ಕೃಷ್ಣಾ ಪ್ರವಾಹ ಭೀತಿಃ ಕೊಳ್ಳೂರ ಸೇತುವೆಗೆ ಉಸ್ತುವಾರಿ ಸಚಿವ ಭೇಟಿ
ಪ್ರವಾಹದಮಟ್ಟ ಹೆಚ್ಚಿದಲ್ಲಿ ಸಂತ್ರಸ್ಥರಿಗೆ ಗಂಜಿ ಕೇಂದ್ರಕ್ಕೆ ತೆರೆಯಲು ಸಚಿವರ ಸೂಚನೆ
yadgiri, ಶಹಾಪುರಃ ಮಹಾರಾಷ್ಟ್ರದಲ್ಲಿ ಮಳೆ ಜಾಸ್ತಿಯಾಗುತ್ತಿರುವದರಿಂದ ಆಲಮಟ್ಟಿ ಡ್ಯಾಂಗೆ ನೀರಿನ ಹರಿವು ಹೆಚ್ಚಾಗಿದೆ. 3 ಲಕ್ಷ ಕ್ಯೂಸೆಕ್ ನೀರು ಪ್ರಸ್ತುತ ನಾರಾಯಣಪುರ ಡ್ಯಾಂ ಮೂಲಕ ಕೃಷ್ಣಾ ನದಿಗೆ ಹರಿ ಬಿಡಲಾಗಿದೆ. ಈ ಪರಿಣಾಮದಿಂದ ತಾಲೂಕಿನ ಕೊಳ್ಳೂರ(ಎಂ) ಗ್ರಾಮ ಸೇತುವೆ ಪ್ರವಾಹದಿಂದಾಗಿ ಮುಳಗಿದ್ದು, ನದಿ ಪಾತ್ರದ ನೂರಾರು ಎಕರೆ ಜಮೀನು ಸಹ ನೀರಲ್ಲಿ ಮುಳುಗಿವೆ. ಅಪಾರ ಪ್ರಮಾಣ ಬೆಳೆ ನಷ್ಟವಾಗಿರುವ ಹಿನ್ನೆಲೆ ಜಿಲ್ಲಾಡಳಿತದಿಂದ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ಅವರು ಶನಿವಾರ ಕೊಳ್ಳೂರ ಸೇತುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕೃಷ್ಣಾ ನದಿ ಪಾತ್ರ ಬರುವ ಹಳ್ಳಿಗಳ ಜನರನ್ನು ಮುಂಜಾಗೃತವಾಗಿ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಅಗತ್ಯಗನುಸರಿಸಿ ಅವರಿಗೆ ಗಂಜಿ ಕೇಂದ್ರಗಳನ್ನು ತೆರಯಲು ಸಿದ್ಧತೆಯಲ್ಲಿರಬೇಕೆಂದು ಸಲಹೆ ನೀಡಿದರು.
ಹಳ್ಳಿಯ ಜನರು ಜಾನುವಾರುಗಳ ಸಮೇತ ಮುನ್ನೆಚ್ಚರಿಕೆವಹಿಸಬೇಕು. ಯಾವ ಕ್ಷಣದಲ್ಲಿಯಾದರೂ ನೀರು ಬರಬಹುದು. ಜಾಗೃತರಾಗಿರಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯ, ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಸಿಇಓ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಾಕಾರಿ ಶಂಕರಗೌಡ ಸೋಮನಾಳ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಪ್ರಧಾನ ಕಾರ್ಯದರ್ಶಿ ಗುರು ಕಾಮಾ ಸೇರಿದಂತೆ ಇತರರು ಇದ್ದರು.
ಸೇತುವೆ ಎತ್ತರ ಹೆಚ್ಚಿಸಲು ಮುಂದಾಗದ ಸರ್ಕಾರ ಸಂತ್ರಸ್ಥರು ಆಕ್ರೋಶ
ಪ್ರತಿ ವರ್ಷ ಪ್ರವಾಹ ಉಂಟಾಗುತ್ತಿದ್ದು, ಸಾಕಷ್ಟು ಬಾರಿ ಸೇತುವೆ ಎತ್ತರ ಹೆಚ್ಚಿಸಲು ಮನವಿ ಮಾಡಲಾಗುತ್ತಿದೆ. ಆದರೆ ಯಾವುದೇ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ಪ್ರತಿ ಬಾರಿ ಜಿಲ್ಲಾ ಉಸ್ತುವಾರಿಗಳು ಪ್ರವಾಹ ಬಂದಾಗ ಸೇತುವೆ ನೋಡಲು ಬರುತ್ತಾರೆ ಹೋಗುತ್ತಾರೆ ಎಂದು ಗ್ರಾಮಸ್ಥರು, ಸಂತ್ರಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸಮಾಧಾನ ಪಡಿಸಿದ ಸಚಿವ ಆರ್.ಶಂಕರ ಅವರು, ಸೇತುವೆ ಎತ್ತರ ಹೆಚ್ಚಿಸುವದು ಸೇರಿದಂತೆ ಪ್ರತಿ ವರ್ಷ ಪ್ರವಾಹಕ್ಕೆ ಒಳಗಾಗುವ ಬೇಡಿಕೆಗನುಸಾರವಾಗಿ ಗ್ರಾಮಗಳ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಸಚಿವ ಸಂಪುಟದಲ್ಲಿ ಚರ್ಚಿಸಿ ಆ ಮೂಲಕ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದರು.
