ಸಮಗ್ರ ಕೃಷಿಯಿಂದ ರೈತರ ಆದಾಯ ದ್ವಿಗುಣವಾಗಲಿದೆ- ಬಿ.ಸಿ.ಪಾಟೀಲ್
ಸಮಗ್ರ ಕೃಷಿಯಿಂದ ರೈತರ ಆದಾಯ ದ್ವಿಗುಣವಾಗಲಿದೆ- ಬಿ.ಸಿ.ಪಾಟೀಲ್
ಯಾದಗಿರಿ: ಕೃಷಿಯಲ್ಲಿ ಆಧುನಿಕ ಮತ್ತು ವೈಜ್ಞಾನಿಕತೆ ಅಳವಡಿಸಿಕೊಳ್ಳುವ ಮೂಲಕ ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕರೆ ನೀಡಿದರು.
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ವತಿಯಿಂದ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನೀರಿನ ಸದ್ಬಳಕೆ ಮಾಡಿಕೊಂಡು, ಬೆಳೆಗಳ ಬದಲಾವಣೆ ಮಾಡಿಕೊಳ್ಳುತ್ತಾ, ಸಮಗ್ರ ಕೃಷಿ ನೀತಿ ಅಳವಡಿಸಿಕೊಂಡಲ್ಲಿ ರೈತರು ತಮ್ಮ ಅದಾಯ ದ್ವಿಗುಣಗೊಳಿಸಿಕೊಳ್ಳಬಹುದು ಅಲ್ಲದೆ ದಲ್ಲಾಳಿಗಳಿಂದ ರೈತರಿಗೆ ಸರಿಯಾಗಿ ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಆಹಾರ ಸಂಸ್ಕರಣೆ ಹಾಗೂ ಕೃಷಿಯ ಉಪ ಕಸುಬುಗಳನ್ನು ಕೈಗೊಳ್ಳುವ ಮೂಲಕ ರೈತರು ಆರ್ಥಿಕವಾಗಿ ಸದೃಢವಾಗಬೇಕು ಎಂದು ಕಿವಿಮಾತು ಹೇಳಿದರು.
ಕೋಲಾರ ಜಿಲ್ಲೆಯ ರೈತನೋರ್ವ ಕುರಿ ಸಾಕಾಣಿಕೆಯಿಂದ ಪ್ರತಿವರ್ಷ 16 ಲಕ್ಷ ರೂಪಾಯಿ ಆದಾಯ ಗಳಿಸುತ್ತಿರುವುದು ಹಾಗೂ ಉತ್ತರ ಕರ್ನಾಟಕದ ಮಧುಕೇಶ್ವರ ಹೆಗಡೆ ಎಂಬುವರು ಜೇನು ಸಾಕಾಣಿಕೆಯಿಂದ 2ವರೆ ಕೋಟಿ ರೂಪಾಯಿ ಆದಾಯ ಗಳಿಸುತ್ತಿರುವುದನ್ನು ಅವರು ಈ ಸಂದರ್ಭದಲ್ಲಿ ಅವರು ಉದಾಹರಿಸಿದರು.
ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದೆ. ಪಿಯುಸಿ ಇಂಜಿನಿಯರಿಂಗ್, ಮೆಡಿಕಲ್, ಸ್ನಾತಕೋತ್ತರ ಪದವಿ, ಪಿಎಚ್ಡಿ ಇನ್ನಿತರ ಕೋಸ್ರ್ಗಳ ಉನ್ನತ ಶಿಕ್ಷಣ ಮಾಡುವ ವಿದ್ಯಾರ್ಥಿಗಳಿಗೆ 11,500 ರೂಪಾಯಿ ಶಿಷ್ಯವೇತನ ನೀಡುತ್ತಿದ್ದು, ಇದು ರೈತರ ಮಕ್ಕಳಿಗೆ ಆರ್ಥಿಕ ಅನುಕೂಲವಾಗಲಿದೆ ಎಂದರು.
“ರೈತರೊಂದಿಗೆ ಒಂದು ದಿನ” ಎಂಬ ಕಾರ್ಯಕ್ರಮವನ್ನು ಈಗಾಗಗಲೇ 11 ಜಿಲ್ಲೆಗಳಲ್ಲಿ ಮಾಡಿದ್ದೇನೆ. ಸದ್ಯದಲ್ಲೇ “ರೈತರೊಂದಿಗೆ ಒಂದು ದಿನ” ಈ ಕಾರ್ಯಕ್ರಮ ಹಾಕಿಕೊಂಡು ಯಾದಗಿರಿ ಮತ್ತು ಕಲಬುರಗಿ ರೈತರೊಂದಿಗೆ ಸಂವಾದ ಮಾಡುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
.
ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್ ಮಾತನಾಡಿ, ಇರುವ ಭೂಮಿಗಳಲ್ಲೇ ಹೆಚ್ಚಿನ ಬೆಳೆ ತೆಗೆದು, ರೈತರ ಆದಾಯ ದ್ವಿಗುಣ ಮತ್ತು ತ್ರಿಗುಣ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ವಿಶ್ವವಿದ್ಯಾಲಯಗಳು ಮಾಡುತ್ತಿರುವ ಕೆಲಸ ಗುರುತರವಾಗಿದೆ. ರೈತರಿಗೆ ಹೆಚ್ಚಿನ ತರಬೇತಿ ನೀಡಿದರೆ, ತಂತ್ರಜ್ಞಾನದ ಅರಿವಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ತೆಗೆಯಲು ಅನುಕೂಲವಾಗಲಿದೆ ಎಂದರು.
ಶಾಸಕ ಶರಣಬಸಪ್ಪಗೌಡ ದರ್ಶನಾಪೂರ ಮಾತನಾಡಿ, ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವ ಕೃಷಿ ಉತ್ಪನ್ನಗಳಿಂದ ರೈತರಿಗೆ ನೇರವಾಗಿ ಪ್ರಯೋಜನ ಸಿಗುತ್ತಿಲ್ಲ. ಎಲ್ಲಾ ದಲ್ಲಾಳಿಗಳ ಪಾಲಾಗುತ್ತದೆ ಎಂದು ಅವರು ವಿμÁದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ( ಕಾಡಾ) ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶರಣಪ್ಪ ಆರ್. ತಳವಾರ, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎನ್. ಕಟ್ಟಿಮನಿ, ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್, ಜಿಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ ಶ್ರೀ ಸಿ.ಬಿ.ವೇದಮೂರ್ತಿ, ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಡೀನ್ ಚನ್ನಬಸವಣ್ಣ, ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಕೊಟ್ರಪ್ಪ. ಬಿ. ಕೋರೆರ ಮುಂತಾದವರು ಇದ್ದರು.