ಚೌಡೇಶ್ವರಿಹಾಳ ಘಟನೆ ಆರೋಪಿ ಬಂಧನಕ್ಕೆ ಆಗ್ರಹಿಸಿ ಪಂಜಿನ ಮೆರವಣಿಗೆ

ಹತ್ಯೆ ಆರೋಪಿಗಳ ಬಂಧನಕ್ಕೆ ಆಗ್ರಹ
ಯಾದಗಿರಿ, ಸುರಪುರ: ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದ ಘಟನೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಘಟನೆ ಜರುಗಿ ಒಂದು ವಾರ ಕಳೆಯುತ್ತಾ ಬಂದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಕಾರಣ ಎಸ್‍ಪಿ, ಡಿವೈಎಸ್‍ಪಿ ಅವರನ್ನು ವರ್ಗಾವಣೆ ಮಾಡಿ ದಲಿತ ಸಮುದಾಯವನ್ನು ಕಾಪಾಡಬೇಕೆಂದು ದಲಿತ ಸಂಘರ್ಷ ಸಮಿತಿ(ಕ್ರಾಂತಿಕಾರಿ) ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಸರ್ಕಾರಕ್ಕೆ ಒತ್ತಾಯಿಸಿದರು.
ಚೌಡೇಶ್ವರಿಹಾಳ ಗ್ರಾಮದಲ್ಲಿ ನಡೆದ ಕ್ರೂರ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಕೂಡಲೇ ಬಂದಿಸಬೇಕೆಂದು ಆಗ್ರಹಿಸಿ ನಗರದಲ್ಲಿ ನಡೆದ ಪಂಜಿನ ಮೆರವಣಿಗೆ ನೇತೃತ್ವವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಪೊಲೀಸ್ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸುರಪುರ ಉಪವಿಭಾಗಾಧಿಕಾರಿಯನ್ನು ಕೂಡಲೇ ವರ್ಗಾವಣೆಗೊಳಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಹತ್ಯೆಯ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಅಲ್ಲದೆ ಪ್ರಮುಖ ಆರೋಪಿಯನ್ನು ಗಲ್ಲಶಿಕ್ಷೆಗೆ ಗುರಿ ಪಡಿಸಬೇಕು. ದಲಿತ ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಕರ್ತವ್ಯ ಲೋಪ ಎಸಗುತ್ತಿರುವ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಡಿವೈಎಸ್ಪಿಯನ್ನು ತಕ್ಷಣ ವರ್ಗಾವಣೆ ಮಾಡಿ ಐಪಿಎಸ್ ಅಧಿಕಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮೂಲಕ ಮುಖ್ಯಮಂತ್ರಿ ಮತ್ತು ಗೃಹಸಚಿವರಿಗೆ ಮನವಿ ಸಲ್ಲಿಸಿದರು.
ಸಮಿತಿ ತಾಲೂಕು ಸಂಚಾಲಕ ರಾಮಣ್ಣ ಶೆಳ್ಳಗಿ, ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ರಮೇಶ ದೊರೆ, ವೆಂಕಟೇಶ ಬೇಟೆಗಾರ, ಪ್ರಮುಖರಾದ ಮಾನಪ್ಪ ಬಿಜಾಸ್ಪೂರ, ಮಹಾದೇವಪ್ಪ ಬಿಜಾಸ್ಪೂರ, ಜಟ್ಟೆಪ್ಪ, ಬುದ್ದಿವಂತ ನಾಗರಾಳ, ಬಸವರಾಜ ದೊಡ್ಮನಿ, ಖಾಜಾ ಹುಸೇನ್ ಗುಡುಗುಂಟಿ, ಮಹೇಶ ಹುಲ್ಪೆನರ್, ಹುಲಗಪ್ಪ ಶೆಳ್ಳಗಿ, ಭಾಗಪ್ಪ, ಯಂಕಪ್ಪ ದೇವಿಕೇರಿ, ರಾಮಣ್ಣ ಬಬಲಾದ, ಮಹೇಶ ಯಾದಗಿರಿ, ಮಲ್ಲೇಶ, ಮಲ್ಲಪ್ಪ ಬಡಿಗೇರ ಇತರರಿದ್ದರು.