ಮಾವಿನಹಣ್ಣು ತಿನ್ನೋದ್ರಿಂದ ಮಧುಮೇಹ, ತೂಕ ಹೆಚ್ಚಳವಾಗುತ್ತಾ, ದಿನಕ್ಕೆ ಎಷ್ಟು ಮಾವು ಸೇವನೆ ಸೂಕ್ತ? ಇಲ್ಲಿದೆ ಮಾಹಿತಿ
ಮಾವಿನಹಣ್ಣಿನ ರುಚಿಗೆ ಮನಸೋಲದವರಿಲ್ಲ. ಆದರೆ ನಿಮ್ಮ ಈ ಮಾವಿನ ಪ್ರೀತಿ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಿಸುವುದು ಹಾಗೂ ತೂಕ ಏರಿಕೆಗೆ ಕಾರಣವಾಗುವಷ್ಟರ ಮಟ್ಟಿಗೂ ಇರಬಾರದು. ನೀವು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮಾವಿನ ಹಣ್ಣನ್ನು ಸೇವಿಸುತ್ತಲೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯೇ ಸರಿ.
ದೇಹದಲ್ಲಿ ಗ್ಲುಕೋಸ್ ಮಟ್ಟದ ಏರಿಕೆಯನ್ನು ನಿಯಂತ್ರಿಸಬೇಕು ಎಂದರೆ ಮಾವಿನಹಣ್ಣುಗಳನ್ನು ಮಿತವಾಗಿ ಸೇವಿಸದೇ ಬೇರೆ ದಾರಿಯಿಲ್ಲ. ಮಾವಿನಹಣ್ಣುಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು, ಜೀವಸತ್ವಗಳು, ಖನಿಜಗಳು ಹಾಗೂ ನಾರಿನಾಂಶಗಳು ಅಗಾಧ ಪ್ರಮಾಣದಲ್ಲಿ ಇರುತ್ತದೆ. ಆದರೆ ಅತಿಯಾದ ಮಾವಿನಹಣ್ಣಿನ ಸೇವನೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿಸಬಹುದು. ನಿಮ್ಮ ತೂಕ ನಷ್ಟದ ಪ್ರಯಾಣಕ್ಕೂ ಹಾನಿ ಮಾಡಬಹುದು.
ಮಿತವಾಗಿ ಮಾವಿನಹಣ್ಣನ್ನು ಸೇವಿಸುವ ಅಭ್ಯಾಸವು ಖಂಡಿತವಾಗಿಯೂ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ಇದು ನಮ್ಮ ಮಾನಸಿಕ ಆರೋಗ್ಯ, ಹೃದಯದ ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲದೇ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಾರ್ಯವನ್ನೂ ಮಾಡುತ್ತದೆ. ಮಾವಿನ ಹಣ್ಣುಗಳಲ್ಲಿ ಇರುವ ವಿಟಮಿನ್ ಸಿ ಹಾಗೂ ಕ್ಯಾರೊಟಿನಾಯ್ಡ್‌ಗಳು ಸೂರ್ಯನ ವಿಕಿರಣಗಳಿಂದ ಚರ್ಮವು ಹಾನಿಗೊಳಗಾಗದಂತೆ ಕಾಪಾಡುತ್ತವೆ. ಮಾವಿನ ಹಣ್ಣುಗಳಲ್ಲಿ ಇರುವ ವಿಟಮಿನ್ ಎ ಅಂಶವು ಕಣ್ಣುಗಳ ಆರೋಗ್ಯವನ್ನು ಕಾಪಾಡುತ್ತದೆ. ಮಾವಿನಹಣ್ಣು ಪೊಟ್ಯಾಷಿಯಂನ ಉತ್ತಮ ಮೂಲ ಕೂಡ ಹೌದು. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಹಾಗೂ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಮಾವಿನ ಹಣ್ಣಿನಲ್ಲಿ ಇರುವ ಟ್ರಿಪ್ರೊಫಾನ್ ಎಂಬ ಅಮಿನೋ ಆಮ್ಲವು ನಮ್ಮ ಮಾನಸಿಕ ಆರೋಗ್ಯವನ್ನೂ ಸ್ಥಿಮಿತದಲ್ಲಿಡುವ ಕಾರ್ಯವನ್ನು ಮಾಡುತ್ತದೆ.
ದಿನಕ್ಕೆ ಎಷ್ಟು ಮಾವಿನ ಹಣ್ಣು ಸೇವಿಸಬಹುದು..?
