ಲಿಂಗಕ್ಕೆ ಸೂರ್ಯ ಸ್ಪರ್ಶವಾಗದಿದ್ದರೆ ಯುದ್ಧವಾಗುತ್ತಾ?
ಎಷ್ಟು ದಿನ ಹೀಗೇ ಮೌಢ್ಯ ಬಿತ್ತುತ್ತೀರಿ..!
–ಶಿವಕುಮಾರ್ ಉಪ್ಪಿನ
ಲಿಂಗಕ್ಕೆ ಸೂರ್ಯನ ಕಿರಣ ಬೀಳದಿದ್ದರೆ ಯುದ್ಧ ಸಂಭವಿಸುತ್ತೆ ಅಂತ ಹೇಳಿದ್ದನ್ನೇ ಭರ್ಜರಿಯಾಗಿ ಕೊಡುವ ಎಲ್ಲ ಟಿವಿಯವರು ಒಬ್ಬೇ ಒಬ್ಬ ವಿಜ್ಞಾನಿ, ವಿಚಾರವಂತರನ್ನೇಕೆ ಮಾತನಾಡಿಸಲ್ಲ?
ಈ ಅರ್ಚಕರದು ಬಿಡಿ, ಪತ್ರಿಕೋದ್ಯಮ ಓದಿರುವವರಿಗೂ ಕೊಂಚ ಸಂಯಮ ಬೇಡವೇ?
ಯಾಕೆ ಹೀಗೆ ಜನರಲ್ಲಿ ಭಯ ಬಿತ್ತುತ್ತೀರಿ? ನಿಮ್ಮ ಟಿವಿ ನೋಡಲಂತಾ? ಜನ ಮೊದಲೇ ಶಿಕ್ಷಣವಿಲ್ಲದೇ ‘ಕೊಳಕಾಗಿ ಬದುಕಿ’ ಸಾಯುತ್ತಿದ್ದಾರೆ.
ಅವರಲ್ಲಿ ಹೀಗೆ ಮೊದಲಿಂದಲೂ ಯಾಕೆ ಅಜ್ಞಾನ ಬಿತ್ತುತ್ತಲೇ ಇದ್ದೀರಿ? ಟಿವಿ ಆ್ಯಂಕರ್ ಗಳೇ ನೀವು ಮನೆಗೆ ಹೋದ ಮೇಲೆ ನಿಮ್ಮ ಮಕ್ಕಳು ಈ ಬಗ್ಗೆ ಪ್ರಶ್ನೆ ಕೇಳಿದಾಗ ಏನಂತ ಉತ್ತರಿಸುತ್ತೀರಿ? ಇನ್ನೇನು ಯುದ್ಧ ಗ್ಯಾರಂಟಿ ಅನ್ನುತ್ತೀರಾ?
ಇನ್ನು ಅರ್ಚಕರ, ಜ್ಯೋತಿಷಿಗಳ ಇಂತಹ ಹೇಳಿಕೆಗಳಿಗೆ ಏನೂ ಕಡಿವಾಣವಿಲ್ಲವೇ? ಮಾತೆತ್ತಿದ್ದರೆ ಬರೀ ಗಂಡಾಂತರ, ಈ ವರ್ಷ ಹಾಗೆ, ಈ ತಿಂಗಳು ಪ್ರಳಯ, ಮುಂದಿನ ಗ್ರಹಣಕ್ಕೆ ಸ್ಫೋಟ, ಬಿರುಗಾಳಿ, ಅಗೋಚರ ಶಕ್ತಿಯ ಕಾಟ… ಮಳೆ, ಪ್ರವಾಹ ಛೇ ಛೇ ಎನ್ರಿ ಇದೆಲ್ಲ? ನಿಮಗೆ ಏನೂ ಅನ್ನಿಸುವುದೇ ಇಲ್ಲವೇ? ಮೊದಲೇ ಆಗುವುದು ಗೊತ್ತಿದ್ದರೆ ಅದನ್ನು ತಡೆದು ಇಡೀ ವಿಜ್ಞಾನಕ್ಕೇ ಅಚ್ಚರಿ ಅನ್ನಿಸಿಕೊಳ್ಳಿರಿ ನೀವು! ಯಾಕೆ ಆ ಅವಕಾಶ ಕಳೆದುಕೊಳ್ಳುತ್ತೀರಿ.
ಅದು ಬಿಟ್ಟು ‘ಯುದ್ಧ ಆಗದಂತೆ ರುದ್ರಯಾಗ ಮಾಡಿ’ ಅನ್ನೋದು ಪರಿಹಾರವೇ? ಯಾವ ದೇಶ, ಯಾರು ಯಾಗ ಮಾಡಬೇಕು? ರುದ್ರಯಾಗದಿಂದ ಯುದ್ಧ ನಿಲ್ಲುವಂತಿದ್ದರೆ ಅದನ್ನು ಮಾಡಿಸುವುದು ಭಾಳ ಛೊಲೊ ಬಿಡ್ರಿ, ಯಾಕಂದ್ರೆ ಈ ಜಗತ್ತಿಗೆ ಶಾಂತಿ ಬೇಕಾಗಿದೆ! ನಿಜಕ್ಕೂ ಯಾಗಗಳಿಂದ ಯುದ್ಧ, ಗಂಡಾಂತರಗಳು ನಿಲ್ಲಲು ಸಾಧ್ಯವಿದ್ದರೆ ಅದೆಷ್ಟು ಚಂದವಿತ್ತು ಅಲ್ಲವೇ?
