ವಿನಯ ವಿಶೇಷಸಾಹಿತ್ಯ

ಕನ್ನಡದ ಕಾವ್ಯಾನಂದ; ಡಾ.ಸಿದ್ದಯ್ಯ ಪುರಾಣಿಕ‌

ಕನ್ನಡದ ಕಾವ್ಯಾನಂದ; ಡಾ.ಸಿದ್ದಯ್ಯ ಪುರಾಣಿಕ.
_________________________
ಏನಾದರೂ ಆಗು ಮೊದಲು ಮಾನವನಾಗು ಎಂಬ ನುಡಿ,ಹೊತ್ತಿತೋ ಹೊತ್ತಿತೋ ಕನ್ನಡದ ದೀಪ…ಎಂಬ ಹಾಡು ಡಾ.ಸಿದ್ದಯ್ಯ ಪುರಾಣಿಕರನ್ನು ನೆನಪಿಸುತ್ತವೆ. ಕನ್ನಡ ನಾಡು ಕಂಡ ಅಪರೂಪದ ಐ.ಎ.ಎಸ್.ಅಧಿಕಾರಿ, ಸಾಹಿತಿ, ಕವಿ, ವಚನಕಾರ, ದಕ್ಷ ಆಡಳಿತಗಾರ ಹೀಗೆ ಬಹುಮುಖ ಪ್ರತಿಭೆಯ, ಬಹುಭಾಷಾ ಪಂಡಿತ, ವಾಗ್ಮಿ, ಚಿಂತನಾಶೀಲರು ಹಾಗೂ ಸರಳ, ಸಜ್ಜನಿಕೆಯುಳ್ಳ ಪುರಾಣಿಕರ ಕಾವ್ಯನಾಮ ,’ಕಾವ್ಯಾನಂದ’ ಎನ್ನುವ ಕನ್ನಡದ ದೀಪ.

ಬಾಲ್ಯದಿಂದಲೇ ಸಾಹಿತ್ಯ ಅಧ್ಯಯನದ ಸಂಸ್ಕಾರಕ್ಕೆ ಒಳಗಾದರು. ತಂದೆ,ಪಂಡಿತ ಕಲ್ಲಿನಾಥ್ ಶಾಸ್ತ್ರಿ ಕಾವ್ಯ,ಛಂದಸ್ಸು, ವ್ಯಾಕರಣ, ಶಾಸ್ತ್ರ,ಶತಕ, ವಚನ, ಹಾಡುಗಳು, ನಾಟಕ ಹಾಗೂ ಪುರಾಣಗಳು ರಚನೆಯಲ್ಲಿ ಪ್ರಸಿದ್ಧಿ ಪಡೆದರೆ,ಅಜ್ಜ ಕವಿರತ್ನ ಚೆನ್ನಕವಿ ಕವಿಗಳಾಗಿ ವಿಖ್ಯಾತರು. ಸೋದರ ಮಾವ ಕಾಲಕಾಲೇಶ್ವರ ಶಾಸ್ತ್ರಿ ವೇದಾಂತ ಪಂಡಿತರು.ಹೀಗೆ ಅಪರೂಪದ ಕುಟುಂಬ ಪರಿಸರ ಸಿದ್ದಯ್ಯನವರಿಗೆ ಬಾಲ್ಯದಲ್ಲಿಯೇ ದೊರಕಿತು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ‘ದ್ಯಾಂಪುರ’ ಗ್ರಾಮದಲ್ಲಿ ಜೂನ್.18,1918 ದಿಲ್ಲಿ ಜನನ. ತಂದೆ ಪಂಡಿತ ಕಲ್ಲಿನಾಥ್ ಶಾಸ್ತ್ರಿ,ತಾಯಿ, ದಾನಮ್ಮ ನವರಿಗೆ ಐದು ಮಕ್ಕಳಲ್ಲಿ ಸಿದ್ದಯ್ಯ ಪುರಾಣಿಕ ಹಿರಿಯರು.

