Homeಜನಮನಪ್ರಮುಖ ಸುದ್ದಿಮಹಿಳಾ ವಾಣಿ

Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!

ಬೇಸಿಗೆ ಬಂದ ತಕ್ಷಣ ಸಂತಸ ತರುವ ವಿಚಾರಗಳ ಪೈಕಿ ಹಲಸು, ಮಾವುಗಳಿಗೂ ಕ್ರೆಡಿಟ್‌ ಸಲ್ಲಬೇಕು. ಯಾಕೆಂದರೆ, ಹಲಸಿನ ಹಣ್ಣಿಗೂ ಮಾವಿನ ಹಣ್ಣಿಗೂ ಕಾಯಬೇಕೆಂದರೆ ನಾವು ಬೇಸಿಗೆಗೆ ಕಾಯಲೇಬೇಕು. ಈಗ ಎಲ್ಲೆಲ್ಲೂ ರಸ್ತೆ ಬದಿಗಳಲ್ಲೆಲ್ಲ ಹಲಸು ಮಾವಿನದೇ ಕಾರುಬಾರು. ಮಾವಿನ ಹಣ್ಣಿನಷ್ಟು ಹಲಸಿನಹಣ್ಣಿಗೆ ಮರ್ಯಾದೆ ಸಿಗದಿದ್ದರೂ ಹಲಸಿನ ಹಣ್ಣಿಗೂ ಅದರದ್ದೇ ಆದ ಸ್ಥಾನವಿದೆ.

ಹೊಟ್ಟೆ ತುಂಬಿಸಬಲ್ಲ, ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿರುವ, ಸಿಹಿಯಾಗಿ ರುಚಿಯಾಗಿರುವ ಹಲಸಿನ ಹಣ್ಣನ್ನು ತಂದು ತಿಂದು ಅದರ ಬೀಜವನ್ನು ಎಸೆಯುತ್ತೀರಾದರೆ, ಸ್ವಲ್ಪ ತಡೆಯಿರಿ. ಹಲಸಿನ ಹಣ್ಣಿನಲ್ಲಿರುವಂತೆಯೇ ಬೀಜದಲ್ಲೂ ಸಾಕಷ್ಟು ಪೋಷಕಾಂಶಗಳಿವೆ. ಆರೋಗ್ಯದ ಲಾಭಗಳಿವೆ. ಹಲಸಿನ ಹಣ್ಣು ವಿಟಮಿನ್‌ ಬಿ ಹಾಗೂ ಪೊಟಾಶಿಯಂನಿಂದ ಸಮೃದ್ಧವಾಗಿದ್ದರೆ, ಅದರ ಬೀಜಗಳಲ್ಲಿ ಥೈಮೀನ್‌, ರೈಬೋಫ್ಲೇವಿನ್‌ ಕಣ್ಣು, ಚರ್ಮ ಹಾಗೂ ಕೂದಲ ಆರೋಗ್ಯಕ್ಕೆ ಬಹಳ ಉತ್ತಮ. ಬೀಜಗಳಲ್ಲಿ ಝಿಂಕ್‌, ಕಬ್ಬಿಣಾಂಶ, ಕ್ಯಾಲ್ಶಿಯಂ, ತಾಮ್ರ, ಪೊಟಾಶಿಯಂ ಹಾಗೂ ಮೆಗ್ನೀಶಿಯಂ ಮತ್ತಿತರ ಖನಿಜ ಲವಣಗಳಿಂದ ಸಮೃದ್ಧವಾಗಿದೆ. ಇವು ಬ್ಯಾಕ್ಟೀರಿಯಾಗಳಿಂದಾಗುವ ಸಮಸ್ಯೆಗಳಿಗೆ ಉತ್ತಮ ಆಹಾರವಾಗಿದ್ದು, ಇವುಗಳಿಂದಾಗುವ ಸಮಸ್ಯೆಗಳನ್ನು ಕಡಿಮೆ ಮಾಡುವ ತಾಕತ್ತನ್ನು ಹೊಂದಿದೆ. ಬನ್ನಿ, ಹಲಸಿನ ಹಣ್ಣಿನ ಬೀಜದಿಂದ ಯಾವೆಲ್ಲ ಆರೋಗ್ಯದ ಲಾಭಗಳಿವೆ (Jackfruit seed) ಎಂಬುದನ್ನು ನೋಡೋಣ.

ಚರ್ಮದ ಸುಕ್ಕಿಗೆ

ಚರ್ಮದಲ್ಲಿ ಸುಕ್ಕಿನ ಸಮಸ್ಯೆಯೇ. ಸಣ್ಣ ವಯಸ್ಸಿನಲ್ಲಿಯೇ ವಯಸ್ಸಿಗೆ ಮೀರಿದ ಈ ಸಮಸ್ಯೆ ನಿಮಗಿದೆ ಎಂದಾದಲ್ಲಿ ಈ ಬೀಜಕ್ಕೆ ಸ್ವಲ್ಪ ಹಾಲು ಸೇರಿಸಿ ನುಣುಪಾಗಿ ಅರೆದು ಅದರ ಪೇಸ್ಟನ್ನು ಮುಖದ ಚರ್ಮದ ಮೇಲೆ ಹಚ್ಚುವುದರಿಂದ ಚರ್ಮ ನುಣುಪಾಗುತ್ತದೆ. ಚರ್ಮಕ್ಕೆ ಹೊಸ ಕಾಂತಿ ಬರುತ್ತದೆ. ನಿರಿಗೆಗಳು ಕಡಿಮೆಯಾಗುತ್ತದೆ. ನಿತ್ಯವೂ ಹೀಗೆ ಮಾಡುವುದರಿಂದ ಒಳ್ಲೆಯ ಫಲಿತಾಂಶ ಕಾಣಬಹುದು.

