ಆತ್ಮಹತ್ಯೆಗೆ ಶರಣಾಗೋದೇಕೆ, ತಡೆಯೋದ್ಹೇಗೆ?; ತಜ್ಞರು ಹೇಳಿದ್ದೇನು ಗೊತ್ತಾ?
ನೈತಿಕ ಅಧಃಪತನದಿಂದ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರವೃತ್ತಿ…
ನೇಣು ಹಾಕಿಕೊಂಡು ಯುವಕ, ಯುವತಿಯ ಆತ್ಮಹತ್ಯೆ, ಪರೀಕ್ಷೆಯಲ್ಲಿ ಫೇಲಾಗಿರುವುದಕ್ಕೆ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಆತ್ಮಹತ್ಯೆ, ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ತಾಯಿ ಕೌಟುಂಬಿಕ ಶೊಷಣೆ ತಾಳಲಾರದೆ ವಿಷವನ್ನು ಸೇವಿಸಿ ಮಹಿಳೆಯೊಬ್ಬಳ ಆತ್ಮಹತ್ಯೆ, ಸಾಲದ ಬಾಧೆ ತಾಳಲಾರದೆ ರೈತರ ಆತ್ಮಹತ್ಯೆ ಹೆಂಡತಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ನಿರುದ್ಯೋಗಿ ಶಿಕ್ಷಿತರು ಇಂತಹ ಹಲವಾರು ಬಗೆಯ ಆತ್ಮಹತ್ಯೆಯ ವಿಷಯಗಳು, ಘಟನೆಗಳು ಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ, ನಮ್ಮ ಸುತ್ತಮುತ್ತಲಿನಲ್ಲಿ ನೋಡುತ್ತೇವೆ, ಕೇಳುತ್ತೇವೆ, ಓದುತ್ತೇವೆ.
ಮನುಷ್ಯ ಜಗತ್ತಿಗೆ ಬಂದಾಗಿನಿಂದ ಅನೇಕ ಬಗೆಯ ಕಷ್ಟ ಕಾರ್ಪಣ್ಯಗಳನ್ನು, ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸಿದ್ದಾನೆ ಮತ್ತು ಎದುರಿಸುತ್ತೀದ್ದಾನೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕುವುದೇ ಜೀವನ. ಸಂಘರ್ಷದ ಮತ್ತೋಂದು ಹೆಸರು ಎನ್ನಬಹುದು. ಇದರಲ್ಲಿ ಸಾಫಲ್ಯ ಹಾಗೂ ವೈಫಲ್ಯ ಎರಡೂ ಇದೆ. ಇದು ಸ್ಪರ್ದಾತ್ಮಕ ಜಗತ್ತು ಇಲ್ಲಿ ಏನನ್ನಾದರೂ ಪಡೆಯಬೇಕಾದರೆ ಅದಮ್ಯೆ ಸಹಾಸ ಮಾಡಬೇಕು. ದೃಡ ಸಂಕಲ್ಪ ಮಾಡಬೇಕು ಮತ್ತು ಶ್ರಮಿಸಬೇಕು, ನಿರಂತರ ಪ್ರಯತ್ನಗಳಿರಬೇಕು ಇವುಗಳಿದ್ದಾಗ ಮಾತ್ರ ಬದುಕು ಅರ್ಥವನ್ನು ಕಂಡುಕೊಳ್ಳುತ್ತದೆ. ನೆಮ್ಮದಿ
ಶಾಂತಿ, ಯಶಸ್ಸು ಲಭಿಸುತ್ತವೆ. ಎಂದು ಹೇಳಬಹುದು.
ಮನುಷ್ಯ ಸ್ವಾಭಾವಿಕವಾಗಿ ಸಂವೇದನಾಶೀಲನಾಗಿದ್ದಾನೆ. ತನ್ನ ಆತ್ಮ ಪ್ರತಿಷ್ಠೆಗೆ ಧಕ್ಕೆ ಉಂಟಾದಾಗ, ತನಗೆ ಸುಲಭ ಎನಿಸುವ ದಾರಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ. ಆತ್ಮಾಭಿಮಾನದ ಕಾರಣ ಸಣ್ಣ ವಿವಾದ ಅಥವಾ ಸಮಸ್ಯೆ, ಕ್ಷುಲ್ಲಕ ಕಾರಣಗಳು ಮನಸಿಗೆ ಅಸಹನೀಯ ವೇದನೆಯನ್ನು ತರುತ್ತದೆ.
