ಲಿಂಗಾಯತ ಧರ್ಮಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ – ಮುರುಘಾಶ್ರೀ
ಕಲಬುರಗಿ: ಲಿಂಗಾಯತ ಧರ್ಮ ಹೋರಾಟಕ್ಕೆ ಮಾಸ್ಟರ್ ಮೈಂಡ್ ದಿವಂಗತ ಎಮ್.ಎಮ್.ಕಲಬುರಗಿ ಅವರು. ಅವರು ಬಿಟ್ಟು ಹೋಗಿರುವ ವಿಚಾರಗಳನ್ನು ನಾವು ಜಾರಿ ಮಾಡಬೇಕಾಗಿದೆ. ಯಾವ ಯಾವುದಕ್ಕೋಸ್ಕರಾನೋ ಜನರು ಪ್ರಾಣ ಬಿಡುತ್ತಾರೆ. ನಾವು ಲಿಂಗಾಯತ ಧರ್ಮಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಚಿತ್ರದುರ್ಗದ ಮುರುಘಾಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಎನ್.ವಿ.ಕಾಲೇಜು ಮೈದಾನದಲ್ಲಿ ನಡೆದ ಲಿಂಗಾಯತರ ಬೃಹತ್ ಸಮಾವೇಶವನ್ನು ಉದ್ಧೇಶಿಸಿ ಮುರುಘಾಶ್ರೀಗಳು ಮಾತನಾಡಿದರು. 900ವರ್ಷಗಳಿಂದ ವೈದಿಕತೆಯ ವಿರುದ್ಧ ಬಸವಾದಿ ಶರಣರು ಬದಲಾವಣೆಗಾಗಿ ಸಾಮಾಜಿಕ ಕ್ರಾಂತಿ ನಡೆಸಿದ್ದರು. ಆ ಮೂಲಕ ಬಸವಾದಿ ಶರಣರು ನಮಗೆ ಸ್ವಾಭಿಮಾನದ ಧರ್ಮ ನೀಡಿದ್ದಾರೆ. ಈಗ ನಾವೆಲ್ಲಾ ಎಲ್ಲರನ್ನೂ ಜತೆಗೆ ಕರೆದೊಯ್ಯಬೇಕಿದೆ ಎಂದರು. ಚಿತ್ರದುರ್ಗದ ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ನಡೆಯುತ್ತಿದೆ. ಆದರೂ, ಲಿಂಗಾಯತ ಸಮಾವೇಶದಲ್ಲಿ ಭಾಗಿಯಾಗುವ ಕಾರಣಕ್ಕೆ ಮುರುಘಾಶ್ರೀಗಳು ಎಲಿಕಾಪ್ಟರ್ ಮೂಲಕ ಕಲಬುರಗಿಗೆ ಬಂದು ಮತ್ತೆ ಚಿತ್ರದುರ್ಗಕ್ಕೆ ಮರಳಿದ್ದಾರೆಂದು ತಿಳಿದುಬಂದಿದೆ.
ಶರಣಬಸವಪ್ಪ ಅಪ್ಪ ಭಾಷಣಕ್ಕೆ ಅಡ್ಡಿ!
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ಅದ್ಯಕ್ಷರೂ ಆದ ಡಾ. ಶರಣಬಸವಪ್ಪ ಅಪ್ಪ ಅವರು ಕಲಬುರಗಿಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು. ಆದರೆ, ಭಾಷಣ ಆರಂಭಿಸಿದ ಅವರು ನಮ್ಮ ವೀರಶೈವರಿಗೆ ಲಿಂಗ, ಭಸ್ಮ, ರುದ್ರಾಕ್ಷಿ ಧಾರಣೆ ಬಹುಮಖ್ಯ ಎಂದರು. ಅಷ್ಟರಲ್ಲೇ ಶರಣಬಸವಪ್ಪ ಅಪ್ಪ ಅವರ ಭಾಷಣಕ್ಕೆ ಸಭೆಯಲ್ಲಿದ್ದ ಬಸವಾಭಿಮಾನಿಗಳಿಂದ ಪ್ರತಿರೋಧದ ಘೋಷಣೆಗಳು ಕೇಳಿಬಂದವು. ಪರಿಣಾಮ ಜೈ ಲಿಂಗಾಯತ ಎಂದು ಹೇಳುವ ಮೂಲಕ ಶರಣಬಸವಪ್ಪ ಅಪ್ಪ ಅವರು ಭಾಷಣ ಮೊಟಕುಗೊಳಿಸಿದ ಪ್ರಸಂಗವು ನಡೆಯಿತು.
ಬಸವದೀಪ್ತಿ ಪುಸ್ತಕ ಮರುಮುದ್ರಣ ಮಾಡಲ್ಲ- ಮಾತೆ ಮಹಾದೇವಿ
ವಿವಾದಿತ ಬಸವದೀಪ್ತಿ ಪುಸ್ತಕವನ್ನು ಮರುಮುದ್ರಣ ಮಾಡಿಸೋದಿಲ್ಲ ಎಂದು ಮಾತೆ ಮಹಾದೇವಿ ಘೋಷಿಸಿದರು. ಬಸವಣ್ಣನವರ ಅಂಕಿತನಾಮ ಬದಲಾಯಿಸಿದ್ದ ಬಸವದೀಪ್ತಿ ಪುಸ್ತಕ ವಿವಾದ ಸುಪ್ರೀಕೋರ್ಟ್ ಮೆಟ್ಟಿಲೇರಿತ್ತು. ಇತ್ತೀಚೆಗಷ್ಟೇ ಮರುಮುದ್ರಣ ಮಾಡದಂತೆ ಕೋರ್ಟ್ ಆಧೇಶಿಸಿತ್ತು. ಹೀಗಾಗಿ, ಲಿಂಗಾಯತ ಸಮಾವೇಶದಲ್ಲಿ ಸಚಿವ ಎಮ್.ಬಿ.ಪಾಟೀಲ್ ಮಾತನಾಡುವ ವೇಳೆ ಕೋರ್ಟ್ ಆದೇಶ ಪಾಲಿಸಿ, ದಕ್ಕೂ ಹೆಚ್ಚಾಗಿ ಬಸವಭಕ್ತರ ಆದೇಶ ಪಾಲಿಸಿ ಎಂದು ಮಾತೆ ಮಹಾದೇವಿಗೆ ಮನವಿ ಮಾಡಿದ್ದರು. ಅಲ್ಲದೆ ಇದರಿಂದ ನಮ್ಮ ಹೋರಾಟಕ್ಕೆ ಇದೊಂದು ತೊಡಕಾಗುತ್ತಿದೆ ಎಂದಿದ್ದರು. ಸಚಿವರ ಮನವಿಗೆ ಸ್ಪಂದಿಸಿದ ಮಾತೆ ಮಹಾದೇವಿ ಇನ್ನು ಬಸವದೀಪ್ತಿ ಪುಸ್ತಕ ಮರುಮುದ್ರಣ ಮಾಡಲಾರೆ ಎಂದು ವಾಗ್ದಾನ ಮಾಡಿದರು.