5 ಲಕ್ಷ ಕ್ಯೂಸೆಕ್ ನೀರು ಬಂದಲ್ಲಿ ಸ್ಥಳಾಂತರಿಸಬೇಕಾಗುತ್ತದೆ. ಈಗಾಗಲೇ ಗಂಜಿ ಕೇಂದ್ರಗಳು ಸೇರಿದಂತೆ ಬೇಕಾದ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ನೀರಿನ ಹರಿವು ಜಾಸ್ತಿಯಾಗಲಿದೆ. ಆ ಭರದಲ್ಲಿ ಹೊಲ, ಗದ್ದೆಗಳಲ್ಲಿ ಅಳವಡಿಸಲಾದ ಪಂಪ್ ಸೆಟ್ ತರಲು ಹೋಗಿ ಅವಘಡಕ್ಕೆ ಸಿಲುಕದಿರಿ, ಮುಂಜಾಗೃತವಗಿ ಎಚ್ಚರಿಕೆವಹಿಸಿ. ಯಾರೊಬ್ಬರು ಆತಂಕಗೊಳ್ಳದಿರಿ. ಪ್ರವಾಹದಿಂದ ತೊಂದರೆಗೊಳದವರಿಗೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಲಿದೆ. ಅದಕ್ಕೆ ಬೇಕಾದ ಸೌಲಭ್ಯ ಸರ್ಕಾರ ಒದಗಿಸಿದೆ.
–ಆರ್.ಶಂಕರ್. ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ.
ಕಳೆದ ಎಂಟು ವರ್ಷಗಳಿಂದ ಪ್ರವಾಹ ಭೀತಿ ಎದುರಾಗುತ್ತಿದೆ. ಕೃಷ್ಣಾ ನದಿಪಾತ್ರದ ರೈತಾಪಿ ಜನರ ಜೀವನ ಕಷ್ಟಕರವಾಗಿದೆ. ಪ್ರವಾಹದಿಂದಾಗಿ ಅಪಾರ ಬೆಳೆ ನಷ್ಟವಾಗುತ್ತಿದೆ. ಇದುವರೆಗೂ 2019 ರ ಬೆಳೆ ನಷ್ಟ ಪರಿಹಾರ ಬಂದಿಲ್ಲ. ಇದೀಗ ಈ ವರ್ಷದ ಪರಿಹಾರ ಯಾವಾಗ ಬರಲಿದೆ. 2019 ರಲ್ಲಿ 40 ಜನರಿಗೆ ಬೆಳೆ ಪರಿಹಾರ ದೊರೆತಿರುವದಿಲ್ಲ. ಬಂದ ಹೊಸ ಹೊಸ ಉಸ್ತುವಾರಿ ಸಚಿವರ ಭರವಸೆ ನೀಡ್ತಾರೆ ಹೋಗ್ತಾರೆ ಅಷ್ಟೆ. ಯಾರೊಬ್ಬರು ರೈತರ ಕಣ್ಣೀರು ಒರೆಸುತ್ತಿಲ್ಲ. ಪ್ರತಿ ವರ್ಷ ನದಿ ಪಾತ್ರದ ರೈತರ ಬದುಕು ದುಸ್ತರವಾಗಿದೆ. ಸಾಲ ಸೂಲ ಮಾಡಿ ಭರವಸೆಯೊಂದಿಗೆ ಹತ್ತಿ, ತೊಗರೆ ಬಿತ್ತಲಾಗುತ್ತದೆ. ಪ್ರವಾಹ ಬಂದು ಕೊಚ್ಚಿಕೊಂಡು ಹೋಗುತ್ತದೆ. ಸಮರ್ಪಕ ಪರಿಹಾರವು ಇಲ್ಲದೆ ಸಾಲ ಮಾಡಿ ಊರು ಬಿಟ್ಟು ಪರರಾಜ್ಯ ಗುಳೇ ಹೋಗಿ ಹೊಟ್ಟಿ ತುಂಬಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಶಾಶ್ವತ ಪರಿಹಾರ ಒದಗಿಸಬೇಕು.
–ಶಿವರಡ್ಡಿ ಕೊಳ್ಳೂರ. ರೈತ ಮುಖಂಡ.