ಮೀಸಲಾತಿ ಹೆಚ್ಚಳ ಬೇಡಿಕೆಃ ಸರ್ಕಾರದ ವಿರುದ್ಧ ಆಕ್ರೋಶ
ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಡಿಸಿ ಕಚೇರಿಗೆ ಮುತ್ತಿಗೆ
ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ನಾಳೆ ಡಿಸಿ ಕಚೇರಿಗೆ ಮುತ್ತಿಗೆ
ಮೀಸಲಾತಿ ಹೆಚ್ಚಳ ಬೇಡಿಕೆಃ ಸರ್ಕಾರದ ವಿರುದ್ಧ ಆಕ್ರೋಶ
yadgiri, ಶಹಾಪುರ: ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಕಳೆದ 150 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರ ಹೋರಾಟಕ್ಕೆ ನೈತಿಕ ಬೆಂಬಲ ನೀಡಿ ಸೋಮವಾರ ಜು.11 ರಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಸಮುದಾಯದವರಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿಲಿದ್ದೇವೆ ಎಂದು ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮರೆಪ್ಪ ಮಗ್ದಂಪುರ ತಿಳಿಸಿದರು.
ನಗರದ ಅತಿಥಿಗೃಹದಲ್ಲಿ ಶನಿವಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮುಖಂಡರಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಿವೃತ್ತಿ ನ್ಯಾಯಮೂರ್ತಿ ನಾಗಮೋಹನ ದಾಸ ಅವರು ನೀಡಿರುವ ವರದಿಯಂತೆ ಪರಿಶಿಷ್ಟ ಜಾತಿಯವರಿಗೆ ಶೇ.15 ರಿಂದ 17 ಮೀಸಲಾತಿ ಹೆಚ್ಚಿಸಬೇಕು. ಅದರಂತೆ ಪರಿಶಿಷ್ಟ ಪಂಗಡದ ಶೇ.3 ರಿಂದ 7 ಕ್ಕೆ ಹೆಚ್ಚಿಸಿ ಎಂಬ ವರದಿ ನೀಡಿದ್ದಾರೆ. ಆದರೆ ರಾಜ್ಯ ಸರ್ಕಾರ ಮೀನಮೇಷ ಏಣಿಸುತ್ತಾ ಅನುಷ್ಠಾನಕ್ಕೆ ಉಪಸಮಿತಿ ನೇಮಿಸುವ ಮೂಲಕ ಪರಿಶಿಷ್ಟರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಮೀಸಲಾತಿ ಕ್ಷೇತ್ರದಿಂದ ಆಯ್ಕೆ ಆಗಿರುವ ಸಂಸದರು ಹಾಗೂ ಶಾಸಕರು ಮೀಸಲಾತಿ ಹೆಚ್ಚಳದ ಹೋರಾಟಕ್ಕೆ ಜಾಣ ಕಿವುಡತನ ಪ್ರದರ್ಶಸುತ್ತಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಆಯಾ ಮೀಸಲಾತಿ ಕ್ಷೇತ್ರದಿಂದ ಆಯ್ಕೆಯಾದ ಶಾಸಕರ, ಸಂಸದ ಮನೆ ಮುಂದೆ ಧರಣಿ ನಡೆಸಿ ಪ್ರತಿಭಟನೆಯ ಬಿಸಿ ಮುಟ್ಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮುಖಂಡರಾದ ಕೆ.ಬಿ.ವಾಸು, ಮರೆಪ್ಪ ಪ್ಯಾಟಿ ಶಿರವಾಳ, ನೀಲಕಂಠ, ಶಿವುಪುತ್ರ ಜವಳಿ, ನಾಗಣ್ಣ ಬಡಿಗೇರ, ಬಸವರಾಜ ಅರುಣಿ, ಮಾನಸಿಂಗ್ ಚವ್ಹಾಣ, ಯಲ್ಲಪ್ಪ ಶೆಟ್ಟಿಕೇರಾ, ಗೌಡಪ್ಪಗೌಡ ಆಲ್ದಾಳ, ರವಿ ಯಕ್ಷಿಂತಿ, ಭೀಮಾಶಂಕರ ಕಟ್ಟಿಮನಿ, ಹೊನ್ನಪ್ಪ ಗಂಗನಾಳ, ಯಲ್ಲಾಲಿಂಗ ಯಕ್ಷಿಂತಿ, ಶರಣಪ್ಪ ಅನಸಕೂಗೂರ, ಹಣಮಂತರಾಯ ಟೊಕಾಪುರ, ಅಮರೇಶ ಇಟಗಿ, ಶರಣಪ್ಪ ಪ್ಯಾಟಿ, ರಾಘವೇಂದ್ರ ಯಕ್ಷಿಂತಿ, ತಿರುಪತಿ ಯಕ್ಷಿಂತಿ, ವಿನೋದ ರಾಠೋಡ, ಸುಭಾಸ ರಾಂಪುರ ಇದ್ದರು.
ಬೇಡ ಜಂಗಮರಿಗೆ ಮೀಸಲಾತಿ: ವಿರೋಧ
ಶಹಾಪುರ: ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿರುವ ಊರು ಜಂಗಮರು ಸೇರಿಕೊಂಡು ಬೇಡ ಜಂಗಮರ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆಯುವ ಹುನ್ನಾರ ನಡೆಸುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಇಲ್ಲದೆ ಹೋದರೆ ಪರಿಶಿಷ್ಟರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಕ್ತರ ಹೆಸರಿನಲ್ಲಿ ಪಾದ ತೊಳೆದುಕೊಂಡು ಜಗದ್ಗುರುಗಳು, ಪೀಠಾಧಿಪತಿಗಳಾದ ಜಂಗಮರು ಬೇಡ ಜಂಗಮರಾಗಲು ಸಾಧ್ಯವಿಲ್ಲ. ಪರಿಶಿಷ್ಟರನ್ನು ಸದಾ ಕೀಳಾಗಿ ಕಾಣುವ ಅವರು ರಾಜಕೀಯ ಮೀಸಲಾತಿಯನ್ನು ಪಡೆಯುವ ಏಕೈಕ ಹುನ್ನಾರ ಇದಾಗಿದೆ. ರಾಜ್ಯದಲ್ಲಿ ಬೇಡ ಜಂಗಮ ಸಮುದಾಯವಿಲ್ಲ. ಕುಲಶಾಸ್ತ್ರ ಅಧ್ಯಯನ ವರದಿ ಮಾಡಲಿ. ನಿಜವಾದ ಪರಿಶಿಷ್ಟರ ಮೀಸಲಾತಿ ಕಬಳಿಸಲು ಹೊಂಚು ಹಾಕಿರುವುದು ಮೇಲ್ನೊಟಕ್ಕೆ ಕಂಡು ಬರುತ್ತಿದೆ. ಸರ್ಕಾರ ಮೊಳಕೆಯಲ್ಲಿ ಸಮಸ್ಯೆಯನ್ನು ಚಿವುಟಿ ಹಾಕಬೇಕು ಇಲ್ಲದೆ ಹೋದರೆ ರಾಜ್ಯದ ತುಂಬೆಲ್ಲ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪರಿಶಿಷ್ಟ ಮುಖಂಡರು ಎಚ್ಚರಿಕೆ ನೀಡಿದ್ದಾರೆ.