ಸೂರ್ಯ ಸ್ಪರ್ಶವಾಗದಿರುವುದರಿಂದ ಯುದ್ಧ ಆಗುತ್ತೆ ಅಂತ ಹೇಳುವ ನೀವು, ಮೊದಲೇ ಏಕೆ ಸೂರ್ಯ ಸ್ಪರ್ಶ ಆಗುವುದೇ ಇಲ್ಲ ಅಂತ ಹೇಳಲಿಲ್ಲ? ನಿಮಗೆ ಮುಂದೆ ಆಗುವುದು ಗೊತ್ತಲ್ಲ ಮತ್ತೆ!?
ನಮಗೆ ನಿಮ್ಮ ಮೇಲೆ ಯಾವ ದ್ವೇಷವೂ ಇಲ್ಲ. ಆದರೆ ಯಾಕೆ ಹೀಗೆ ಜನರನ್ನು ವಿನಾಕಾರಣ ಭಯದಲ್ಲೇ ಬದುಕುವಂತೆ ಮಾಡುತ್ತೀರಿ. ಬಿಡ್ರಿ ಇನ್ನಾದರೂ ಇವೆಲ್ಲ, ಸಾಕು.
ಜನ ಪ್ರಜ್ಞಾವಂತರಾಗುತ್ತಿದ್ದಾರೆ. ಇಂದಿನ ಮಕ್ಕಳು ಚಂದಗೆ ಓದುತ್ತಿವೆ. ಅವುಗಳಲ್ಲಿ ವೈಜ್ಞಾನಿಕ ಮನೋಭಾವ, ಒಳ್ಳೆಯ ಚಿಂತನೆಗಳನ್ನು ಬೆಳೆಸುವುದು ಬಿಟ್ಟು ಏನಿದೆಲ್ಲ? ಅವರು ಜಗತ್ತಿಗೆ ತೆರೆದುಕೊಳ್ಳುವುದು ಇಂತಹ ಸೂರ್ಯ ಸ್ಪರ್ಶಿ ರುದ್ರಯಾಗದಿಂದನಾ? ಹೇಳಿ.
ಈಗಲಾದರೂ ಸಾಮಾನ್ಯ ಜನರಿಗೆ ನೆಮ್ಮದಿಯಿಂದ ಬದುಕಲು ಬಿಡಿ, ಪ್ಲೀಸ್.
ಜನರ ನಂಬಿಕೆಗಳೇ ಬೇರೆ, ನೀವು ಹೇಳುವ ಇಂತಹ ಭವಿಷ್ಯವೇ ಬೇರೆ. ಜನರ ನಂಬಿಕೆಗಳ ಪ್ರಶ್ನೆ ಇದೆಲ್ಲ ಅಂತ ಸಮರ್ಥಿಸಿಕೊಂಡು ಯಾರೇ ಆಗಲಿ ಬಚಾವಾಗಬೇಡಿ.
ಎರಡಕ್ಕೂ ತಾಳೆ ಹಾಕಬೇಡಿ. ವಿಚಾರವೇ ಇಲ್ಲದ ಬದುಕನ್ನು ಸೃಷ್ಟಿಸಿ ಜನರನ್ನು ಮತಿಗೇಡಿಗಳಾಗಿ ಮಾಡಬೇಡಿ. ಈ ಸಂದರ್ಭ ವಿಚಾರವಾದಿ ಎಚ್.ನರಸಿಂಹಯ್ಯನವರು ತುಂಬ ನೆನಪಾಗುತ್ತಿದ್ದಾರೆ. ಬಸವಣ್ಣ ಮತ್ತೆ ಬರಬೇಕು ಅನಿಸುತ್ತಿದೆ.
ಮತ್ತೆ ಮತ್ತೆ ಬುದ್ಧ, ಬಸವಾದಿ ಶರಣರು, ಅಂಬೇಡ್ಕರ್ ನೆನಪಾಗುತ್ತಿದ್ದಾರೆ. ಅವರನ್ನು ಮರೆಯಲ್ಲಿಟ್ಟು ಬರೀ ಇಂತಹ ಅರ್ಚಕರ ವೈಭವೀಕರಣ ನಡೆದಿದೆಯಲ್ಲ ಅಂತ ಹಳಹಳಿ, ಸಂಕಟ ಆಗುತ್ತಿದೆ.
ಏನು ಮಾಡುವುದು, ಸದ್ಯಕ್ಕೆ ಬೇಕಂತಲೇ ಕತ್ತಲೆ ಕವಿಸುತ್ತಿದ್ದಾರೆ. ಗಂಟಲು ಹಿಡಿಯುತ್ತಿದ್ದಾರೆ.
–ಶಿವಕುಮಾರ್ ಉಪ್ಪಿನ, ಪತ್ರಕರ್ತ-ಬರಹಗಾರ
(88809 59555)