ಅಮಿತ್ ಶಾ ತಂತ್ರ ವಿಫಲ; ಗೆದ್ದರು ಅಹ್ಮದ ಪಟೇಲ್
ಸ್ವರಾಜ್ಯದಲ್ಲೇ ಮೋದಿ-ಅಮಿತ್ ಶಾ ಜೋಡಿಗೆ ಮುಖಭಂಗ! ಫಲ ನೀಡಲಿಲ್ಲ ವಘೇಲಾ ದೋಸ್ತಿ!
ಭಾರೀ ಕುತೂಹಲ ಕೆರಳಿಸಿದ್ದ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆಲುವು ಸಾಧಿಸಿದ್ದಾರೆ. ಎಐಸಿಸಿ ಅದ್ಷಕ್ಷೆ ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲರನ್ನು ಸೋಲಿಸಲು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಭಾರೀ ತಂತ್ರಗಾರಿಕೆ ನಡೆಸಿದ್ದರು. ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ವಘೇಲಾ ಅವರೂ ಪಕ್ಷ ತೊರೆದು ಕಮಲದ ಕೈ ಹಿಡಿದಿದ್ದರು. ಅಂತೆಯೇ ಕಾಂಗ್ರೆಸ್ ಹೈಕಮಾಂಡ್ ಸಹ ಅಹ್ಮದ್ ಪಟೇಲರನ್ನು ಗೆಲ್ಲಿಸಿಕೊಳ್ಳಲು ರೆಸಾರ್ಟ್ ರಾಜಕೀಯ ನಡೆಸಿತ್ತು.
ಆದರೆ, 3 ಸ್ಥಾನಗಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಸ್ಪರ್ದಿಸಿದ್ದ ಬಿಜೆಪಿ ಅದ್ಯಕ್ಷ ಅಮಿತ್ ಶಾ 46 ಶಾಸಕರ ಮತಗಳನ್ನು ಪಡೆದಿದ್ದರೆ, ಸಚಿವೆ ಸ್ಮೃತಿ ಇರಾನಿ 45 ಮತಗಳನ್ನು ಪಡೆದಿದ್ದಾರೆ. ಇನ್ನು ಕಾಂಗ್ರೆಸ್ಸಿನ ಅಹ್ಮದ್ ಪಟೇಲ್ 44 ಮತಗಳನ್ನು ಪಡೆದು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮೂರನೇ ಅಬ್ಯರ್ಥಿ ಬಲವಂತ್ಸಿಂಗ್ ರಜಪೂತ್ ಸೋಲನುಭವಿಸಿದ್ದಾರೆ.
ರಾಜ್ಯಸಭೆ ಚುನಾವಣೆ ಮತದಾನದ ವೇಳೆ ಭಾರೀ ನಾಟಕೀಯ ಬೆಳವಣಿಗೆಗಳು ನಡೆದಿವೆ. ಜನಪ್ರತಿನಿಧಿಗಳಾದ ಶಾಸಕರು, ಪಕ್ಷದ ಪ್ರಭಾವಿ ನಾಯಕರುಗಳೇ ಸಣ್ಣತನ ಪ್ರದರ್ಶಿಸುವ ಮೂಲಕ ಪ್ರಜಾಪ್ರಭುತ್ವವನ್ನೇ ಅಣಕಿಸಿದ್ದಾರೆ. ಕಾಂಗ್ರೆಸ್ಸಿನ ಇಬ್ಬರು ಶಾಸಕರು ಬಿಜೆಪಿಯ ಅಮಿತ್ ಶಾ ಅವರಿಗೆ ತೋರಿಸಿ ಮತದಾನ ಮಾಡಿದ್ದಾರೆಂಬುದು ಭಾರೀ ಕೋಲಾಹಲಕ್ಕೆ ಕಾರಣವಾಯಿತು.
ಭೋಲಾಭಾಯಿ ಮತ್ತು ರಾಘವ್ ಜಿ ಭಾಯ್ ಅವರ ಮತಗಳನ್ನು ರದ್ದು ಪಡಿಸುವಂತೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದರು. ಆ ಇಬ್ಬರು ಶಾಸಕರ ಮತಗಳನ್ನು ಪರಿಗಣಿಸುವಂತೆ ಬಿಜೆಪಿ ನಾಯಕರೂ ಮೂರು ಮೂರು ಸಲ ಚುನಾವಣಾ ಆಯೋಗವನ್ನು ಭೇಟಿ ಮಾಡಿದರು. ಕಾಂಗ್ರೆಸ್ ನವರು ಸಹ ಮತರದ್ದಿಗೆ ಪಟ್ಟು ಹಿಡಿದು ಮೂರು ಬಾರಿ ಚುನಾವಣಾ ಆಯೋಗ ಭೇಟಿಮಾಡಿ ಮನವಿ ಸಲ್ಲಿಸಿದ್ದರು.
ಮತ್ತೊಂದು ಕಡೆ ಜೆಡಿಯು, ಎನ್ ಸಿ ಪಿ ಯ ತಲಾ ಒಬ್ಬರು ಶಾಸಕರ ಮತಚಲಾವಣೆ ಪಕ್ಷದ ನಿರ್ದೇಶನಕ್ಕೆ ತದ್ವಿರುದ್ಧವಾಗಿದ್ದುದೂ ಚರ್ಚೆಗೆ ಗ್ರಾಸವಾಯಿತು.
ಪರಿಣಾಮ ಚುನಾವಣೆ ಮತದಾನ ಮುಗಿದು 5ತಾಸು ಕಳೆದರು ಫಲಿತಂಶ ಹೊರಬರಲಿಲ್ಲ. ಬದಲಾಗಿ ಚುನಾವಣ ಆಯೋಗದ ಅಧಿಕಾರಿಗಳು ಸಭೆಗಳ ಮೇಲೆ ಸಭೆ ಮಾಡಿ ಎರಡೂ ಪಕ್ಷಗಳ ಮನವಿಗಳನ್ನು ಪರಿಶೀಲಿಸಿದರು.
ಕೊನೆಗೆ ರಾತ್ರಿ 11:30 ಸುಮಾರಿಗೆ ಕಾಂಗ್ರೆಸ್ ನ ಇಬ್ಬರು ಶಾಸಕರು ಮತದಾನ ಮಾಡುವಾಗ ಮತ ಕೇಂದ್ರದಲ್ಲಿ ಬ್ಯಾಲೆಟ್ ಪೇಪರ್ ನ್ನು ಅಲ್ಲಿನ ಬಿಜೆಪಿ ಏಜೆಂಟರಿಗೆ ತೋರಿಸಿ ಮತದಾನ ಮಾಡಿದರು ಎಂಬ ಕಾಂಗ್ರೆಸ್ ದೂರಿನನ್ವಯ ಚುನಾವಣೆ ಆಯೋಗ ಪರಿಶೀಲನೆ ನಡೆಸಿತು. ಇಬ್ಬರು ಕಾಂಗ್ರೆಸ್ ಶಾಸಕರ ಮತದಾನ ರದ್ದುಪಡಿಸಿತು. ಬಳಿಕ ತಡರಾತ್ರಿವರೆಗೆ ನಡೆದ ಹೈಡ್ರಾಮಕ್ಕೆ ತೆರೆ ಬಿದ್ದು ಕಾಂಗ್ರೆಸ್ಸಿನ ಅಹ್ಮದ್ ಪಟೇಲ್ ಗೆಲುವಿನ ಫಲಿತಾಂಶ ಹೊರಬಿದ್ದಿತು.