ಸಮಸ್ಯೆ ತೀವ್ರವಾದಾಗ ಮನಸ್ಸಿನಲ್ಲಿ ಆವೇಗ ಅಥವಾ ಉದ್ವೇಗ ಹೆಚ್ಚಿ ಆಲೋಚನೆಯ ದಾರಿಗಳು ಮುಚ್ಚಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಮನುಷ್ಯ ವಿಚಾರಮಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಈ ಕ್ಷಣಿಕ ಆವೇಷದಲ್ಲಿ ಎಲ್ಲವೂ ಏರುಪೇರಾಗುತ್ತವೆ. ಈ ಸಂದರ್ಭವು ಆತನನ್ನು ಆತ್ಮಹತ್ಯೆಗೆ ಮನಸ್ಸು ಸೇಳೆದುಕೊಂಡುಹೊಗುತ್ತದೆ. ಖ್ಯಾತ ಸಮಾಜಶಾಸ್ರಜ್ಞ ಡರ್ಖೀಂರವರು ಹೇಳುವಹಾಗೆ ಮನುಷ್ಯ ನೈತಿಕ ಅಧ:ಪತನಗೊಳ್ಳುತ್ತಾ ಹೋದಂತೆಲ್ಲ ಆತ್ಮಹತ್ಯೆ
ಪ್ರಕರಣಗಳು ಹೆಚ್ಚುತ್ತಾ ಹೋಗುತ್ತವೆ. ನಮ್ಮ ಸಮಾಜದಲ್ಲಿ ಆತ್ಮಹತ್ಯೆಗಳ ಪ್ರಖರಣಗಳು ಹೆಚ್ಚಳಿಕೆ ನೈತಿಕ ಅಧ:ಪತನ ಕೂಡ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ನಿಜವಾಗಿಯೂ ಡರ್ಖೀಂ ರವರ ಈ ಮೇಲಿನ ವಿಚಾರ ನೂರಕ್ಕೆ ನೂರರಷ್ಟು ಸತ್ಯ.
ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳಲ್ಲಿ ಸಮಾಜದ ಬಂಧುಗಳು, ಕೌಟುಂಬಿಕ ಸಂಬಂಧಿಕರು ಹಾಗೂ ಇತರ ಜನರಿಂದ ವ್ಯಕ್ತಿ ಅಪಮಾನಿತನಾಗಿರುವುದೆ. ಪ್ರಮುಖ ಕಾರಣವಾಗಿರುತ್ತದೆ. ಇತರರಿಂದ ಎದುರಾಗುವ ಸಮಸ್ಯೆಗಳಿಗೆ ಪರಿಹಾರಗಳ ಬಗ್ಗೆ ವಿಚಾರ ಮಾಡದೆ ನೊಂದು ಅತ್ಮಹತ್ಯೆಯ ಬಗ್ಗೆ ಯೋಚಿಸುವುದು ವಿಷಾದನಿಯ ಸಂಗತಿ. ಸಮಸ್ಯೆಗಳಿಂದ ತೋಳಲಾಡುವ ವ್ಯಕ್ತಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನಸ್ಸು ಮಾಡಿದರೂ ಸಹ ಬದುಕಬೇಕೆಂಬ ಆಸೆ ಮನಸ್ಸಿನಲ್ಲಿ ತುಡಿಯುತ್ತಿರುತ್ತದೆ. ಕಾಯಿಲೆಯಿಂದ ನರಳುವ ವ್ಯಕ್ತಿ ತಾನು ಬೇಗ ಆರೋಗ್ಯವಂತನಾಗಬೇಕೆಂದು ಬಯಸುತ್ತಾನೆ. ಆದರೆ ಸಮಸ್ಯೆಗಳಲ್ಲಿ ಮನಸ್ಸನ್ನು ಕೇಂದ್ರಿಕೃತಗೊಳಿಸಿದವರು ತಮ್ಮ ಅಸ್ತಿತ್ವವನ್ನು ಮರೆತು ಆತ್ಮಹತ್ಯೆಗೆ ಶರಣಾಗುತ್ತಾರೆ.
