ವಿದ್ಯುತ್ ಇಲಾಖೆಃ ಖಾಸಗೀಕರಣ ನೀತಿ ವಿರೋಧಿಸಿ ಕಪ್ಪುಪಟ್ಟಿ ಪ್ರದರ್ಶನ
ಯಾದಗಿರಿ, ಶಹಾಪುರಃ ವಿದ್ಯುತ್ ಇಲಾಖೆಯ 2003 ರ ಮಸೂದೆಗೆ ತಿದ್ದುಪಡಿ ಮಾಡುವ ಮೂಲಕ ಖಾಸಗೀಕರಣಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ನಗರದ ಜೆಸ್ಕಾಂ ಕಚೇರಿ ಆವರಣದಲ್ಲಿ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ವಿದ್ಯುತ್ ಸರಬರಾಜು ಇಲಾಖೆಯ ರಾಜ್ಯ ನೌಕರರ ಸಂಘ ಕರೆ ನೀಡಿದ ಹಿನ್ನೆಲೆ ಸೋಮವಾರ ನೌಕರರು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಜೆಸ್ಕಾಂ ಉಪ ವಿಭಾಗಾಧಿಕಾರಿ ಶಾಂತಪ್ಪ ಪೂಜಾರಿ, ವಿದ್ಯುತ್ ಇಲಾಖೆಯ ಕಾಯ್ದೆ ತಿದ್ದುಪಡಿ ತಂದು ಖಾಸಗೀಕರಣಗೊಳಿಸದಲ್ಲಿ ನೌಕರರಿಗೆ ತೊಂದರೆಯಾಗಲಿದೆ.
ಖಾಸಗಿ ಮಾಲೀಕತ್ವದಡಿ ಕೆಲಸ ಮಾಡುವದು ಇಲಾಖಾ ನೌಕರ ಸಿಬ್ಬಂದಿ ಮತ್ತು ಖಾಸಗಿ ಅಧಿಕಾರ ಪಡೆದವರ ಮಧ್ಯ ಸಂಘರ್ಷಕ್ಕೆ ಕಾರಣವಾಗಲಿದೆ. ಇದು ನಮ್ಮ ಕುಟುಂಬದ ಮೇಲೆ ಪರಿಣಾಮ ಬೀರಲಿದೆ. ಕೆಲಸಕ್ಕು ಮುಂದೆ ಧಕ್ಕೆಯುಂಟಾಗಲಿದೆ ಎಂಬ ಆತಂಕ ನಮ್ಮೆಲ್ಲೆರಿಗೂ ಕಾಡುತ್ತಿದೆ ಎಂದರು.
ಕಾರಣ ಕೇಂದ್ರ ಸರ್ಕಾರ ಕೂಡಲೇ ಖಾಸಗೀಕರಣಗೊಳಿಸಬಾರದು ಎಂದು ಆಗ್ರಹಿಸಿದರು.
ಅಲ್ಲದೆ ಗ್ರಾಹಕರಿಗೂ ಇದರಿಂದ ನಷ್ಟವಾಗಲಿದೆ ದುಪ್ಪಟ್ಟು ಬಿಲ್ ತುಂಬುವ ಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಯಾದಗಿರಿ ಕೆಪಿಟಿಸಿಎಲ್ ವಿಭಾಗದ ಭೀಮಾಶಂಕರ ಮುಲಗೆ, ನೌಕರರ ಸಂಘದ ಪ್ರಾಥಮಿಕ ಸಮಿತಿಯ ಅಧ್ಯಕ್ಷ ಬಸವರಾಜ ಮಾಲಿಪಾಟೀಲ್, ಕಾರ್ಯದರ್ಶಿ ಇಕ್ಬಾಲ್ ಲೋಹಾರಿ, ಆನಂದ ಕೋಲ್ಕಾರ, ಗ್ರಾಮ ವಿದ್ಯುತ್ ಪ್ರತಿನಿಧಿಗಳ ರಾಜ್ಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವರುದ್ರಗೌಡ ಇತರರಿದ್ದರು.