ಬಾಲ್ಯದಿಂದ ಸಾಹಿತ್ಯ ವೆನ್ನುವುದು ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿತು. ತುಂಬಾ ಶಿಸ್ತಿನಿಂದ ಕೂಡಿದ,ಅಧ್ಯಯನ ಶೀಲ ಪ್ರವೃತ್ತಿ ಯಿಂದ,ಸಾಹಿತ್ಯಾಧ್ಯಯನದಿಂದ ಮನಸ್ಸನ್ನು ಶಕ್ತಗೊಳಿಸಿಕೊಂಡರು.

ಏಕಾಗ್ರತೆ ಅವರಿಗೆ ವರವಾಗಿ ವಿದ್ಯಾರ್ಥಿ ಜೀವನದುದ್ದಕ್ಕೂ ಅತ್ಯುತ್ತಮ ಶ್ರೇಣಿಯಲ್ಲಿ ಗೌರವ ಸ್ಥಾನ ಪಡೆದರು.ಬಿ.ಎ.ಪರೀಕ್ಷೆಯಲ್ಲಿ ಕರ್ನಾಟಕ ವಿ.ವಿ ಗೆ ಪ್ರಥಮ ಸ್ಥಾನ ಪಡೆದು ಇವರು ಕಾನೂನು ಅಧ್ಯಯನ ಮಾಡಿ 1943 ರಲ್ಲಿ ತಹಶೀಲ್ದಾರರಾಗಿ ಆಯ್ಕೆ ಯಾದರು.

ಕರ್ತವ್ಯ ಸೇವೆಯ ಅವಕಾಶ..
ಹೈದರಾಬಾದ್ ಸಂಸ್ಥಾನದ ಲ್ಲಿದ್ದು ಪಡೆದ ಅನುಭವ ಅಪಾರ. ಕೆಲಸವನ್ನು ಅತ್ಯಂತ ಪ್ರೀತಿ, ದಕ್ಷತೆಯಿಂದ ನಿರ್ವಹಿಸಿ,ಕರ್ತವ್ಯ ಎನ್ನುವುದು ಸೇವೆಯ ಅವಕಾಶ ಎಂದು ಭಾವಿಸಿದರು.

ಡೆಪ್ಯೂಟಿ ಕಲೆಕ್ಟರ್,ಅಧೀನ ಕಾರ್ಯದರ್ಶಿ,ಉಪ ಕಾರ್ಯದರ್ಶಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯ ಮುಖ್ಯಾಧಿಕಾರಿ, ಜಿಲ್ಲಾಧಿಕಾರಿ, ಸಾರಿಗೆ, ಕಾರ್ಮಿಕ ಇಲಾಖೆಯ ಕಮಿಷನರ್ ಹೀಗೆ ವಿವಿಧ ಹುದ್ದೆಗಳಲ್ಲಿ 33 ವರ್ಷ ಪ್ರಾಮಾಣಿಕತೆ, ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆ ಪಡೆದರು.

ನಾಂದೇಡ, ಕಲಬುರ್ಗಿ,ತಾಂಡೂರು, ಯಾದಗಿರಿ, ಬೆಂಗಳೂರು, ಮಡಿಕೇರಿ, ಬೆಳಗಾವಿಯಲ್ಲಿ ಸೇವೆ ಸಲ್ಲಿಸಿ 1976ರಲ್ಲಿ ಬೆಂಗಳೂರಲ್ಲಿ ನಿವೃತ್ತಿ ಹೊಂದಿದರು.

ಸಾಹಿತ್ಯ ಕ್ಷೇತ್ರಕ್ಕೆ ಪುರಾಣಿಕರ ಕೊಡುಗೆ..
ವೃತ್ತಿ ಯಿಂದ ಐ.ಎ.ಎಸ್.ಅಧಿಕಾರಿ, ಪ್ರವೃತ್ತಿ ಯಲ್ಲಿ ಸಾಹಿತಿಗಳು.ಪುರಾಣಿಕರ ಸಾಹಿತ್ಯ ರಾಶಿ ವಿಪುಲ.13 ಕೃತಿಗಳು ಸಂಪಾದನೆ ಸೇರಿ 39 ಕೃತಿಗಳನ್ನು ರಚಿಸಿದ್ದಾರೆ. ಆತ್ಮಾರ್ಪಣೆ,ಭಾರತವೀರ,ರಜತರೇಖೆ,ಭಿನ್ನನೂಪುರ ಎಂಬ ನಾಟಕಗಳು,ತ್ರಿಭುವನ ಕಾದಂಬರಿ ಪ್ರಸಿದ್ಧಿ ಪಡೆದವುಗಳು.

