ಕೃಷ್ಣಾನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಿದ್ದು ಹೇಗೆ ಗೊತ್ತಾ?
ಯಾದಗಿರಿ: ಕಳೆದ ಮೂರು ದಿನಗಳಿಂದ ಸುರಪುರ ತಾಲೂಕಿನ ಮೇಲಿನಗಡ್ಡಿ ಗ್ರಾಮದ ಬಳಿ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರು ಕುರಿಗಾಯಿಗಳನ್ನು ರಕ್ಷಿಸಲಾಗಿದೆ. ಕಳೆದ ಸೋಮವಾರ ಮೇಲಿನಗಡ್ಡಿ ಗ್ರಾಮದ ಕುರಿಗಾಯಿಗಳಾದ ಸಿದ್ದನಗೌಡ, ಶೇಖರ್ ಮತ್ತು ಗದ್ದೆಪ್ಪ 80ಕುರಿಗಳೊಂದಿಗೆ ತೆರಳಿದ್ದರು. ಆದ್ರೆ, ಭಾರೀ ಮಳೆ ಹಾಗೂ ಬಸವ ಸಾಗರ ಜಲಾಶಯ ತುಂಬಿದ್ದು, ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಬಂದಿದೆ. ಪರಿಣಾಮ ಗ್ರಾಮಕ್ಕೆ ಮರಳಲು ಆಗದೆ ಮೂವರು ಕುರಿಗಾಯಿಗಳು ನಡುಗಡ್ಡೆಯಲ್ಲಿ ಸಲುಕಿದ್ದರು. ಜೀವಭಯದಿಂದ ಮೂರು ದಿನಗಳಿಂದ ಆಹಾರವಿಲ್ಲದೆ ಕಂಗಾಲಾಗಿದ್ದರು. ಮೂವರು ಕುರಿಗಾಯಿಗಳ ಆಕ್ರಂದನ ಕೇಳಿದ ಕುರಿಗಾಯಿಗಳ ಕುಟುಂಬಸ್ಥರು ರಕ್ಷಿಸುವಂತೆ ಜಿಲ್ಲಾಡಳಿತಕ್ಕೆ ನಿನ್ನೆ ಸಂಜೆ ಮನವಿ ಮಾಡಿದ್ದರು,
ಕುರಿಗಾಯಿಗಳ ಕುಟುಂಬದ ಮನವಿಗೆ ತಕ್ಷಣಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಹೈದ್ರಾಬಾದ್ ನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಕರೆಸಿತ್ತು. ಜಿಲ್ಲಾಧಿಕಾರಿ ಡಿ.ಮಂಜುನಾಥ್ ಹಾಗೂ NDRF ಅಧಿಕಾರಿ ಬಿಹಾರ್ ಸಿಂಗ್ ನೇತೃತ್ವದಲ್ಲಿ ಮೀನುಗಾರರು ಹಾಗೂ ಈಜು ತಗ್ನರ ಸಹಕಾರದೊಂದಿಗೆ ಇಂದು ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಲಾಗಿತ್ತು. ಒಂದು ಕಡೆ ಬೋಟ್ ಗಳ ಮೂಲಕ ರಕ್ಷಣಾ ಕಾರ್ಯ ಆರಂಭಿಸಲಾಗಿತ್ತು. ಮತ್ತೊಂದು ಕಡೆ ಜಿಲ್ಲಾಧಿಕಾರಿಗಳು ಬಸವ ಸಾಗರ ಜಲಾಶಯದ ನೀರಿನ ಹರಿವು ಕಡಿಮೆಗೊಳಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಪರಿಣಾಮ ಮದ್ಯಾನದ ಹೊತ್ತಿಗೆ ಸಂಕಷ್ಟಕ್ಕೆ ಸಿಲುಕಿದ ಮೂವರು ಕುರಿಗಾಯಿಗಳನ್ನು ಸುರಕ್ಷಿತವಾಗಿ ದಡ್ಡಕ್ಕೆ ಕರೆತರಲಾಯಿತು.
ಸಾಕು ನಾಯಿಯೊಂದಿಗೆ ದಡಕ್ಕೆ ಬಂದ ಕುರಿಗಾಯಿಗಳು ಸಂಭಂಧಿಕರನ್ನು ಕಂಡು ಕಣ್ಣೀರು ಹಾಕಿದರು. ಬದುಕಿ ಬರುವ ಆಸೆಯೇ ಕಳೆದುಕೊಂಡಿದ್ದೆವು ಎಂದು ರೋಧಿಸಿದರು. ತಮ್ಮ ಜೀವ ರಕ್ಷಿಸಿದ ಅಧಿಕಾರಿಗಳಿಗೆ ಕೈಮುಗಿದು ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಮಂಜುನಾಥ್ ಘಟನೆ ಮರುಕಳಿಸದಂತೆ ಎಚ್ಚರಿಕೆವಹಿಸಿ ಎಂದು ಸೂಚನೆ ನೀಡಿದರು. ನದಿಪಾತ್ರದ ಜನ ಎಚ್ಚರಿಕೆಯಿಂದಿರುವಂತೆ ಕಳೆದ 10ದಿನಗಳಿಂದ ಮಾಧ್ಯಮಗಳ ಮೂಲಕ ಸೂಚಿಸಲಾಗುತ್ತಿದೆ. ಇನ್ನುಮುಂದೆ ಇಂಥ ಸಂದರ್ಭದಲ್ಲಿ ಎಲ್ಲರೂ ಜಾಗೃತರಾಗಿರಬೇಕೆಂದು ಹೇಳಿದರು.
