ಲಿಂಗಾಯತ ಪಂಚಮಸಾಲಿ ಸಂದೇಶ ಜಾಥಾಕ್ಕೆ ಸ್ವಾಗತ
ಸೆ.15 ರೊಳಗೆ ಮೀಸಲಾತಿ ಕಲ್ಪಿಸುವ ಭರವಸೆ – ಪಂಚಮಸಾಲಿ ಶ್ರೀ
ಶಹಾಪುರಃ ಸಿಎಂ ಬಿಎಸ್‍ವೈ ಸೆ.15 ರ ವರೆಗೆ ಮೀಸಲಾತಿ ಕಲ್ಪಿಸಿಕೊಡುವ ಗಡವು ನೀಡಿದ್ದು ಇದೊಂದು ಐತಿಹಾಸಿಕ ನಿಲುವು ಆಗಿದೆ ಎಂದು ಕೂಡಲಸಂಗಮದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು.
ಶನಿವಾರ ನಗರಕ್ಕೆ ಆಗಮಿಸಿ ಪಿಂಗಾಯತ ಪಂಚಮಸಾಲಿ ಸಂದೇಶ ಜಾಥಾಕ್ಕೆ ಸ್ವಾಗತಿಸಿದ ತಾಲೂಕು ಪಂಚಮಸಾಲಿ ಸಮಾಜ ಘಟಕ ಇಲ್ಲಿನ ಇಂಡಸ್ಟ್ರೀಯಲ್ ಏರಿಯಾದಲ್ಲಿ ನಡೆದ ಸಂದೇಶ ಜಾಥಾ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಭಿವೃದ್ಧಿಗಾಗಿ ಹಿಂದುಳಿದ ವರ್ಗ 2(ಎ) ಮೀಸಲಾತಿ ಮತ್ತು ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ನಿರಂತರ 23 ದಿನಗಳ ಕಾಲ ಪಾದಯಾತ್ರೆ ನಡೆಸಿ ಬೆಂಗಳೂರಿನಲ್ಲಿ ಲಕ್ಷಾಂತರ ಪಂಚಮಸಾಲಿ ಮಹಾಜನ ಸಮೂಹದ ಸಾಕ್ಷಿಯೊಂದಿಗೆ ಈಚೆಗೆ ಬೆಂಗಳೂರಿನಲ್ಲಿ ನಡೆದ ಬೃಹತ್ ಸಮಾವೇಶ ಫಲವಾಗಿ ಸದನದಲ್ಲಿ ರಾಜ್ಯ ಮುಖ್ಯಮಂತ್ರಿಗಳು ಸೆ.15ರೊಳಗೆ ಮೀಸಲಾತಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ.
ಶಾಸಕ ಬಸನಗೌಡ ಯತ್ನಾಳ ಅವರ ಶ್ರಮದ ಫಲವಾಗಿ ಸಿಎಂ ಅವರು ಭರವಸೆ ನೀಡಿದ್ದಾರೆ ಎಂದ ಅವರು, ರಾಜ್ಯದ 18 ಜಿಲ್ಲೆ ಮತ್ತು 76 ತಾಲೂಕುಗಳಲ್ಲಿ ಶರಣಾರ್ಥಿ ಜಾಥಾ ಏ.14ರವರೆಗೆ ನಡೆಯಲಿದೆ. ಡಾ.ಬಾಬಾಸಾಹೇಬರ ಜಯಂತ್ಯುತ್ಸವದಂದು ಕೂಡಲಸಂಗಮದಲ್ಲಿ ಪಂಚಮಸಾಲಿ ಸಂದೇಶ ಯಾತ್ರೆ ಸಮಾವೇಶಗೊಂಡು ಸಮಾರೋಪಗೊಳ್ಳಲಿದೆ ಎಂದರು.
ಸೆ.15 ರವೆಗೆ ಸಿಎಂ ಅವರು ಮೀಸಲಾತಿ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ಹೋರಾಟ ಕುರಿತು ರೂಪುರೇಷೆಗಳನ್ನು ಸಿದ್ಧಪಡಿಸಲಾಗುವದು ಎಂದರು. ಅಲ್ಲದೆ ಕೂಡಲಸಂಗಮ ಪಂಚಮಸಾಲಿ ಪೀಠದಿಂದ ವಾಟ್ಸಪ್ ಗ್ರೂಪ್ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಖಾತೆ ತೆಗೆಯಲಾಗುವದು ಸಮಾಜದ ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳಲು ಇತರೆ ವಿಷಯಗಳು ತಿಳಿಯಲು ಸಮಾಜ ಸಂಘಟನೆಗೆ ಅನುಕೂಲವಾಗಲಿದೆ ಎಂದರು.
ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಮುಖ್ಯಮಂತ್ರಿಗಳ ಭರವಸೆ ನೀಡಿದಂತೆ ಪಂಚಮಸಾಲಿ ಸಮಾಜದ ಜನರ ಆಶಾಭಾವನೆಗಳಿಗೆ ಸ್ಪಂದಿಸಿದಲ್ಲಿ, ಪಂಚಮಸಾಲಿ ಸಮಾಜ ಐತಿಹಾಸಿಕ ಪುಟದಲ್ಲಿ ಕಂಗೊಳಿಸಲಿದೆ. ವಿಳಂಬವಾದಲ್ಲಿ ಮುಂದೆ 20 ಲಕ್ಷ ಪಂಚಮಸಾಲಿ ಜನರು ಸೇರುವ ಮೂಲಕ ಮುಂದಿನ ಹೋರಾಟಕ್ಕೆ ತೀವ್ರಗೊಳಿಸಲಾಗುವದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಅಖಿಲ ಭಾರತ ಪಂಚಮಸಾಲಿ ಸಮಾಜದ ಅಧ್ಯಕ್ಷ ದೇವಿಂದ್ರಪ್ಪ ತೋಟಗೇರ, ಬಸವರಾಜ ಹೊಸೂರ, ಹೊನ್ನಪ್ಪ ಸಾಹು ಹೊಸೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.