ಕ್ಯಾನ್ಸರ್ ರೋಗಿಗಳ ಆರೈಕೆಗಾಗಿ ಮಿಡಿದ ‘ತಾಯಿಯಾಗುವುದೆಂದರೆ‘.?
ಕರ್ನಾಟಕದಾದ್ಯಂತ ಅನೇಕ ಪ್ರದರ್ಶನಗಳನ್ನು ನೀಡುತ್ತ ರಾಜ್ಯದ ರಂಗಭೂಮಿಯಲ್ಲಿಯೇ ಹೊಸ ಇತಿಹಾಸ ಸ್ಥಾಪಿಸುತ್ತಿರುವ ಪೂಜಾರ ಏಕ ವ್ಯಕ್ತಿ ಪ್ರಯೋಗವೀಗ ಕ್ಯಾನ್ಸರ್ ಪೀಡಿತರಿಗೂ ಮಿಡಿದು, ಅವರ ಆರೈಕೆಗಾಗಿ ಲಕ್ಷ ರೂ. ದೇಣಿಗೆ ಸಂಗ್ರಹಿಸಿದೆ.
ರಂಗ ಹೃದಯ ಕಲಾತಂಡ ಹಾಸನ ಪ್ರಸ್ತುತಿಯ ಪೂಜಾ ರಘುನಂದನ್ ಅಭಿನಯ ಹಾಗೂ ಕೃಷ್ಣಮೂರ್ತಿ ಕವತ್ತಾರ್ ಅವರ ನಿರ್ದೇಶನದ “ತಾಯಿಯಾಗುವುದೆಂದರೆ” ಏಕವ್ಯಕ್ತಿ ರಂಗ ಪ್ರದರ್ಶನದ 10ನೇ ರಂಗ ಪ್ರಯೋಗ ಕ್ಯಾನ್ಸರ್ ಹಾಗೂ ಇನ್ನಿತರ ಗುಣಪಡಿಸಲಾಗದ ರೋಗಿಗಳ ಆರೈಕೆಯ ಸಹಾಯಾರ್ಥವಾಗಿ ಧನಸಂಗ್ರಹ ಮಾಡುವ ಉದ್ದೇಶದಿಂದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಹಿಮ್ಸ್ ಹಾಗೂ ರೋಟರಿ ಕ್ಲಬ್ ಹಾಸನ್ ಹೊಯ್ಸಳ ಸಹಯೋಗದೊಂದಿಗೆ ಹಾಸನ ನಗರದ ಶಾಂತಿ ಗ್ರಾಮ ಸಮೀಪವಿರುವ ಕೃಷಿ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಸಭಾಂಗಣದಲ್ಲಿ ನಂ.28ರಂದು ನಡೆದ ನಾಟಕ ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ನೆರವೇರಿತ್ತು.
ತಾಯ್ತನದ ತುಮುಲುಗಳು ಮತ್ತು ಭಾವನೆಗಳನ್ನು ತಮಗೆ ಆದ ಸ್ವಂತ ಅನುಭವವನ್ನು “ತಾಯಿಯಾಗುವುದೆಂದರೆ” ನಾಟಕದ ಮೂಲಕ ಪೂಜಾ ರಘುನಂದನ್ ಏಕ ವ್ಯಕ್ತಿ ರಂಗ ಪ್ರಯೋಗದ ಮೂಲಕ ಅತ್ಯದ್ಬತವಾಗಿ ಪ್ರದರ್ಶನಗೊಂಡು ಕೃಷಿ ಕಾಲೇಜು ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮನ್ನಣೆಗಳಿಸಿತು.
ಇವತ್ತಿನ ಸಮಾಜದಲ್ಲಿ ಪ್ರತಿಯೊಬ್ಬರು ತಪ್ಪದೇ ವೀಕ್ಷಣೆ ಮಾಡಲೇಬೇಕಾದ ನಾಟಕ ಇದಾಗಿದೆ ಎಂದು ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎಸ್.ಎನ್ ವಾಸುದೇವನ್ ಅವರು ರಂಗಪ್ರಯೋಗವನ್ನು ವೀಕ್ಷಿಸಿ ನಂತರ ಮಾತನಾಡುತ್ತಾ ತಿಳಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಹಾಸನ ಶಾಖೆಯ ಸ್ಥಳೀಯ ಸಂಚಾಲಕರು ಮತ್ತು ಉಪಾಧ್ಯಕ್ಷರಾದ ಡಾ. ಸುಧೀರ್ ಬಿ ಬೆಂಗಳೂರ್ ಅವರು ಮಾತನಾಡಿ, ತಮ್ಮ ಜೀವನದ ಏಳು ಬೀಳುಗಳನ್ನೇ ನಾಟಕವಾಗಿಸಿದ್ದಾರೆ.