ಮನಸ್ಸಿನಲ್ಲಿ ಕಲ್ಪಿಸಿಕೊಂಡ ಆಸೆಗಳು, ಕನಸುಗಳಿಗೆ ತದ್ವಿರುದ್ಧವಾಗಿ ದು:ಖ-ದುಮ್ಮಾನಗಳು ಎದುರಾದರೆ ವ್ಯಕ್ತಿಯ ಸ್ಥೈರ್ಯ, ಶಕ್ತಿ ಕುಸಿಯುತ್ತದೆ. ಬಹುಷ್ಯದ ಬಗ್ಗೆ ವಿಶ್ವಾಸ ಹಾಗೂ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಕಳೆದುಕೊಂಡಂತಾಗುತ್ತದೆ. ಅರೇ ಪ್ರಯತ್ನದಿಂದ ಮಾಡಿದ ಕೆಲಸಗಳು ವಿಫಲವಾದಾಗ ಮನಸ್ಸಿನಲ್ಲಿ ನಿರಾಸೆಯ ಭಾವನೆಗಳಿಗೆ ಬಲ ಬರುತ್ತದೆ. ದೃಢ ವಿಶ್ವಾಸದ ಕೊರತೆಯಿಂದ ಪ್ರತಿರೋಧಿಸುವ ಶಕ್ತಿ ಕ್ಷೀಣಿಸುತ್ತದೆ. ತಾನು ನಂಬಿದವರಿಂದ ನಿರೀಕ್ಷಿಸಿದ್ದನ್ನು ಪಡೆಯಲು ಸಾಧ್ಯವಾಗದೆ ಇದ್ದಾಗ ಮತ್ತು ಅವರಿಂದ ಅಸಹಕಾರ ಹಾಗೂ ವ್ಯತಿರಿಕ್ತವಾದ ವರ್ತನೆಗಳು ಕಂಡು ಬಂದಾಗ ವ್ಯಕ್ತಿಗೆ ತನ್ನ ಮೇಲೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುತ್ತವೆ. ಒಬ್ಬ ವ್ಯಕ್ತಿ ತನ್ನ ಬಗ್ಗೆ ನಂಬಿಕೆ ಕಳೆದುಕೊಂಡರೆ ಅವನಲ್ಲಿನ ಮಾನಸಿಕ ಶಕ್ತಿ ದುರ್ಬಲವಾಗುತ್ತದೆ. ನಿರಾಸೆಯ ಉತ್ತುಂಗದ ಸಮಯದಲ್ಲಿ ಅಥವಾ ನಿರಾಸೆಯ ಭಾವನೆಗಳು ಹೆಚ್ಚಾದಾಗ ವ್ಯಕ್ತಿಗೆ ತನ್ನ ಉದ್ವಿಗ್ನತೆಯಿಂದ ಪಾರಾಗಲು ಆತ್ಮಹತ್ಯೆಯ ಸುಲಭ ಮಾರ್ಗ ಹುಡುಕಿಕೊಳ್ಳತ್ತಾನೆ. ಎಂಬುದು ಅನೇಕ ಸಮಾಜವಿಜ್ಞಾನಿಗಳು, ಮನಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.
