ಉಂಡ ಮನೆಗೆ ದ್ರೋಹ ಬಗೆದ ಕೋಗಿಲೆಗಳ ಪಾಡೇನಾಯ್ತು.?
ದಿನಕ್ಕೊಂದು ಕಥೆ
ಉಂಡ ಮನೆಗೆ ದ್ರೋಹ ಬಗೆದ ಕೋಗಿಲೆಗಳ ಪಾಡೇನಾಯ್ತು.?
ಕಾಗೆ ಗೂಡು
ಮರದ ಮೇಲೆ ದಟ್ಟ ಹಸಿರೆಲೆಗಳ ನಡುವೆ ಕೊಂಬೆಗಳ ಕವಲುಗಳ ಒಳಗೆ ಕಾಗೆ ಗೂಡುಕಟ್ಟುತ್ತಿತ್ತು. ಇತ್ತ, ಕೋಗಿಲೆ ಕಾಗೆ ಯಾವಾಗ ಗೂಡು ಕಟ್ಟಿ ಮುಗಿಸುತ್ತದೆ ಎಂದು ಕಾಯುತಿತ್ತು. ಕಾಗೆ ಅಲ್ಲಿ ಹುಡುಕಿ ಇಲ್ಲಿ ಹುಡುಕಿ ಸಣ್ಣ ಸಣ್ಣ ಕೊಂಬೆಯ ಚೂರುಗಳು, ಕಡ್ಡಿ, ತಂತಿಗಳನ್ನು ತಂದು ತನ್ನ ಮನೆಯನ್ನು ಕಟ್ಟುತ್ತಲೇ ಇತ್ತು. ಅದು ತನ್ನ ಕೆಲಸದಲ್ಲಿ ಮಗ್ನ.
ಕಾಗೆ ಗೂಡು ಮುಗಿಸಿ ಒಂದು ದಿನ ಗೂಡಿನಲ್ಲಿ ಮೊಟ್ಟೆ ಇಟ್ಟಿತು. ಕಾಗೆ ಹೊರಗೆ ಹೋಗುವುದನ್ನೇ ಕಾಯುತ್ತಿದ್ದ ಕೋಗಿಲೆ ಕಾಗೆಯ ಗೂಡಿಗೆ ಬಂತು. ಕಾಗೆಗೆ ಏನೂ ಗೊತ್ತಾಗದಂತೆ ಕೋಗಿಲೆಯೂ ಅದೇ ಗೂಡಿನಲ್ಲಿ ತನ್ನದೊಂದು ಮೊಟ್ಟೆ ಇಟ್ಟಿತು. ಕಾಗೆ ಆಹಾರ ಹುಡುಕಿ ತಿಂದು ಗೂಡು ಸೇರುವಷ್ಟರಲ್ಲಿ ಒಂದು ಮೊಟ್ಟೆ ಇದ್ದಿದ್ದು ಎರಡಾದರೂ ಅದಕ್ಕೆ ತಿಳಿಯಲೇ ಇಲ್ಲ.
ತನ್ನ ಮರಿಗಳನ್ನು ತನ್ನದೇ ಗೂಡಿನಲ್ಲಿ ಬೆಳೆಸುವುದು ಮಾತ್ರ ಕಾಗೆಗೆ ಗೊತ್ತು. ಹೀಗೆ ಬೇರೆಯವರ ಮೊಟ್ಟೆಯೊಂದಿಗೆ ಗೊತ್ತಿಲ್ಲದಂತೆ ಮೊಟ್ಟೆ ಇಟ್ಟು ಮರಿ ಬೆಳೆಸುತ್ತಾರೆ ಎಂಬ ಯೋಚನೆ ಕೂಡಾ ಅದು ಮಾಡಿಲ್ಲ. ಹೀಗೆ ಕಾಗೆ ಮೊಟ್ಟೆ ಮೂರಾದರೆ ಕೋಗಿಲೆಯ ಮೊಟ್ಟೆ ಸೇರಿ ಆರಾಯಿತು.
ಕೋಗಿಲೆ ತನ್ನ ಕೆಲಸವಾದ ಸಂಭ್ರಮದಲ್ಲಿತ್ತು. ಅದು ಆಗಾಗ ಕಾಗೆಯ ಗೂಡಿನ ಕಡೆ ನೋಡುತ್ತ ತಾನು ಯಾವ ಪರಿಶ್ರಮವನ್ನೂ ಪಡದೆ ತನ್ನ ಮರಿಗಳ ಕುರಿತು ಕಾಳಜಿ ವಹಿಸಿತ್ತು. ಅದು ಕಾಗೆಯ ಪರಿಶ್ರಮಕ್ಕೆ ಬೆರಗೂ ಪಡದೆ, ಬೆಲೆಯನ್ನೂ ನೀಡದೆ ಹಾಗೇ ಇತ್ತು.