ಮಾನಸಿಕ ಒತ್ತಡಕ್ಕೆ

ಹಲಸಿನ ಹಣ್ಣಿನ ಬೀಜದಲ್ಲಿ ಸಾಕಷ್ಟು ಪ್ರೊಟೀನ್‌ ಹಾಗೂ ಮೈಕ್ರೋ ನ್ಯೂಟ್ರಿಯೆಂಟ್‌ಗಳು ಇರುವುದರಿಂದ ಇವು ಮಾನಸಿಕ ಒತ್ತಡ ಹಾಗೂ ಸಾಕಷ್ಟು ಚರ್ಮದ ಸಮಸ್ಯೆಗಳನ್ನು ವಾಸಿ ಮಾಡುವಲ್ಲಿ ನೆರವಾಗುತ್ತದೆ. ಹಲಸಿನ ಬೀಜಗಳನ್ನು ಬೇಯಿಸಿ ಅಥವಾ ಅಡುಗೆಯಲ್ಲಿ ಬಳಸಿ ಸೇವಿಸುವುದರಿಂದ ಈ ಉಪಯೋಗ ಪಡೆಯಬಹುದು.

ಅನೀಮಿಯಾಕ್ಕೆ

ಹಲಸಿನ ಹಣ್ಣಿನ ಬೀಜವನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಕಬ್ಬಿಣಾಂಶ ದೊರೆತು, ಅನೀಮಿಯಾದಂತಹ ರಕ್ತಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ. ದೇಹದಲ್ಲಿ ರಕ್ತ ತುಂಬಿಕೊಳ್ಳುತ್ತದೆ. ಕಬ್ಬಿನಾಂಶವು ಹಿಮೋಗ್ಲೋಬಿನ್‌ ಹೆಚ್ಚಳಕ್ಕೆ ಬೇಕಾದ ಪ್ರಮುಖ ಪೋಷಕಾಂಶವಾಗಿರುವುದರಿಂದ ದೇಹಕ್ಕೆ ಶಕ್ತಿ ಸಾಮರ್ಥ್ಯವನ್ನು ನೀಡುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ.

ಕಣ್ಣಿನ ಆರೋಗ್ಯಕ್ಕೆ ಹಾಗೂ ಕೂದಲ ಪೋಷಣೆಗೆ

ಹಲಸಿನ ಬೀಜದಲ್ಲಿ ವಿಟಮಿನ್‌ ಎ ಸಮೃದ್ಧವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಇದು ಅತ್ಯುತ್ತಮ ಆಹಾರ. ಅಷ್ಟೇ ಅಲ್ಲ, ಕೂದಲಿಗೂ ಇದು ಅತ್ಯುತ್ತಮ ಪೋಷಣೆ ನೀಡುತ್ತದೆ.

ಜೀರ್ಣಕ್ರಿಯೆ ಸಮಸ್ಯೆಗೆ

ತಿಂದದನ್ನು ಸರಿಯಾಗಿ ಜೀರ್ಣವಾಗದೆ ಸಮಸ್ಯೆಯಾಗುತ್ತಿದೆ ಎಂದಾದಲ್ಲಿ ಹಲಸಿನ ಹಣ್ಣಿನ ಬೀಜದ ಪುಡಿಯನ್ನು ಸೇವಿಸಿದರೆ ತಕ್ಷಣವೇ ಪರಿಹಾರ ಸಿಗುತ್ತದೆ. ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡರೆ ಇಂಥ ಸಂದರ್ಭಗಳಲ್ಲಿ ಬಳಸಬಹುದು. ಅಥವಾ ಮಲಬದ್ಧತೆಯ ಸಮಸ್ಯೆಯಿದ್ದರೆ, ಹಲಸಿನ ಬೀಜವನ್ನು ಬೇಯಿಸಿ ತಿನ್ನುವ ಮೂಲಕ ಸಮಸ್ಯೆಯಿಂದ ಪಾರಾಗಬಹುದು.

ಮಾಂಸಖಂಡಗಳ ಬಲವರ್ಧನೆಗೆ

ಹಲಸಿನ ಹಣ್ಣಿನ ಬೀಜದಲ್ಲಿ ಅಧಿಕ ಗುಣಮಟ್ಟದ ಪ್ರೊಟೀನ್‌ ಇರುವುದರಿಂದ ಇದು ಮಾಂಸಖಂಡಗಳ ಬಲವರ್ಧನೆಗೆ ಅತ್ಯಂತ ಒಳ್ಳೆಯದು. ಇದರಲ್ಲಿರುವ ಪ್ರೊಟೀನ್‌ ಕೊಲೆಸ್ಟೆರಾಲ್‌ ರಹಿತವಾಗಿರುವುದರಿಂದ ಜಿಮ್‌ಗೆ ಹೋಗಿ ದೇಹದಾರ್ಢ್ಯತೆ ಬೆಳೆಸುವ ಮಂದಿಗೂ, ಫಿಟ್‌ನೆಸ್‌ ಪ್ರಿಯರಿಗೂ ಇದು ಒಳ್ಳೆಯ ಆಹಾರ.

Related Articles

Leave a Reply

Your email address will not be published. Required fields are marked *

Back to top button