ಮಕ್ಕಳಿಗಾಗಿ ಆರು ಕೃತಿಗಳು.ಹಾಗೂ ಬಸವಣ್ಣನವರ ಜೀವನ ಮತ್ತು ಸಂದೇಶ.ಮಹಾದೇವಿ,ಹರಡೆಕರ್ ಮಂಜಪ್ಪನವರು, ಸಿದ್ಧರಾಮ, ಅಲ್ಲಮಪ್ರಭು ಹಾಗೂ ಮಿರ್ಜಾ ಗಾಲಿಬ್ ಎಂಬ ಜೀವನ ಚರಿತ್ರೆ ಗಳು.

ಕಥಾ ಮಂಜರಿ ಹಾಗೂ ತುಷಾರ್ ಹಾರ ಎಂಬ ಎರಡು ಕಥಾ ಸಂಕಲನಗಳು.ಜಲಪಾತ,ಕರುಣಾ ಶ್ರಾವಣ,ಮಾನಸ ಸರೋವರ ಮೊದಲು ಮಾನವನಾಗು ಕಲ್ಲೋಲಮಾಲೆ,ಚರಗ,ಮರುಳುಸಿದ್ದನಕಂತೆ, ಆಯ್ದ ಕವನಗಳು ಇತ್ಯಾದಿ ಕವನ ಸಂಕಲನಗಳು
ವಚನನಂದನ, ವಚನೋದ್ಯಾನವಚನರಾಮ್ ಕೃತಿಗಳು ಅಪಾರ ಪ್ರಸಿದ್ಧಿ ಪಡೆದಿವೆ.ಪುರಾಣಿಕರ ಮತ್ತೊಂದು ಮಹತ್ವದ ಕೃತಿ ಎಂದರೆ ‘ಶರಣ ಚರಿತಾಮೃತ’ 78 ಶಿವಶರಣರು ಜೀವನ ಚರಿತ್ರೆ ಗಳನ್ನು ಒಳಗೊಂಡಿದೆ.

ಶರಣತತ್ವದ ಸೊಬಗು,ಅದರಲ್ಲಿರುವ ಅಮೃತತ್ವವನ್ನು, ಶ್ರೀಮಂತ ಗೊಳಿಸುವುದು ರೊಂದಿಗೆ ಸಂಸ್ಥೀಕರಣಗೊಂಡ ವಚನ ಸಾಹಿತ್ಯವನ್ನು ಸಾಮಾಜೀಕರಣಗೊಳಿಸಿದ ಕೀರ್ತಿ ಸಿದ್ದಯ್ಯ ಪುರಾಣಿಕರದು.

ಕನ್ನಡದ ಕಹಳೆ..
ಕನ್ನಡದ ವಿಶ್ವಕೋಶ ಯೋಜನೆ,ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು ಯೋಜನೆ,ಸರ್ಕಾರದಿಂದ ಪ್ರಕಟವಾದ ಸುಲಭಾವೃತ್ತಿಯ ಲೀಲಾವತಿ ಪ್ರಬಂಧ, ಹರಿಶ್ಚಂದ್ರ ಕಾವ್ಯ, ಜೈಮಿನಿ ಭಾರತ, ವಚನಸಾಹಿತ್ಯ ಸಂಗ್ರಹ, ಸರ್ವಜ್ಞನ ವಚನಗಳು ಕಥೆ ಕೃತಿ ಪ್ರಕಟಣೆ ಯೋಜನೆ ಗಳಲ್ಲಿ ಅವಿರಿತ ಪ್ರಯತ್ನ ಪುರಾಣಿಕರದು.

