Homeಅಂಕಣಪ್ರಮುಖ ಸುದ್ದಿಮಹಿಳಾ ವಾಣಿ

ಮನೆಯಲ್ಲಿಯೇ ಬೆಳೆಸಿ ದೊಡ್ಡಪತ್ರೆ: ದೂರ ಮಾಡಿ ಹಲವು ಆರೋಗ್ಯ ತಾಪತ್ರೆ

ನಮ್ಮ ಮನೆಯ ಹಿತ್ತಲಲ್ಲೇ ಸಿಗುವ ಗಿಡಗಳು ಅನೇಕ ಖಾಯಿಲೆಗಳನ್ನು ಶಮನ ಮಾಡುವ ಶಕ್ತಿ ಹೊಂದಿರುತ್ತವೆ. ಹಿಂದಿನ ಕಾಲದ ಜನರು ಆಯುರ್ವೇದ ಔಷಧಗಳನ್ನು ಇಂತಹ ಗಿಡ ಗಂಟಿ, ಬೇರುಗಳಿಂದಲೇ ತಯಾರಿಸುತ್ತಿದ್ದರು. ಅಂತಹ ಒಂದು ಗಿಡಗಳಲ್ಲಿ ದೊಡ್ಡಪತ್ರೆಯೂ ಒಂದು.

ಮನೆಯ ಹಿತ್ತಲಿನಲ್ಲಿರುವ ಅದೆಷ್ಟೋ ಸಸ್ಯಗಳು ಸಾಮಾನ್ಯ ಕಾಯಿಲೆಗಳಿಗೆ ಪರಿಣಾಮಕಾರಿ ಪರಿಹಾರವನ್ನು ನೀಡುತ್ತದೆ. ಹೂವಿನ ಗಿಡಗಳ ನಡುವೆಯೇ ಬೆಳೆದು ಆರೋಗ್ಯ ವೃದ್ಧಿಸುವ ಕೆಲಸ ಮಾಡುವ ಪುಟ್ಟ ಪುಟ್ಟ ಗಿಡಗಳ ಆರೋಗ್ಯ ಗುಣ ಮಾತ್ರ ಬಹು ದೊಡ್ಡದು. ಅದರಲ್ಲಿ ದೊಡ್ಡ ಪತ್ರೆ ಗಿಡ ಕೂಡ ಒಂದು. ಸಾಮಾನ್ಯವಾಗಿ ಎಲ್ಲರ ಮನೆಯ ಹಿತ್ತಲಿನಲ್ಲಿ ಈ ದೊಡ್ಡ ಪತ್ರೆ ಗಿಡ ಕಂಡು ಬರುತ್ತದೆ. ಇದನ್ನು ಪುಟ್ಟ ಪಾಟ್‌ನಲ್ಲಿಯೂ ಇಟ್ಟು ಬೆಳೆಸಬಹುದಾಗಿದೆ. ಇದನ್ನು ಸಾಂಬಾರ ಸೊಪ್ಪು ಅಥವಾ ಅಜವನ ಗಿಡ ಎಂದೂ ಕರೆಯುತ್ತಾರೆ. ದೊಡ್ಡಪತ್ರೆಯು ಸುಮಾರು ಮೂವತ್ತರಿಂದ ತೊಂಬತ್ತು ಸೆ.ಮೀ ಎತ್ತರದವರೆಗೆ ಬೆಳೆಯಬಲ್ಲದು, ಇದರ ಎಲೆಗಳು ದೊಡ್ಡ ಮತ್ತು ದಪ್ಪವಾಗಿದ್ದು ಕಡು ಸುವಾಸನೆಯನ್ನು ಹೊಂದಿರುತ್ತವೆ, ದೊಡ್ಡಪತ್ರೆಯ ರಂಬೆಗಳು ಮತ್ತು ಹೂಗಳು ಚಿಕ್ಕದಾಗಿದೆ.

