ಶಹಾಪುರಃ ಮಹಿಳೆಗೆ ಅಶ್ಲೀಲವಾಗಿ ನಿಂದನೆ ಮಾಡಿದ ಆರೋಪಿ ಬಂಧನಕ್ಕೆ ಆಗ್ರಹ
ಮಹಿಳೆಗೆ ಅಶ್ಲೀಲವಾಗಿ ನಿಂದನೆ ಮಾಡಿದ ಆರೋಪಿ ಬಂಧನಕ್ಕೆ ಆಗ್ರಹ
ಶಹಾಪುರಃ ಆರೋಪಿ ಸಂತೋಷ ಪಾಳ್ಯ ಬಂಧನಕ್ಕೆ ಆಗ್ರಹಿಸಿ ಇಲ್ಲಿನ ಮಾದಿಗ ಸಮುದಾಯ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಸದಾಶಿವ ಆಯೋಗ ಜಾರಿಗಾಗಿ ಮಾದಿಗ ಸಮುದಾಯ ನಡೆಸುತ್ತಿರುವ ಹೋರಾಟ ಕುರಿತು ಮಾದಿಗ ಸಮುದಾಯದ ಮಹಿಳಾ ಘಟಕದ ರಾಜ್ಯಧ್ಯಕ್ಷೆ ಪ್ರೇಮ ಕಲ್ಕೇರಿ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪಿ ಸಂತೋಷನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ನಗರದ ಮುಖ್ಯ ಬೀದಿಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಬಸವೇಶ್ವರ ವೃತ್ತದಲ್ಲಿ ಅನಾವರಣಗೊಂಡು ಆರೋಪಿಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಾದಿಗ ಸಮಾಜದ ಮಹಿಳಾ ಘಟಕದ ರಾಜ್ಯಧ್ಯಕ್ಷೆ ಪ್ರೇಮ ಕಲ್ಕೇರಿ ಅವರಿಗೆ ಸಂತೋಷ ಪಾಳ್ಯ ಎಂಬಾತ ಫೋನ್ ಕರೆ ಮಾಡಿ ಸದಾಶಿವ ಆಯೋಗ ವರದಿ ಜಾರಿಗೆ ನಾವು ಬಿಡುವದಿಲ್ಲ.
ಸದಾಶಿವ ಆಯೋಗ ವರದಿಯನ್ನು ನಾವೆಲ್ಲ ವಿರೋಧಿಸುತ್ತೇವೆ. ನೀನೇನು ಹೆಂಗಸು ಹೋರಾಟ ಮಾಡುವಿ ಎಂದು ಅಲ್ಲದೆ ಅಶ್ಲೀಲ ಪದ ಬಳಸಿ ಅತಿ ಕೆಟ್ಟದಾಗಿ ಮಾತನಾಡಿದ್ದು, ಇಂತಹ ಅವಿವೇಕಿಯನ್ನು ಕೂಡಲೇ ಬಂಧಿಸಿ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇಂತಹ ಕುಹಕಿಗಳನ್ನು ಗಡಿಪಾರು ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಗುರು ದೇವಿನಗರ, ಮುಖಂಡರಾದ ವಿಜಯಕುಮಾರ ಎದುರುಮನಿ, ಶಾಂತಪ್ಪ ಗುತ್ತೇದಾರ, ಅನೀಲ್ ದೋರನಹಳ್ಳಿ, ಬಸವರಾಜ ಪೂಜಾರಿ, ಅವಿನಾಶ ಗುತ್ತೇದಾರ, ಶಿವು ದಿಗ್ಗಿ, ಚಂದ್ರಶೇಖರ, ಬಸವರಾಜ್ ಕಟ್ಟಿಮನಿ, ಈರಣ್ಣ ಗುತ್ತಿಪೇಟ, ಲಕ್ಷ್ಮಣ ದೇವಿನಗರ, ಭೀಮಾಶಂಕರ ಕಟ್ಟಿಮನಿ ಸೇರಿದಂತೆ ಮಾದಿಗ ಸಮುದಾಯದ ಮುಖಂಡರು ಭಾಗವಹಿಸಿದ್ದರು.