ನಗರಗಳ ಆಡಂಬರದ ಜೀವನ ಹಾಗೂ ಮಾನವರಲ್ಲಿ ಹೆಚ್ಚುತ್ತಿರುವ ಆಸೆ ಆಕಾಂಕ್ಷೆಗಳು, ಅವನ ಜೀವನದ ಚೌಕಟ್ಟನ್ನು ಕೂಡ ಅಸ್ತವ್ಯಸ್ಥಗೊಳಿಸುತ್ತದೆ. ಮಹಾತ್ಮ ಬುದ್ಧ ಆಸೆಯೇ ದು:ಖಕ್ಕೆ ಮೂಲ ಎಂದಿದ್ದಾನೆ. ಈ ರೀತಿ ಅತೀ ಆಸೆಯ ಪರಿಣಾಮವಾಗಿ ಲಾಭ ನಷ್ಟದ ಭಾವನೆಗಳು ಹೆಚ್ಚಾಗಿ ಕೌಟುಂಬಿಕ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತಿವೆ. ಹೆಚ್ಚು ಕಡಿಮೆ ಹಣ ಸಂಪಾದಿಸುವ ಸ್ಪರ್ದೆಯಲ್ಲಿ ಹಾಗೂ ಇಂದಿನ ಯಾಂತ್ರಿಕ ಯುಗದಲ್ಲಿ ನಾವು ಮಾನವೀಯ ಭಾವನಾತ್ಮಕ ಸಂಬಂಧಗಳಿಂದ ದೂರ ಸರಿಯುತ್ತಿದ್ದೇವೆ. ಪ್ರೀತಿ, ವಿಶ್ವಾಸ, ಹೊಂದಾಣಿಕೆ, ಸಹನೆ, ತಾಳ್ಮೆ ಮುಂತಾದ ಮೌಲ್ಯಗಳು ಮಾಯವಾಗುತ್ತೀವೆ. ನಮ್ಮ ಸುತ್ತಲೂ ಸ್ವಾರ್ಥ ಅಹಂಕಾರಗಳ ಗೋಡೆಯನ್ನು ಕಟ್ಟಿಕೊಂಡಿದ್ದೇವೆ. ಇದರ ಪರಿಣಾಮವಾಗಿ ಇಂದು ಸಮಾಜದಲ್ಲಿ ಒಂಟಿತನ, ಪ್ರೀತಿಪಾತ್ರರ ಅಗಲಿಕೆ, ದ್ವೇಷ, ಕ್ಷುಲ್ಲಕ ಜಗಳಗಳು ಹಲವಾರು ಒತ್ತಡ ಹಾಗೂ ತೀವ್ರ ಆತಂಕ ಮುಂತಾದ ಸಮಸ್ಯೆಗಳನ್ನು ಎದುರಿಸಿ ಹೋರಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಪರಸ್ಪರರು ಹೊಂದಿಕೊಂಡು ಹೃದಯ ವೈಶಾಲ್ಯತೆ ತೋರಿಸುತ್ತಿಲ್ಲ. ಜನರಲ್ಲಿ ಇತರರ ಸುಖ ದು:ಖಗಳನ್ನು ಪರಸ್ಪರರು ಅರಿತುಕೊಳ್ಳಲು ಸಮಯವೇ ಇಲ್ಲದಂತಾಗಿದೆ. ಇದರಿಂದ ಜನರು ನಿರಾಸೆಗೊಂಡು ಹಾಗೂ ಆತಂಕಗೊಂಡು ಅಥವಾ ಹಲವಾರು ಒತ್ತಡಗಳಿಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಮನಸ್ಸಿನಲ್ಲಿ ನಿರಾಸೆಯನ್ನು ತುಂಬಿಕೊಂಡಿರುವ ವ್ಯಕ್ತಿ ದೈರ್ಯವನ್ನು ಕಳೆದುಕೊಂಡು, ಮುಂದಾಗುವ ವಿಪತ್ತುಗಳನ್ನು ಕಲ್ಪಿಸಿಕೊಂಡು