ಪ್ರಮುಖ ಸುದ್ದಿ

ದರ್ಶನಾಪುರ ಅವರದು ದಂಡುಪಾಳ್ಯ ಗ್ಯಾಂಗ್ – ಅಮೀನರಡ್ಡಿ ಗುಡುಗು

ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಅಭ್ಯರ್ಥಿ ಅಮೀನರಡ್ಡಿ ಘರ್ಜನೆ

ಶಹಾಪುರ ಮತ ಕ್ಷೇತ್ರದಲ್ಲಿ ಚುನಾವಣೆ ಕಾವು ಶುರು

ಯಾದಗಿರಿ: ಶಹಾಪುರ ಮತ ಕ್ಷೇತ್ರದಲ್ಲಿ ದರ್ಶನಾಪುರ ಮತ್ತು ಶಿರವಾಳ ಕುಟುಂಬದ ರಾಜಕೀಯವನ್ನು ಕೊನೆಗಾಣಿಸಬೇಕಿದೆ. ಕಳೆದ 30-40 ವರ್ಷದಿಂದ ಈ ಎರಡು ಕುಟುಂಬಗಳು ಶಹಾಪುರ ಕೇತ್ರವನ್ನು ಆಳುತ್ತಾ ಬಂದಿವೆ. ಆದರೆ ಯಾವುದೇ ಮಹತ್ವದ ಅಭಿವೃದ್ಧಿ ಕಾರ್ಯಗಳು ಮಾತ್ರ ಕೈಗೊಂಡಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಅಮೀನರಡ್ಡಿ ಯಾಳಗಿ ಆರೋಪಿಸಿದರು.

ನಗರದ ಡಿಗ್ರಿ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿಯಾಗದೆ ತೀರ ಹಿಂದುಳಿದಿರುವದಕ್ಕೆ ಇವರೆಡು ಕುಟುಂಬಗಳ ರಾಜಕೀಯವೇ ಕಾರಣ. ಅದರಲ್ಲೂ ದರ್ಶನಾಪುರ ಮತ್ತು ಅವರ ದಂಡುಪಾಳ್ಯ ಗ್ಯಾಂಗ್ ಕ್ಷೇತ್ರದಲ್ಲಿ ಜಗಳ ಹಚ್ಚುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದೆ ಎಂದು ಆರೋಪಿಸಿದರು.

ದರ್ಶನಾಪುರ ಅವರು, ತಮ್ಮ ಸಹೋದರರು ಮತ್ತು ಅಳಿಯಂದಿರು ವಿವಿಧ ಇಲಾಖೆಗಳಲ್ಲಿ ಲೂಟಿ ನಡೆಸುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ಜಿಲ್ಲಾ ಅಧ್ಯಕ್ಷನಾಗಿರುವ ಅಳಿಯ ನೇತೃತ್ವದಲ್ಲಿ ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಕೋಟ್ಯಾಂತರ ರೂಪಾಯಿ ಲೂಟಿಯಾಗಿದೆ.  ಸಹೋದರರು ರಸ್ತೆ, ಚರಂಡಿ ಕಾಮಗಾರಿಯಲ್ಲಿ ಲೂಟಿ ಮಾಡಿದ್ದಾರೆ ಮತ್ತು ಇನ್ನೊಬ್ಬ ಸಹೋದರ ಶಾಲಾ ಬಿಸಿಯೂಟದಲ್ಲಿ ಅಕ್ರಮ ಎಸಗಿದ್ದಾರೆ. ಕೆಬಿಜೆಎನ್‍ಎಲ್ ಕಾಲುವೆ ಕಾಮಗಾರಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಅಮೀನ್ ರೆಡ್ಡಿ ಗುಡುಗಿದರು.

ಇನ್ನು ಪ್ರತಿ ಗ್ರಾಮದಲ್ಲಿ ಸಹೋದರರು , ಸಂಬಂಧಿಕರ ನಡುವೆ ಜಗಳ ಹಚ್ಚುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಈ ಮೂಲಕ ತಮ್ಮ ರಾಜಕೀಯ ಅಸ್ತಿತ್ವವನ್ನು ಭದ್ರ ಪಡಿಸಿಕೊಳ್ಳುವ ಹುನ್ನಾರ ನಡೆಸಲಾಗುತ್ತಿದೆ ಎಂದರು. ಹಾಲಿ ಶಾಸಕರು ಎಲ್ಲವನ್ನು ಅರಿತಿದ್ದರೂ ಮನೆಯಲ್ಲಿ ಆರಾಮವಾಗಿ ಕಾಲ ಕಳೆಯುತ್ತಾರೆ. ಇದಾವದನ್ನು ಪ್ರಶ್ನಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದರ್ಶನಾಪುರ ಅವರು ನನ್ನನ್ನು ಉಂಡು ಮನೆ ಜಂತಿ ಎಣಿಸುವವ ಎನ್ನುತ್ತಿದ್ದಾರಂತೆ. ಅವರು ಜೆಡಿಎಸ್ ಪಕ್ಷದಿಂದಲೇ ಎರಡು ಬಾರಿ ಶಾಸಕರಾಗಿ ಮಂತ್ರಿಯೂ ಆಗಿದ್ದಾರೆ. ಈಗ ಅದೇ ಜೆಡಿಎಸ್‍ನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗಿದ್ದು, ಜೆಡಿಎಸ್ ಪಕ್ಷಕ್ಕೆ ದ್ರೋಹ ಬಗೆಯುವ ಮೂಲಕ ಉಂಡ ಮನೆಯ ಜಂತಿ ಎಣಿಸಿರುವುದು ಅವರೇ ಹೊರತು ನಾನಲ್ಲ ಎಂದು ವ್ಯಂಗ್ಯವಾಡಿದರು.

ಶಹಾಪುರ ಮತಕ್ಷೇತ್ರದಲ್ಲಿ ಚುನಾವಣೆ ಕಾವು ಏರತೊಡಗಿದ್ದು ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಅಮೀನರಡ್ಡಿಯವರು ಇಂದಿನ ಸಮಾವೇಶದಲ್ಲಿ ಮಾಜಿ ಸಚಿವ ಮತ್ತು ಹಾಲಿ ಶಾಸಕರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಅಮೀನರೆಡ್ಡಿ ಟೀಕೆ ಮತ್ತು ಆರೋಪಗಳಿಗೆ ಅನುಭವಿ ರಾಜಕಾರಣಿಗಳಾದ ಮಾಜಿ ಸಚಿವ ದರ್ಶನಾಪುರ ಹಾಗೂ ಶಾಸಕ ಗುರುಪಾಟೀಲ್ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button