ಕರ್ತವ್ಯನಿರತ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ಕ್ರಮಕ್ಕೆ ಆಗ್ರಹ
ಸೂಕ್ತ ರಕ್ಷಣೆ ಇಲ್ಲದೆ ಕರ್ತವ್ಯ ನಿಭಾಯಿಸಲು ಸಿಬ್ಬಂದಿ ಆತಂಕ
yadgiri, ಶಹಾಪುರಃ ಮಂಗಳವಾರ ರಾತ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿ (ಸೆಕ್ಯೂರಿಟಿ ಗಾರ್ಡ್) ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಅಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿಗಳ ರಕ್ಷಣೆಗೆ ರಾತ್ರಿ ಪೊಲೀಸರೊಬ್ಬರನ್ನು ನೇಮಿಸಬೇಕೆಂದು ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಸೇವೆ ಸ್ಥಗಿತಗೊಳಿಸಿ ಆಸ್ಪತ್ರೆ ಮುಂದೆ ಬುಧವಾರ ಬೆಳಗ್ಗೆ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಸಮಯದಲ್ಲಿ ಕರ್ತವ್ಯನಿರತ ಭದ್ರತಾ ಸಿಬ್ಬಂದಿ ಮಹ್ಮದ್ ಶಫಿ ಅವರ ಮೇಲೆ ಕುಡಿದ ಅಮಲಿನಲ್ಲಿದ್ದ ಗುಂಪೊಂದು ಆಸ್ಪತ್ರೆಯೊಳಗೆ ನುಗ್ಗಿ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಸೇವೆಯಲ್ಲಿದ್ದ ಸಿಬ್ಬಂದಿ ಮತ್ತು ರೋಗಿಗಳಿಗೆ ತೊಂದರೆಯುಂಟು ಮಾಡಿದ್ದಾರೆ. ಆರೋಪಿತರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಪದ್ಮಾನಂದ ಗಾಯಕವಾಡ, ಡಾ.ಯಲ್ಲಪ್ಪ, ಡಾ.ವೆಂಕಟೇಶ ಭೈರಾಮಡಗಿ, ಡಾ.ಮಲ್ಲಪ್ಪ ಕಣಜಿಗಿಕರ, ಡಾ.ಗಂಗಾಧರ ಚಟ್ರಿಕಿ, ಡಾ.ಜಗಧೀಶ ಉಪ್ಪಿನ್, ಡಾ.ಪ್ರವೀಣ ಪಾಟೀಲ್, ಡಾ.ವಿಶ್ವನಾಥ ಬಂಗಾರಿ, ವಿ.ಎಂ.ಪಾಟೀಲ್, ಡಾ.ಚಂದ್ರಶೇಖರ ಚವ್ಹಾಣ ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳಾದ ಸಂಗಣ್ಣ ನುಚ್ಚಿನ, ಮಲ್ಲಿಕಾರ್ಜುನ, ಮಮತಾ, ವಿದ್ಯಾ, ಲಕ್ಷ್ಮೀ, ಪ್ರಿಯಾಂಕ, ಚನ್ನಮ್ಮ ಇತರರಿದ್ದರು.
ಆಸ್ಪತ್ರೆಯಲ್ಲಿ ಔಟ್ ಪೊಲೀಸ್ ಸ್ಟೇಷನ್‍ಗೆ ಮನವಿ
ದಿನದ 24 ಗಂಟೆಯಲ್ಲಿ ಜನರ ಸೇವೆಗೆ ಸದಾ ಸಿದ್ಧರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆಸ್ಪತ್ರೆಯ ವೈದ್ಯರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹಗಲಿನಲ್ಲಿ ಹೇಗೂ ಕರ್ತವ್ಯ ನಿಭಾಯಿಸಬಹುದು. ಆದರೆ ರಾತ್ರಿ ಹೊತ್ತಿನಲ್ಲಿ ಅಮಲಿನಲ್ಲಿ ಬಂದು ಯಾರೋ ಹಲ್ಲೆ ನಡೆಸುತ್ತಾರೋ ಏನು ಎಂಬ ಭಯ ಕಾಡುತ್ತಿದೆ. ಹೀಗಾಗಿ ಔಟ್ ಪೊಲೀಸ್ ಸ್ಟೇಷನ್ ಅಗತ್ಯವಿದ್ದು, ಈ ಕೂಡಲೇ ಜಿಲ್ಲಾಡಳಿತ ಪೊಲೀಸ್ ಸ್ಟೇಷನ್ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಾನಿರತರು ಮನವಿ ಮಾಡಿದರು. ಆಸ್ಪತ್ರೆಯಲ್ಲಿರುವ ರೋಗಿಗಳ ರಕ್ಷಣೆಗೂ ಅಷ್ಟೆ ಪ್ರಾಮುಖ್ಯವಿದ್ದು, ಇಂತಹ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಿಬ್ಬಂದಿ ಮಾರಣಾಂತಿಕ ಹಲ್ಲೆಃ ಸರ್ಕಾರಿ ನೌಕರರ ಸಂಘ ಖಂಡನೆ
ವಿವಿಧ ಕ್ಷೇತ್ರದಲ್ಲಿ ಸರ್ಕಾರಿ ನೌಕರರು ಸೇವೆ ಸಲ್ಲಿಸುತ್ತಿದ್ದು, ಆರೋಗ್ಯ ಇಲಾಖೆಯಲ್ಲೂ ಕರ್ತವ್ಯದಲ್ಲಿದ್ದಾರೆ. ಆರೋಗ್ಯ ಇಲಾಖೆಯಲ್ಲೂ ಸೇವೆ ಸಲ್ಲಿಸಿತಿದ್ದು, ಇಲ್ಲದ ಆರೋಪ ನೆಪ ಮಾಡಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುವದು ಸರಿಯಲ್ಲ. ಮಂಗಳವಾರ ರಾತ್ರಿ ದುಷ್ಕರ್ಮಿಗಳು ಭದ್ರತಾ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವದು ಖಂಡನೀಯವಾಗಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಯಪ್ಪಗೌಡ ಮಾತನಾಡಿದರು.
ಈ ಕೂಡಲೇ ಪೊಲೀಸ್ ಇಲಾಖೆ ದುಷ್ಕರ್ಮಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ ಇಲ್ಲಿನ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳಿಗೆ ಶಾಶ್ವತ ರಕ್ಷಣೆಗೆ ಖಾಯಂ ಪೊಲೀಸ್ ಸ್ಟೇಷನ್ ಅಗತ್ಯವಿದ್ದು, ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠರ ಗಮನಕ್ಕೆ ತರಲಾಗುವುದು ಎಂದರು.