ಕಾಗೆಯ ಕಾಳಜಿಯಿಂದ ಆರೂ ಮೊಟ್ಟೆ ಒಡೆದು ಆರು ಮರಿಗಳು ಹೊರಗೆ ಬಂದವು. ಕಾಗೆ ಎಲ್ಲ ಮರಿಗಳನ್ನು ನೋಡಿ ಖುಷಿಯಿಂದ ಸಂಭ್ರಮಪಟ್ಟು ಗುಟುಕು ತಂದು ತಂದು ನೀಡಿತು. ಹೀಗೆ ಮರಿಗಳು ಬೆಳೆಯುತ್ತಿದ್ದರೆ ಕೋಗಿಲೆಯ ಮರಿಗಳು ಅಮ್ಮನ ಮರಿಗಳು ಎನ್ನುವ ಹಾಗೆ ನಡೆದುಕೊಂಡವು.
ಕಾಗೆ ಗುಟುಕು ತರಲು ಹೊರಗೆ ಹೋದಾಗ ಕಾಗೆಯ ಮರಿಗಳನ್ನು ಕೋಗಿಲೆಯ ಮರಿಗಳು ಹೊರಗೆ ತಳ್ಳಿಬಿಟ್ಟವು. ಕಾಗೆಯ ಮರಿಗಳೆಲ್ಲ ಮರದಿಂದ ಕೆಳಕ್ಕೆ ಬಿದ್ದು ಜೀವ ಕಳೆದುಕೊಂಡರೆ ಇದರಲ್ಲಿಯ ಭೇದ ತಿಳಿಯದ ಕಾಗೆ ಇದೆಲ್ಲ ಸಹಜ ಕ್ರಿಯೆ ಎಂಬಂತೆ ಮರಿಗಳ ಪೋಷಣೆ ಮುಂದುವರಿಸಿತು. ಕಾಗೆ ಆಹಾರ ನೀಡಿ ಮರಿಗಳನ್ನು ಬೆಳೆಸಿತು. ಹೀಗೆ ಕಾಗೆಗೆ ಅರಿವಿಲ್ಲದಂತೆ ಕೋಗಿಲೆಯ ಮರಿಗಳು ಬಲಿತು ಹಾರಿಹೋದವು.
ಕಾಗೆ ಗೂಡು ಕಟ್ಟುವುದು, ಕೋಗಿಲೆ ಹೊಂಚು ಹಾಕಿ ಕಾಗೆಯ ಗೂಡಿನಲ್ಲಿ ತನ್ನ ಮೊಟ್ಟೆಗಳನ್ನಿಡುವುದು ನಡೆದೇ ಇತ್ತು. ಕೋಗಿಲೆ ಮರಿಗಳ ಕೆಟ್ಟ ನಡತೆಯಿಂದ ಕಾಗೆಯ ಮರಿಗಳ ಸಾವೂ ಮುಂದುವರಿಯಿತು. ಇದರಿಂದಾಗಿ ದಿನದಿಂದ ದಿನಕ್ಕೆ ಕಾಗೆಗಳ ಸಂಖ್ಯೆ ಕಡಿಮೆ ಆಯಿತು. ಆದರೆ ಕೋಗಿಲೆಗಳ ಸಂಖ್ಯೆ ಬೆಳೆಯಿತು.
ವರ್ಷಗಳು ಕಳೆದವು. ಕೋಗಿಲೆಗಳು ಕಾಗೆ ಗೂಡು ಕಟ್ಟುವುದನ್ನು ಕಾಯುತ್ತಿವೆ. ಕಾಗೆಗಳೇ ಇಲ್ಲದ ಮೇಲೆ ಅವು ಗೂಡು ಕಟ್ಟುವುದೆಲ್ಲಿ ಸಾಧ್ಯ? ಕೋಗಿಲೆಗಳಿಗೆ ಗೂಡು ಕಟ್ಟಲು ಬಾರದು. ಅವು ಗೂಡು ಕಟ್ಟುವುದನ್ನೇ ಮರೆತಿವೆ. ಹೌದು ಈಗ ಕೋಗಿಲೆಗಳಿಗೆ ಸಂಕಟ ಪ್ರಾರಂಭವಾಗಿದೆ. ಅವು ಕಾಗೆಗಳ ಕುರಿತಾಗಿ ಬಹಳ ಪ್ರೀತಿಯಿಂದ ಯೋಚಿಸಲು ತೊಡಗಿವೆ…
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882