲಿ ಹೀಗೆ ಬರೆಯಲಾಗಿತ್ತು -‘ಈ ಹೊಸವರ್ಷದಂದು ನೀವು ತಿಮಿಂಗಿಲದಂತೆ ಕಾಣಲು ಬಯಸುತ್ತೀರೋ ಅಥವಾ ಮತ್ಸ್ಯಕನ್ಯೆಯಂತೆಯೋ?’ ಮತ್ಸ್ಯಕನ್ಯೆಯಂತಾಗಲು ಬಯಸಿದ ಅವೆಷ್ಟೋ ಮಹಿಳೆಯರು ಅದನ್ನೋದಿ ಹುರುಪಿನಿಂದ ಜಿಮ್ ಸೇರಿದರು.

ಜಿಮ್‌ನ ವ್ಯವಹಾರ ಬಹಳ ಚೆನ್ನಾಗಿ ನಡೆಯುತ್ತಿತ್ತು. ಆದರೆ ಒಂದು ದಿನ ಬೋರ್ಡ್ ನಲ್ಲಿ ಬರೆದಿದ್ದನ್ನು ಓದಿದ ಒಬ್ಬ ಮಹಿಳೆಗೆ ಬಹಳ ಕೋಪ ಬಂತು.(ಆಕೆ ದಪ್ಪಗಿದ್ದಿರಬಹುದು) ಆಕೆ ಬೋರ್ಡ್‌ನ ಪಕ್ಕದಲ್ಲಿ ತಾನೂ ಒಂದು ಪೋಸ್ಟರ್ ಅಂಟಿಸಿದಳು. ಅದರಲ್ಲಿ ಹೀಗೆ ಬರೆದಿತ್ತು.

‘ತಿಮಿಂಗಿಲಗಳು ಯಾವಾಗಲೂ ಗೆಳೆಯರಿಂದ ಸುತ್ತುವರಿದುಕೊಂಡಿರುತ್ತವೆ (ಡಾಲ್ಫಿನ್, ಸೀಲ್ಸ್) ಹಾಗೂ ಅವು ನೋಡಲು ದಪ್ಪಗಿದ್ದರೂ ಆಕರ್ಷಕವಾಗಿರುತ್ತವೆ. ತಮ್ಮ ಮರಿಗಳನ್ನು ಬಹಳ ಪ್ರೀತಿಯಿಂದ ಬೆಳೆಸುತ್ತವೆ. ಲೈಂಗಿಕವಾಗಿಯೂ ಅವುಗಳು ಬಹಳ ಚುರುಕು. ತಿಮಿಂಗಿಲಗಳು ವೇಗ ವಾಗಿ ಈಜಬಲ್ಲವು. ಅವುಗಳನ್ನು ಕಂಡರೆ ಎಲ್ಲರಿಗೂ ಏನೋ ಪ್ರೀತಿ, ಆಕರ್ಷಣೆ. ಮತ್ಸ್ಯಕನ್ಯೆಯೆಂಬುದು ಕಲ್ಪನೆಯೇ ಹೊರತು, ವಾಸ್ತವದಲ್ಲಿ ಅಂಥವರು ಇಲ್ಲವೇ ಇಲ್ಲ!

ಒಂದು ವೇಳೆ ಮತ್ಸ್ಯಕನ್ಯೆಯರಿದ್ದರೂ ಅವರು ಮನಃಶಾಸ್ತ್ರಜ್ಞರನ್ನು ಕಾಣಲು ಕ್ಯೂನಲ್ಲಿ ನಿಂತಿರುತ್ತಿದ್ದರೇನೋ. ಯಾಕೆಂದರೆ ತಾವು ಕನ್ಯೆಯೋ, ಮೀನೋ ಎಂಬ ದ್ವಂದ್ವ (split personality)ಅವರನ್ನು ಕಾಡದೇ ಬಿಟ್ಟೀತೆ? ಹೌದು, ಮತ್ಸ್ಯಕನ್ಯೆ ನೋಡಲು ಸುಂದರಿಯಾಗಿದ್ದರೂ, ಯಾವಾಗಲೂ ಒಂಟಿಯಾಗಿರಬೇಕು. ಆಕೆಯನ್ನು ಯಾರೂ ಮದುವೆಯಾಗಲು ಬಯಸುವುದಿಲ್ಲ.