ರಂಗಸಜ್ಜಿಕೆಯಲ್ಲಿ ತಾನು ಅನುಭವಿಸಿದ ನೋವು, ನಲಿವು, ನಿಂದನೆ, ತ್ಯಾಗ ಪರಿಶ್ರಮಗಳನ್ನು ತಾನೇ ಅಭಿನಯಿಸಿ ಪ್ರೇಕ್ಷಕರಿಗೆ ತೋರಿಸುತ್ತಿರುವ ಕಲಾವಿದೆಯೆಂದರೆ ಬಹುಶಃ ಪೂಜಾ ರಘುನಂದನ್ ಮೊದಲಿಗರು ಎಂದರೆ ತಪ್ಪಾಗಲಾರದು. ಇವತ್ತಿನ ಸಮಾಜದಲ್ಲಿ ತುಂಬ ಜನ ಹಣಗಳಿಸುವ ಕಡೆ ಹೆಚ್ಚು ಗಮನ ಹರಿಸುತ್ತಾರೆ.
ಆದರೆ ಪೂಜಾ ರಘುನಂದನ್ ಹಿಮ್ಸ್ ಮತ್ತು ಎಸ್.ವಿ.ವೈಎಂ ಅನುಷ್ಟಾನ ಮಾಡುತ್ತಿರುವ ಮನೆ ಆಧಾರಿತ ಉಪಶಮನ ಆರೈಕೆ ಕಾರ್ಯಕ್ರಮದ ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವ ಕ್ಯಾನ್ಸರ್, ಕಿಡ್ನಿ ತೊಂದರೆ, ಸ್ಟ್ರೋಕ್ ಇತ್ಯಾಧಿ ದೀರ್ಘಾವದಿ ಖಾಯಿಲೆಯಿಂದ ಬಳಲುತ್ತಿರುವ ಬಡ ರೋಗಿಗಳ ಶುಶ್ರೂಷೆಗಾಗಿ ಧನ ಸಂಗ್ರಹಿಸಲು “ತಾಯಿಯಾಗುವುದೆಂದರೆ” ನಾಟಕವನ್ನು ಸಮರ್ಪಿಸಿದ್ದಾರೆ. ಇವರ ಮತ್ತು ಇವರ ಕಲಾ ತಂಡ ರಂಗಹೃದಯದ ಸೇವಾ ಕಾರ್ಯಕ್ಕೆ ಅಭಿನಂದನಾರ್ಹರು ಎಂದರು.
“ತಾಯಿಯಾಗುವುದೆಂದರೆ” ನಾಟಕದಲ್ಲಿ ಕೃಷಿ ಕಾಲೇಜು ಸಹಾಯಕ ಪ್ರಾದ್ಯಾಪಕರು ಮತ್ತು ವಿದ್ಯಾರ್ಥಿ ಕಲ್ಯಾಣ ನಿಧಿ ನಿರ್ದೇಶಕರಾದ ಡಾ. ಶಶಿಕಿರಣ್ ಹಾಗು ಅರಣ್ಯಶಾಸ್ತ್ರ ಮತ್ತು ಪರಿಸರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಘವೇಂದ್ರ ಹಾಗೂ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ವರ್ಗ, ಬೋಧಕೇತರ ಸಿಬ್ಬಂದಿ , ಹಿಮ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಿಬ್ಬಂದಿಗಳು ಹಾಗೂ ರೋಟರಿ ಕ್ಲಬ್ ಆಫ್ ಹಾಸನ್ ಹೊಯ್ಸಳ ಅಧ್ಯಕ್ಷರಾದ ರೊ. ರಘುನಂದನ್ ಮತ್ತು ರೊ. ಮೋಹನ್ ಡಿ ಹಾಗೂ ರೋಟರಿ ಹಾಸನ ಹೊಯ್ಸಳ ಕ್ಲಬ್ ನ ಸದಸ್ಯರುಗಳು ಸೇರಿದಂತೆ ಸುಮಾರು 700 ಜನ “ತಾಯಿಯಾಗುವುದೆಂದರೆ” ನಾಟಕವನ್ನು ವೀಕ್ಷಿಸಿ ಇಂತಹ ಪ್ರತಿಭೆ ಮತ್ತು ಸೇವಾ ಮನೋಭಾವ ಇರುವವರನ್ನು ಬೆಳೆಸಬೇಕು ಎಂದು ಸಭಾಂಗಣದಲ್ಲಿದ್ದ ಎಲ್ಲರೂ ಎದ್ದುನಿಂತು ಪೂಜಾ ರಘುನಂದನ್‌ರಿಗೆ ಚಪ್ಪಾಳೆಯೊಂದಿಗೆ ಅಭಿನಂದಿಸಿದ್ದರು.
ಹಾಗೂ ಉಪಶಮನ ಆರೈಕೆ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರು ಆರ್ಥಿಕ ಸಹಾಯ ನೀಡುವುದಾಗಿ ತಿಳಿಸಿದ್ದರು. ಡಿ. 10ರಂದು ಕೃಷಿ ಕಾಲೇಜಿನಲ್ಲಿ ನಡೆದ ಸಮಾರಂಭ ಒಂದರಲ್ಲಿ ನಾಟಕ ಪ್ರದರ್ಶನದಿಂದ ಸಂಗ್ರಹಿತಗೊಂಡ ಒಂದು ಲಕ್ಷ ರೂ. ಚೆಕ್ ಅನ್ನು ಪೂಜಾರಘುನಂದನ್ ಅವರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್‌ಗೆ ಹತ್ತಾಂತರಿಸಲಾಗಿದೆ. ಇದು ಸ್ತುತ್ಯಾರ್ಹ ಕೆಲಸ.
-ರಘುನಂದನ್