ಆಫ್ರಿಕಾ ದೇಶಗಳಲ್ಲಿ ಇದನ್ನು ಪುದೀನಾದ ಬದಲಿಗೆ ಖಾದ್ಯಗಳಲ್ಲಿ ಬಳಸುತ್ತಾರೆ. ದಕ್ಷಿಣಭಾರತದಲ್ಲಿ ಸಾಮಾನ್ಯವಾಗಿ ಇದನ್ನು ಜ್ವರ, ಶೀತ, ಕೆಮ್ಮುಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಗಾಯ ಅಥವಾ ಚೇಳು ಕಡಿತವಾದಾಗ ಪ್ರಥಮ ಚಿಕಿತ್ಸೆಯಾಗಿ ಇದರ ಎಲೆಗಳನ್ನು ಜಜ್ಜಿ ಬಳಸಲಾಗುತ್ತದೆ. ದಕ್ಷಿಣ ಕರ್ನಾಟಕದಲ್ಲಿ ದೊಡ್ಡಪತ್ರೆಯ ಚಟ್ನಿ, ತಂಬುಳಿ ಮಾಡಲಾಗುತ್ತದೆ. ಈಗ ಈ ದೊಡ್ಡ ಪತ್ರೆ ಸೊಪ್ಪು ಯಾವೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎನ್ನುವ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಆಹಾರ ಸೇವನೆಯಲ್ಲಿ ಬದಲಾವಣೆ, ಹವಾಮಾನದಲ್ಲಿನ ವ್ಯತ್ಯಾಸದಿಂದ ಶ್ವಾಸಕೋಶದಲ್ಲಿ ಕಫ ಕಟ್ಟಿಕೊಳ್ಳುತ್ತದೆ. ಇದರಿಂದ ಶೀತವಾದರೆ ಎಷ್ಟು ದಿನವಾದರೂ ಕಡಿಮೆಯಾಗುವುದಿಲ್ಲ. ಇದಕ್ಕೆ ದೊಡ್ಡ ಪತ್ರೆ ಸೊಪ್ಪು ಉತ್ತಮ ಮನೆಮದ್ದಾಗಿದೆ. ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯದೆಲೆಯನ್ನು ಅರೆದು ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ದೂರವಾಗುತ್ತದೆ. ಚಿಕ್ಕ ಮಕ್ಕಳಿಗೂ ಕೂಡ ಈ ದೊಡ್ಡ ಪತ್ರೆ ಸೊಪ್ಪನ್ನು ಔಷಧವಾಗಿ ಬಳಸಬಹುದಾಗಿದೆ.

ದೊಡ್ಡ ಪತ್ರೆ ಸೊಪ್ಪನ್ನು ಕೊಯ್ದು ತಂದು ಬೆಂಕಿಯಲ್ಲಿ ಸುಟ್ಟು ಅದರ ರಸವನ್ನು ತೆಗದು ಅದಕ್ಕೆ ಅರ್ಧ ಚಮಚ ಬೆಲ್ಲ ಸೇರಿಸಿ ಕುಡಿದರೆ ಒಂದೆ ದಿನದಲ್ಲಿ ಶೀತ, ಕಟ್ಟಿದ ಮೂಗಿನ ಸಮಸ್ಯೆ ನಿವಾರಣೆಯಾಗುತ್ತದೆ.

ದೊಡ್ಡ ಪತ್ರೆ ಸೊಪ್ಪನ್ನು ಬೆಂಕಿಯ ಮೇಲೆ ಇಟ್ಟು ಬಾಡಿಸಿ ನಂತರ ಅದನ್ನು ನೆತ್ತಿಗೆ ಹಾಕಿದರೆ ದೇಹದಲ್ಲಿನ ತಣ್ಣನೆಯ ಅಂಶ ನಿವಾರಣೆಯಾಗಿ ಜ್ವರ, ಶೀತ ಕಡಿಮೆಯಾಗುತ್ತದೆ. ಮಕ್ಕಳಿಗೆ ಇದು ಬೆಸ್ಟ್‌ ಔಷಧವಾಗಿದೆ. ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆ ಎಲೆ ಬಾಡಿಸಿ ನೆತ್ತಿಯ ಮೇಲೆ ಇಡುತ್ತಾರೆ. ಈ ಎಲೆಗಳ ಪೇಸ್ಟ್ ತಯಾರಿಸಿ ಅದನ್ನು ಚೇಳು ಕಚ್ಚಿದ ಗಾಯಕ್ಕೆ ಹಚ್ಚಿದರೆ ನೋವು ದೂರವಾಗುತ್ತದೆ. ಒಂದು ವಾರದವರೆಗೆ ದೊಡ್ಡ ಪತ್ರೆಯ ಎಲೆಗಳನ್ನು ತಿಂದರೆ ಅರಿಶಿಣ ಕಾಮಾಲೆ ವಾಸಿಯಾಗುತ್ತದೆ. ದೊಡ್ಡಪತ್ರೆಯನ್ನು ಜೀರಿಗೆ, ಎಳ್ಳಿನೊಂದಿಗೆ ಹುರಿದು ಕಾಯಿತುರಿ ಜೊತೆ ರುಬ್ಬಿ ಅದಕ್ಕೆ ಉಪ್ಪು, ಮಜ್ಜಿಗೆ ಹಾಕಿ ತಂಬುಳಿ ಮಾಡಿ ಕುಡಿದರೆ ಪಿತ್ತದ ಖಾಯಿಲೆಗಳು ಗುಣಮುಖವಾಗುವುದು.