ವಿವಿಧ ಸೇವೆಯಲ್ಲಿ..
ಕನ್ನಡ ನಿಘಂಟು ಸಮಿತಿ ಸದಸ್ಯ,ಕೇಂದ್ರ ರಾಜ್ಯ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ,ಬಸವ ಸಮಿತಿಯ ಅಧ್ಯಕ್ಷ, ಬಸವಪಥ ಹಾಗೂ ಬಸವ ಜರ್ನಲ್ ಗಳ ಪ್ರಧಾನ ಸಂಪಾದಕ, ಕರ್ನಾಟಕ ಜಾನಪದ ಟ್ರಸ್ಟಿ, ಕನ್ನಡ ಸಂವರ್ದಕ ಟ್ರಸ್ಟಿ ಅಧ್ಯಕ್ಷ,ಬಿ.ಎಂ.ಶ್ರೀ ಪ್ರತಿಷ್ಠಾನ, ಡಾ.ಸರೋಜನಿ ಮಹಿಷಿ ಸಮಿತಿಗಳಲ್ಲಿ ಸದಸ್ಯ, ಗೋಕಾಕ್ ಚಳುವಳಿ ನೇತಾರರಾಗಿ ದುಡಿದ ಶ್ರೇಯಸ್ಸು ಇವರದು.

ಗೌರವ ಪುರಸ್ಕಾರ..

ಕಲಬುರ್ಗಿ ಯಲ್ಲಿ 1988 ದಿಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷತೆ, ಕರ್ನಾಟಕ ವಿ.ವಿ ಯಿಂದ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಗೌರವಗಳು, ಪುರಸ್ಕಾರಗಳು ಪುರಾಣಿಕರನ್ನು ಅರಸಿ ಬಂದಿವೆ.

ಉತ್ತಮ ಆಡಳಿತಗಾರ ರಾಗಿ, ಆಧುನಿಕ ವಚನಕಾರರಾಗಿ, ವೃತ್ತಿ ಹಾಗೂ ಪ್ರವೃತ್ತಿ ಯಿಂದ ಕನ್ನಡಿಗರ ಸೇವೆ ಅರ್ಥಪೂರ್ಣ ಗೊಳಿಸಿದ ಶ್ರೇಯಸ್ಸು ಇವರದು.ಇವರನ್ನು ಕುರಿತು ಕುವೆಂಪು ಹೇಳುವಂತೆ ಜ್ಞಾನ, ಅಧಿಕಾರ, ವಿನಯ, ಸೌಜನ್ಯ ಹಾಗೂ ಸೃಜನಶೀಲತೆ ಏಕತ್ರಗೊಳ್ಳುವುದು ಅಪರೂಪ, ಅದು ಸಿದ್ದಯ್ಯ ಪುರಾಣಿಕರಲ್ಲಿ ಕಾಣಬಹುದು, ಎಂದಿದ್ದಾರೆ.

ಡಾ.ಸಿದ್ಧಯ್ಯ ಪುರಾಣಿಕ ರು ಸೆಪ್ಟೆಂಬರ್ 5 –1994 ರಂದು ಪತ್ನಿ ಗಿರಿಜಾದೇವಿ, ಸುಪುತ್ರಿಯರಾದ ವಿಜಯಾ, ಶಿವಗೀತಾ, ಭಾರತಿ ಹಾಗೂ ಸುಪುತ್ರ ಪ್ರಸನ್ನಕುಮಾರ್ ಇವರನ್ನು ಬಿಟ್ಟು ದೇಹತ್ಯಾಗ ಮಾಡಿದರು. ನಾಡಿನಾದ್ಯಂತ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಕನ್ನಡನಾಡಿನಲ್ಲಿ ಜನಮನ್ನಣೆ ಪಡೆದು ಇಂದಿಗೂ ನಮ್ಮೆಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದವರು ನಿಮ್ಮ ಪುರಾಣಿಕರು.

ಡಾ.ಗಂಗಾಧರಯ್ಯ ಹಿರೇಮಠ. ಪ್ರಾಧ್ಯಾಪಕರು,
ದಾವಣಗೆರೆ.

Related Articles

Leave a Reply

Your email address will not be published. Required fields are marked *

Back to top button