ಸೆಕ್ಯುಲರ್ ಎಂಬ ‘ಸೂಜಿ’ ಎರಡೂ ಕಡೆ ಕೂಡಿಸುವ ‘ಹೊಲಿಗೆ’ಯಾಗಲಿ.!
ಸೆಕ್ಯುಲರ್ ಎಂಬ ‘ಸೂಜಿ’ ಎರಡೂ ಕಡೆ ಕೂಡಿಸುವ ‘ಹೊಲಿಗೆ’ಯಾಗಲಿ.!
ಹಿಜಾಬ್ ಎನ್ನುವುದು ಕಾದಾಡುವ ವಿಷಯವೇ ಅಲ್ಲ..
ಉಡುಪಿಯಲ್ಲಿ ಮಕ್ಕಳು ಹಿಜಾಬ್ ಹಾಕಿಕೊಂಡ ಗೆಳತಿಯ ಕೈಹಿಡಿದು ಶಾಲೆಗೆ ತಲುಪಿಸಿದ ಚಿತ್ರವನ್ನು ನಾನೂ ಕೂಡ ತುಂಬ ಕಕ್ಕುಲಾತಿಯಿಂದ ಹಂಚಿಕೊಂಡು ಸಮಾಧಾನಗೊಂಡಿದ್ದೆ. ಹಾಗೆಯೇ ಇದನ್ನು ಮೀರಿಯೂ ನಾವು ಇನ್ನೊಂದು ಬಗೆಯಲ್ಲೂ ಯೋಚಿಸಿ ಮತ್ತಷ್ಟು ಸಾಮಾಧಾನಕರ, ನೆಮ್ಮದಿಯ ನಾಳೆಗಳಿಗೆ ಮನಸ್ಸು ಮಾಡಬೇಕಿದೆ.
ಬಿಡಿ, ಹಿಜಾಬು ವಿರೋಧಿಸುವ ಜನಕ್ಕೆ ಸೌಹಾರ್ದತೆ ಬೇಕಿಲ್ಲ. ಅದು ವಿರೋಧಕ್ಕಷ್ಟೇ ವಿರೋಧ, ಅದರಿಂದ ಸಿಗುವ ಲಾಭದ ಆಟ. ಆ ಮಾತು ಬೇರೆ. ಕೋರ್ಟ್‌ನಲ್ಲಿ ಸದ್ಯ ‘ಸಮವಸ್ತ್ರದ ಮೇಲೆ ಬರೀ ಹಿಜಾಬ್ ಅಷ್ಟನ್ನೇ ಹಾಕಲಾಗುತ್ತಿದೆ’ ಅಂತ ಹಿಜಾಬ್ ಪರ ವಕೀಲರೇ ಒತ್ತಿ ಒತ್ತಿ ಹೇಳುತ್ತ ಅದಕ್ಕಷ್ಟೇ ಅನುಮತಿ ಕೊಡಿ ಎಂದು ವಾದಿಸುತ್ತಿದ್ದಾರೆ.
ಗಲಾಟೆ ಜೋರಾದ ಮೇಲೆ ಈಗ ನೀವು ಗಮನಿಸಿರಬೇಕು, ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲೆಡೆ ಹಿಜಾಬ್ ಅಲ್ಲದೇ ಬುರ್ಖಾ ಕೂಡ ಧರಿಸಿಯೇ ಶಾಲಾ-ಕಾಲೇಜಿಗೆ ಬರುತ್ತಿವೆ ಮಕ್ಕಳು! ಹಾಗೆಯೇ ಪಾಲಕರು ಕೂಡ ಪರೀಕ್ಷೆ ಬರೆಯುವುದನ್ನು ನಿಲ್ಲಿಸಿ, ಮನೆಗೆ ಕರೆದೊಯ್ಯುವುದು ಮತ್ತೂ ಬೇಸರದ ಸಂಗತಿ.