ಯಾಕೆ ಹೇಳಿ? ಮೀನಿನ ವಾಸನೆಯ ಹುಡುಗಿಯನ್ನು ಯಾವ ಹುಡುಗ ತಾನೇ ಸಹಿಸಿಕೊಳ್ಳುತ್ತಾನೆ? ಹೀಗಿರುವಾಗ ನಾನು ದಪ್ಪ ತಿಮಿಂಗಿಲವಾಗಿಯೇ ಇರಲು ಬಯಸುತ್ತೇನೆ ಎಂಬುದರಲ್ಲಿ ಯಾವ ಸಂಶಯವೂ ಬೇಡ. ಕೊನೆಯಲ್ಲಿ ಎಲ್ಲ ಮಹಿಳೆಯರಿಗೆ ನನ್ನದೊಂದು ಮಾತು.

ತೆಳ್ಳಗೆ, ಬೆಳ್ಳಗೆ ಇರುವವರು ಮಾತ್ರ ಸುಂದರಿಯರು ಎಂದು ಯಾರಾದರೂ ಹೇಳಿದರೆ, ನಾನವತ್ತು ಒಂದು ಐಸ್‌ಕ್ರೀಂ ಜಾಸ್ತಿ ತಿನ್ನುತ್ತೇನೆ. ನನ್ನ ಗಂಡ-ಮಕ್ಕಳ ಜತೆ ಹೋಟೆಲ್‌ಗೆ ಹೋಗುತ್ತೇನೆ.

ಸೌಂದರ್ಯವೆಂಬುದು ಮನಸ್ಸಿಗೆ ಸಂಬಂಧಿಸಿದ್ದೇ ಹೊರತು ದೇಹ ಅಥವಾ ತೂಕಕ್ಕೆ ಸಂಬಂಧಿಸಿದ್ದಲ್ಲ. ನಾವು ಮಹಿಳೆಯರು ದಿನೇ ದಿನೆ ತೂಕ ಹೆಚ್ಚಿಸಿಕೊಳ್ಳುತ್ತೇವೆ. ಯಾಕೆ ಹೇಳಿ? ನಾವು ಎಷ್ಟೊಂದು ಜ್ಞಾನ, ವಿದ್ಯೆಯನ್ನು ಕಲಿಯುತ್ತೇವೆಂದರೆ ಎಲ್ಲವನ್ನೂ ತುಂಬಿಸಿಕೊಳ್ಳಲು ತಲೆಯಲ್ಲಿ ಜಾಗವೇ ಉಳಿಯುವುದಿಲ್ಲ.

ಹಾಗಾಗಿ ಜ್ಞಾನ ನಮ್ಮ ದೇಹಾದ್ಯಂತ ವ್ಯಾಪಿಸುತ್ತದೆ. ನಮ್ಮ ದೇಹದಲ್ಲಿರುವುದು ಕೇವಲ ಕೊಬ್ಬಲ್ಲ, ಜ್ಞಾನ ಸಂಪತ್ತು’. ಆಕೆಯ ಉತ್ತರವನ್ನು ಓದಿದ ಮೇಲೆ ಯಾವ ಮಹಿಳೆಯೂ ಜಿಮ್‌ನತ್ತ ತಲೆ ಹಾಕಿಲ್ಲವೆನಿಸುತ್ತದೆ.

ಇದನ್ನೇ ಅಲ್ಲವೆ ಆತ್ಮವಿಶ್ವಾಸ ಎನ್ನುವುದು. ಸೌಂದರ್ಯವೆಂಬುದು ಅಂತರಂಗಕ್ಕೆ ಸಂಬಂಧಿಸಿದ್ದು. ಮನಸ್ಸನ್ನು ಸುಂದರವಾಗಿಸುವ ಜಿಮ್ ಗಳನ್ನು ಹುಡುಕಬೇಕಿದೆಯಲ್ಲವೆ?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button