ಚಿಂತಿಸುತ್ತಾನೆ. ನಿರಾಸೆ ಭಾವನೆ ಎಂದಿಗೂ ಒಳ್ಳೆಯದಲ್ಲ. ಸ್ಪರ್ದೆಯಲ್ಲಿ ಸ್ಪರ್ದಾಳುಗಳ ಗೆಲುವು ಅಗೋಚರವಾಗಿರುತ್ತದೆ. ಅದರಂತೆ ಮನುಷ್ಯನ ಜೀವನದಲ್ಲಿ ಸಫಲತೆಯು ಕಾಣಿಸದೆ ಇರುತ್ತದೆ. ಪರಿಶ್ರಮದಿಂದ ಸಾಧಿಸಿದಾಗಲೇ ಯಶಸ್ಸು ದೊರೆಯುತ್ತದೆ. ಆಫಿಸ್‍ಗೆ ಅಥವಾ ಕಾಲೇಜಿಗೆ ಅಥವಾ ಊರಿಗೆ ಹೊರಟಾಗ ಬಸ್ಸು ಕೆಟ್ಟು ಹೋದರೆ ಮತ್ತೊಂದು ಬಸ್ಸು ಹಿಡಿದು ಹೋಗುವುದ್ದಿಲ್ಲವೇ? ಬಸ್ಸು ಕೆಟ್ಟು ಹೋಯಿತೆಂದು ಯಾರು ಮನೆಗೆ ಇಂತಿರುಗಿ ಹೋಗುವುದಿಲ್ಲ. ಅದೇ ರೀತಿಯಾಗಿ ಮನುಷ್ಯನು ಸಮಸ್ಯೆಗಳು ಎದುರಾದಾಗ ಆತ್ಮಹತ್ಯೆಗೆ ಶರಣಾಗುವುದರ ಬದಲು ಸಮಸ್ಯಗಳಿಗೆ ಪರಿಹಾರಗಳನ್ನು ಕಂಡುಕೊಂಡು ಬದುಕು ಸಾಗಿಸಿದ್ದಾಗ ಮಾತ್ರ ಜೀವನ ಸುಂದರವಾಗುತ್ತದೆ. ಆತ್ಮಹತ್ಯೆಯೇ ಸಮಸ್ಯೆಗಳಿಗೆ ಪರಿಹಾರವಲ್ಲ. ತಾನು ಆತ್ಮಹತ್ಯೆ ಮಾಡಿಕೊಂಡರೆ ತನ್ನ ಕುಟುಂಬ ಎಂತಹ ಸಮಸ್ಯೆಗಳನ್ನು, ತಲ್ಲಣಗಳನ್ನು ಎದುರಿಸುತ್ತಿದೆ ಎಂಬುದನ್ನು ವಿಚಾರ ಮಾಡಬೇಕು.
ಅನೇಕ ಘಟನೆಗಳ ಸರಮಾಲೆಯೇ ಮಾನವನ ಬದುಕು ಎಂದು ಸಮಾಜಶಾಸ್ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೀವನದಲ್ಲಿ ದುಃಖವಿರುವಂತೆ ಸುಃಖವು ಇದೆ. ಭಾವನೆಗಳ ಲೋಕದಲ್ಲಿ ವಾಸ್ತವದ ಕುರಿತು ಜಾಗೃತವಾಗಿರಬೇಕು. ದುಃಖದ ಕಲ್ಪನೆ ಎಂದಿಗೂ ಸರಿಯಲ್ಲ ಆದರೆ ಸಮಸ್ಯೆಗಳನ್ನು ಎದುರಿಸಲು ನಮ್ಮ ಮನಸ್ಸು ಸದಾ ಸಿದ್ದವಾಗಿರಬೇಕು ಸಮಸ್ಯೆಗಳಿಗೆ ಇಂಜರಿಯದೆ ಅವುಗಳನ್ನು ಎದುರಿಸಿ ಮುನ್ನಡೆಯಬೇಕು ಅದೆ ನೀಜವಾದ ಜೀವನ ಮತ್ತು ಆಗಲೇ ಜೀವನಕ್ಕೆ ಒಂದುಅರ್ಥ ಬರುತ್ತದೆ.
-ರಾಘವೇಂದ್ರ ಹಾರಣಗೇರಾ, ಲೇಖಕರು
ಸಮಾಜಶಾಸ್ತ್ರ ಉಪನ್ಯಾಸಕರು , ಶಹಾಪೂರ