‘ನೀವೆಲ್ಲ ಒಂದು ರೂಮಲ್ಲಿ ಕೂತು ಬೇಕಾದರೆ ಪರೀಕ್ಷೆ ಬರೆದು ಹೋಗಿ’ ಎಂದು ಶಾಲೆಯವರು ಅಂಗಲಾಚಿದರೂ ಕೇಳದಿರುವುದು ಯಾವ ವಾದ, ‘ವ್ಯಾಧಿ’ ಬಯಸದ ನನ್ನಂತಹವನಿಗೂ ಒಂದಷ್ಟು ಬೇಜಾರು, ಸಂಕಟ ಅನಿಸಿದ್ದು ನಿಜ. ನೀವನ್ನಬಹುದು, ಹಿಜಾಬ್ ಹಾಕಬೇಡಿ ಅಂತ ಜೋರು ಮಾಡಿದಾಗ ಅವರು ಸಿಡಿದೇಳುವುದು ಸಹಜ ಅಂತ, ಇರಬಹುದು. ಹಾಗೆಯೇ ನಾವು ತೋರಿಸುವ ಒನ್ ಸೈಡೆಡ್ ಸೆಕ್ಯೂಲರಿಸಮ್, ನಾವು ವಿರೋಧಿಸುವ ಕೋಮುವಾದಿಗಳಿಗೇ ಹೆಚ್ಚು ಅನುಕೂಲಕರವಾಗಿ ಅವರ ‘ದನಿ’ ಹಿಜಾಬ್‌ನಿಂದ ಹಿಡಿದು ಬೇರೆ ಸಂಗತಿಗಳಲ್ಲಿ ಇನ್ನಷ್ಟು ಜೋರು ಪಡೆಯಲು, ಸಾಮಾನ್ಯ ಜನರೂ ಈ ಕೆಲ ವರ್ಷಗಳಲ್ಲಿ ‘ಹೌದಲ್ಲ..’ ಅಂತ ಹಿಂದುತ್ವದ ಕಡೆ ಬಹಳಷ್ಟು ವಾಲಿರುವುದು ಸತ್ಯವೇ ಆಗಿದೆ. ಹಾಗಾಗದಿರಲಿ ಎನ್ನುವ ಕಳವಳ ನನ್ನದು.
ಸೆಕ್ಯುಲರ್ ಅಂದರೆ, ನಿಜಕ್ಕೂ ನಾವೆಲ್ಲ ‘ಸೆಕ್ಯೂಲರ್ರೇ ಆಗಿ ಇರಬೇಕಿರುವ ತುರ್ತು’ ಈಗ ಎರಡೂ ಕಡೆಯಿಂದಲೂ ಇದೆ. ಹೀಗೆ ಇದನ್ನೂ ನಾನು ಹೇಳುವುದೂ ಕಷ್ಟ ಅಂತ ಗೊತ್ತಿದ್ದೇ ಹೇಳುತ್ತಿರುವೆ. ಯಾಕೆಂದರೆ, ನನ್ನನ್ನೂ ಯಾವುದೋ ‘ವಾದಿ’ಗಳ ಒಂದು ಪಟ್ಟಿಗೆ ಸೇರಿಸಲಾಗುತ್ತದೆ!
ಈಗ ಹಿಜಾಬ್ ಪರವಾಗಿ ಎಲ್ಲ ಧರ್ಮದ ಮಾನವಂತರೂ ದನಿ ಗೂಡಿಸಿದ್ದಾರೆ. ಇದು ಭಾರತದ ಮಣ್ಣಲ್ಲೇ ಬಂದ ಗುಣ. ಜಗತ್ತಿನಲ್ಲಿ ಎಲ್ಲೂ ಹೀಗೆ ಈ ಪರಿಯ ಮನಸ್ಥಿತಿ ಸಾಧ್ಯವಿಲ್ಲ! ಇದಕ್ಕೆ ಹಿಜಾಬು, ಬುರ್ಖಾ ಹಾಕಿಕೊಂಡವರನ್ನು ‘ಕೂಡಿ’ ಕರೆದುಕೊಂಡು ಉಡುಪಿ ಶಾಲೆ, ಕಾಲೇಜೊಳಗೆ ಹೋದ ಮಕ್ಕಳೇ ಸಾಕ್ಷಿ. ಅದು ನೋಡಿ, ನನಗೂ ನನ್ನ ಮುಸಲ್ಮಾನ ಗೆಳೆಯರ ಜತೆಗಿನ ಬಾಲ್ಯ ನೆನಪಾಯಿತು.
