ರೈತರಲ್ಲಿ ಆತಂಕ ಬೇಡ ಸಿಎಂಗೆ ಮಾಹಿತಿ – ಗುರು ಪಾಟೀಲ್

ಬೆಳೆ ಹಾನಿ ಆತಂಕ ಬೇಡ ಸಚಿವರಿಂದ ಭರವಸೆ – ಶಿರವಾಳ
yadgiri, ಶಹಾಪುರ– ಕಳೆದ ವಾರದಿಂದ ಸುರಿದ ಜಿಟಿ ಜಿಟಿ ಮಳೆಗೆ ಹತ್ತಿ, ತೊಗರಿ, ಭತ್ತ ಸೇರಿದಂತೆ ಸೇಂಗಾ, ಮೆಣಸಿನಕಾಯಿ ಬೆಳೆಗಳು ಹಾಳಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಈ ಕುರಿತು ಸಮರ್ಪಕ ಮಾಹಿತಿಯನ್ನು ಸಿಎಂ ಸೇರಿದಂತೆ ಕಂದಾಯ ಸಚಿವ ಆರ್.ಅಶೋಕ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್‍ರಿಗೆ ಮಾಹಿತಿ ನೀಡಿದ್ದು, ಸೂಕ್ತ ಸ್ಪಂಧನೆ ನೀಡಿದ್ದಾರೆ. ಯಾರೊಬ್ಬ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ತಿಳಿಸಿದ್ದಾರೆ.
ತಾಲೂಕಿನ ಹಯ್ಯಾಳ(ಬಿ), ಶಿರವಾಳ, ಹತ್ತಿಗೂಡೂರ, ದೋರನಹಳ್ಳಿ ಭಾಗದಲ್ಲಿ ಸಾಕಷ್ಟು ಬೆಳೆ ಹಾನಿಯಾಗಿದ್ದು, ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಂದ ಸಮರ್ಪಕ ಸರ್ವೇಕಾರ್ಯ ನಡೆದಿದ್ದು, ಕೂಡಲೇ ಬೆಳೆ ಹಾನಿ ವರದಿ ಸರ್ಕಾರಕ್ಕೆ ಸಲ್ಲಿಸುವಂತೆ ಕೃಷಿ ಸಚಿವರು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವರದಿ ಸರ್ಕಾರಕ್ಕೆ ತಲುಪಿದ ತಕ್ಷಣ ಹಾನಿ ಕುರಿತು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವ ಕಾರ್ಯ ಮಾಡಲಾಗುವದು ಎಂದು ಸಚಿವರು ಭರವಸೆ ನೀಡಿದ್ದಾರೆ. ಯಾರೊಬ್ಬರು ಆತಂಕ ಪಡಬೇಡಿ. ಬೆಳೆ ಹಾಳಾಯಿತೆಂದು ಸಾಲ ಹೇಗೆ ಮುಟ್ಟಿಸಬೇಕೆಂದು ಹತಾಶರಾಗಿ ಹೇಡಿ ಕೆಲಸ ಮಾಡಬೇಡಿ. ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂಧಿಸಲಿದೆ ಎಂದು ಅವರು ತಿಳಿಸಿದ್ದಾರೆ.