ಆದರೆ ಮಾವಿನ ಹಣ್ಣುಗಳಿಂದ ಸಿಗುವ ಈ ಎಲ್ಲಾ ಪ್ರಯೋಜನಗಳನ್ನು ನೀವು ಪಡೆಯಬೇಕು ಎಂದರೆ ಪ್ರತಿನಿತ್ಯ ನೀವು ಸೇವಿಸುವ ಮಾವಿನ ಹಣ್ಣಿನ ಪ್ರಮಾಣಕ್ಕೆ ಮಿತಿ ಹಾಕಿಕೊಳ್ಳಬೇಕು. ಸುಮಾರು 150 ಗ್ರಾಂ ತೂಕವುಳ್ಳ ಮಾವಿನ ಹಣ್ಣುಗಳನ್ನು ನಿತ್ಯ ಸೇವಿಸುವುದು ಸೂಕ್ತ ಎಂದು ವೈದ್ಯರು ಹೇಳುತ್ತಾರೆ. 150 ಗ್ರಾಂ ಮಾವಿನ ಹಣ್ಣು 125-150 ಕ್ಯಾಲೋರಿಯನ್ನು ಹೊಂದಿರುತ್ತದೆ. ಹೀಗಾಗಿ ದಿನಕ್ಕೆ ಇಷ್ಟು ಗಾತ್ರದ ಮಾವಿನಹಣ್ಣು ತಿಂದರೆ ಸಾಕು ಎಂದು ತಜ್ಞರು ಶಿಫಾರಸು ಮಾಡುತ್ತಾರೆ.
ಮಾವಿನ ಹಣ್ಣುಗಳ ಗಾತ್ರ
ಈಗ ಮಾರುಕಟ್ಟೆಗಳಲ್ಲಿ ದೊಡ್ಡ ದೊಡ್ಡ ಗಾತ್ರದ ಮಾವಿನ ಹಣ್ಣುಗಳು ಲಭ್ಯವಿದೆ. ಉದಾಹರಣೆಗೆ ನೀವು 300ರಿಂದ 350 ಗ್ರಾಂ ತೂಕದ ಮಾವಿನ ಹಣ್ಣಿನ ಸೇವನೆ ಮುಂದಾದಿರಿ ಎಂದು ಭಾವಿಸೋಣ. ಈಗ ಮಾವಿನ ಹಣ್ಣುಗಳು ಏನಿಲ್ಲವೆಂದರೂ 300 ಕ್ಯಾಲೋರಿ ಹೊಂದಿರುತ್ತದೆ. ಕೇವಲ ಮಾವಿನ ಹಣ್ಣೊಂದರ ಸೇವನೆಯಿಂದ ನಿಮ್ಮ ದೇಹಕ್ಕೆ 300 ಕ್ಯಾಲೋರಿ ಸೇರ್ಪಡೆಯಾಗುವುದು ಎಂದರೆ ಉಳಿದೆಲ್ಲ ಆಹಾರ ಪದಾರ್ಥಗಳ ಸೇವನೆಯ ವೇಳೆಗೆ ನಿಮ್ಮ ದೇಹ ಒಂದು ದಿನಕ್ಕೆ ಅತ್ಯಧಿಕ ಕ್ಯಾಲೋರಿ ಸಂಪಾದನೆ ಮಾಡಿದಂತೆ ಆಗುತ್ತದೆ. ದೊಡ್ಡ ಮಾವಿನ ಹಣ್ಣುಗಳು ದೈನಂದಿನ ಕ್ಯಾಲೋರಿಯಲ್ಲಿ 15 ಪ್ರತಿಶತದಷ್ಟು ಕೊಡುಗೆಯನ್ನು ನೀಡಿಬಿಡುತ್ತವೆ.
ಆರೋಗ್ಯಕರ ವಿಧಾನದಲ್ಲಿ ಮಾವಿನಹಣ್ಣುಗಳ ಸೇವನೆ ಹೇಗೆ..?
ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗದಂತೆ ತಡೆಯಲು ದಿನಕ್ಕೆ ಅರ್ಧದಿಂದ ಒಂದು ಸಣ್ಣ ಗಾತ್ರದ ಮಾವಿನ ಹಣ್ಣು ಸೇವನೆ ಮಾಡುವುದು ಸೂಕ್ತ ಎಂದು ತಜ್ಫರು ಅಭಿಪ್ರಾಯ ಹೊರ ಹಾಕಿದ್ದಾರೆ. ಒಂದು ಮಧ್ಯಮ ಗಾತ್ರದ ಮಾವಿನಹಣ್ಣು ಸುಮಾರು 50 ಗ್ರಾಂ ಕಾರ್ಬೋಹೈಡ್ರೇಟ್ ಅಂಶಗಳನ್ನು ಹೊಂದಿರುತ್ತದೆ. ಹೀಗಾಗಿ ನೀವು ದಿನಕ್ಕೆ ಅರ್ಧ ಮಾವಿನ ಹಣ್ಣು ಸೇವನೆ ಮಾಡಿದರೆ ಮಾತ್ರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ದೇಹದಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚು ಸಂಗ್ರಹವಾದಷ್ಟೂ ಸಕ್ಕರೆ ಪ್ರಮಾಣ ಹಾಗೂ ತೂಕದ ಪ್ರಮಾಣ ಹೆಚ್ಚುತ್ತಲೇ ಹೋಗುತ್ತದೆ. ಆದರೆ ಅರ್ಧ ಮಾವಿನ ಹಣ್ಣಿನ ಸೇವನೆಯು ನಿಮ್ಮ ದೇಹಕ್ಕೆ ಉತ್ತಮ ಕೊಬ್ಬನ್ನು ಕೊಡುಗೆಯಾಗಿ ನೀಡುತ್ತದೆ. ಮಾವಿನ ಹಣ್ಣುಗಳನ್ನು ಸೇವನೆ ಮಾಡುವ ಆರೋಗ್ಯಕರ ಮಾರ್ಗವೆಂದರೆ ನೆನೆಸಿದ ಚಿಯಾ ಬೀಜಗಳು ಹಾಗೂ ಬಾದಾಮಿ ಮತ್ತು ವಾಲ್ನಟ್‌ನ ಜೊತೆಯಲ್ಲಿ ನೀವು ಒಂದು ಕಪ್ ಮಾವಿನ ಹಣ್ಣನ್ನು ಸೇವನೆ ಮಾಡಬಹುದು. ಏಕೆಂದರೆ ಇವುಗಳು ಮಾವಿನ ಹಣ್ಣುಗಳ ಸೇವನೆಯ ಬಳಿಕ ರಕ್ತದಲ್ಲಿ ಹೆಚ್ಚಾಗುವ ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿರುತ್ತವೆ.
ಮಾವಿನ ಹಣ್ಣುಗಳ ಸೇವನೆಗೆ ಯಾವ ಸಮಯ ಸೂಕ್ತ..?
ಮಾವಿನ ಹಣ್ಣುಗಳನ್ನು ನೀವು ಯಾವ ಸಮಯದಲ್ಲಿ ಸೇವಿಸುತ್ತಿದ್ದೀರಿ ಎಂಬುದು ಕೂಡ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಯಾವುದೇ ದೈಹಿಕ ಚಟುವಟಿಕೆಗಳನ್ನು ನಡೆಸುವ ಮೊದಲು ಮಾವಿನ ಹಣ್ಣುಗಳನ್ನು ಸೇವನೆ ಮಾಡುವುದು ಉತ್ತಮವಾಗಿರುತ್ತದೆ. ದೇಹವನ್ನು ದಂಡಿಸುವ ಮೊದಲು ಫೈಬರ್ ಹಾಗೂ ಕೊಬ್ಬಿನಂಶ ಹೊಂದಿರುವ ಆಹಾರ ಸೇವನೆ ಮಾಡಿದಾಗ ನಿಮ್ಮ ದೇಹದಲ್ಲಿ ಹೆಚ್ಚು ಶಕ್ತಿ ಇರುತ್ತದೆ. ಅಲ್ಲದೇ ದೇಹ ದಂಡನೆ ಮೂಲಕ ಹೆಚ್ಚುವರಿ ಕ್ಯಾಲೋರಿಗಳನ್ನು ಕಡಿತಗೊಳಿಸುವುದು ಸಹ ಸಾಧ್ಯವಿದೆ. ಹೀಗಾಗಿ ದೈಹಿಕ ಚಟುವಟಿಕೆಗಳಿಗೂ ಮುನ್ನ ನೀವು ಮಾವಿನ ಹಣ್ಣನ್ನು ಸೇವಿಸುವುದು ಉತ್ತಮವಾಗಿದೆ.