ಈಗಲೂ ಮಕ್ಕಳು ಬದಲಾಗಿಲ್ಲ, ನಾವೇ ಬದಲಾಗಿದ್ದೇವೆ. ನಮ್ಮ ನಮ್ಮ ಯೋಚನಾ ಲಹರಿಯ ಶ್ಯಾಣ್ಯಾತನದಿಂದ ಭಾರತ ಬದಲಿಸಲು ಹವಣಿಸುತ್ತಿದ್ದೇವೆ, ಅಷ್ಟೇ. ನಿಜ, ಅವರವರಿಗೆ ಅವರ ಧರ್ಮವೇ ದೊಡ್ಡದು; ಅದು ತಿಳಿದಾಗ ಮಾತ್ರ. ಅದಕ್ಕೇ ಬುದ್ಧ, ಬಸವಣ್ಣರು ಯಾವ ಗೋಜಿಗೂ ಹೋಗದೆ ದೇವಾಲಯ-ದಿರಿಸಿನ ಮೇಲೆ ಅವಲಂಬಿತವಾಗದ ‘ದಾರಿ’ಯ ದರುಶನ ತೋರಿದರು. ಸಕಲರಿಗೆ ಲೇಸು ಬಯಸುವುದೇ ‘ನಿಜ ಧರ್ಮ’ವಾಗಿಸಿದರು.
..
ಪಾಪ, ಅಷ್ಟಕ್ಕೂ ಮಕ್ಕಳು ಹಾಕುವ ಒಂದು ಸ್ಕಾರ್ಫ್‌ನಿಂದ ಏನಾಗುವುದಿದೆ!? ಅವಂತೂ ನನಗೆ ಮುದ್ದಾಗಿಯೇ ಕಾಣುತ್ತಿವೆ, ದೇವರಂತೆ. ಕುವೆಂಪುರವರು ಹೇಳಿದಂತೆ ‘ಸರ್ವಜನಾಂಗದ ಶಾಂತಿಯ ತೋಟ’ದ ಹೂಗಳ ಹಾಗೆ. ಆದರೆ, ಆ ತೋಟದ ಮಾಟ ಎರಡೂ ಕಡೆಯ ದೊಡ್ಡವರಿಂದ ಬದಲಾಗುತ್ತಿದೆ. ಒಂದೆಡೆ ತುಸು ಹೆಚ್ಚೋ ಇನ್ನೊಂದೆಡೆ ಕಮ್ಮಿಯೊ..! ಹೂವು ಹೂವುಗಳೇ ದೂರವಾಗುತ್ತಿರುವುದು ಸುಳ್ಳಲ್ಲ. ಅನೇಕತೆಯಲ್ಲಿನ ಏಕತೆಯ ದೇಶದ ಕೂಡಿ ಬಾಳುವ ಸೆಲೆ ಬತ್ತುತ್ತಿದೆ.
ಯಾವ ಜನಗಳನ್ನೂ ಧರ್ಮದ ಕಾರಣಕ್ಕೆ ಅವರನ್ನು ಭ್ರಮೆಯಲ್ಲಿರಿಸುವ ಕೆಲಸ ಆಗದಿರಲಿ. ಅವರವರ ಧರ್ಮ ಅವರನ್ನು ರಕ್ಷಿಸಲಿ. ಯಾರು ಯಾರೂ ಯಾವುದೇ ಧರ್ಮ ರಕ್ಷಿಸುವ ಅವಶ್ಯಕತೆ ಇಲ್ಲ. ಮತ್ತು, ಆ ಪಂಥ ಈ ಪಂಥ, ಸಿದ್ಧಾಂತಗಳೆಲ್ಲ ತುಸು ನಿದ್ರೆಗೆ ಜಾರಲಿ. ನಮಗೆ ಒಳ್ಳೆಯದರ ಮಂಪರು ಕವಿಯಲಿ. ನಾವು ನೀವೆಲ್ಲ ಬರೀ ನೆವ ಮಾತ್ರವಾಗಿ ಉಳಿಯೋಣ.
-ಶಿವಕುಮಾರ್ ಉಪ್ಪಿನ, ಪತ್ರಕರ್ತ-ಬರಹಗಾರ