ಪ್ರವಾಹ ನಿಂತರೂ ನಿಲ್ಲದ ರೈತರ ಕಣ್ಣೀರು..!
ಪ್ರವಾಹ ಇಳಿಕೆ, ಸೇತುವೆ ಮೇಲೆ ಸಂಚಾರ ಆರಂಭ
ಪ್ರವಾಹ ನಿಂತರೂ ನಿಲ್ಲದ ರೈತರ ಕಣ್ಣೀರು..!
ಮಲ್ಲಿಕಾರ್ಜುನ ಮುದನೂರ.
yadgiri,ಶಹಾಪುರಃ ಕೃಷ್ಣಾ ನದಿ ಪ್ರವಾಹದಿಂದಾಗಿ ಕಳೆದ ಒಂದು ವಾರದಿಂದ ತಾಲೂಕಿನ ಕೊಳ್ಳೂರ(ಎಂ) ಸೇತುವೆ ಮೇಲೆ ಮುಳುಗಡೆ ಹಿನ್ನೆಲೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಪ್ರವಾಹ ಇಳಿಕೆಯಾಗಿದ್ದು, ಸೇತುವೆ ಮೇಲೆ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.
ಸೇತುವೆ ಮುಳುಗಡೆಯಿಂದ ಕಲ್ಬುರ್ಗಿ-ಶಹಾಪುರ-ರಾಯಚೂರ ಸಂಪರ್ಕ ಕಡಿತಗೊಂಡಿತ್ತು. ರಾಯಚೂರ ತಲುಪಲು ಅನಿವಾರ್ಯವಾಗಿ ಸುರಪುರ, ತಿಂಥಿಣಿ ಮೂಲಕ ಸುತ್ತುವರೆದು ಹೋಗುವ ದುಸ್ಥತಿ ಉಂಟಾಗಿತ್ತು. ಇದರಿಂದಾಗಿ ಹಲವಾರು ವ್ಯಾಪಾರ ವ್ಯವಹಾರಗಳಿಗೆ ಕುಂದುಂಟಾಗಿತ್ತು. ಅಲ್ಲದೆ ಆರೋಗ್ಯ ವಿಚಾರವಾಗಿ ರಾಯಚೂರ ಆಸ್ಪತ್ರೆಗಳಿಗೆ ತೆರಳಲು ಜನರು ಕಷ್ಟ ಪಡುವಂತಾಗಿತ್ತು. ಪ್ರಸ್ತುತ ಸೇತುವೆ ಮೇಲೆ ಸಂಚಾರಕ್ಕೆ ಅವಕಾಶ ಕಲ್ಪಿಸಿರುವದರಿಂದ ಅನುಕೂಲವಾಗಿದೆ ಎಂದು ಹಯ್ಯಾಳ ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಬಾಗಲಿ ತಿಳಿಸಿದ್ದಾರೆ.
ಪ್ರವಾಹ ಕಡಿಮೆಯಾದರೂ ರೈತರ ಕಣ್ಣೀರು ನಿಂತಿಲ್ಲ..
ಕೃಷ್ಣೆಯ ಆರ್ಭಟ ನಿಂತಿದೆ. ಆದರೆ ರೈತಾಪ ವರ್ಗದ ಕಣ್ಣೀರು ಹರಿಯುತ್ತಿದೆ. ಪ್ರವಾಹ ಕಡಿಯೆಯಾಗಿದೆ ಆದರೆ ರೈತರ ಹೊಲದ ಫಲವತ್ತಾದ ಮಣ್ಣು ನೀರಲ್ಲಿ ಕೊಚ್ಚಿಕೊಂಡು ಹೋಗಿದೆ. ಬೆಳೆಗಳಂತು ಜೀವಂತ ಸಮಾಧಿಯಾಗಿವೆ. ನದಿ ತೀರದ ಜಮೀನುಗಳಲ್ಲಿ ರಸ್ತೆ, ಸಿಮೆಂಟ್, ಕಸ ಕಡ್ಡಿ, ಮರಳು ಅಪಾರ ಪ್ರಮಾಣದಲ್ಲಿ ಬಂದು ನಿಂತಿದೆ. ಎಲ್ಲವೂ ಸ್ವಚ್ಛಗೊಳಿಸಿಕೊಳ್ಳಲು ಮತ್ತೆ ಹಣ ಬೇಕು. ಫಲವತ್ತಾದ ಮಣ್ಣು ನೀರಲ್ಲಿ ಕೊಚ್ಚಿಕೊಂಡು ಹೋಗಿದೆ. ಮತ್ತೆ ಮಣ್ಣು ಹಾಕಿಸಿಕೊಳ್ಳಬೇಕು. ಅದಕ್ಕೂ ಹಣ ಬೇಕು. ಎಲ್ಲಿಂದ ತರಬೇಕು. ಹೊಟ್ಟೆಗೆ ಒಪ್ಪಿತ್ತಿಗೂ ಗಂಜಿ ಇಲ್ಲದ ಸ್ಥಿತಿಯಲ್ಲಿ ನಾವಿದ್ದು, ಇದಕ್ಕೆಲ್ಲ ಯಾರು ಪರಿಹಾರ ನೀಡುವರು. ಸರ್ಕಾರವೇ ಕಣ್ಣು ತೆರೆಯಬೇಕೆಂದು ರೈತರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಪ್ರವಾಹದಿಂದ ಅಪಾರ ನಷ್ಟಃ ಕಣ್ಣೀರಿನಲ್ಲಿ ರೈತರು..
ಕೃಷ್ಣಾ ಪ್ರವಾಹದಿಂದ ತಾಲೂಕಿನ ಕೊಳ್ಳೂರ ಸೇರಿದಂತೆ ನದಿ ತೀರದ ಹಲವಾರು ಗ್ರಾಮಗಳ ರೈತರ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ನೂರಾರು ಎಕರೆ ಬೆಳೆ ಹಾನಿಯಾಗಿದೆ. ಭತ್ತ, ತೊಗರೆ, ಹೆಸರು, ಹತ್ತಿ ಬಿತ್ತಿದ್ದು, ಸಮರ್ಪಕವಾಗಿ ಸಸಿಗಳು ಬೆಳೆದು ನಿಂತಿದ್ದವು. ಪ್ರವಾಹದಿಂದಾಗಿ ಎಲ್ಲಾ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಮುಂದೆ ಬದುಕು ಹೇಗೆ ಎಂಬುದು ತಿಳಿಯದಂತಾಗಿದೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಬೆಳೆ ನಷ್ಟ ಪರಿಹಾರ ಬೀಜ ಬಿತ್ತಿ, ರಸಗೊಬ್ಬರಕ್ಕೆ ಖರ್ಚು ಮಾಡಿದಷ್ಟು ಬರುವದಿಲ್ಲ. ವರ್ಷ ಪೂರ್ತಿ ಕೃಷಿಯಿಂದ ಬಂದ ಲಾಭದಲ್ಲಿಯೇ ನಾವು ಬದುಕುಬೇಕು. ಪ್ರತಿವರ್ಷ ಇದೇ ಗತಿಯಾದರೆ ಮುಂದೆ ನಮ್ಮ ಜೀವನ ಕಟ್ಟಿಕೊಡುವರು ಯಾರು ಎಂಬ ಚಿಂತೆಯಲ್ಲಿ ನದಿ ತೀರದ ಜನರಿದ್ದು, ಬೆಳೆ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ರೈತ ಶಿವರಡ್ಡಿ ಕೊಳ್ಳೂರ ಮನವಿ ಮಾಡಿದ್ದಾರೆ.