ದೊಡ್ಡಪತ್ರೆ ಎಲೆಯನ್ನು ಉಪ್ಪಿನ ಸಹಿತ ತಿಂದರೆ ಜೀರ್ಣಶಕ್ತಿ ಅಧಿಕವಾಗುತ್ತದೆ. ದೊಡ್ಡ ಪತ್ರೆ ಎಲೆಯನ್ನು ಹುಳುಕಡ್ಡಿಯ ಭಾಗಕ್ಕೆ ತಿಕ್ಕುತ್ತಿದ್ದರೆ ಹುಳುಕಡ್ಡಿಯ ನಿವಾರಣೆಯಾಗುತ್ತದೆ. ದೊಡ್ಡ ಪತ್ರೆಯಲ್ಲಿ ವಿಟಮಿನ್‌ ಸಿ, ಫೈಬರ್‌ ಮತ್ತು ಕ್ಯಾಲ್ಸಿಯಂ ಗುಣ ಹೇರಳವಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ದೊಡ್ಡ ಪತ್ರೆ ಸೊಪ್ಪನ್ನು ಚಟ್ನಿ, ತಂಬುಳಿ ಅಥವಾ ಕರಕಲಿ ಮಾಡುವ ಮೂಲಕ ಸೇವಿಸಬಹುದಾಗಿದೆ. ಅಲ್ಲದೆ ದೋಸೆ ಮಾಡುವಾಗಲೂ ದೊಡ್ಡ ಪತ್ರೆ ಎಲೆಯನ್ನು ಬಳಸಬಹುದಾಗಿದೆ. ಇದು ಹೆಚ್ಚು ರುಚಿಯೊಂದಿಗೆ ಆರೋಗ್ಯವನ್ನೂ ವೃದ್ಧಿಸುತ್ತದೆ.

ದೊಡ್ಡ ಪತ್ರೆಯ ಗಿಡದ ಎಲೆಯನ್ನು ತಂದು ಬಾಡಿಸಿ ರಸ ತೆಗೆದು ಜೇನುತುಪ್ಪ ಸೇರಿಸಿ ಕುಡಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಅರಿಸಿನ ಕಾಮಾಲೆ ಇದ್ದವರಿಗೂ ದೊಡ್ಡ ಪತ್ರೆ ಸೊಪ್ಪು ಉತ್ತಮ ಮನೆ ಮದ್ದಾಗಿದೆ. ಈ ಎಲೆಯನ್ನು ಆಹಾರ ರೂಪದಲ್ಲಿ ಅಂದರೆ ಚಟ್ನಿ, ತಂಬುಳಿ ಮಾಡಿ ಸೇವಿಸಿದರೆ ಕೆಲವೇ ದಿನಗಳಲ್ಲಿ ಕಾಯಿಲೆ ಚೇತರಿಕೆಯನ್ನು ಕಾಣುತ್ತದೆ. ಕಂಬಳಿ ಹುಳ, ಇಸುಬು ಇಂತಹ ಕೀಟಗಳು ಕಚ್ಚಿದ್ದರೆ ಸಹಿಸಲಾರದ ಉರಿ ಚರ್ಮಕ್ಕಾಗುತ್ತದೆ. ಇದನ್ನು ತಡೆಯಲು ಈ ದೊಡ್ಡ ಪತ್ರೆ ಸೊಪ್ಪು ಸಹಾಯಕವಾಗಿದೆ. ದೊಡ್ಡ ಪತ್ರೆ ಎಲೆಯ ರಸಕ್ಕೆ ಬೆಲ್ಲ ಸೇರಿಸಿ ಕುಡಿದಾಗ ಬೆಲ್ಲ ಕೂಡ ದೇಹಕ್ಕೆ ಒಳ್ಳೆಯ ಪದಾರ್ಥವಾಗಿದೆ. ಇದು ದೇಹದಿಂದ ವಿಷಯುಕ್ತ ಪದಾರ್ಥವನ್ನು ಹೊರಹಾಕಲು ನೆರವಾಗುತ್ತದೆ. ಆದ್ದರಿಂದ ನಿಮ್ಮ ಮನೆಯ ಹಿತ್ತಲಿನಲ್ಲಿ ದೊಡ್ಡ ಪತ್ರೆ ಸೊಪ್ಪಿದ್ದರೆ ಜೋಪಾನ ಮಾಡಿ ಉಳಿಸಿಕೊಳ್ಳಿ.

Related Articles

Leave a Reply

Your email address will not be published. Required fields are marked *

Back to top button